AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಧದಗುಡಿ ಸಿನಿಹಬ್ಬದಲ್ಲಿ ಹಿರಿಯ ನಟಿ ಸುಧಾರಾಣಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ

‘ಕನ್ನಡ ಚಿತ್ರಗಳನ್ನು ಮತ್ತು ಸದಭಿರುಚಿ ಪ್ರೇಕ್ಷಕರನ್ನು ಬೆಳೆಸುವ ನಿಟ್ಟಿನಲ್ಲಿ ಮೈಸೂರು ಸಿನಿಮಾ ಸೊಸೈಟಿಯಂತಹ ಸಂಸ್ಥೆಗಳ ಅಗತ್ಯವಿದೆ. ಇಂಥ ವೇದಿಕೆಗಳ ಮೂಲಕ ನೂರಾರು ಹೊಸ ಕಲಾವಿದರು, ತಂತ್ರಜ್ಞರಿಗೆ ಮನ್ನಣೆ, ಮಾನ್ಯತೆ ಸಿಗುತ್ತಿದೆ. ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಸಿನಿಮಾಕ್ಕಾಗಿಯೇ ಇರುವ ಈ ಸಂಸ್ಥೆಯ ಕಾರ್ಯಕ್ರಮಗಳು ಹೀಗೆ ನಡೆಯಲಿ’ ಎಂದು ಅತಿಥಿಗಳು ಹೇಳಿದರು.

ಗಂಧದಗುಡಿ ಸಿನಿಹಬ್ಬದಲ್ಲಿ ಹಿರಿಯ ನಟಿ ಸುಧಾರಾಣಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ
Gandhadagudi Cinihabba
ಮದನ್​ ಕುಮಾರ್​
|

Updated on: Nov 23, 2026 | 9:46 PM

Share

ಕಳೆದ ಐದು ವರ್ಷಗಳಿಂದ ಮೈಸೂರನ್ನು ಕೇಂದ್ರವಾಗಿರಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ‘ಮೈಸೂರು ಸಿನಿಮಾ ಸೊಸೈಟಿ’, ಈ ಬಾರಿ ಬೆಂಗಳೂರಿನಲ್ಲಿ ‘ಗಂಧದಗುಡಿ ಸಿನಿಹಬ್ಬ’ ಎಂಬ ಹೆಸರಿನಲ್ಲಿ ಎರಡು ದಿನಗಳ ಕಿರುಚಿತ್ರೋತ್ಸವವನ್ನು ಆಯೋಜಿಸಿತ್ತು. ನವೆಂಬರ್ 21 ಮತ್ತು 22ರಂದು ಬೆಂಗಳೂರಿನ ಎಫ್.ಕೆ.ಸಿ.ಸಿ.ಐ. ಆವರಣದಲ್ಲಿರುವ ‘ಸರ್.ಎಂ. ವಿಶ್ವೇಶ್ವರಯ್ಯ ಆಡಿಟೋರಿಯಂ’ನಲ್ಲಿ ನಡೆದ ‘ಗಂಧದಗುಡಿ ಸಿನಿಹಬ್ಬ’ ಕಿರುಚಿತ್ರೋತ್ಸವವನ್ನು ನಟ ಶ್ರೀಮುರಳಿ, ನಟಿ ಕಾರುಣ್ಯಾ ರಾಮ್, ಹಿರಿಯ ನಟ ಶ್ರೀನಿವಾಸ ಮೂರ್ತಿ ಉದ್ಘಾಟಿಸಿದರು.

‘ಗಂಧದಗುಡಿ ಸಿನಿಹಬ್ಬ’ ಕಿರುಚಿತ್ರೋತ್ಸವದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದ ಸುಮಾರು 30ಕ್ಕೂ ಹೆಚ್ಚು ಕಿರುಚಿತ್ರಗಳು ಪ್ರದರ್ಶನಗೊಂಡವು. ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಿಂದ ಸುಮಾರು 12 ವಿಭಾಗಗಳಿಗೆ ಆಯ್ಕೆಯಾದ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ ಅವರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ, ನಿರ್ದೇಶಕರಾದ ಪ್ರವೀಣ್ ಕೃಪಾಕರ್, ನಂದಕಿಶೋರ್, ಚೇತನ್ ಕುಮಾರ್, ಮಯೂರ ರಾಘವೇಂದ್ರ, ನಟಿಯರಾದ ಹರಿಣಿ ಶ್ರೀಕಾಂತ್, ಐಶ್ವರ್ಯಾ ನಾಗ್, ರೆಮೋಲಾ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ‘ಮೈಸೂರು ಸಿನಿಮಾ ಸೊಸೈಟಿ’ ಅಧ್ಯಕ್ಷ ಚೇತನ್ ಮುಂತಾದವರು ಹಾಜರಿದ್ದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ‘ಸಿನಿಮಾ ಎಂಬುದು ಸಮಾಜ ಹಾಗೂ ಜನರ ಮೇಲೆ ತುಂಬ ಪರಿಣಾಮ ಬೀರುವಂತಹ ಪ್ರಭಾವಶಾಲಿ ಮಾಧ್ಯಮ. ಚಿತ್ರರಂಗವನ್ನು ನಮ್ಮಲ್ಲಿ ವಿಸ್ತರಿಸಲು ಸಾಕಷ್ಟು ಅವಕಾಶವಿದೆ. ನಮ್ಮ ಸಂಸ್ಕೃತಿ, ಜನಪದ, ಸಾಹಿತ್ಯವನ್ನು ಇಡೀ ವಿಶ್ವಕ್ಕೆ ಸಿನಿಮಾ ಮೂಲಕ ತಲುಪಿಸಬಹುದು. ‘ಮೈಸೂರು ಸಿನಿಮಾ ಸೊಸೈಟಿ’ ಇಂಥ ಪರಿಣಾಮಕಾರಿ ಮಾಧ್ಯಮವನ್ನು ಬಳಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯ’ ಎಂದು ಹೇಳಿದರು.

‘ಮೈಸೂರು ಸಿನಿಮಾ ಸೊಸೈಟಿ’ಯ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ನಟಿ ಸುಧಾರಾಣಿ, ‘ಮೈಸೂರು ಮತ್ತು ಸಿನಿಮಾ ಈ ಎರಡಕ್ಕೂ ಮೊದಲಿನಿಂದಲೂ ಒಂದು ನಿಕಟ ಸಂಬಂಧವಿದೆ. ಮೈಸೂರು ಸಿನಿಮಾ ಸೊಸೈಟಿ ಮೂಲಕ ಇಂಥದ್ದೊಂದು ಗೌರವ ಸಿಗುತ್ತಿರುವುದಕ್ಕೆ ತುಂಬ ಖುಷಿಯಾಗುತ್ತಿದೆ. ನಾನು ಮಾಡಿದ ಪ್ರತಿಯೊಂದು ಪಾತ್ರಗಳು ನನಗೆ ಜೀವ ತುಂಬಿದೆ. ನನ್ನ ಜೀವನಕ್ಕೆ ಹೊಸ ಅಧ್ಯಾಯ ಕೊಟ್ಟಿವೆ. ಚಿತ್ರರಂಗಕ್ಕೆ ಬಾಲನಟಿಯಾಗಿ ಬಂದು ನಲವತ್ತು ವರ್ಷವಾದರೂ, ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿ, ಅಭಿಮಾನ ಹೆಚ್ಚಾಗುತ್ತಿದೆ. ಅದಕ್ಕೆ ನಾನು ಯಾವಾಗಲೂ ಚಿರಋಣಿ. ಇದನ್ನು ಕಾಪಾಡಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು ಬದುಕಿನ ಕಷ್ಟ-ನಷ್ಟ ತಿಳಿಸುವ ಕನ್ನಡದ ಕಿರುಚಿತ್ರ ‘ಐಡೆಂಟಿಟಿ ಕಾರ್ಡ್’

ನಿರ್ದೇಶಕ ಪ್ರವೀಣ್ ಕೃಪಾಕರ್ ಮಾತನಾಡಿ, ‘ಸಮಾಜದ ಬೆಳವಣಿಗೆಗೆ ಸಿನಿಮಾ ಸೊಸೈಟಿಗಳು ಸಹಾಯಕವಾಗುತ್ತಿವೆ. ಸಿನಿಮಾ ಸೊಸೈಟಿಯಿಂದ ಸದಭಿರುಚಿಯ ಪ್ರೇಕ್ಷಕ ವರ್ಗ ಸೃಷ್ಟಿಯಾಗುತ್ತಿದೆ. ಇದೊಂದು ಸಕಾರಾತ್ಮಕ ಅಂಶ. ಕಿರುಚಿತ್ರಗಳನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿರುವ ಮೈಸೂರು ಸಿನಿಮಾ ಸೊಸೈಟಿಯ ಕಾರ್ಯ ಪ್ರಶಂಸನೀಯ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More