Bullet Proof Vehicles: ಬುಲೆಟ್ ಪ್ರೂಫ್ ವಾಹನಗಳ ಹಿಂದಿನ ತಂತ್ರಜ್ಞಾನ ಹೇಗಿದೆ? ಅದರ ವೆಚ್ಚ, ಗಾತ್ರ, ರಕ್ಷಣಾ ಮಟ್ಟ ಇಲ್ಲಿದೆ
ಬುಲೆಟ್ ಪ್ರೂಫ್ ವಾಹನಗಳಲ್ಲಿ ವಿವಿಧ ರೀತಿಗಳಿವೆ. ಅವುಗಳಲ್ಲಿ ಅತ್ಯಂತ ಸಾಮಾನ್ಯವಾದ ಮಾದರಿಯೆಂದರೆ ಪೂರ್ಣವಾಗಿ ಶಸ್ತ್ರಸಜ್ಜಿತ ಕಾರ್ (ಫುಲ್ಲಿ ಆರ್ಮರ್ಡ್ ಕಾರ್). ಇದನ್ನು ಅತ್ಯಂತ ಶಕ್ತಿಶಾಲಿ ಆಯುಧಗಳಾದ ಅಸಾಲ್ಟ್ ರೈಫಲ್ ಹಾಗೂ ಶಾಟ್‌ಗನ್ ಗಳ ದಾಳಿಯನ್ನೂ ಎದುರಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ.
ಬುಲೆಟ್ ಪ್ರೂಫ್ ವಾಹನಗಳನ್ನು (Bullet Proof Vehicles) ಗುಂಡಿನ ದಾಳಿಯನ್ನೂ ಎದುರಿಸಿ, ಹಾನಿಯಾಗದಂತೆ ತಡೆಯುವುದಕ್ಕಾಗಿ ನಿರ್ಮಿಸಲಾಗಿದೆ. ಅವುಗಳನ್ನು ಸಾಮಾನ್ಯವಾಗಿ ಕೆವ್ಲರ್ ಅಥವಾ ಉಕ್ಕು ಬಳಸಿ ನಿರ್ಮಿಸಲಾಗುತ್ತದೆ. ಈ ಉತ್ಪನ್ನಗಳು ಗುಂಡಿನ ದಾಳಿಯಾದಾಗ ಅವು ವಾಹನವನ್ನು ಸೀಳದಂತೆ ತಡೆಯುತ್ತವೆ. ಬುಲೆಟ್ ಪ್ರೂಫ್ ಕಾರ್‌ಗಳನ್ನು ಸಾಮಾನ್ಯವಾಗಿ ದಾಳಿಯ ಸಾಧ್ಯತೆಗಳಿರುವ ಉನ್ನತ ಮಟ್ಟದ ವ್ಯಕ್ತಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಹಾಗೂ ಉದ್ಯಮಿಗಳು ಬಳಸುತ್ತಾರೆ. ಬುಲೆಟ್ ಪ್ರೂಫ್ ವಾಹನಗಳಲ್ಲಿ ವಿವಿಧ ರೀತಿಗಳಿವೆ. ಅವುಗಳಲ್ಲಿ ಅತ್ಯಂತ ಸಾಮಾನ್ಯವಾದ ಮಾದರಿಯೆಂದರೆ ಪೂರ್ಣವಾಗಿ ಶಸ್ತ್ರಸಜ್ಜಿತ ಕಾರ್ (ಫುಲ್ಲಿ ಆರ್ಮರ್ಡ್ ಕಾರ್). ಇದನ್ನು ಅತ್ಯಂತ ಶಕ್ತಿಶಾಲಿ ಆಯುಧಗಳಾದ ಅಸಾಲ್ಟ್ ರೈಫಲ್ ಹಾಗೂ ಶಾಟ್‌ಗನ್ ಗಳ ದಾಳಿಯನ್ನೂ ಎದುರಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಸಂಪೂರ್ಣ ಶಸ್ತ್ರಸಜ್ಜಿತ ಕಾರ್‌ಗಳು ಅತ್ಯಂತ ಭಾರವೂ, ವೆಚ್ಚದಾಯಕವೂ ಆಗಿವೆ. ಕೊಂಚ ಮಟ್ಟಿಗೆ ಕಡಿಮೆ ಬೆಲೆಬಾಳುವ ವಾಹನವೆಂದರೆ ಸೆಮಿ ಆರ್ಮರ್ಡ್ ಕಾರ್. ಇದನ್ನು ಹ್ಯಾಂಡ್ ಗನ್ ಹಾಗೂ ಕಡಿಮೆ ಸಾಮರ್ಥ್ಯದ ಆಯುಧಗಳ ದಾಳಿಯನ್ನು ತಡೆಯಲು ನಿರ್ಮಿಸಲಾಗಿದೆ. ಸೆಮಿ ಆರ್ಮರ್ಡ್ ಕಾರ್‌ಗಳು ಸಾಕಷ್ಟು ಗಟ್ಟಿಯಾಗಿದ್ದರೂ, ಸಂಪೂರ್ಣ ಶಸ್ತ್ರಸಜ್ಜಿತ ಕಾರುಗಳಷ್ಟು ಪ್ರಬಲ ಪ್ರತಿರೋಧ ಒಡ್ಡುವುದಿಲ್ಲ.
ಬುಲೆಟ್ ಪ್ರೂಫ್ ಕಾರ್‌ಗಳಿಂದ ಒಂದಷ್ಟು ಅನುಕೂಲತೆಗಳಿವೆ. ಅವುಗಳು ಗುಂಡಿನ ದಾಳಿಯಿಂದ ರಕ್ಷಣೆ ಒದಗಿಸಿ, ಪ್ರಾಣ ರಕ್ಷಿಸಲು ನೆರವಾಗುತ್ತವೆ. ಅವುಗಳು ಚಲಾಯಿಸುವವರಿಗೆ ಭದ್ರತೆ ಮತ್ತು ಮಾನಸಿಕ ಸ್ಥೈರ್ಯ ಒದಗಿಸುತ್ತವೆ. ಆದರೆ ಬುಲೆಟ್ ಪ್ರೂಫ್ ವಾಹನಗಳಲ್ಲಿ ಒಂದಷ್ಟು ಅನಾನುಕೂಲತೆಗಳೂ ಇವೆ. ಅವುಗಳು ಅತ್ಯಂತ ವೆಚ್ಚದಾಯಕವಾಗಿದ್ದು, ಅವುಗಳನ್ನು ಚಲಾಯಿಸುವುದು ಮತ್ತು ಬೇಕಾದಂತೆ ಪಥ ಬದಲಾಯಿಸುವುದು ಶ್ರಮದಾಯಕವಾಗಿರುತ್ತದೆ. ಅವುಗಳು ಸಾಮಾನ್ಯ ಕಾರುಗಳಿಂದ ಹೆಚ್ಚು ಭಾರವಾಗಿದ್ದು, ಅವುಗಳ ಇಂಧನ ದಕ್ಷತೆಯೂ ಕಡಿಮೆಯಾಗಿರುತ್ತದೆ.
ಒಂದು ವೇಳೆ ಯಾರಾದರೂ ಬುಲೆಟ್ ಪ್ರೂಫ್ ಕಾರ್ ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ, ಅದರ ಅನುಕೂಲತೆ ಮತ್ತು ಅನನುಕೂಲತೆಗಳನ್ನು ಗಮನಿಸಿಯೇ ನಿರ್ಧರಿಸಬೇಕಾಗುತ್ತದೆ. ಬುಲೆಟ್ ಪ್ರೂಫ್ ಕಾರ್‌ಗಳು ಗುಂಡಿನ ದಾಳಿಗಳಿಂದ ರಕ್ಷಣೆ ಒದಗಿಸುತ್ತವಾದರೂ, ಅವುಗಳು ಅತ್ಯಂತ ವೆಚ್ಚದಾಯಕ ಮತ್ತು ಚಲಾಯಿಸಲು ಕಷ್ಟಕರವಾಗಿರುತ್ತದೆ. ಅಂತಿಮವಾಗಿ, ಬುಲೆಟ್ ಪ್ರೂಫ್ ಕಾರ್ ಖರೀದಿಸಬೇಕೋ ಬೇಡವೋ ಎನ್ನುವುದು ವೈಯಕ್ತಿಕ ಆಯ್ಕೆಯಾಗಿರುತ್ತದೆ.
ಬುಲೆಟ್ ಪ್ರೂಫ್ ಕಾರ್ ಖರೀದಿಸುವಾಗ ಗಮನಿಸಬೇಕಾದ ಹೆಚ್ಚುವರಿ ಅಂಶಗಳು
ಅಗತ್ಯವಿರುವ ರಕ್ಷಣಾ ಮಟ್ಟ
ಬುಲೆಟ್ ಪ್ರೂಫ್ ರಕ್ಷಣೆಯಲ್ಲಿ ವಿವಿಧ ಹಂತಗಳಿದ್ದು, ಎಷ್ಟರಮಟ್ಟಿನ ರಕ್ಷಣೆ ಅಗತ್ಯವಿದೆ ಎನ್ನುವುದನ್ನು ಖರೀದಿದಾರರೇ ನಿರ್ಧರಿಸಬೇಕಾಗುತ್ತದೆ.
ಕಾರಿನ ಗಾತ್ರ
ಬುಲೆಟ್ ಪ್ರೂಫ್ ಕಾರ್‌ಗಳು ಅತ್ಯಂತ ದೊಡ್ಡದಾಗಿರುತ್ತವೆ. ಅವುಗಳನ್ನು ಖರೀದಿಸುವಾಗ, ಅವುಗಳನ್ನು ನಿಲ್ಲಿಸಲು ಸಾಕಷ್ಟು ಜಾಗವಿದೆಯೇ ಎಂದು ಗಮನಹರಿಸಬೇಕಿದೆ.
ವೆಚ್ಚ
ಬುಲೆಟ್ ಪ್ರೂಫ್ ಕಾರ್‌ಗಳು ಅತ್ಯಂತ ವೆಚ್ಚದಾಯಕವಾಗಿದ್ದು, ಅವುಗಳನ್ನು ಖರೀದಿಸಲು ಸಾಧ್ಯ ಎಂದು ಗಮನಹರಿಸಬೇಕು.
ನಿರ್ವಹಣೆ
ಬುಲೆಟ್ ಪ್ರೂಫ್ ಕಾರ್‌ಗಳಿಗೆ ಸಾಮಾನ್ಯ ಕಾರ್‌ಗಳಿಂದ ಹೆಚ್ಚಿನ ನಿರ್ವಹಣೆಯ ಅಗತ್ಯವಿದೆ. ಅದೂ ಸಹ ಖರ್ಚಿನ ವ್ಯಾಪ್ತಿಗೆ ಸೇರುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ.
ಬುಲೆಟ್ ಪ್ರೂಫ್ ಗ್ಲಾಸ್
ಬುಲೆಟ್ ಪ್ರೂಫ್ ಗಾಜನ್ನು ಸಾಮಾನ್ಯವಾಗಿ ಪಾಲಿಕಾರ್ಬೊನೇಟ್ ಹಾಗೂ ಲೆಡ್ ಗ್ಲಾಸ್‌ಗಳ ಸಂಯೋಜನೆಯಿಂದ ನಿರ್ಮಿಸಲಾಗುತ್ತದೆ. ಇದು 2ರಿಂದ 3 ಇಂಚು ದಪ್ಪವಾಗಿದ್ದು, ರೈಫಲ್‌ನಿಂದ ಸಿಡಿದ ಗುಂಡನ್ನು ತಡೆಯುವ ಸಾಮರ್ಥ್ಯ ಹೊಂದಿರುತ್ತದೆ. ಈ ವಿಶೇಷ ಗಾಜನ್ನು ಕಾರಿನ ಮುಂದಿನ ಮತ್ತು ಹಿಂದಿನ ಗಾಜಿನ ಸ್ಥಾನದಲ್ಲಿ, ಕಾರಿನ ಕಿಟಕಿಯ ಗಾಜಿನಲ್ಲಿ ಅಳವಡಿಸಲಾಗುತ್ತದೆ. ಸಾಮಾನ್ಯವಾಗಿ ಬುಲೆಟ್ ಪ್ರೂಫ್ ಗಾಜಿನ ಬೆಲೆ ಪ್ರತಿ ಇಂಚಿಗೆ 10,000 ರೂಪಾಯಿಗಳಿಂದ ಆರಂಭವಾಗುತ್ತದೆ. ಕಾರಿನ ಒಂದು ಬದಿಯ ಕಿಟಕಿಗೇ ನಾಲ್ಕು ಲಕ್ಷ ರೂಪಾಯಿ ತನಕ ವೆಚ್ಚ ತಗುಲುವ ಸಾಧ್ಯತೆಗಳಿವೆ.
ಚಕ್ರಗಳು
ಬುಲೆಟ್ ಪ್ರೂಫ್ ಟೈರ್‌ಗಳು ಟ್ಯೂಬ್ ಲೆಸ್ ಚಕ್ರಗಳಾಗಿರುತ್ತವೆ. ಇವುಗಳನ್ನು ರಬ್ಬರ್ ಒಳಗೆ ಪಾಲಿಮರ್ ಅಳವಡಿಸಿ ನಿರ್ಮಿಸಲಾಗಿದ್ದು, ನೋ ಫ್ಲಾಟ್ ಟೈರ್ಸ್ ಎನ್ನಲಾಗುತ್ತದೆ. ಒಂದು ವೇಳೆ ಈ ಚಕ್ರಕ್ಕೆ ಗುಂಡೇಟು ತಗುಲಿದರೂ, ಅದು ತಕ್ಷಣವೇ ಚಪ್ಪಟೆಯಾಗದೆ, ಚಾಲಕನಿಗೆ ವಾಹನವನ್ನು ಪ್ರತಿ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ 200 ಕಿಲೋಮೀಟರ್ ದೂರದ ತನಕ ಚಲಾಯಿಸಲು ಅವಕಾಶ ಮಾಡಿಕೊಡುತ್ತದೆ. ಪ್ರತಿಯೊಂದು ಬುಲೆಟ್ ಪ್ರೂಫ್ ಚಕ್ರಕ್ಕೆ ತಲಾ 2 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ.
ಸಸ್ಪೆನ್ಷನ್ ಆಧುನೀಕರಣ
ಬುಲೆಟ್ ಪ್ರೂಫ್ ಕಾರುಗಳ ತೂಕ ಸಾಮಾನ್ಯ ಕಾರುಗಳಿಂದ ಹೆಚ್ಚಾಗಿರುತ್ತದೆ. ಆದ್ದರಿಂದ ಇದರ ಸಸ್ಪೆನ್ಷನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದ್ದು, ಇದಕ್ಕೆ ನೂತನ ಶಾಕ್ ಅಬ್ಸಾರ್ಬರ್‌ಗಳು, ಲೋವರ್ ಆರ್ಮ್ಸ್, ಲಿಂಕ್ ರಾಡ್‌ಗಳು, ಸ್ಟೀರಿಂಗ್ ಜಾಯಿಂಟ್‌ಗಳು, ಇತ್ಯಾದಿಗಳನ್ನು ಅಳವಡಿಸಲಾಗಿರುತ್ತದೆ.
ಇದನ್ನೂ ಓದಿ:ಅಭಿಮತ: ಅಮಿತ್ ಶಾ ಅವರನ್ನು ಯಾಕೆ ಚಾಣಕ್ಯ ಎನ್ನುತ್ತಾರೆ? ವಚನಾನಂದ ಸ್ವಾಮೀಜಿ ಹೇಳಿದ್ದಿಷ್ಟು
ಸಾಮಾನ್ಯವಾಗಿ, ಬುಲೆಟ್ ಪ್ರೂಫ್ ಕಾರುಗಳ ಇಂಜಿನ್‌ಗಳಲ್ಲಿ ಯಾವುದೇ ಮಾರ್ಪಾಡು ಮಾಡಿರುವುದಿಲ್ಲ. ಯಾಕೆಂದರೆ, ಕಾರಿನ ಇಂಜಿನ್ ಕಾರು ಉತ್ಪಾದಕ ಸಂಸ್ಥೆಯ ತಾಂತ್ರಿಕತೆಯ ಉತ್ಪನ್ನವಾಗಿದ್ದು, ಅದರಲ್ಲಿ ಯಾವುದೇ ಪರಿವರ್ತನೆಗಳನ್ನು ನಡೆಸಲಾಗುವುದಿಲ್ಲ. ಆದ್ದರಿಂದ, ಬುಲೆಟ್ ಪ್ರೂಫ್ ಕಾರ್ ಆಗಿ ಪರಿವರ್ತಿಸಲು ಮೊದಲ ಹೆಜ್ಜೆಯಾಗಿ ಶಕ್ತಿಶಾಲಿ ಎಸ್‌ಯುವಿ ಕಾರ್ ಅಥವಾ ಹೆಚ್ಚಿನ ಟಾರ್ಕ್ ಹಾಗೂ ಶಕ್ತಿ ಹೊಂದಿರುವ ಡೀಸೆಲ್ ಸೆಡಾನ್ ಕಾರ್ ಅನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಒಂದು ವೇಳೆ, ನೀವೇನಾದರೂ ಬುಲೆಟ್ ಪ್ರೂಫ್ ಕಾರ್ ಖರೀದಿಸುವ ಉದ್ದೇಶ ಹೊಂದಿದ್ದೀರಾದರೆ, ಅದಕ್ಕೆ ಅಗತ್ಯ ಸಂಶೋಧನೆಗಳನ್ನು ನಡೆಸಿ, ತಜ್ಞರೊಡನೆ ಸಮಾಲೋಚನೆ ನಡೆಸಬೇಕು. ಅವರು ಖರೀದಿದಾರರ ಅಗತ್ಯ ಮತ್ತು ಬಜೆಟ್‌ಗೆ ತಕ್ಕಂತೆ ಸೂಕ್ತವಾದ ಕಾರ್ ಯಾವುದೆಂದು ನಿರ್ಧರಿಸಲು ನೆರವಾಗುತ್ತಾರೆ.
ಲೇಖನ: ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ