30 ವರ್ಷವಾದರೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ‘ವೋಟ್ ಚೋರಿ’ ಆರೋಪ ಸೋಲು ಮುಚ್ಚಿಕೊಳ್ಳುವ ನೆಪ ಎಂದ ಗೃಹ ಸಚಿವ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಹುಲ್ ಗಾಂಧಿ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನೆಗಳಿಂದ ಏನೂ ಪ್ರಯೋಜನವಿಲ್ಲ, ರಾಜಕೀಯ ನಾಯಕರು ಜನರ ಕಲ್ಯಾಣದತ್ತ ಗಮನಹರಿಸಬೇಕು ಎಂದು ಹೇಳಿದರು. 'ವೋಟ್ ಚೋರಿ' ಆರೋಪಗಳು ಸೋಲನ್ನು ಮುಚ್ಚಿಹಾಕುವ ನೆಪ ಎಂದು ತಳ್ಳಿಹಾಕಿದ ಶಾ, ಇವಿಎಂ ಹಾಗೂ ಚುನಾವಣಾ ಆಯೋಗವನ್ನು ಸಮರ್ಥಿಸಿಕೊಂಡರು.

ನವದೆಹಲಿ, ಅಕ್ಟೋಬರ್ 22: ಬೀದಿಗಿಳಿದು ಪ್ರತಿಭಟನೆ, ಪ್ರದರ್ಶನಗಳನ್ನು ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ರಾಜಕೀಯ ನಾಯಕರು ಕೇವಲ ದೊಂಬಿ ನಡೆಸುವುದನ್ನು ಬಿಟ್ಟು ಜನರ ಕಲ್ಯಾಣದ ಕಡೆಗೆ ಗಮನಹರಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಕ್ಷಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಆಯೋಗ, ಇವಿಎಂ ಹಾಗೂ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ (AAP) ನಡೆಸುತ್ತಿರುವ ‘ವೋಟ್ ಚೋರಿ’ ಅಭಿಯಾನವನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ದೆಹಲಿಯ ಹೊರವಲಯದಲ್ಲಿ 8,941 ಕೋಟಿ ರೂ. ಮೌಲ್ಯದ 33 ದೆಹಲಿ ಜಲ ಮಂಡಳಿ (DJB) ಯೋಜನೆಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ನಕಾರಾತ್ಮಕ ರಾಜಕೀಯ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ಜನರ ತೀರ್ಪನ್ನು ಧಿಕ್ಕರಿಸಲು ನೀವು ರಾಜಕೀಯ ಕುತಂತ್ರ ಹಾಗೂ ದೊಂಬಿಯನ್ನು ಬಳಸಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಗೆಲ್ಲಬೇಕೆಂದರೆ ಜನರ ಮಧ್ಯೆ ಹೋಗಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಿ. ನೀವು ಗೆದ್ದಿರುವ ರಾಜ್ಯಗಳಲ್ಲಾದರೂ ಜನಪರ ಯೋಜನೆಗಳನ್ನು ಜಾರಿಗೊಳಿಸಿ, ಇಲ್ಲದಿದ್ದರೆ ಉಳಿದಿರುವ ಸ್ಥಳಗಳಿಂದಲೂ ನೀವು ಸಂಪೂರ್ಣವಾಗಿ ಧೂಳೀಪಟವಾಗುತ್ತೀರಿ ಎಂದು ಶಾ ಎಚ್ಚರಿಸಿದರು.
‘ವೋಟ್ ಚೋರಿ’ ಕೇವಲ ಸೋಲಿನ ನೆಪ: “ದೆಹಲಿಯಲ್ಲಿ ವಿರೋಧ ಪಕ್ಷಗಳಿಂದ ಹೊಸ ಆಟ ಶುರುವಾಗಿದೆ. ಬಿಜೆಪಿ ಗೆದ್ದಾಗಲೆಲ್ಲಾ ‘ವೋಟ್ ಚೋರಿ’ ಆರೋಪ ಹೊರಿಸಲಾಗುತ್ತದೆ. ಆದರೆ, ಇದೇ ಇವಿಎಂ ಮತ್ತು ಚುನಾವಣಾ ಆಯೋಗ ಇದ್ದಾಗ ಕಾಂಗ್ರೆಸ್ ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಗೆಲ್ಲಲಿಲ್ಲವೇ? ನೀವು ಗೆದ್ದರೆ ಪ್ರಜಾಪ್ರಭುತ್ವ ಸರಿ ಇರುತ್ತದೆ, ಸೋತರೆ ಆಯೋಗ ಮತ್ತು ನ್ಯಾಯಾಲಯಗಳು ಕೆಟ್ಟವಾಗುತ್ತವೆಯೇ?” ಎಂದು ಪ್ರಶ್ನಿಸಿದರು.
ಪೋಸ್ಟ್
#WATCH | Delhi: Union Home Minister Amit Shah says, “For 30 years, Congress and the Kejriwal government discharged sewage into the Yamuna. Around 2,000 tonnes of waste went to the Yamuna River daily. Industrial waste from Haryana and polluted water from Uttar Pradesh also contributed to the problem during their term. Now, with BJP governments in Delhi, Haryana and Uttar Pradesh, we have developed a coordinated, time-bound roadmap to clean the river. By 2029, we aim to present a cleaner Yamuna to the people.”
— ANI (@ANI) October 22, 2026
ಒಳನುಸುಳುಕೋರರ ರಕ್ಷಣೆ ಆರೋಪ: “ವೋಟ್ ಚೋರಿಯ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಎಎಪಿ ಒಳನುಸುಳುಕೋರರ ನಕಲಿ ಮತಗಳನ್ನು ರಕ್ಷಿಸಲು ಹೊರಟಿವೆ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಕ್ರಮ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುವುದನ್ನು ಮುಂದುವರಿಸಲಿದೆ” ಎಂದರು.
ಇದನ್ನೂ ಓದಿ: ಡಿಸೆಂಬರ್ 2029ರೊಳಗೆ ಭಾರತ ‘ಡ್ರಗ್ಸ್ ಮುಕ್ತ’ ದೇಶ: ಗೃಹ ಸಚಿವ ಅಮಿತ್ ಶಾ ಘೋಷಣೆ
30 ವರ್ಷಗಳ ಕಾಲ ಸರ್ಕಾರ ರಚಿಸಲು ಸಾಧ್ಯವಿಲ್ಲ: “ಬಿಜೆಪಿ ಮುಂದಿನ ಮೂರು ದಶಕಗಳ ಕಾಲ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದು ನಾನು ಹೇಳಿದಾಗ ಇವರಿಗೆ ನಡುಕ ಹುಟ್ಟುತ್ತದೆ. ನಾನು ಇಲ್ಲೇ ಹುಟ್ಟಿದವನು, ಇಲ್ಲೇ ಬದುಕಿ, ಇಲ್ಲೇ ಮಣ್ಣಾಗುವವನು; ಪ್ರತಿ ಆರು ತಿಂಗಳಿಗೊಮ್ಮೆ ವಿದೇಶಕ್ಕೆ ತೆರಳುವ ಪ್ರಮೇಯ ನನಗಿಲ್ಲ. ನಿಮ್ಮ ಈ ನಕಾರಾತ್ಮಕ ಮನಸ್ಥಿತಿಯಿಂದ ಮುಂದಿನ 30 ವರ್ಷಗಳಾದರೂ ನೀವು ಅಧಿಕಾರಕ್ಕೆ ಮರಳಲು ಸಾಧ್ಯವಿಲ್ಲ” ಎಂದು ರಾಹುಲ್ ಗಾಂಧಿಯವರ ವಿದೇಶ ಪ್ರವಾಸಗಳನ್ನು ಪರೋಕ್ಷವಾಗಿ ಉಲ್ಲೇಖಿಸಿ ಟಾಂಗ್ ನೀಡಿದರು.
ದೆಹಲಿ ಮತ್ತು ಪಂಜಾಬ್ ಅಭಿವೃದ್ಧಿ ಕುರಿತು ಭರವಸೆ ಮೇ 2029ರೊಳಗೆ ಸ್ವಚ್ಛ ಯಮುನಾ: ದೆಹಲಿಯ ಮಾಲಿನ್ಯ ಮತ್ತು ಯಮುನಾ ನದಿಯ ದುಸ್ಥಿತಿಗೆ ಕಾಂಗ್ರೆಸ್ ಹಾಗೂ ಎಎಪಿ ಆಡಳಿತವೇ ಕಾರಣ ಎಂದು ಆರೋಪಿಸಿದ ಶಾ, ಕೇಂದ್ರ ಸರ್ಕಾರ, ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ. ಪ್ರತಿಯೊಂದು ಮನೆಗೂ ಒಳಚರಂಡಿ ಮತ್ತು ಶುದ್ಧ ಕುಡಿಯುವ ನೀರು ಸಂಪರ್ಕ ಕಲ್ಪಿಸಲು 3 ವರ್ಷಗಳ ಕ್ರಿಯಾ ಯೋಜನೆ ಜಾರಿಯಲ್ಲಿದ್ದು, ಮೇ 2029ರ ವೇಳೆಗೆ ಯಮುನಾ ನದಿಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ಜನರ ಮುಂದಿಡಲಿದ್ದೇವೆ ಎಂದರು.
ತ್ಯಾಜ್ಯ ನಿರ್ವಹಣೆ: ದೆಹಲಿಯ ಕಸದ ಬೆಟ್ಟಗಳಿಂದ 2 ಕೋಟಿ ಟನ್‌ಗೂ ಅಧಿಕ ತ್ಯಾಜ್ಯವನ್ನು ತೆರವುಗೊಳಿಸಿ, 100 ಎಕರೆ ಜಾಗವನ್ನು ಮುಕ್ತಗೊಳಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಈ ಸ್ಥಳಗಳನ್ನು ಸುಂದರ ಸಾರ್ವಜನಿಕ ಉದ್ಯಾನವನಗಳನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಪಂಜಾಬ್‌ನಲ್ಲಿ ಎನ್‌ಡಿಎ ಸರ್ಕಾರ: ಪಂಜಾಬ್‌ನಲ್ಲಿ ಎಎಪಿ ಸರ್ಕಾರವು ಮಾದಕ ವಸ್ತುಗಳ ಪಿಡುಗನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ ಅವರು, 2029ರ ವೇಳೆಗೆ ಪಂಜಾಬ್‌ನಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಅಲ್ಲಿನ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
