ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಕಳಪೆ ದಾಖಲೆ; 9 ಪಂದ್ಯಗಳಲ್ಲಿ ಗೆದ್ದಿದ್ದು ಒಂದೇ
ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಡ್ರಾ ಸಾಧಿಸಿತು. ಶುಭ್ಮನ್ ಗಿಲ್ ನಾಯಕತ್ವದ ತಂಡ ಗೆಲುವಿಗೆ ಹತ್ತಿರ ಬಂದರೂ, ನ್ಯೂಜಿಲೆಂಡ್ ಬ್ಯಾಟರ್‌ಗಳ ದಿಟ್ಟ ಹೋರಾಟದಿಂದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇದರಿಂದ 2021ರ ನಂತರ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಗೆಲುವಿಗಾಗಿ ಭಾರತದ ಕಾಯುವಿಕೆ ಮುಂದುವರಿದಿದೆ. ಮುಂಬರುವ ಕ್ರೈಸ್ಟ್‌ಚರ್ಚ್ ಪಂದ್ಯದಲ್ಲಿ ಗೆಲ್ಲಲು ಟೀಂ ಇಂಡಿಯಾ ಉತ್ಸುಕವಾಗಿದೆ.

ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ತಂಡ ಟೆಸ್ಟ್ ಸರಣಿಯನ್ನು ಉತ್ತಮವಾಗಿಯೇ ಆರಂಭಿಸಿದೆ. ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಐದು ದಿನಗಳ ಕಾಲ ಒತ್ತಡದಲ್ಲಿಟ್ಟಿತ್ತು. ಆದರೆ, ಇಷ್ಟೆಲ್ಲಾ ಹೋರಾಟ ನಡೆಸಿದರೂ ಶುಭ್ಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾಗೆ ಗೆಲುವಿನ ಸಿಹಿ ಸಿಗಲಿಲ್ಲ. ನ್ಯೂಜಿಲೆಂಡ್ ಬ್ಯಾಟರ್‌ಗಳು ಸುಮಾರು ಒಂದೂವರೆ ದಿನ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಭಾರತದ ಗೆಲುವಿನ ಆಸೆಗೆ ತಣ್ಣೀರೆರಚಿದರು. ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಗೆಲ್ಲಲು ಭಾರತದ ಕಾಯುವಿಕೆ ಮತ್ತಷ್ಟು ಮುಂದುವರಿದಿದೆ.
ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಕೈತಪ್ಪಿದ ಗೆಲುವು
ನವೆಂಬರ್ 23ರ ಸೋಮವಾರ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನದಾಟ ನಡೆಯಿತು. ಪಂದ್ಯ ಗೆಲ್ಲಲು ಭಾರತ ತಂಡಕ್ಕೆ ಇನ್ನೂ ಎಂಟು ವಿಕೆಟ್‌ಗಳ ಅಗತ್ಯವಿತ್ತು. ಇತ್ತ ನ್ಯೂಜಿಲೆಂಡ್ ತಂಡಕ್ಕೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಕೊನೆಯ ದಿನದಾಟದಲ್ಲಿ ಆರಂಭದಲ್ಲೇ ಮೂರು ವಿಕೆಟ್‌ಗಳನ್ನು ಕಬಳಿಸಿದ ಭಾರತ ಗೆಲುವಿನ ಆಸೆ ಮೂಡಿಸಿತ್ತು. ಆದರೆ, ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಭಾರತದ ಬೌಲರ್‌ಗಳಿಗೆ ತಲೆನೋವಾದರು. ಈ ಇಬ್ಬರು ಬ್ಯಾಟರ್‌ಗಳು ಸತತ 43 ಓವರ್‌ಗಳ ಕಾಲ ಕ್ರೀಸ್‌ನಲ್ಲಿ ನಿಂತು ಬ್ಯಾಟಿಂಗ್ ನಡೆಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಸರಣಿ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ನೆಲದಲ್ಲಿ ಒಂದು ಟೆಸ್ಟ್ ಪಂದ್ಯವನ್ನಾದರೂ ಡ್ರಾ ಮಾಡಿಕೊಳ್ಳುವುದು ಭಾರತಕ್ಕೆ ಕಷ್ಟವಾಗಬಹುದು ಎಂಬ ಲೆಕ್ಕಾಚಾರವಿತ್ತು. ಆ ದೃಷ್ಟಿಯಿಂದ ನೋಡಿದರೆ ವೆಲ್ಲಿಂಗ್ಟನ್ ಟೆಸ್ಟ್‌ನ ಡ್ರಾ ಫಲಿತಾಂಶ ಭಾರತಕ್ಕೆ ಸಮಾಧಾನಕರವಾಗಿದೆ. ಗೆಲುವು ಸಿಗದಿದ್ದರೂ ಸೋಲಿನಿಂದ ಪಾರಾಗಿದೆ. ಆದರೆ, ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಗೆಲುವಿಗಾಗಿ ಭಾರತದ ಕಾಯುವಿಕೆ ಮಾತ್ರ ಮುಂದುವರಿದಿದೆ. ಅಚ್ಚರಿಯ ವಿಚಾರವೆಂದರೆ, 2021ರ ನವೆಂಬರ್ ಬಳಿಕ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಒಂದೇ ಒಂದು ಟೆಸ್ಟ್ ಪಂದ್ಯವನ್ನೂ ಗೆದ್ದಿಲ್ಲ.
ಐದು ವರ್ಷಗಳಿಂದ ಗೆಲುವಿನ ಬರ
2021ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಂಡಿತ್ತು. ಈ ಸರಣಿಯ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದರೆ, ಎರಡನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು. ಇದಾದ ಬಳಿಕ 2024ರಲ್ಲಿ ನ್ಯೂಜಿಲೆಂಡ್ ತಂಡ ಮತ್ತೊಮ್ಮೆ ಭಾರತ ಪ್ರವಾಸ ಕೈಗೊಂಡಿತ್ತು. ಈ ಸರಣಿಯ ಫಲಿತಾಂಶ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಮರೆಯಲಾಗದ ಆಘಾತ ನೀಡಿತ್ತು. ತವರಿನಲ್ಲೇ ಟೀಮ್ ಇಂಡಿಯಾವನ್ನು 3-0 ಅಂತರದಿಂದ ಸೋಲಿಸಿದ ನ್ಯೂಜಿಲೆಂಡ್ ಐತಿಹಾಸಿಕ ಕ್ಲೀನ್ ಸ್ವೀಪ್ ಸಾಧಿಸಿತ್ತು.
ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧ ಆಡಿದ ಕಳೆದ ನಾಲ್ಕು ಟೆಸ್ಟ್ ಪಂದ್ಯಗಳಲ್ಲೂ ಭಾರತಕ್ಕೆ ಗೆಲುವು ದಕ್ಕಿಲ್ಲ. 2020ರಿಂದ ಈವರೆಗಿನ ಮುಖಾಮುಖಿ ದಾಖಲೆ ಗಮನಿಸಿದರೆ, ಉಭಯ ತಂಡಗಳ ನಡುವೆ ಒಟ್ಟು ಒಂಬತ್ತು ಟೆಸ್ಟ್ ಪಂದ್ಯಗಳು ನಡೆದಿವೆ. ಈ ಪೈಕಿ ನ್ಯೂಜಿಲೆಂಡ್ ಆರು ಪಂದ್ಯಗಳಲ್ಲಿ ಗೆದ್ದಿದ್ದರೆ, ಭಾರತ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದೆ. ಉಳಿದ ಎರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಭಾರತದ ಏಕೈಕ ಗೆಲುವು 2021ರ ನವೆಂಬರ್‌ನಲ್ಲಿ ಬಂದಿತ್ತು.
ಕೋವಿಡ್ ವೇಳೆ ಬಂದ ರೂಲ್ಸ್ ಇನ್ನೂ ಯಾಕೆ ಜಾರಿ? ಐಸಿಸಿಯನ್ನು ಪ್ರಶ್ನಿಸಿದ ಗಿಲ್
9 ಟೆಸ್ಟ್ ಪಂದ್ಯಗಳಲ್ಲಿ ಭಾರತಕ್ಕೆ ಒಂದೇ ಗೆಲುವು
ಕಳೆದ ಕೆಲವು ವರ್ಷಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡದ ಪ್ರದರ್ಶನ ಅಷ್ಟೊಂದು ಉತ್ತಮವಾಗಿಲ್ಲ. ಈ ಅವಧಿಯಲ್ಲಿ ಟೀಂ ಇಂಡಿಯಾ ನಾಲ್ವರು ನಾಯಕರ ನಾಯಕತ್ವದಲ್ಲಿ ಆಡಿದ್ದರೂ ಗೆಲುವಿನ ಸಂಖ್ಯೆ ಮಾತ್ರ ಒಂದರಲ್ಲೇ ಉಳಿದಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಭಾರತ ಒಂದು ಗೆಲುವು ಸಾಧಿಸಿ, ಮೂರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಆಡಿದ ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಿದ ಮೂರು ಪಂದ್ಯಗಳಲ್ಲೂ ಭಾರತ ಸೋಲು ಅನುಭವಿಸಿತ್ತು. ಇನ್ನು ಶುಭಮನ್ ಗಿಲ್ ನಾಯಕತ್ವದಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯವೂ ಡ್ರಾದಲ್ಲಿ ಕೊನೆಗೊಂಡಿದೆ.
ಇದೀಗ ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ನವೆಂಬರ್ 27ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ನ್ಯೂಜಿಲೆಂಡ್ ವಿರುದ್ಧದ ಸೋಲಿನ ಸರಪಳಿಗೆ ಬ್ರೇಕ್ ಹಾಕಲು ಟೀಂ ಇಂಡಿಯಾ ಎದುರು ನೋಡುತ್ತಿದೆ. ಈ ಬಾರಿಯಾದರೂ ಭಾರತದ ಗೆಲುವಿನ ಬರ ನೀಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.




