ಯಮುನಾ ನದಿಯಲ್ಲಿ ಮೀನುಗಳ ಸಾವು, ಛತ್ ಪೂಜೆಗೂ ಮುನ್ನ ದೆಹಲಿಯಲ್ಲಿ ರಾಜಕೀಯ ಕಾವು, ಬಿಜೆಪಿ–ಎಎಪಿ ನಡುವೆ ವಾಕ್ಸಮರ

ದೆಹಲಿಯ ಯಮುನಾ ನದಿಯಲ್ಲಿ ನೂರಾರು ಮೀನುಗಳ ಸಾವು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಛತ್ ಪೂಜೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಎಎಪಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿವೆ. ಜಲಮಾಲಿನ್ಯ, ಆಮ್ಲಜನಕ ಕೊರತೆ ಮೀನುಗಳ ಸಾವಿಗೆ ಕಾರಣವೆಂದು ತಜ್ಞರು ಶಂಕಿಸಿದ್ದಾರೆ. ಮನುಷ್ಯರಿಗೆ ನೀರು ಸುರಕ್ಷಿತವೇ ಎಂಬ ಪ್ರಶ್ನೆ ಮೂಡಿದ್ದು, ವೈಜ್ಞಾನಿಕ ತನಿಖೆಗೆ ಎಎಪಿ ಆಗ್ರಹಿಸಿದೆ. ಇದು ನೀರಿನ ಗುಣಮಟ್ಟದ ಬಗ್ಗೆ ಆತಂಕ ಹೆಚ್ಚಿಸಿದೆ.

ಯಮುನಾ ನದಿಯಲ್ಲಿ ಮೀನುಗಳ ಸಾವು, ಛತ್ ಪೂಜೆಗೂ ಮುನ್ನ ದೆಹಲಿಯಲ್ಲಿ ರಾಜಕೀಯ ಕಾವು, ಬಿಜೆಪಿ–ಎಎಪಿ ನಡುವೆ ವಾಕ್ಸಮರ
ನದಿ ನೀರು, ಸಿಎಂ ರೇಖಾ ಗುಪ್ತ

Updated on: Nov 13, 2026 | 10:57 AM

ನವದೆಹಲಿ, ನವೆಂಬರ್ 13: ದೆಹಲಿಯ ಯಮುನಾ ನದಿಯಲ್ಲಿ ನೂರಾರು ಮೀನುಗಳು ಸತ್ತು ತೇಲುತ್ತಿರುವ ದೃಶ್ಯಗಳು ರಾಜಕೀಯ ವಿವಾದಕ್ಕೆ ಕಾರಣವಾಗಿವೆ. ಛತ್ ಪೂಜೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಈ ಘಟನೆ ನಡೆದಿದ್ದು, ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಆಮ್ ಆದ್ಮಿ ಪಕ್ಷದ ನಡುವೆ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ.

ದೆಹಲಿಯ ಸೋನಿಯಾ ವಿಹಾರ್ ಪ್ರದೇಶದ ಬಳಿ ಸತ್ತ ಮೀನುಗಳು ಕಾಣಿಸಿಕೊಂಡಿವೆ. ನಮೋ ಯಮುನಾ ನದಿ ಸಫಾರಿ ಹೆಸರಿನ ಮನರಂಜನಾ ದೋಣಿ ಸೇವೆ ಆರಂಭವಾದ ಮರುದಿನವೇ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಒಂದು ತಿಂಗಳ ಅವಧಿಯಲ್ಲಿ ಯಮುನಾ ನದಿಯಲ್ಲಿ ಮೀನುಗಳು ಸತ್ತಿರುವ ಎರಡನೇ ಘಟನೆ ಇದಾಗಿದೆ ಎಂದು ವರದಿಯಾಗಿದೆ.

Loading...

ಬಿಜೆಪಿ ಸಚಿವರ ಆರೋಪವೇನು?
ದೆಹಲಿಯ ಸಚಿವ ಪರ್ವೇಶ್ ವರ್ಮಾ ಅವರು, ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಲು ಕೆಲವರು ಉದ್ದೇಶಪೂರ್ವಕವಾಗಿ ಸತ್ತ ಮೀನುಗಳನ್ನು ನದಿಗೆ ಎಸೆದಿರಬಹುದು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ. ಸತ್ತ ಮೀನುಗಳನ್ನು ನದಿಗೆ ಎಸೆದವರು ಯಾರು? ಅವರಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕವಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಮೀನುಗಳಿಗೆ ಸುರಕ್ಷಿತವಾಗಿಲ್ಲದ ನೀರನ್ನು ಜನ ಕುಡಿಯುವುದಾದರೂ ಹೇಗೆ?
ಮಾಜಿ ಸಚಿವ ಹಾಗೂ ಎಎಪಿ ನಾಯಕ ಸೌರಭ್ ಭಾರದ್ವಾಜ್ ಅವರು ಈ ಘಟನೆಯ ವಿಡಿಯೋ ಹಂಚಿಕೊಂಡು ದೆಹಲಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. “ಮೀನುಗಳಿಗೇ ಈ ನೀರು ಸುರಕ್ಷಿತವಿಲ್ಲದಿದ್ದರೆ, ಮನುಷ್ಯರಿಗೆ ಹೇಗೆ ಸುರಕ್ಷಿತವಾಗಿರುತ್ತದೆ?” ಎಂದು ಅವರು ಪ್ರಶ್ನಿಸಿದ್ದಾರೆ. ಛತ್ ಪೂಜೆಗೂ ಮುನ್ನ ಯಮುನಾ ನದಿಯನ್ನು ಸ್ವಚ್ಛವಾಗಿ ತೋರಿಸಲು ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ಸತ್ತ ಮೀನುಗಳನ್ನು ಯಾರೋ ತಂದು ನದಿಗೆ ಎಸೆದಿದ್ದಾರೆ ಎಂಬ ಸಚಿವರ ಆರೋಪಕ್ಕೆ ಸಾಕ್ಷ್ಯ ನೀಡುವಂತೆ ಎಎಪಿ ಒತ್ತಾಯಿಸಿದೆ. ಸಾವಿರಾರು ಮೀನುಗಳು ಸತ್ತಿರುವುದಕ್ಕೆ ನಿಜವಾದ ಕಾರಣವೇನು ಎಂಬುದರ ಬಗ್ಗೆ ವೈಜ್ಞಾನಿಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

ಮೀನುಗಳು ಸಾಯಲು ಕಾರಣವೇನು?
ಮೀನುಗಳ ಸಾವಿಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಆದರೆ ಪರಿಸರ ತಜ್ಞರು ಕೆಲವು ಸಾಧ್ಯತೆಗಳನ್ನು ಮುಂದಿಟ್ಟಿದ್ದಾರೆ.
– ಕೈಗಾರಿಕೆಗಳಿಂದ ಹೊರಬರುವ ಸಂಸ್ಕರಿಸದ ತ್ಯಾಜ್ಯ ನೀರು ನದಿಗೆ ಸೇರುವುದು.
– ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದು.
– ಅಮೋನಿಯಾ ಸೇರಿದಂತೆ ಹಾನಿಕಾರಕ ರಾಸಾಯನಿಕಗಳ ಪ್ರಮಾಣ ಹೆಚ್ಚಾಗುವುದು.
– ಒಳಚರಂಡಿ ನೀರು ನದಿಗೆ ಸೇರುವುದರಿಂದ ನೀರಿನ ಗುಣಮಟ್ಟ ಹದಗೆಡುವುದು.
ಇವು ಮೀನುಗಳ ಸಾವಿಗೆ ಕಾರಣವಾಗಿರಬಹುದಾದ ಅಂಶಗಳು ಮಾತ್ರ. ನಿಜವಾದ ಕಾರಣ ತಿಳಿಯಲು ನೀರು, ಮಣ್ಣು ಮತ್ತು ಸತ್ತ ಮೀನುಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ:

ಕೃಷ್ಣಾ ನದಿ ನೀರು ಕಾನೂನು ಬಾಹಿರವಾಗಿ ಬಳಸಲು ಹುನ್ನಾರ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಎಂಬಿ ಪಾಟೀಲ್ ಆರೋಪ

 

ಒಂದು ತಿಂಗಳಲ್ಲೇ ಎರಡನೇ ಘಟನೆ
ಇದಕ್ಕೂ ಮೊದಲು ಅಕ್ಟೋಬರ್ 14ರಂದು ದೆಹಲಿಯ ಬುರಾರಿ ಪ್ರದೇಶದ ಯಮುನಾ ನದಿ ದಡದಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿದ್ದವು. ಆ ಘಟನೆಯಲ್ಲಿಯೂ ಕೈಗಾರಿಕಾ ತ್ಯಾಜ್ಯ ಮತ್ತು ನೀರಿನಲ್ಲಿ ಆಮ್ಲಜನಕದ ಕೊರತೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಆಗಲೂ ನಿಖರ ಕಾರಣ ದೃಢಪಟ್ಟಿರಲಿಲ್ಲ. ಈಗ ಸೋನಿಯಾ ವಿಹಾರ್ ಪ್ರದೇಶದಲ್ಲೂ ಮೀನುಗಳು ಸತ್ತಿರುವುದು ಯಮುನಾ ನದಿಯ ನೀರಿನ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಆತಂಕ ಮೂಡಿಸಿದೆ.

ಛತ್ ಪೂಜೆಗೂ ಮುನ್ನ ವಿವಾದ ಏಕೆ?
ಛತ್ ಪೂಜೆಯ ಸಂದರ್ಭದಲ್ಲಿ ಭಕ್ತರು ನದಿ, ಕೆರೆ ಸೇರಿದಂತೆ ನೀರಿನ ಮೂಲಗಳಲ್ಲಿ ನಿಂತು ಸೂರ್ಯನಿಗೆ ಅರ್ಘ್ಯ ಅರ್ಪಿಸುತ್ತಾರೆ. ದೆಹಲಿಯಲ್ಲಿಯೂ ಯಮುನಾ ನದಿ ತೀರದಲ್ಲಿ ಸಾವಿರಾರು ಭಕ್ತರು ಪೂಜೆ ಸಲ್ಲಿಸುತ್ತಾರೆ. ಈ ಬಾರಿ ನವೆಂಬರ್ 15 ಮತ್ತು 16ರಂದು ಛತ್ ಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ನದಿಯ ನೀರಿನ ಸ್ವಚ್ಛತೆ ಮತ್ತು ಭಕ್ತರ ಸುರಕ್ಷತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದರ ನಡುವೆಯೇ ಯಮುನಾ ನದಿಯಲ್ಲಿ ಹೊಸದಾಗಿ ‘ನಮೋ ಯಮುನಾ ರಿವರ್ ಸಫಾರಿ’ ಎಂಬ ದೋಣಿ ವಿಹಾರ ಸೇವೆಯನ್ನೂ ಆರಂಭಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us