ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಪುಣೆ ಪ್ರಯೋಗಾಲಯ ನಿರ್ದೇಶಕರು ಮತ್ತು ಕೊತ್ರುಡ್ ನಿವಾಸಿ ಡಾ. ಪ್ರದೀಪ್ ಕುರುಲ್ಕರ್ (59) ಅವರ ಬಂಧನದ ಪರಿಣಾಮವಾಗಿ ಆತಂಕದ ಕಾರ್ಮೋಡಗಳು ಕವಿಯತೊಡಗಿವೆ. ಪ್ರದೀಪ್ ಕುರುಲ್ಕರ್ ಅವರ ಪೊಲೀಸ್ ಬಂಧನವನ್ನು ಮೇ 15ರ ತನಕ ವಿಸ್ತರಿಸಲಾಗಿದೆ. ಪುಣೆಯ ವಿಶೇಷ ನ್ಯಾಯಾಲಯ ಈ ಬಂಧನವನ್ನು ಇನ್ನೊಂದು ದಿನ, ಅಂದರೆ ಮೇ 16ರ ತನಕ ವಿಸ್ತರಿಸಿತು. ಡಾ. ಪ್ರದೀಪ್ ಕುರುಲ್ಕರ್ ಅವರನ್ನು ಪೊಲೀಸರು ಸೂಕ್ಷ್ಮ ಮಾಹಿತಿಗಳನ್ನು ಓರ್ವ ಪಾಕಿಸ್ತಾನಿ ಏಜೆಂಟ್‌ಗೆ ನೀಡಿದ ಆರೋಪದಡಿ ಬಂಧಿಸಿದ್ದರು. ಅವರನ್ನು ಬಂಧಿಸಿದ ಬಳಿಕ, ಅವರ ವಿರುದ್ಧ ಅಫಿಷಿಯಲ್ ಸೀಕ್ರೆಟ್ಸ್ ಕಾಯ್ದೆ ನೋಂದಾಯಿಸಲಾಯಿತು.
ಅವರ ಬಂಧನದ ಅವಧಿಯ ವಿಸ್ತರಣೆಗಾಗಿ ಬೇಡಿಕೆ ಸಲ್ಲಿಸುತ್ತಾ, ವಕೀಲರು ಕುರುಲ್ಕರ್ ಅವರ ಮೊಬೈಲ್ ಫೋನ್ ಕರೆ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಗತ್ಯ ಎಂದು ವಾದಿಸಿದ್ದರು. “ಕುರುಲ್ಕರ್ ಅವರ ಮೊಬೈಲ್ ಫೋನನ್ನು ಪೊಲೀಸರು ನೇರವಾಗಿ ತೆರೆಯಲು ಸಾಧ್ಯವಾಗದಿರುವುದರಿಂದ, ಅದಕ್ಕೆ ಆರೋಪಿಯ ಸಹಾಯದ ಅಗತ್ಯವಿದೆ” ಎಂದು ವಕೀಲರು ನ್ಯಾಯಾಧೀಶರ ಬಳಿ ಹೇಳಿದ್ದಾರೆ ಎನ್ನಲಾಗಿದೆ.
ಡಾ. ಕುರುಲ್ಕರ್ ಅವರನ್ನು ಮೇ 3ರಂದು ಮಹಾರಾಷ್ಟ್ರದ ಆ್ಯಂಟಿ ಟೆರರಿಸಂ ಸ್ಕ್ವಾಡ್ (ಎಟಿಎಸ್) ಭಾರತದ ರಕ್ಷಣೆಗೆ ಸಂಬಂಧಿಸಿದ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಿ ಬೇಹುಗಾರರಿಗೆ ಒದಗಿಸಿದ ಆರೋಪದಡಿ ವಶಪಡಿಸಿಕೊಂಡಿತು. ಡಾ. ಕುರುಲ್ಕರ್ ಅವರು ಈ ಆರೋಪಗಳನ್ನು ಅಲ್ಲಗಳೆದು, ಓರ್ವ ಪಾಕಿಸ್ತಾನಿ ಏಜೆಂಟ್ ತನ್ನ ವಿರುದ್ಧ ಹನಿಟ್ರ್ಯಾಪ್ ನಡೆಸಿರುವುದಾಗಿ ಹೇಳಿದ್ದರು.
ಆದರೆ ಈ ಕುರಿತು ವಿಚಾರಣೆ ನಡೆಸಿದಾಗ, ಆಘಾತಕಾರಿ ರೀತಿಯಲ್ಲಿ ಅವರು ಹನಿಟ್ರ್ಯಾಪ್‌ಗೆ ಒಳಗಾಗಿರುವುದಲ್ಲದೆ, ಉದ್ದೇಶಪೂರ್ವಕವಾಗಿ ಬೇಹುಗಾರಿಕೆಯಲ್ಲಿ ಪಾಲ್ಗೊಂಡಿರುವಂತೆ ಕಂಡುಬಂದಿತು. ಎಟಿಎಸ್ ತನ್ನ ವಿಚಾರಣೆಯಲ್ಲಿ ಡಾ. ಕುರುಲ್ಕರ್ ಅವರು ದಾಖಲೆಗಳು, ಫೋಟೋಗಳು ಮತ್ತು ವೀಡಿಯೋಗಳನ್ನು ಒಳಗೊಂಡ ಮಾಹಿತಿಗಳನ್ನು ಓರ್ವ ಐಎಸ್ಐ ಬೇಹುಗಾರನಿಗೆ ಹಸ್ತಾಂತರಿಸಿರುವುದಾಗಿ ಆರೋಪಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದ ವಿಧಿವಿಜ್ಞಾನ ವರದಿಯಲ್ಲಿ ಡಾ. ಕುರುಲ್ಕರ್ ಅವರು ಒಂದು ಪ್ರತ್ಯೇಕ ಇಮೇಲ್ ಐಡಿ ಬಳಸಿಕೊಂಡು, ಪಾಕಿಸ್ತಾನಿ ಬೇಹುಗಾರರೊಡನೆ ರಹಸ್ಯ ವಿಚಾರಗಳನ್ನು ಚರ್ಚಿಸಿರುವುದು ಬೆಳಕಿಗೆ ಬಂತು. ಡಾ. ಕುರುಲ್ಕರ್ ಅವರು ಡಿಆರ್‌ಡಿಓ ಅತಿಥಿ ಗೃಹದಲ್ಲಿ ಇನ್ನೂ ಗುರುತು ಪತ್ತೆಹಚ್ಚಿರದ ಮಹಿಳೆಯರನ್ನು ಭೇಟಿಯಾಗಿದ್ದರು ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ.
ಇದನ್ನೂ ಓದಿ; Bullet Proof Vehicles: ಬುಲೆಟ್ ಪ್ರೂಫ್ ವಾಹನಗಳ ಹಿಂದಿನ ತಂತ್ರಜ್ಞಾನ ಹೇಗಿದೆ? ಅದರ ವೆಚ್ಚ, ಗಾತ್ರ, ರಕ್ಷಣಾ ಮಟ್ಟ ಇಲ್ಲಿದೆ
ಅಧಿಕಾರಿಗಳು ತಮ್ಮ ಅಧಿಕೃತ ಹೇಳಿಕೆಯಲ್ಲಿ ಆ ಇಮೇಲ್ ಐಡಿ ಮೂಲಕ ಡಾ. ಕುರುಲ್ಕರ್ ಅವರು ಸಂಪರ್ಕಿಸಿರುವ ಎಲ್ಲ ವಿಳಾಸಗಳೂ ಪಾಕಿಸ್ತಾನದವೇ ಆಗಿವೆ ಎಂದಿದ್ದಾರೆ. ದಾಖಲೆಗಳು, ಛಾಯಾಚಿತ್ರಗಳು ಹಾಗೂ ವೀಡಿಯೋಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕವೂ ಹಂಚಿಕೊಳ್ಳಲಾಗಿದೆ. ಡಾ. ಕುರುಲ್ಕರ್ ಅವರು ಸರ್ಕಾರಿ ಪಾಸ್‌ಪೋರ್ಟ್ ಬಳಸಿಕೊಂಡು ಆರು ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಈಗ ತನಿಖಾಧಿಕಾರಿಗಳು ಅವರು ತನ್ನ ವಿದೇಶ ಭೇಟಿಗಳಲ್ಲಿ ಯಾವ ಕುರಿತು ಮಾತುಕತೆ ನಡೆಸಿದ್ದಾರೆ, ಯಾವ ಹಂತದ ತನಕ ಮಾಹಿತಿಗಳ ಸೋರಿಕೆ ಮಾಡಿದ್ದಾರೆ ಎಂದು ವಿಚಾರಣೆ ನಡೆಸಲಿದ್ದಾರೆ.
ಈ ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿದ್ದು, ಡಾ. ಕುರುಲ್ಕರ್ ಅವರ ಮೇಲಿರುವ ಆರೋಪಗಳು ಸಾಬೀತಾಗುತ್ತವೆಯೇ ಇಲ್ಲವೇ ಎನ್ನಲು ಸಾಧ್ಯವಿಲ್ಲ. ಆದರೆ, ಈ ಪ್ರಕರಣ ಭಾರತದ ರಕ್ಷಣಾ ವ್ತವಸ್ಥೆಗಳ ಸುರಕ್ಷತೆಯ ಕುರಿತು ಕಳವಳ ಮೂಡಿಸಿದ್ದು, ಬೇಹುಗಾರಿಕೆಯ ವಿರುದ್ಧ ಇನ್ನೂ ಹೆಚ್ಚಿನ ಜಾಗರೂಕತೆಯ ಅಗತ್ಯತೆಯನ್ನು ಸಾಬೀತುಪಡಿಸಿದೆ.
ಡಿಆರ್‌ಡಿಓ ಪುಣೆಯ ಹಿರಿಯ ವಿಜ್ಞಾನಿಯಾಗಿರುವ ಡಾ. ಪ್ರದೀಪ್ ಕುರುಲ್ಕರ್ ಅವರು ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ಸಂಸ್ಥೆಯ ಫೆಲೋ ಸಹ ಆಗಿದ್ದಾರೆ. ಅವರು ಏರೋಸ್ಪೇಸ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮೂವತ್ತು ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರಿಗೆ 2008ರಲ್ಲಿ ಡಿಆರ್‌ಡಿಓದ ವರ್ಷದ ವಿಜ್ಞಾನಿ ಪ್ರಶಸ್ತಿಯೂ ಲಭಿಸಿದೆ.
ಡಾ. ಕುರುಲ್ಕರ್ ಅವರು 1988ರಲ್ಲಿ ಡಿಆರ್‌ಡಿಓಗೆ ಸೇರ್ಪಡೆಗೊಂಡು, ಟೀಮ್ ಲೀಡರ್, ಲೀಡ್ ಡಿಸೈನರ್ ಆ್ಯಂಡ್ ಡೈರೆಕ್ಟರ್ ಆಫ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್ಮೆಂಟ್ (ಇಂಜಿನಿಯರ್ಸ್) ಲ್ಯಾಬೋರೇಟರಿ ಪುಣೆ, ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು ಕ್ಷಿಪಣಿ ಲಾಂಚರ್ ಅಭಿವೃದ್ಧಿ, ಮಿಲಿಟರಿ ಇಂಜಿನಿಯರಿಂಗ್ ಉಪಕರಣಗಳು, ಅಡ್ವಾನ್ಸ್ಡ್ ರೋಬೋಟಿಕ್ಸ್ ಸೇರಿದಂರೆ ವಿವಿಧ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಅವರು ಭಾರತದ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯಾದ ಆಕಾಶ್ ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಯ ಮುಖ್ಯ ವಿನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆ, ನಾಗ್ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ ಸಿಸ್ಟಮ್, ಹಾಗೂ ಅರ್ಜುನ್ ಯುದ್ಧ ಟ್ಯಾಂಕ್ ಸೇರಿದಂತೆ ವಿವಿಧ ವ್ಯವಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
• ಕುರುಲ್ಕರ್ ಅವರು 1962ರಲ್ಲಿ ಪುಣೆಯಲ್ಲಿ ಜನಿಸಿದರು.
• ಅವರು 1984ರಲ್ಲಿ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಿಂದ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದರು.
• ಅವರು 1988ರಲ್ಲಿ ಡಿಆರ್‌ಡಿಓ ಸೇರ್ಪಡೆಗೊಂಡರು.
• ಅವರು ಡಿಆರ್‌ಡಿಓ ದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
• ಅವರು ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಸಂಸ್ಥೆಯ ಫೆಲೋ ಆಗಿದ್ದಾರೆ.
• ಕುರುಲ್ಕರ್ ಅವರು ಏರೋಸ್ಪೇಸ್ ಇಂಜಿನಿಯರಿಂಗ್ ನಲ್ಲಿ 30ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ.
• ವಿವಾಹಿತರಾದ ಕುರುಲ್ಕರ್ ಅವರು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ