ಬಿಲ್ಕಿಸ್ ಬಾನೋ ಪ್ರಕರಣ: 17 ವರ್ಷ ಜೈಲಿನಲ್ಲಿದ್ದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು
ಲ್ಕಿಸ್ ಬಾನೋ ಪ್ರಕರಣದಲ್ಲಿ 17 ವರ್ಷ ಜೈಲಿನಲ್ಲಿದ್ದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಮೇಲ್ಮನವಿ ವಿಚಾರಣೆ ಬಾಕಿ ಇರುವಿಕೆ ಮತ್ತು ಅಪರಾಧಿಗಳ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ. ಇದರಿಂದ ಅವರ ಜೀವಾವಧಿ ಶಿಕ್ಷೆ ಅಮಾನತ್ತಾಗಿದೆ. ಜಾಮೀನು ಎಂದರೆ ಅಪರಾಧ ರದ್ದಲ್ಲ, ಮುಂದಿನ ತೀರ್ಪು ನಿರ್ಣಾಯಕ.

ನವದೆಹಲಿ, ನವೆಂಬರ್ 16: ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದ ಬಿಲ್ಕಿಸ್ ಬಾನೋ ಪ್ರಕರಣ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬದ ಏಳು ಸದಸ್ಯರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಈಗಾಗಲೇ 17 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವುದು ಮತ್ತು ಅವರ ಮೇಲ್ಮನವಿಯಲ್ಲಿ ಪರಿಶೀಲಿಸಬೇಕಾದ ಕಾನೂನು ಹಾಗೂ ವಾಸ್ತವಿಕ ಅಂಶಗಳಿರುವುದನ್ನು ನ್ಯಾಯಾಲಯ ಗಮನಿಸಿದೆ. ಹಾಗಾದರೆ, ಯಾರು ಆ ಇಬ್ಬರು ಅಪರಾಧಿಗಳು? ಸುಪ್ರೀಂ ಕೋರ್ಟ್ ಜಾಮೀನು ನೀಡಿದ್ದೇಕೆ? ಈ ಆದೇಶದಿಂದ ಅವರ ಶಿಕ್ಷೆ ರದ್ದಾಗಿದೆಯೇ? ಇಲ್ಲಿದೆ ಮಾಹಿತಿ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 28ರಂದು ಈ ಆದೇಶ ನೀಡಿದೆ. ಬಿಪಿನ್‌ಚಂದ್ ಕನೈಯಾಲಾಲ್ ಜೋಶಿ ಮತ್ತು ಪ್ರದೀಪ್ ರಾಮನ್‌ಲಾಲ್ ಮೋಧಿಯಾ ಎಂಬ ಇಬ್ಬರು ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಈ ಇಬ್ಬರೂ ಈಗಾಗಲೇ 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಇವರ ಮೇಲ್ಮನವಿಯಲ್ಲಿ ಪರಿಶೀಲಿಸಬೇಕಾದ ಕಾನೂನು ಮತ್ತು ವಾಸ್ತವಿಕ ಅಂಶಗಳಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅಲ್ಲದೆ, ಬಿಪಿನ್‌ಚಂದ್ ಜೋಶಿ ತೀವ್ರ ಅಂಗವೈಕಲ್ಯದಿಂದ ಬಳಲುತ್ತಿರುವ ಅಂಶವನ್ನೂ ನ್ಯಾಯಾಲಯ ಪರಿಗಣಿಸಿದೆ.
ಇದನ್ನೂ ಓದಿ: ಸೌಜನ್ಯ ಕೊಲೆ ಪ್ರಕರಣ ಮರುತನಿಖೆ: ಶವ ಪತ್ತೆಯಾದ ಸ್ಥಳದಲ್ಲಿ ಎಸ್‌ಐಟಿ ತಂಡದಿಂದ ಕ್ರೈಂ ಸೀನ್ ಮರುಸೃಷ್ಟಿ
ಇಬ್ಬರು ಅಪರಾಧಿಗಳ ಪರ ವಕೀಲರು ವಾದ ಮಂಡಿಸುವಾಗ, ಅವರಲ್ಲಿ ಒಬ್ಬರ ಹೆಸರು ಆರಂಭಿಕ ಎಫ್‌ಐಆರ್‌ನಲ್ಲಿ ಇರಲಿಲ್ಲ. ಘಟನೆ ನಡೆದ ಸುಮಾರು ಮೂರು ವರ್ಷಗಳ ನಂತರ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಸೇರಿಸಲಾಯಿತು ಎಂದು ತಿಳಿಸಿದರು.
ಆದರೆ, ಸರ್ಕಾರಿ ವಕೀಲರು ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಪ್ರಕರಣದ ಗಂಭೀರತೆ ಮತ್ತು ವಿಚಾರಣಾ ನ್ಯಾಯಾಲಯ ಹಾಗೂ ಬಾಂಬೆ ಹೈಕೋರ್ಟ್ ಈಗಾಗಲೇ ಅವರ ಅಪರಾಧವನ್ನು ದೃಢಪಡಿಸಿರುವುದನ್ನು ಉಲ್ಲೇಖಿಸಿದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಮೇಲ್ಮನವಿಗಳ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಇಬ್ಬರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿದೆ. ಜಾಮೀನಿನ ಷರತ್ತುಗಳನ್ನು ವಿಚಾರಣಾ ನ್ಯಾಯಾಲಯ ನಿರ್ಧರಿಸಲಿದೆ.
ಬಿಲ್ಕಿಸ್ ಬಾನೋ ಪ್ರಕರಣದ ಹಿನ್ನೆಲೆಯೇನು?
2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನೋ ಅವರ ಕುಟುಂಬದ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಆಗ 21 ವರ್ಷದವರಾಗಿದ್ದ ಬಿಲ್ಕಿಸ್ ಬಾನೋ ಐದು ತಿಂಗಳ ಗರ್ಭಿಣಿಯಾಗಿದ್ದರು. 2002ರ ಮಾರ್ಚ್ 3ರಂದು ನಡೆದ ಈ ದಾಳಿಯಲ್ಲಿ ಬಿಲ್ಕಿಸ್ ಬಾನೋ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಮೃತಪಟ್ಟವರಲ್ಲಿ ಅವರ ಮೂರು ವರ್ಷದ ಮಗಳೂ ಸೇರಿದ್ದಳು.
ಪ್ರಕರಣದ ತನಿಖೆಯಲ್ಲಿ ಆರಂಭದಲ್ಲಿ ಹಲವು ಅಡೆತಡೆಗಳು ಎದುರಾದ ಹಿನ್ನೆಲೆಯಲ್ಲಿ ಬಿಲ್ಕಿಸ್ ಬಾನೋ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಬಳಿಕ ಸುಪ್ರೀಂ ಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ವಿಚಾರಣೆಯೂ ಗುಜರಾತ್‌ನಿಂದ ಮಹಾರಾಷ್ಟ್ರದ ಮುಂಬೈಗೆ ವರ್ಗಾವಣೆಯಾಗಿತ್ತು.
11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ 2008ರ ಜನವರಿ 21ರಂದು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯವು ಈ ಪ್ರಕರಣದಲ್ಲಿ 11 ಮಂದಿಯನ್ನು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ನಂತರ ಅಪರಾಧಿಗಳು ಈ ತೀರ್ಪನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 2017ರ ಮೇ ತಿಂಗಳಲ್ಲಿ ಬಾಂಬೆ ಹೈಕೋರ್ಟ್ ಕೂಡ 11 ಮಂದಿಯ ಅಪರಾಧ ಮತ್ತು ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಇದರಿಂದಾಗಿ ಅಪರಾಧಿಗಳು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮುಂದುವರಿಸಿದ್ದರು.
2022ರಲ್ಲಿ 11 ಅಪರಾಧಿಗಳ ಬಿಡುಗಡೆ, 2024ರಲ್ಲಿ ಮತ್ತೆ ಜೈಲು
ಈ ಪ್ರಕರಣದಲ್ಲಿ ಮತ್ತೊಂದು ದೊಡ್ಡ ವಿವಾದ 2022ರಲ್ಲಿ ನಡೆದಿತ್ತು. ಸ್ವಾತಂತ್ರ್ಯ ದಿನಾಚರಣೆಯಂದು ಆಗಸ್ಟ್ 15ರಂದು ಗುಜರಾತ್ ಸರ್ಕಾರವು ತನ್ನ ಉಪಶಮನ ನೀತಿಯಡಿ (Remission Policy) 11 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿತ್ತು. ಈ ನಿರ್ಧಾರಕ್ಕೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಿಲ್ಕಿಸ್ ಬಾನೋ ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
2024ರ ಜನವರಿ 8ರಂದು ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರದ ಬಿಡುಗಡೆ ಆದೇಶವನ್ನು ರದ್ದುಗೊಳಿಸಿತು. ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದು ಮಹಾರಾಷ್ಟ್ರದ ನ್ಯಾಯಾಲಯವಾಗಿರುವುದರಿಂದ, ಅವರನ್ನು ಬಿಡುಗಡೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಗುಜರಾತ್ ಸರ್ಕಾರಕ್ಕೆ ಇರಲಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಬಿಡುಗಡೆಯಾಗಿದ್ದ 11 ಅಪರಾಧಿಗಳೂ ಮತ್ತೆ ಜೈಲಿಗೆ ಮರಳುವಂತೆ ಆದೇಶ ನೀಡಲಾಯಿತು.
– ಇಬ್ಬರು ಅಪರಾಧಿಗಳ ಮೇಲ್ಮನವಿಯ ವಿಚಾರಣೆ ಇನ್ನೂ ಬಾಕಿಯಿದೆ. – 17 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಅಂಶವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ. – ಒಬ್ಬ ಅಪರಾಧಿಯ ತೀವ್ರ ಅಂಗವೈಕಲ್ಯವನ್ನೂ ಗಮನಿಸಿದೆ. – ಇಬ್ಬರ ಜೀವಾವಧಿ ಶಿಕ್ಷೆಯನ್ನು ಮೇಲ್ಮನವಿ ವಿಚಾರಣೆ ನಡೆಯುವವರೆಗೆ ಅಮಾನತುಗೊಳಿಸಲಾಗಿದೆ. – ಜಾಮೀನು ಸಿಕ್ಕಿದೆ ಎಂದ ಮಾತ್ರಕ್ಕೆ ಅವರ ಅಪರಾಧ ಸಾಬೀತಾಗಿರುವ ತೀರ್ಪು ರದ್ದಾಗಿದೆ ಎಂದರ್ಥವಲ್ಲ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




