ಮುಂಬೈ, ಫೆಬ್ರುವರಿ 23: ಮುಂಬೈ ಕಾಂಗ್ರೆಸ್ನ ಯುವ ಘಟಕದ ಮಾಜಿ ಅಧ್ಯಕ್ಷ ಜೀಶನ್ ಸಿದ್ದಿಕಿ (Zeeshan Siddique), ಕಾಂಗ್ರೆಸ್ ಪಕ್ಷದಲ್ಲಿ ತಮಗಾದ ಅವಮಾನಗಳ ಬಗ್ಗೆ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಹೋದಾಗ ಆದ ಅವಮಾನ, ಮುಸ್ಲಿಮರನ್ನು ಕಾಂಗ್ರೆಸ್ನಲ್ಲಿ ನಡೆಸಿಕೊಳ್ಳುವ ರೀತಿ ಇತ್ಯಾದಿ ಬಗ್ಗೆ ಸಿದ್ದಿಕಿ ಮಾತನಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯಂಥ ಹಿರಿಯರಿಗೆ ಬೆಲೆ ಸಿಗುತ್ತಿಲ್ಲ ಎನ್ನುವ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದಾರೆ. ಜೀಶನ್ ಅವರನ್ನು ಮೊನ್ನೆ ಬುಧವಾರ (ಫೆ. 21) ಕಾಂಗ್ರೆಸ್ನ ಮುಂಬೈ ಯುವ ಘಟಕದ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಲಾಗಿದೆ. ಇದಕ್ಕೂ ಮುನ್ನ 50ಕ್ಕೂ ಹೆಚ್ಚು ವರ್ಷಗಳಿಂದ ಕಾಂಗ್ರೆಸ್ನಲ್ಲಿದ್ದ ಅವರ ತಂದೆ ಬಾಬಾ ಸಿದ್ದಿಕಿ (Baba Siddique) ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಅಜಿತ್ ಪವಾರ್ ಬಣದ ಎನ್ಸಿಪಿ ಸೇರಿದ್ದರು. ಅದರ ಬೆನ್ನಲ್ಲೇ ಜೀಶನ್ ಅವರನ್ನು ಕಾಂಗ್ರೆಸ್ನಲ್ಲಿ ಪದಚ್ಯುತಗೊಳಿಸಲಾಗಿದೆ.
ಮುಂಬೈನ ವಾಂದ್ರೆ ಈಸ್ಟ್ ಕ್ಷೇತ್ರದ ಶಾಸಕರೂ ಆಗಿರುವ ಜೀಶನ್ ಸಿದ್ದಿಕಿ ಅವರು ಭಾರತ್ ಜೋಡೋ ಯಾತ್ರೆ ವೇಳೆ ತಮಗಾದ ಅವಮಾನವನ್ನು ನೆನಪಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ನಂದೇಡ್ಗೆ ಬಂದಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಬೇಕೆಂದಿದ್ದೆ. ಆದರೆ, ಅವರನ್ನು ಭೇಟಿಯಾಗಬೇಕೆಂದರೆ ತಾನು 10 ಕಿಲೋ ತೂಕ ಇಳಿಸಿಕೊಳ್ಳಬೇಕು ಎಂದು ರಾಹುಲ್ ಆಪ್ತರಲ್ಲೊಬ್ಬರು ತಿಳಿಸಿದರು ಎಂದು 31 ವರ್ಷದ ಜೀಶನ್ ಸಿದ್ಧಿಕಿ ಹೇಳಿದ್ದಾರೆ.
ಇದನ್ನೂ ಓದಿ: ಅಧೀರ್ ರಂಜನ್ ಚೌಧರಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆ ಸಾಧ್ಯತೆ: ಟಿಎಂಸಿ, ಕಾಂಗ್ರೆಸ್ ಮೈತ್ರಿ ಬಗ್ಗೆ ಅಸಮಾಧಾನವೇ ಕಾರಣ
ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ತುಚ್ಛವಾಗಿ ಕಾಣಲಾಗುತ್ತಿದೆ ಎನ್ನುವ ಗಂಭೀರ ಆರೋಪವನ್ನೂ ಜೀಶನ್ ಸಿದ್ಧಿಕಿ ಮಾಡಿದ್ದಾರೆ.
‘ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ನಾಯಕರು ಮತ್ತು ಕಾರ್ಯಕರ್ತರನ್ನು ನಡೆಸಿಕೊಳ್ಳುವ ರೀತಿ ನಿಜಕ್ಕೂ ಖೇದ ತರುತ್ತದೆ. ಕಾಂಗ್ರೆಸ್ನಲ್ಲಿ ಮತ್ತು ಮುಂಬೈ ಯುವ ಕಾಂಗ್ರೆಸ್ನಲ್ಲಿ ಇರುವ ಕೋಮುವಾದಿತನ ಬೇರೆಲ್ಲೂ ಇಲ್ಲ. ಕಾಂಗ್ರೆಸ್ನಲ್ಲಿ ಮುಸ್ಲಿಮರಾಗಿರುವುದೇ ತಪ್ಪಾ? ನನ್ನನ್ನು ಯಾಕೆ ಗುರಿ ಮಾಡಲಾಯಿತು ಎಂಬುದಕ್ಕೆ ಕಾಂಗ್ರೆಸ್ ಉತ್ತರ ಕೊಡಬೇಕು? ನಾನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಗುರಿ ಮಾಡಲಾಯಿತಾ?’ ಎಂದು ಜೀಶನ್ ಸಿದ್ಧಿಕಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ
ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದಲ್ಲಿ ಪೂರ್ಣ ಸ್ವಾತಂತ್ರ್ಯ ಇಲ್ಲ ಎಂದೂ ಜೀಶನ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
‘ಮಲ್ಲಿಕಾರ್ಜುನ ಖರ್ಗೆ ಎಂಥ ಹಿರಿಯ ಮುತ್ಸದ್ಧಿಗಳು. ಅವರ ಕೈಯನ್ನೇ ಕಟ್ಟಿಹಾಕಿದ್ದಾರೆ. ಅವರ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಾರೆ. ಆದರೆ, ರಾಹುಲ್ ಗಾಂಧಿ ಸುತ್ತ ಇರುವ ಜನರು ಬೇರೆ ಪಕ್ಷಗಳಿಂದ ಸುಪಾರಿ ಪಡೆದು ಕಾಂಗ್ರೆಸ್ ಅನ್ನು ಮುಗಿಸಲು ಬಂದಂತಿದ್ದಾರೆ’ ಎಂದು ಜೀಶನ್ ಸಿದ್ದಿಕಿ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ