ಅಧೀರ್ ರಂಜನ್ ಚೌಧರಿ ಕಾಂಗ್ರೆಸ್​​ ತ್ಯಜಿಸಿ ಬಿಜೆಪಿ ಸೇರ್ಪಡೆ ಸಾಧ್ಯತೆ: ಟಿಎಂಸಿ, ಕಾಂಗ್ರೆಸ್ ಮೈತ್ರಿ ಬಗ್ಗೆ ಅಸಮಾಧಾನವೇ ಕಾರಣ

ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಅವರ ಟಿಎಂಸಿ ನಡುವಿನ ಸೀಟು ಹಂಚಿಕೆ ಮಾತುಕತೆಗಳು ಮತ್ತೆ ಹಳಿಗೆ ಮರಳಿವೆ. ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷವು ಏಕಾಂಗಿಯಾಗಲಿದೆ ಎಂದು ಸಿಎಂ ಘೋಷಿಸಿದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ. ಇದು ಅಧೀರ್ ರಂಜನ್ ಚೌಧರಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಅಧೀರ್ ರಂಜನ್ ಚೌಧರಿ ಕಾಂಗ್ರೆಸ್​​ ತ್ಯಜಿಸಿ ಬಿಜೆಪಿ ಸೇರ್ಪಡೆ ಸಾಧ್ಯತೆ: ಟಿಎಂಸಿ, ಕಾಂಗ್ರೆಸ್ ಮೈತ್ರಿ ಬಗ್ಗೆ ಅಸಮಾಧಾನವೇ ಕಾರಣ
ಅಧೀರ್ ರಂಜನ್ ಚೌಧರಿ
Follow us
Ganapathi Sharma
|

Updated on: Feb 23, 2024 | 10:36 AM

ನವದೆಹಲಿ, ಫೆಬ್ರವರಿ 23: ಲೋಕಸಭೆ ಚುನಾವಣೆಗೆ (Lok Sabha Elections) ಪಶ್ಚಿಮ ಬಂಗಾಳದಲ್ಲಿ (West Bengal) ಸೀಟು ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಮಾತುಕತೆ ಆರಂಭಿಸಿವೆ. ಇದರಿಂದ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ (Adhir Ranjan Chowdhury) ತೀವ್ರ ಅಸಮಧಾನಗೊಂಡಿದ್ದಾರೆ ಎನ್ನಲಾಗಿದೆ. ಪರಿಣಾಮವಾಗಿ ಅವರು ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ‘ಟಿವಿ9 ಭಾರತ್ ವರ್ಷ್​​’ಗೆ ಉನ್ನತ ಮೂಲಗಳು ತಿಳಿಸಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಚೌಧರಿಯವರಿಗೆ ತೀವ್ರ ಅಸಮಾಧಾನವಿದೆ. ಹೀಗಾಗಿ ಅವರು ಕಾಂಗ್ರೆಸ್ ತ್ಯಜಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಅಧೀರ್ ರಂಜನ್ ಚೌಧರಿ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಪಕ್ಷ ತ್ಯಜಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಟಿಎಂಸಿ ಜೊತೆ ಮೈತ್ರಿ ಮಾಡಿಕೊಂಡರೆ ಬಿಜೆಪಿ ಸೇರುವ ಸುಳಿವೂ ನೀಡಿದ್ದಾರೆ. ಅವರ ಈ ಮಾತು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಬಂಗಾಳದಲ್ಲಿ, ಅಧೀರ್ ರಂಜನ್ ಚೌಧರಿ ಅವರು ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಕಾರಣಕ್ಕೆ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಮಾಡಿಕೊಳ್ಳುವುದು ಕಷ್ಟ ಎಂದು ಹೇಳಲಾಗುತ್ತಿದೆ. ಸ್ವತಃ ಮಮತಾ ಬ್ಯಾನರ್ಜಿ ಕೂಡ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಈ ಹಿಂದೆ ಘೋಷಿಸಿದ್ದರು.

ಕಾಂಗ್ರೆಸ್​ನ ಹಿರಿಯ ನಾಯಕರು ಪಕ್ಷ ತ್ಯಜಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ 10 ವರ್ಷಗಳಲ್ಲಿ ರೀಟಾ ಬಹುಗುಣ ಜೋಷಿ, ಕ್ಯಾಪ್ಟನ್ ಅಮರಿಂದರ್ ಸಿಂಗ್, ಜ್ಯೋತಿರಾದಿತ್ಯ ಸಿಂಧಿಯಾ, ಗುಲಾಂ ನಬಿ ಆಜಾದ್, ಆರ್‌ಪಿಎನ್ ಸಿಂಗ್, ಜಿತಿನ್ ಪ್ರಸಾದ್, ಬಾಬಾ ಸಿದ್ದಿಕಿ, ಮಿಲಿಂದ್ ದೇವ್​ಡಾ, ಅಶೋಕ್ ಚವಾಣ್, ಸುಶ್ಮಿತಾ ದೇವ್ ಸೇರಿದಂತೆ ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಪಕ್ಷ ತೊರೆದಿದ್ದಾರೆ. ಈ ಸಾಲಿನಲ್ಲಿ ಪ್ರಿಯಾಂಕಾ ಚತುರ್ವೇದಿ, ಜಿತಿನ್ ಪ್ರಸಾದ್, ಅಶೋಕ್ ತನ್ವರ್, ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್, ಅಶೋಕ್ ಚೌಧರಿ, ಹಿಮಂತ ಬಿಶ್ವ ಶರ್ಮಾ, ಸುನಿಲ್ ಜಾಖರ್, ಅಶ್ವನಿ ಕುಮಾರ್ ಕೂಡ ಇದ್ದಾರೆ.

ಟಿಎಂಸಿ, ಕಾಂಗ್ರೆಸ್ ಸೀಟು ಹಂಚಿಕೆ ಒಪ್ಪಂದ ಸಾಧ್ಯತೆ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಕುರಿತು ಒಪ್ಪಂದ ಏರ್ಪಡುವ ಸಾಧ್ಯತೆಗಳಿವೆ. ಕಾಂಗ್ರೆಸ್‌ಗೆ 5 ಸ್ಥಾನ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಪ್ಪಿಗೆ ಸೂಚಿಸಿದರೆ, ಕಾಂಗ್ರೆಸ್ 6 ರಿಂದ 8 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ ಎಂದು ಹೇಳಲಾಗುತ್ತಿದೆ. ಎರಡು ಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತು ಮಾತುಕತೆ ಅಂತಿಮ ಹಂತದಲ್ಲಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಝಡ್ ಪ್ಲಸ್ ಭದ್ರತೆ

ಮೂಲಗಳ ಪ್ರಕಾರ, ಕಾಂಗ್ರೆಸ್ ಮತ್ತು ಟಿಎಂಸಿ ಈಗ 6 ಸ್ಥಾನಗಳಲ್ಲಿ ಒಪ್ಪಂದ ಮಾಡಿಕೊಂಡಿವೆ. ಉಭಯ ಪಕ್ಷಗಳ ನಡುವೆ 36-6 ಸೂತ್ರವನ್ನು ನಿರ್ಧರಿಸಲಾಗಿದೆ. ಅಂದರೆ, ಬಂಗಾಳದಲ್ಲಿ ಟಿಎಂಸಿ 36 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 6 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ