ಉಕ್ಕಿ ಹರಿದ ಯಮುನಾ ನದಿ; ದೆಹಲಿಯ ತಗ್ಗುಪ್ರದೇಶದಲ್ಲಿನ ಜನರ ಸ್ಥಳಾಂತರಕ್ಕೆ ಆದೇಶಿಸಿದ ಕೇಜ್ರಿವಾಲ್

|

Updated on: Jul 12, 2023 | 9:01 PM

ದೇಶದ ರಾಜಧಾನಿಯಲ್ಲಿ ಪ್ರವಾಹದ ಸುದ್ದಿ ಜಗತ್ತಿಗೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ. ನಾವು ಒಟ್ಟಾಗಿ ದೆಹಲಿಯ ಜನರನ್ನು ಈ ಪರಿಸ್ಥಿತಿಯಿಂದ ರಕ್ಷಿಸಬೇಕಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಉಕ್ಕಿ ಹರಿದ ಯಮುನಾ ನದಿ; ದೆಹಲಿಯ ತಗ್ಗುಪ್ರದೇಶದಲ್ಲಿನ ಜನರ ಸ್ಥಳಾಂತರಕ್ಕೆ ಆದೇಶಿಸಿದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us on

ದೆಹಲಿ: ದೆಹಲಿಯಲ್ಲಿ ಯಮುನಾ ನದಿ (Yamuna River) ಬುಧವಾರದಂದು ದಾಖಲೆಯ ಮಟ್ಟದಿಂದ ಉಕ್ಕಿ ಹರಿಯುತ್ತಿದ್ದು, 45 ವರ್ಷಗಳ ಹಿಂದಿನ ದಾಖಲೆಯನ್ನು ಇದು ಮೀರಿದೆ. ಅದೇ ವೇಳೆ ಯಮುನಾ ನದಿಯ ಸಮೀಪದಲ್ಲಿರುವ ತಗ್ಗು ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರಿಸುವಂತೆ ದೆಹಲಿ (Delhi) ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಆದೇಶಿಸಿದ್ದಾರೆ. ನಾವು ಜೀವಗಳು, ಆಸ್ತಿಗಳನ್ನು ರಕ್ಷಿಸಬೇಕಾಗಿದೆ. ಯಮುನಾ ನದಿಯ ಸಮೀಪವಿರುವ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸುವ ಅಗತ್ಯವಿದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದ್ದಾರೆ. ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಗೆ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.

ಯಮುನಾದಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ಅಗತ್ಯವಿದ್ದರೆ ಶಾಲೆಗಳನ್ನು ಪರಿಹಾರ ಶಿಬಿರಗಳನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳಿಗೆ ಕೇಜ್ರಿವಾಲ್ ಸೂಚನೆ ನೀಡಿದರು.

ದೆಹಲಿಯ ಯಮುನಾ  ನದಿ ನೀರಿನ ಮಟ್ಟ  ಬುಧವಾರ 207.71 ಮೀಟರ್‌ಗೆ ಏರಿದ್ದು, 1978 ರಲ್ಲಿ ನೀರಿನ ಮಟ್ಟ 207.49 ಮೀಟರ್‌ಗಳಷ್ಟು ಏರಿಕೆ ಆಗಿತ್ತು. ನೀರಿನ ಮಟ್ಟ ಏರಿಕೆ ಆಗುತ್ತಿದ್ದಂತೆ ಕೇಜ್ರಿವಾಲ್ ತುರ್ತು ಸಭೆ ಕರೆದಿದ್ದಾರೆ. ಮಳೆಯಿಂದಾಗಿ ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು ದೆಹಲಿ ಪೊಲೀಸರು ನಗರದ ದುರ್ಬಲ ಭಾಗಗಳಲ್ಲಿ ಜನರು ಒಟ್ಟುಸೇರುವುದನ್ನು ನಿಷೇಧಿಸಿದ್ದಾರೆ.

ನದಿಯ ಸಮೀಪವಿರುವ ಮನೆಗಳು ಮತ್ತು ಮಾರುಕಟ್ಟೆಗಳಿಗೆ ನೀರು ನುಗ್ಗಿದ್ದರಿಂದ ಈಗಾಗಲೇ ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕೇಂದ್ರ ಜಲ ಆಯೋಗದ ಮುನ್ಸೂಚನೆಗಳು ನೀರಿನ ಮಟ್ಟವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ.

ಮುಂದಿನ ಎರಡು ದಿನಗಳಲ್ಲಿ ಉತ್ತರಾಖಂಡದಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಪ್ರವಾಹದ ಭೀತಿ ಉಂಟು ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಕೇಜ್ರಿವಾಲ್, ಯಮುನಾದಲ್ಲಿ ನೀರಿನ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡಲು ಹರ್ಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ಸೀಮಿತ ನೀರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ದೇಶದ ರಾಜಧಾನಿಯಲ್ಲಿ ಪ್ರವಾಹದ ಸುದ್ದಿ ಜಗತ್ತಿಗೆ ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ. ನಾವು ಒಟ್ಟಾಗಿ ದೆಹಲಿಯ ಜನರನ್ನು ಈ ಪರಿಸ್ಥಿತಿಯಿಂದ ರಕ್ಷಿಸಬೇಕಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮುಂಬರುವ ವಾರಗಳಲ್ಲಿ ದೆಹಲಿಯು ಜಿ -20 ಶೃಂಗಸಭೆಯನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ನಿರಾಶ್ರಿತ ನಿವಾಸಿಗಳು ತೊಂದರೆಗೊಳಗಾಗಿದ್ದು ಸರ್ಕಾರವು ಸಮರ್ಪಕವಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಅವರು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ನದಿ ದಂಡೆಗಳನ್ನು ಬಲಪಡಿಸಲು ಮತ್ತು ಪ್ರವಾಹ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ದೆಹಲಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಕಂದಾಯ ಸಚಿವ ಅತಿಶಿ ಹೇಳಿದ್ದಾರೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಮತ್ತು ತಗ್ಗು ಪ್ರದೇಶಗಳನ್ನು ತಪ್ಪಿಸಲು ಸಲಹೆಗಳನ್ನು ನೀಡಿದೆ.

ಪ್ರವಾಹವು ದೆಹಲಿಗೆ ಹೊಸದಲ್ಲ, 1924, 1977, 1978, 1995, 2010, ಮತ್ತು 2013 ರಲ್ಲಿ ಪ್ರಮುಖ ಪ್ರವಾಹಗಳು ನಗರವನ್ನು ಮುಳುಗಿಸಿವೆ.

ಇದನ್ನೂ ಓದಿ: Kejriwal Calls Emergency Meet: ಯಮುನಾ ನದಿಯ ನೀರಿನ ಮಟ್ಟ ಹೆಚ್ಚಳ, ದೆಹಲಿಯಲ್ಲಿ ಪ್ರವಾಹ ಸಾಧ್ಯತೆ, ಸಿಎಂ ಕೇಜ್ರಿವಾಲ್ ತುರ್ತು ಸಭೆ

ಹೂಳು ಶೇಖರಣೆಯಿಂದಾಗಿ ನದಿಪಾತ್ರದ ಎತ್ತರವಾಗಿದ್ದು, ನೀರಿನ ಮಟ್ಟಗಳು ಹೆಚ್ಚಲು ಇದು ಕೂಡಾ ಕಾರಣವೆಂದು ತಜ್ಞರು ಹೇಳಿದ್ದಾರೆ. ಸಾಕಷ್ಟು ಹೂಳೆತ್ತುವುದು ಮತ್ತು ನದಿಯ ಹರಿವಿಗೆ ಅಡ್ಡಿಪಡಿಸುವ ಸೇತುವೆಗಳು ಮತ್ತು ಬ್ಯಾರೇಜ್‌ಗಳು ನದಿ ಪಾತ್ರದಲ್ಲಿ ಹೂಳು ತುಂಬಲು ಕಾರಣವಾಗಿವೆ. ವಾರಾಂತ್ಯದಲ್ಲಿ ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಸ್ಯಾಚುರೇಟೆಡ್ ಮಣ್ಣು ನೀರಿನ ಮಟ್ಟದಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:54 pm, Wed, 12 July 23