ಕೃಷ್ಣಾ ನದಿ ನೀರು ಕಾನೂನು ಬಾಹಿರವಾಗಿ ಬಳಸಲು ಹುನ್ನಾರ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಎಂಬಿ ಪಾಟೀಲ್ ಆರೋಪ
ಕೃಷ್ಣಾ ನದಿ ನೀರನ್ನು ಕಾನೂನು ಬಾಹಿರವಾಗಿ ಬಳಸಲು ಮಹಾರಾಷ್ಟ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ. ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಎರಡರ ಅಧಿಸೂಚನೆಗೂ ಮುನ್ನವೇ 40 ಟಿಎಂಸಿ ನೀರನ್ನು ಉಜನಿ ಜಲಾಶಯಕ್ಕೆ ಹರಿಸುವ ಯೋಜನೆ ಕಾನೂನುಬಾಹಿರವಾಗಿದೆ ಎಂದು ವಿಜಯಪುರದಲ್ಲಿ ಅವರು ತಿಳಿಸಿದರು.
ವಿಜಯಪುರ, ನವೆಂಬರ್ 2: ಕೃಷ್ಣಾ ನದಿಯ ನೀರನ್ನು ಕಾನೂನುಬಾಹಿರವಾಗಿ ಬಳಸಲು ಮಹಾರಾಷ್ಟ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಕೃಷ್ಣಾ ನದಿಯು ಉಗಮ ಸ್ಥಾನವಾಗಿದೆ. ಮಹಾಬಲೇಶ್ವರದ ಬಳಿ ಕೃಷ್ಣಾ ನದಿಯಿಂದ 40 ಟಿಎಂಸಿ ನೀರನ್ನು ಭೀಮಾ ನದಿಯ ಉಜನಿ ಜಲಾಶಯಕ್ಕೆ ಹರಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಎರಡರ ಆದೇಶದ ಅಧಿಸೂಚನೆಯು ಇನ್ನೂ ಆಗಿಲ್ಲ. ಗೆಜೆಟ್ ನೋಟಿಫಿಕೇಷನ್‌ಗೂ ಮುನ್ನವೇ ಮಹಾರಾಷ್ಟ್ರ ಈ ಹೊಸ ಯೋಜನೆಯನ್ನು ಕೈಗೊಂಡಿರುವುದು ಸಂಪೂರ್ಣ ಕಾನೂನುಬಾಹಿರ. ಈ ಯೋಜನೆಯು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಎಂ.ಬಿ. ಪಾಟೀಲ್ ಹೇಳಿದರು.
ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿಗಳ ಜೊತೆಗೆ ಹಾಗೂ ನೀರಾವರಿ ಸಚಿವರ ಜೊತೆಗೆ ಚರ್ಚೆ ನಡೆಸಲಾಗಿದೆ. ಲಕ್ಷ್ಮಣ ಸವದಿ, ಹೆಚ್.ಕೆ. ಪಾಟೀಲ್ ಸೇರಿದಂತೆ ಹಲವು ಗಣ್ಯರು ಈ ವಿಷಯದಲ್ಲಿ ಪಕ್ಷಾತೀತವಾಗಿ ಒಟ್ಟಾಗಿ ನಿಲ್ಲಲಿದ್ದಾರೆ. ಕರ್ನಾಟಕದ ಎಲ್ಲಾ ನಾಯಕರು ಒಟ್ಟಾಗಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಈ ಬಗ್ಗೆ ಮಾತನಾಡಲು ನಿರ್ಧರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

