‘ಶುದ್ಧೀಕರಣಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿದರೂ ಯಮುನಾ ನದಿ ಮತ್ತಷ್ಟು ಕಲುಷಿತಗೊಂಡಿದೆ’; ಸುಪ್ರೀಂ ಕೋರ್ಟ್​ನಿಂದ ರಾಜ್ಯಗಳಿಗೆ ದಂಡದ ಎಚ್ಚರಿಕೆ

ಯಮುನಾ ನದಿಯ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳನ್ನು ಖಡಕ್ ಆಗಿ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ನದಿ ಶುದ್ಧೀಕರಣಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಿದರೂ ನದಿ ಕಲುಷಿತವಾಗಿಯೇ ಉಳಿದಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಯಮುನಾ ನದಿಯ ಮಾಲಿನ್ಯವನ್ನು ತಡೆಯುವಲ್ಲಿ ವಿಫಲವಾಗುವ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಪ್ರಾಧಿಕಾರಗಳು ಕಠಿಣ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಯಮುನಾ ನದಿ ಸ್ವಚ್ಛತಾ ಅಭಿಯಾನದಡಿ ಇದುವರೆಗೆ ಭಾರಿ ಮೊತ್ತದ ಹಣವನ್ನು ವ್ಯಯಿಸಲಾಗಿದೆ. ಆದರೆ ವಾಸ್ತವಿಕ ನೆಲೆಯಲ್ಲಿ ನದಿಯ ಮಾಲಿನ್ಯ ಪ್ರಮಾಣ ಕಡಿಮೆಯಾಗುವ ಬದಲು ಮತ್ತಷ್ಟು ಹದಗೆಟ್ಟಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಶುದ್ಧೀಕರಣಕ್ಕೆ ಕೋಟಿಗಟ್ಟಲೆ ಖರ್ಚು ಮಾಡಿದರೂ ಯಮುನಾ ನದಿ ಮತ್ತಷ್ಟು ಕಲುಷಿತಗೊಂಡಿದೆ’; ಸುಪ್ರೀಂ ಕೋರ್ಟ್​ನಿಂದ ರಾಜ್ಯಗಳಿಗೆ ದಂಡದ ಎಚ್ಚರಿಕೆ
Foam In Yamuna River

Updated on: Nov 16, 2026 | 10:19 PM

ನವದೆಹಲಿ, ನವೆಂಬರ್ 16: ಯಮುನಾ ನದಿಯ ಸ್ವಚ್ಛತೆಗಾಗಿ ಕೋಟ್ಯಂತರ ರೂ. ಹಣ ಖರ್ಚು ಮಾಡಲಾಗಿದ್ದರೂ, ನದಿಯ ಮಾಲಿನ್ಯ ಮಟ್ಟ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನದಿಗಳ ಶುದ್ಧೀಕರಣ ಕಾರ್ಯದಲ್ಲಿ ನಿರ್ಲಕ್ಷ್ಯ ಮುಂದುವರಿಸಿದರೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ. ಯಮುನಾ ನದಿ ಹರಿಯುವ ವಿವಿಧ ರಾಜ್ಯಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಮಾಲಿನ್ಯ ನಿಯಂತ್ರಣ ಕ್ರಮಗಳು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳ (STP) ನಿರ್ಮಾಣ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.

ಕಠಿಣ ದಂಡದ ಎಚ್ಚರಿಕೆ:

Loading...

ಇನ್ನು ಮುಂದೆಯೂ ಪರಿಸರ ನಿಯಮಗಳ ಪಾಲನೆಯಲ್ಲಿ ವಿಳಂಬ ಧೋರಣೆ ತೋರಿದರೆ ಅಥವಾ ಜವಾಬ್ದಾರಿಯಿಂದ ನುಣುಚಿಕೊಂಡರೆ, ಹಕ್ಕುಚ್ಯುತಿ ಅಥವಾ ಭಾರಿ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಎಸ್​ಐಆರ್​ ವಿವಾದ; ಚುನಾವಣಾ ಆಯುಕ್ತರಿಗೆ 48 ಪ್ರಶ್ನೆ ಕೇಳಲು ಸುಪ್ರೀಂ ಕೋರ್ಟ್‌ ಅನುಮತಿ ಕೋರಿದ ಇಂಡಿಯ ಮೈತ್ರಿಕೂಟ

“ನದಿಯ ದಡದಲ್ಲಿರುವ ಪಟ್ಟಣಗಳು, ನಗರಗಳು ಮತ್ತು ಹಳ್ಳಿಗಳ ನಾಗರಿಕ ಆಡಳಿತದಲ್ಲಿನ ಎಲ್ಲಾ ಲೋಪದೋಷಗಳು ನದಿಯ ಹದಗೆಟ್ಟ ಆರೋಗ್ಯದಲ್ಲಿ ಮತ್ತು ಯಮುನಾ ನದಿಗೆ ಕೊಳಚೆ ನೀರನ್ನು ಹರಿಸುವ 520 ಚರಂಡಿಗಳಲ್ಲಿ ಪ್ರತಿಫಲಿಸುತ್ತವೆ. ಇದೇ ಕಾರಣಕ್ಕಾಗಿ, ನದಿಯನ್ನು ಸ್ವಚ್ಛಗೊಳಿಸಲು ಭಾರಿ ಮೊತ್ತವನ್ನು ಖರ್ಚು ಮಾಡಿದರೂ ಯಮುನಾ ನದಿಯಲ್ಲಿ ಮಾಲಿನ್ಯವು ಹೆಚ್ಚಾಗುತ್ತಲೇ ಇದೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಕೈಗಾರಿಕಾ ಮಾಲಿನ್ಯ ಮತ್ತು ಸಂಸ್ಕರಿಸದ ಒಳಚರಂಡಿ ನೀರನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದಿದ್ದರೂ, ಅವುಗಳನ್ನು ಮೂಲದಲ್ಲೇ ಕಡಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಲ್ಲಿ ಅದು ಸಾಧ್ಯವಿಲ್ಲವೋ, ಅಲ್ಲಿ ಮೊದಲು ಒಳಚರಂಡಿ ನೀರನ್ನು ತಡೆದು, ಸಂಸ್ಕರಿಸಬೇಕು. ಆದರೆ, ಸದೃಢವಾದ ಒಳಚರಂಡಿ ವ್ಯವಸ್ಥೆಯ ಕೊರತೆ ಹಾಗೂ ಮಳೆನೀರು ಮತ್ತು ಒಳಚರಂಡಿ ಕಾಲುವೆಗಳು ಒಂದಕ್ಕೊಂದು ಸೇರಿಕೊಂಡಿರುವುದರಿಂದ ಕೊಳಚೆ ನೀರನ್ನು ತಡೆಯುವುದು ಸವಾಲಾಗಿಯೇ ಉಳಿಯಲಿದೆ ಎಂದು ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ: ದೆಹಲಿಯ ಯಮುನಾ ನದಿಯಲ್ಲಿ ತೇಲಿದ ವಿಷಕಾರಿ ನೊರೆ; ಛತ್ ಪೂಜೆಗೂ ಮುನ್ನ ಆತಂಕ ಮೂಡಿಸಿದ ಮಾಲಿನ್ಯ!

ಅನಧಿಕೃತ ಕಾಲೋನಿಗಳಿಂದ ನದಿಗೆ ಕಂಟಕ:

“ಒತ್ತುವರಿ ಭೂಮಿಯಲ್ಲಿ ನಿರ್ಮಿಸಲಾದ ಹೆಚ್ಚಿನ ಅಕ್ರಮ ಮತ್ತು ಅನಧಿಕೃತ ಕಾಲೋನಿಗಳಲ್ಲಿ ಒಳಚರಂಡಿ ನೀರನ್ನು ತಡೆಯುವುದು ನಾಗರಿಕ ಪ್ರಾಧಿಕಾರಗಳಿಗೆ ಅಸಾಧ್ಯವಲ್ಲದಿದ್ದರೂ ಅತ್ಯಂತ ಕಷ್ಟಕರವಾಗಿರುತ್ತದೆ. ಏಕೆಂದರೆ ಅವುಗಳನ್ನು ವ್ಯವಸ್ಥಿತ ಬಡಾವಣೆ ವಿನ್ಯಾಸದಲ್ಲಿ ನಿರ್ಮಿಸಲಾಗಿಲ್ಲ. ಒಳಚರಂಡಿ ವ್ಯವಸ್ಥೆಯನ್ನು ಅಳವಡಿಸಲು ಅಲ್ಲಿ ಜಾಗವೇ ಇಲ್ಲ” ಎಂದು ನ್ಯಾಯಪೀಠ ಒತ್ತಿಹೇಳಿದೆ. ಈ ಅಕ್ರಮ ಕಾಲೋನಿಗಳ ಕೊಳಚೆ ನೀರು ಮೂಲದಲ್ಲೇ ನದಿಯನ್ನು ಕಲುಷಿತಗೊಳಿಸುವುದನ್ನು ಮುಂದುವರಿಸುವುದರಿಂದ ಅವು ದೊಡ್ಡ ಸಮಸ್ಯೆಯಾಗಿಯೇ ಉಳಿಯಲಿವೆ ಎಂದು ಕೋರ್ಟ್ ಆತಂಕ ವ್ಯಕ್ತಪಡಿಸಿದೆ.

ಪ್ರವಾಸೋದ್ಯಮ ಮತ್ತು ಅತಿಕ್ರಮಣ ತೆರವು:

“ಮನರಂಜನೆ ಮತ್ತು ಪ್ರವಾಸೋದ್ಯಮದ ಉದ್ದೇಶಗಳಿಗಾಗಿ ಸೈಕ್ಲಿಂಗ್ ಮತ್ತು ವಾಕಿಂಗ್ ಟ್ರ್ಯಾಕ್‌ಗಳಂತಹ ಅರೆ-ಶಾಶ್ವತ ರಚನೆಗಳಿಗೆ ಮಾತ್ರ ಅನುಮತಿ ನೀಡಬೇಕು. ಶಾಶ್ವತ ಕಟ್ಟಡಗಳನ್ನು ‘ಝೋನ್ ಓ’ ಹೊರಗೆ ಮತ್ತು ಸೂಕ್ತ ಎತ್ತರದಲ್ಲಿ ಮಾತ್ರ ನಿರ್ಮಿಸಬಹುದು. ಪ್ರಸ್ತುತ ‘ಝೋನ್ ಓ’ ಅಥವಾ ಪ್ರಸ್ತಾವಿತ ವಿಸ್ತೃತ ವಲಯದಲ್ಲಿರುವ ಎಲ್ಲಾ ಕಟ್ಟಡಗಳನ್ನು ಚಾಲ್ತಿಯಲ್ಲಿರುವ ಕಾನೂನಿನ ಪ್ರಕಾರ ಹಾಗೂ ಅರ್ಹ ನಿವಾಸಿಗಳಿಗೆ ಪರ್ಯಾಯ ವಸತಿ ಕಲ್ಪಿಸಿದ ನಂತರ ತೆರವುಗೊಳಿಸಲು ಪ್ರಯತ್ನಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಯಮುನಾ ನದಿಯು ತನಗೆ ಬೇಕಾದಂತೆ ಹರಿಯಲು ಮತ್ತು ತನ್ನ ಪಥವನ್ನು ಬದಲಾಯಿಸಲು ಅಗತ್ಯವಾದ ಜಾಗವನ್ನು ಹೊಂದಿರಬೇಕು” ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us