ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಭಾರೀ ಬಹುಮತದೊಂದಿಗೆ ಆರಿಸಿ ಬಂದಿರುವ ಪುರಾತನ ಕಾಂಗ್ರೆಸ್ ಪಕ್ಷಕ್ಕೆ ಸವಾಲಿನದ್ದಾಗಿದೆ. ಇಬ್ಬರು ಮೇರು ನಾಯಕರ ಮಧ್ಯೆ ಕಿತ್ತಾಟ ಕಾದಾಟ ಜೋರಾಗಿಯೇ ನಡೆದಿದೆ. ಕೊನೆಗೆ ಅವರಲ್ಲೊಬ್ಬ ನಾಯಕ ನಿನ್ನೆ ರಾತ್ರಿ ಶಾಲೆಗೆ ಹೋಗಲು ಹಠ ಹಿಡಿಯುವ ಚಿಕ್ಕಮಕ್ಕಳಂತೆ ಹೊಟ್ಟೆ ಹಿಡಿಕೊಂಡು ಅಯ್ಯೋ ನನಗೆ ಹೊಟ್ಟೆ ನೋವು/ ಹೊಟ್ಟೆಯುರಿ ಎಂದು ಹೇಳುತ್ತಾ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಮಾಡಲು ಒಲ್ಲೆ ಎಂದಿದ್ದಾರೆ. ಕೊನೆಗೆ ಇಂದು ಬೆಳಗ್ಗೆ ವಿಮಾನ ಹತ್ತಿದಾರೆ ಅನ್ನಿ. ಆದರೆ ಈ ಮಧ್ಯೆ, ಈ ಪ್ರಹಸನಗಳನ್ನೆಲ್ಲಾ ನೋಡುತ್ತಿದ್ದ ರಾಜಧಾನಿಯ ಸಾಮಾನ್ಯ ಗೃಹಿಣಿಯೊಬ್ಬರು (house wife) ಬಂಡೆ ಮಾಮನಿಗೆ Happy birthday ಹೇಳುವ ನೆಪದಲ್ಲಿ ಬಂಡೆ ಮಾಮನೇ (DK Shivakumar) ಕರ್ನಾಟಕದ ಮುಖ್ಯಮಂತ್ರಿ (Karnataka Chief Minister) ಆಗಬೇಕು ಎಂದು ಆಶಿಸಿದ್ದಾರೆ.
ಜೊತೆಗೆ ಒಂದು ಬಿಟ್ಟಿ ಸಲಹೆಯನ್ನೂ ಬಿಟ್ಟಿದ್ದಾರೆ. ರಾಜಕೀಯವಾಗಿ ಅದು ಸಾಧ್ಯವಾ? ಎಂದರೆ ಅದು ಬೇರೆ ಮಾತಾದೀತು. ಆದರೆ ಇಲ್ಲಿ ಆ ಗೃಹಿಣಿಯ ಕಳಕಳಿ, ಕಾಳಜಿ, ಬಂಡೆ ಮಾಮನ ಬಗೆಗಿರುವ ಅಭಿಮಾನ ಅದಲ್ಲೆಕ್ಕಿಂತ ಹೆಚ್ಚಾಗಿ ಆ ಸ್ಥಾನಕ್ಕೆ ಬಂಡೆ ಮಾಮ ಹೇಗೆ ಅರ್ಹರು, ಅದನ್ನು ದಕ್ಕಿಸಿಕೊಳ್ಳುವುದು ಹೇಗೆ ಎಂಬ ಜಾಣ ವಿಧಾನ ನೀಡಿರುವುದು ನೋಡಿದರೆ ನಿಜಕ್ಕೂ ಸಾಮಾನ್ಯ ಮಹಿಳೆಯರೂ ಇಂದಿನ ರಾಜಕೀಯ ಬೆಳವಣಿಗೆಗಳನ್ನು ಹೇಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಅದಕ್ಕೆ ಹೇಗೆ ಸ್ಪಂದಿಸುತ್ತಿದ್ದಾರೆ, ಮತ್ತು ಅದಕ್ಕೆ ತಮ್ಮದೇ ಆದ ಸಲಹೆಗಳನ್ನು ನೀಡುವಷ್ಟು ಗಾಢವಾಗಿ ರಾಜಕೀಯದಲ್ಲಿ ಹೇಗೆ ತಲ್ಲೀನರಾಗಿದ್ದಾರೆ ಎಂಬುದು ಗೋಚರವಾಗುತ್ತದೆ.
ಇನ್ನು, ಎಲ್ಲ ಮಹಿಳೆಯರ ಪ್ರತಿನಿಧಿಯಾಗಿ ಅವರು ನೀಡಿರುವ ಉಚಿತ ಸಲಹೆಯನ್ನು ಗಮನಿಸುವುದಾದರೆ… ಅವರದೇ ಮಾತುಗಳಲ್ಲಿ ಓದಿಕೊಂಡಾಗ… ಬಂಡೆ ಮಾಮ Happy birthday. ಸುಮ್ಮನೆ ಒಂದು 80 ಜನನ್ನ ಕರ್ಕೊಂಡು ಒಂದು ಪ್ರಾದೇಶಿಕ ಪಕ್ಷ ಕಟ್ಟಿ. ನೀವೇ ಸೂಪರ್ ಬಾಸ್ ಅವಾಗ. Defection law ಕೂಡ apply ಆಗೊಲ್ಲ. ಬಿಜೆಪಿ ಸಪೋರ್ಟ್ ತಗೊಂಡು ನೀವೆ ಮುಖ್ಯಮಂತ್ರಿ ಆಗಿ. ಆಗ CBI ED ಹಾಕಿದ ಕೇಸುಗಳು ಮಾಯ. ಮುಂದಿನ ಸಲ ನಿಮ್ಮ ಪಕ್ಷಕ್ಕೆ ಪೂರ್ಣ ಬಹುಮತ. ಆಮೆಂದ bjp ನ ಕೈ ಬಿಟ್ರಾಯ್ತೂ. ನಮ್ಮ ಕರ್ನಾಟಕಕ್ಕೂ ಒಂದು ಗಟ್ಟಿ ಪ್ರಾದೇಶಿಕ ಪಕ್ಷ ಬೇಕಿದೆ. ಇದು ನನ್ನ ಪ್ರೀತಿಯ ಸಲಹೆ ಯೋಚನೆ ಮಾಡಿ. ಯಾರೋ ಯಾಕೆ ಸಿಎಂ ಮಾಡ್ಬೇಕು ನಿಮ್ಮನ್ನ ನೀವೆ ಆಗಿ. You are capable ಎಂದು ಅದೇ ಸದಾಶಿವನನಗರ ನಿವಾಸಿ ಸ್ನೇಹಾ ರಮಾಕಾಂತ್ ಎಂಬ ಗೃಹಿಣಿ ಉದಾತ್ತ/ ಉಚಿತ ಸಲಹೆಯನ್ನು ತಮ್ಮ ಸಾಮಾಜಿಕ ಜಾಲತಾಣ ಫೇಸ್ಬುಕ್ ಖಾತೆಯಲ್ಲಿ ಹರಿಯ ಬಿಟ್ಟಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಅಸೆಂಬ್ಲಿ ಚುನಾವಣೆ ಫಲಿತಾಂಶದ ಬಗ್ಗೆ ಖ್ಯಾತ ಧಾರ್ಮಿಕ ವಿಶ್ಲೇಷಕ ದೇವದತ್ತ ಪಟ್ಟನಾಯಿಕ್ ಮಾಡಿರುವ ವ್ಯಾಖ್ಯಾನ ಹೀಗಿದೆ!
ಇನ್ನೂ ಒಂದು ದಾಖಲಾರ್ಹ ಸಂಗತಿಯೆಂದರೆ ಸ್ನೇಹಾರ ಈ ಪೋಸ್ಟ್ಗೆ ಅವರ ‘ಸ್ನೇಹ ವಲಯ’ ನೀಡುತ್ತಿರುವ ಪ್ರತಿಕ್ರಿಯೆಗಳು ಅಷ್ಟೇ ಮಜವಾಗಿದ್ದು, ಸಖತ್ತಾಗಿ ಕಾಲೆಳೆಯುತ್ತಿದ್ದಾರೆ!
ಇಲ್ಲಿ ಇನ್ನೂ ಒಂದು ಅಂಶ ಗಮನಿಸಬೇಕು. ಅವರು ಉತ್ಕಟವಾಗಿ ಒಂದು ವಿಚಾರ ಮುಂದಿಟ್ಟಿದ್ದಾರೆ- ನಮ್ಮ ಕರ್ನಾಟಕಕ್ಕೂ ಒಂದು ಗಟ್ಟಿ ಪ್ರಾದೇಶಿಕ ಪಕ್ಷ ಬೇಕಿದೆ – ಎಂದಿದ್ದಾರೆ! ನೈಸ್. ಗುಡ್ ಥಿಂಕಿಂಗ್!!! ಅಂದಹಾಗೆ ದೈನಂದಿನ ಬೆಳವಣಿಗೆಗಳ ಬಗ್ಗೆ ಸಕ್ರಿಯವಾಗಿದ್ದು ತಮ್ಮ ಸ್ವಂತ ದೃಷ್ಟಿಕೋನಗಳನ್ನು ಕಾಲಕಾಲಕ್ಕೆ ಹೊರಹಾಕುವ ಈ ಗೃಹಿಣಿಯು ಪಬ್ಲಿಕ್ ಟಿವಿಯ ರಂಗಣ್ಣ ಅವರ ಅಪ್ಪಟ ಫ್ಯಾನ್. ರಂಗೂಗಾಗಿ ಏನು ಬೇಕಾದರೂ ಮಾಡಲು ಸಿದ್ಧ ಎಂದು ಛೇಡಿಸುವ ಗೃಹಿಣಿ ಈ ಸ್ನೇಹಾ ರಮಾಕಾಂತ್!
Published On - 11:22 am, Tue, 16 May 23