‘ಗಂಧದಗುಡಿ ಸಿನಿಹಬ್ಬ’ದ ಲಾಂಛನ ಬಿಡುಗಡೆ; 2 ದಿನಗಳ ಕಿರುಚಿತ್ರೋತ್ಸವ
ನವೆಂಬರ್ 21 ಹಾಗೂ 22ರಂದು 2 ದಿನಗಳ ಕಾಲ ಬೆಂಗಳೂರಿನ ಗಾಂಧಿನಗರದ ಕೆ.ಜಿ. ರಸ್ತೆಯಲ್ಲಿರುವ ಎಫ್ಕೆಸಿಸಿಐ ಭವನದ ಸರ್ ಎಂ.ವಿ. ಸಭಾಂಗಣದಲ್ಲಿ ಗಂಧದಗುಡಿ ಸಿನಿಹಬ್ಬ ನಡೆಯಲಿದೆ. 30ಕ್ಕೂ ಅಧಿಕ ಕಿರುಚಿತ್ರಗಳು ಪ್ರದರ್ಶನವಾಗಲಿವೆ. ಗಂಧದಗುಡಿ ಸಿನಿಹಬ್ಬದ ವಿಶೇಷತೆಗಳ ಬಗ್ಗೆ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು.

ಕಳೆದ 5 ವರ್ಷಗಳಿಂದ ಮೈಸೂರನ್ನು ಕೇಂದ್ರವಾಗಿರಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ‘ಮೈಸೂರು ಸಿನಿಮಾ ಸೊಸೈಟಿ’ ಇದೀಗ ತನ್ನ ಕಾರ್ಯ ಚಟುವಟಿಕೆಗಳನ್ನು ಬೆಂಗಳೂರಿಗೂ ವಿಸ್ತರಿಸುತ್ತಿದೆ. ಈಗಾಗಲೇ ಮೈಸೂರಿನಲ್ಲಿ ‘ಪರಿದೃಶ್ಯ’ ಎಂಬ ಹೆಸರಿನಲ್ಲಿ ಕಿರುಚಿತ್ರೋತ್ಸವವನ್ನು ಆಯೋಜಿಸುತ್ತ ಬಂದಿರುವ ‘ಮೈಸೂರು ಸಿನಿಮಾ ಸೊಸೈಟಿ’, ಈ ಬಾರಿ ಬೆಂಗಳೂರಿನಲ್ಲಿ ‘ಗಂಧದಗುಡಿ ಸಿನಿಹಬ್ಬ’ ಎಂಬ ಹೆಸರಿನಲ್ಲಿ ಕಿರುಚಿತ್ರೋತ್ಸವ ಆಯೋಜಿಸಲು ಮುಂದಾಗಿದೆ.
ನವೆಂಬರ್ 21 ಮತ್ತು 22ರಂದು ಬೆಂಗಳೂರಿನಲ್ಲಿ ‘ಗಂಧದಗುಡಿ ಸಿನಿಹಬ್ಬ’ ಕಿರುಚಿತ್ರೋತ್ಸವ ನಡೆಯಲಿದೆ. ಆ ಕಾರ್ಯಕ್ರಮದ ಪೂರ್ವಭಾವಿಯಾಗಿ ‘ಗಂಧದಗುಡಿ ಸಿನಿಹಬ್ಬ’ದ ಲಾಂಛನ ಬಿಡುಗಡೆ ಸಮಾರಂಭ ನಡೆಯಿತು. ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ತೇಜಸ್ವಿನಿ ಶರ್ಮಾ ಮತ್ತು ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ‘ಗಂಧದಗುಡಿ ಸಿನಿಹಬ್ಬ’ ಕಿರುಚಿತ್ರೋತ್ಸವದ ಲಾಂಛನ ಅನಾವರಣ ಮಾಡಿದರು.
ಇದೇ ವೇಳೆ ಮಾತನಾಡಿದ ತೇಜಸ್ವಿನಿ ಶರ್ಮಾ, ‘ಕನ್ನಡ ಚಿತ್ರಗಳನ್ನು ಮತ್ತು ಸದಭಿರುಚಿ ಪ್ರೇಕ್ಷಕರನ್ನು ಬೆಳೆಸುವ ನಿಟ್ಟಿನಲ್ಲಿ ಮೈಸೂರು ಸಿನಿಮಾ ಸೊಸೈಟಿಯಂತಹ ಸಂಸ್ಥೆಗಳ ಅಗತ್ಯವಿದೆ. ಇಂಥ ವೇದಿಕೆಗಳ ಮೂಲಕ ನೂರಾರು ಹೊಸ ಕಲಾವಿದರು, ತಂತ್ರಜ್ಞರಿಗೆ ಮನ್ನಣೆ, ಮಾನ್ಯತೆ ಸಿಗುತ್ತಿದೆ. ಈ ವೇದಿಕೆಯನ್ನು ನಾವೆಲ್ಲರೂ ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಕನ್ನಡ ಸಿನಿಮಾಕ್ಕಾಗಿಯೇ ಇರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ’ ಎಂದರು.
‘ಕನ್ನಡ ಚಲನಚಿತ್ರ ನಿರ್ದೇಶಕರ ಸಂಘ’ದ ಅಧ್ಯಕ್ಷ ಎನ್.ಆರ್.ಕೆ ವಿಶ್ವನಾಥ್ ಮಾತನಾಡಿ, ‘ಮೈಸೂರು ಸಿನಿಮಾ ಸೊಸೈಟಿ ಇಂಥ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ. ಗಂಧದಗುಡಿ ಸಿನಿಹಬ್ಬದ ಮೂಲಕ ಮೈಸೂರು ಸಿನಿಮಾ ಸೊಸೈಟಿಯ ಚಟುವಟಿಕೆ ಮೈಸೂರಿನಿಂದ ಬೆಂಗಳೂರಿಗೆ ವಿಸ್ತರಿಸಿದೆ. ಮುಂದೆ ಈ ಚಟುವಟಿಕೆಗಳು ರಾಜ್ಯದ ಎಲ್ಲಾ ಕಡೆಗಳಿಗೂ ವಿಸ್ತರಿಸಲಿ. ಮುಂದಿನ ದಿನಗಳಲ್ಲಿ ಈ ಚಿತ್ರೋತ್ಸವ ಇನ್ನಷ್ಟು ದೊಡ್ಡದಾಗಿ ಬೆಳೆಯಲಿ’ ಎಂದು ಹಾರೈಸಿದರು.
ಇದನ್ನೂ ಓದಿ: ‘ಕುಣಿ’ ಕಿರುಚಿತ್ರಕ್ಕೆ ಫಿದಾ ಆದ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು
‘ಮೈಸೂರು ಸಿನಿಮಾ ಸೊಸೈಟಿ’ ಅಧ್ಯಕ್ಷ ಚೇತನ್ ಎಂ., ಕಾರ್ಯದರ್ಶಿ ಜಯಶೇಖರ್ ವಿ.ಆರ್., ಖಜಾಂಚಿ ಸುರೇಶ್ ಚಂದ್ರ ಎಂ.ಆರ್., ಸದಸ್ಯರಾದ ಸೋಮಶೇಖರ್ ಪಿ.ಎಲ್., ಅಲ್ವಿನ್ ಮತ್ತಿತರರು ಈ ವೇಳೆ ಹಾಜರಿದ್ದು ‘ಮೈಸೂರು ಸಿನಿಮಾ ಸೊಸೈಟಿ’ಯ ಚಟುವಟಿಕೆಗಳು ಮತ್ತು ‘ಗಂಧದಗುಡಿ ಸಿನಿಹಬ್ಬ’ದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು.
ನವೆಂಬರ್ 21 ಮತ್ತು 22ರಂದು ಎರಡು ದಿನಗಳ ಕಾಲ ಬೆಂಗಳೂರಿನ ಗಾಂಧಿನಗರದ ಕೆ.ಜಿ. ರಸ್ತೆಯಲ್ಲಿರುವ ಎಫ್ಕೆಸಿಸಿಐ ಭವನದ ಸರ್ ಎಂ.ವಿ. ಆಡಿಟೋರಿಯಂನಲ್ಲಿ ‘ಗಂಧದಗುಡಿ ಸಿನಿಹಬ್ಬ’ ನಡೆಯಲಿದ್ದು, ಸುಮಾರು 30ಕ್ಕೂ ಹೆಚ್ಚು ಚಿತ್ರಗಳು ಪ್ರದರ್ಶನವಾಗಲಿವೆ. ‘ಗಂಧದಗುಡಿ ಸಿನಿಹಬ್ಬ’ದಲ್ಲಿ ಸುಮಾರು 12 ಗಂಟೆ 35 ನಿಮಿಷಗಳ ಕಾಲ ಸುದೀರ್ಘ ಅವಧಿಯಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




