ಅಭಿಮತ: ಅಮಿತ್ ಶಾ ಅವರನ್ನು ಯಾಕೆ ಚಾಣಕ್ಯ ಎನ್ನುತ್ತಾರೆ? ವಚನಾನಂದ ಸ್ವಾಮೀಜಿ ಹೇಳಿದ್ದಿಷ್ಟು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ಹರಿಹರದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಭೇಟಿ ನೀಡಿ ವಚನಾನಂದ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಅಮಿತ್ ಶಾ ಅವರ ಸಂಗತಿಗಳ ಬಗ್ಗೆ ವಚನಾನಂದ ಸ್ವಾಮೀಜಿ ಅಭಿಮತ ಇಲ್ಲಿದೆ.

ಅಭಿಮತ: ಅಮಿತ್ ಶಾ ಅವರನ್ನು ಯಾಕೆ ಚಾಣಕ್ಯ ಎನ್ನುತ್ತಾರೆ? ವಚನಾನಂದ ಸ್ವಾಮೀಜಿ ಹೇಳಿದ್ದಿಷ್ಟು
ವಚನಾನಂದ ಸ್ವಾಮೀಜಿ, ಅಮಿತ್ ಶಾ
Follow us
ರಮೇಶ್ ಬಿ. ಜವಳಗೇರಾ
|

Updated on: May 01, 2023 | 9:14 AM

ಕೆಲವು ಮಹನೀಯರ ಭೇಟಿಯೇ ದೈವಿಕವಾಗಿರುತ್ತದೆ. ಒಬ್ಬ ವ್ಯಕ್ತಿಯಾಗಿ ಹೊರಗಿನಿಂದ ಅವರ ಚಟುವಟಿಕೆಗಳನ್ನು ನೋಡುವುದಕ್ಕೂ ಸಾಮಿಪ್ಯ ಉಂಟಾದಾಗ ತಿಳಿದುಬರುವ ಸಂಗತಿಗಳಿಗೂ ಅಜಗಜಾಂತರ ವ್ಯತ್ಯಾಸ ಇರುತ್ತದೆ.   ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರ ಬಗ್ಗೆ ಇಂತಹದೇ ಅನುಭವ ನಮಗೆ ಉಂಟಾಯಿತು.  ನಿನ್ನೆ ಬಿ ಎಲ್ ಸಂತೋಷ್ ಅವರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಫೋನ್ ಮಾಡಿ ಅಮಿತ್ ಶಾ ಅವರು ಇವತ್ತು ನಿಮ್ಮ ಶ್ರೀ ಪೀಠಕ್ಕೆ ಭೇಟಿ ನೀಡುತ್ತಾರೆ ಎಂದು ಹೇಳಿದಾಗ ನಾವು ಅತಿಥಿಗಳ ಸ್ವಾಗತಕ್ಕೆ ಸಿದ್ಧರಾದೆವು.  ಅಮಿತ್ ಶಾ ಅವರು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠಕ್ಕೆ ಆಗಮಿಸಿ ನಮ್ಮ ಸ್ವಾಗತ ಗೌರವವನ್ನು ಸ್ವೀಕರಿಸಿದರು. ಔಪಚಾರಿಕವಾಗಿ ನಮಗೂ ಗೌರವ ಸಮರ್ಪಣೆ ಮಾಡಿದ ನಂತರ ನಮ್ಮ “ಸನ್ನಿಧಿ” ಕೋಣೆಗೆ ಬಂದವರು, ಒಂದು ಧ್ಯಾನ ಮಂದಿರ ಪ್ರವೇಶ ಮಾಡಿದ ಹಾಗೇ ಭಾಸವಾಗುತ್ತಿದೆ ಎಂದರು.

ಅಲ್ಲಿದ್ದ ಶ್ರೀಚಕ್ರದ ಕಲಾಕೃತಿಯನ್ನು ಗಮನವಿಟ್ಟು ನೋಡಿ ಬಹುವಾಗಿ ಮೆಚ್ಚಿಕೊಂಡರು. ಶ್ರೀಚಕ್ರ ಉಪಾಸನೆಯ ಬಗ್ಗೆ ಅವರಿಗೆ ಅರಿವಿದೆ ಎಂದು ನಮಗೆ ಗೊತ್ತಾಯಿತು. ಎದುರಿನ ಗೋಡೆಯ ಮೇಲಿನ ಕುಂಡಲಿನೀ ಚಕ್ರ ಕಲಾಕೃತಿ ನೋಡಿ ‘ಅದ್ಭುತ’ ಎಂದು ಹೇಳಿ “ಕುಂಡಲಿನೀ ಯೋಗದ ಬಗ್ಗೆ ಲಿಂಗಾಯತ ಪರಂಪರೆಯಲ್ಲಿ ಏನು ಹೇಳಿದೆ? ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸುತ್ತಾ ನಾವು “ಬಸವಣ್ಣನವರು ಭಕ್ತಿ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಹೆಚ್ಚು ಹೇಳಿದರೆ, ಅಲ್ಲಮಪ್ರಭು, ಅಕ್ಕಮಹಾದೇವಿ, ಎಡೆಯೂರು ಸಿದ್ಧಲಿಂಗೇಶ್ವರರು, ಷಣ್ಮುಖ ಶಿವಯೋಗಿಗಳು, ನಿಜಗುಣ ಶಿವಯೋಗಿಗಳು ಕುಂಡಲಿನೀ ಯೋಗದ ಬಗ್ಗೆ ಬಹಳಷ್ಟು ವಿಸ್ತೃತವಾಗಿ ಹೇಳಿದ್ದಾರೆ” ಎಂದು ಸಂಕ್ಷಿಪ್ತವಾಗಿ ವಿವರಿಸಿದೆವು. ಅದಕ್ಕೆ ಕುತೂಹಲದಿಂದ ಸ್ಪಂದಿಸಿದ ಅವರು “ಈ ಬಗ್ಗೆ ಹಿಂದಿ ಭಾಷೆಯಲ್ಲಿ ಪುಸ್ತಕಗಳು ಇದ್ದರೆ ಕೊಡುತ್ತೀರಾ” ಎಂದು ಕೇಳಿದರು. ನಾವು “ಕಳಿಸಿಕೊಡುತ್ತೇವೆ” ಎಂದು ಹೇಳಿದೆವು.

ನಂತರ ನಾವು ಹೃಷಿಕೇಶದಲ್ಲಿ ವಿದ್ಯಾಭ್ಯಾಸ ಮಾಡಿದ ಬಗ್ಗೆ ತಿಳಿದು ಸ್ವಾಮಿ ರಾಮ ಅವರ ಬಗ್ಗೆ ಮಾತನಾಡಿದರು. ನಾವು ನಮ್ಮ The Making of a Himalayan Master ಮತ್ತು The Spiritual Experiences of a Himalayan Master ಪುಸ್ತಕಗಳನ್ನು ಕೊಟ್ಟೆವು. ಅದರಲ್ಲಿನ ಚಿತ್ರಗಳನ್ನು ನೋಡಿ ಮೆಚ್ಚಿ ಮುಗುಳ್ನಗುತ್ತಾ ತಲೆದೂಗುತ್ತಾ “ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀವು ಎಂತಹ ಅದ್ಭುತ ಸಾಧನೆ ಮಾಡಿದ್ದೀರಿ ಸ್ವಾಮೀಜಿ!” ಎಂದು ಉದ್ಗಾರ ಎತ್ತಿದರು. ಅವರು ಹಿಮಾಲಯದ ಪದತಲದಲ್ಲಿರುವ ಜೋಶಿಮಠಕ್ಕೆ ಹೋಗಿ ಮೂರು ದಿನಗಳ ಕಾಲ ಉಳಿದುಕೊಂಡು ನಂತರ ಕೇದಾರನಾಥಕ್ಕೆ  ಹೋಗಿ ಶಂಕರಾಚಾರ್ಯರ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ತದನಂತರ ಶಂಕರಾಚಾರ್ಯರ ಸಮಾಧಿಯ ಸ್ಥಳದಲ್ಲಿ ಶಂಕರಾಚಾರ್ಯರ ಪ್ರತಿಮೆ ಸ್ಥಾಪನೆ ಮಾಡಿದ ಬಗ್ಗೆ ಹೇಳುತ್ತಾ “ಶಂಕರಾಚಾರ್ಯರು ತಮ್ಮ ಮೂವತ್ತೆರಡು ವರ್ಷದ ಬದುಕಿನಲ್ಲಿ ಎಷ್ಟೆಲ್ಲಾ ಸಾಧನೆ ಮಾಡಿದರು, ಎಂತಹ ಮಹಾನ್ ಸಂತ, ಜ್ಞಾನಿ” ಎಂದು ಉದ್ಗರಿಸಿದರು.

ಆಗ ನಾವು ಶ್ರೀ ಶಂಕರಾಚಾರ್ಯರು ಹರಿಹರಕ್ಕೆ ಬಂದಿದ್ದರು, ಇಲ್ಲಿಯ 800 ವರ್ಷಗಳ ಪುರಾತನ ಹರಿಹರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಹರಿಹರ ತುಂಗಾಭದ್ರಾ ನದಿಯ ತಟದಲ್ಲಿ ಅನುಷ್ಠಾನ ಮಾಡಿದ್ದರು. ಈಗ ಅದೇ ಸ್ಥಳದಲ್ಲಿ ಯೋಗ ಮಂಟಪಗಳನ್ನು ನಿರ್ಮಿಸಿ, ನಮಾಮಿ ಗಂಗೆಯ ಮಾದರಿಯಲ್ಲಿ ನಮಾಮಿ ತುಂಗಾ ಆರತಿ ಮಾಡುವ ಬಗ್ಗೆ ತಿಳಿಸಿದೆವು. ಅವರು ಸಂತೋಷಪಟ್ಟು ನಾವು ತುಂಗಾ ನದಿಯನ್ನು ಸ್ವಚ್ಛಮಾಡುತ್ತಿದ್ದ ಚಿತ್ರಗಳನ್ನು ನೋಡಿ ಭೇಷ್ ಭೇಷ್ ಎಂದು ಉದ್ಗರಿಸಿ ಬಹುವಾಗಿ ಮೆಚ್ಚಿಕೊಂಡರು.

ಹರಿಹರ ಬಿಡುವ ಮೊದಲು ತಪ್ಪದೇ ಹರಿಹರೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯುತ್ತೇನೆ ಎಂದರು. ಹಾಗೇ ಪುಟಗಳನ್ನು ತಿರುಗಿಸುತ್ತಾ ನಾವು ಅಖಂಡ ಭಾರತದ ಭೂಪಟದ ಮುಂದೆ ನಿಂತ ಚಿತ್ರವನ್ನು ನೋಡಿದ ಕೂಡಲೇ ಅವರು ಮಾತು ನಿಲ್ಲಿಸಿ ಅದನ್ನೇ ದೃಷ್ಟಿಸುತ್ತಾ ಮೌನವಾಗಿ ಬಿಟ್ಟರು. ನಂತರ ಅವರು ಮುಖವೆತ್ತಿದಾಗ ಅವರ ಕಣ್ಣಾಲಿಗಳಲ್ಲಿ ನೀರಿತ್ತು. ನಮಗೆ ಆಶ್ಚರ್ಯವಾಯಿತು. ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಅದಕ್ಕೆ ವಿವರಣೆ ನೀಡುತ್ತಾ ಅಮಿತ್ ಶಾ ಜೀ ಅವರು ಹೇಳಿದರು “ಈ ಅಖಂಡ ಭಾರತದ ಭೂಪಟ ನೋಡಿ ನಾನು ಭಾವುಕನಾದೆ ಸ್ವಾಮೀಜಿ. ಭಾರತ ವಿಶ್ವಗುರುವಾಗಬೇಕು. ಅದಕ್ಕೆ ನಿಮ್ಮಂತಹ ಸಂತರ ಆಶೀರ್ವಾದ ಬೇಕು ಸ್ವಾಮೀಜಿ” ಅಂದಾಕ್ಷಣವೇ ನಮ್ಮ ಕಣ್ಣಾಲಿಗಳಲ್ಲಿ ಆನಂದಭಾಷ್ಪ ಮೂಡಿದವು. ಅಖಂಡ ಭಾರತ ರಕ್ಷಣೆಗಾಗಿ ಹೋರಾಡಿ ಮಡಿದ ನಮ್ಮ ವೀರ ಮಹಿಳೆಯರಾದ ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ರಾಣಿ ಮಲ್ಲಮ್ಮ, ಕೆಳದಿ ರಾಣಿ ಚೆನ್ನಮ್ಮ ಮುಂತಾದವರ ಪರಂಪರೆಯ ಬಗ್ಗೆ ಅವರಿಗೆ ನಾವು ತಿಳಿಸಿದೆವು. ಅದನ್ನು ಶಾ ಜೀ ಅವರು ಬಹಳ ಹೃದ್ಯವಾಗಿ ಆಲಿಸಿದರು.

ಹರಿಹರದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದದ್ದರಿಂದ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಅದಕ್ಕೆ ತದ್ವಿರುದ್ಧವಾಗಿ ಅಮಿತ್ ಶಾ ಜೀ ರಾಜಕೀಯದ ಬಗ್ಗೆ ಒಂದೇ ಒಂದು ಮಾತಾಡಲಿಲ್ಲ. ಬದಲಾಗಿ ಯೋಗ, ಆಧ್ಯಾತ್ಮ,ಸಾಧನೆ,ಸಿದ್ಧಿಗಳ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದರು.  ದ್ವೇಷ ಬಿಟ್ಟು ದೇಶ ಕಟ್ಟುವ ಅಖಂಡ ಭಾರತದ ಪರಿಕಲ್ಪನೆಯ ಬಗ್ಗೆ ಮಾತನಾಡಿದರು.

ಹೀಗೆ ಅವರ ಮಾತುಗಳನ್ನು ಆಲಿಸುತ್ತಿದ್ದಾಗ ನಮಗೆ ಅವರು  ರಾಜಕಾರಣಿಯಂತೆ ಭಾಸವಾಗಲಿಲ್ಲ . ಬದಲಿಗೆ ಆಧ್ಯಾತ್ಮ ಪಥದಲ್ಲಿರುವ ಯುಗದ ಯೋಗಿಯಂತೆ ಅನ್ನಿಸಿದರು.  ಅವರೊಬ್ಬ ಅದ್ಭುತ ಕೇಳುಗ ಮತ್ತು ಅದ್ಭುತ ನೋಡುಗ ಹಾಗೂ ಸಾಕ್ಷಿಪ್ರಜ್ಞೆಯ ಪ್ರತಿರೂಪ ಎನ್ನಿಸಿತು.  ಬಸವಣ್ಣನವರ ವಚನ “ನಿಮ್ಮ ನೋಟ ಅನಂತ ಸುಖ, ನಿಮ್ಮ ಕೂಟ ಪರಮಸುಖ ಅವುಟುಕೋಟಿ ರೋಮಂಗಳೆಲ್ಲ ಕಂಗಳಾಗಿ ನೋಡುತ್ತಿದ್ದೆನು” ನೆನಪಾಯಿತು.

ಅವರು ಕಾಶ್ಮೀರದ ಕಲಮು 370 ತೆಗೆದುಹಾಕಿದ ಬಗ್ಗೆ ಪ್ರಸ್ತಾಪ ಮಾಡುವಾಗಲೂ ಕೂಡಾ ಕಾಶ್ಮೀರ ನಮ್ಮದು ಅದರ ಕುರಿತ ಭಯ ತೀರಿತು, ಅಲ್ಲಿ ಶಾಂತಿ ನೆಲೆಸಿತು ಎನ್ನುವ ಧಾಟಿಯಲ್ಲೇ ಮಾತನಾಡಿದರು.  ಅಮಿತ್ ಶಾ ಅವರಲ್ಲಿ ಒಂದು ಅದ್ಭುತ ಸಮ್ಮೋಹಕ ಶಕ್ತಿ ಇದೆ. ಅವರು ಕೇವಲ ರಾಜಕಾರಣಿ ಮಾತ್ರವಲ್ಲ. ಅದನ್ನೂ ಮೀರಿದ ಒಂದು ದೈವೀಕ ಚೈತನ್ಯ ಅವರಲ್ಲಿದೆ. ಗಂಟೆಗಳು ಕ್ಷಣಗಳಂತೆ ಕಳೆದ ನಂತರ ಅವರು ನಮ್ಮನ್ನು ದೆಹಲಿಯ ತಮ್ಮ ನಿವಾಸಕ್ಕೆ ಆಹ್ವಾನಿಸಿದರು. ಅಮಿತ್ ಶಾ ಅವರು ಹೊರಡುವ ಸಮಯ ಬಂದಾಗ ಅವರು ಮೆಚ್ಚಿಕೊಂಡ ಶ್ರೀಚಕ್ರದ ಕಲಾಕೃತಿಯನ್ನು ನಾವು ಅವರಿಗೆ ಆಶೀರ್ವಾದ ರೂಪದಲ್ಲಿ ನೀಡಿದೆವು.”ಆಪ್ ಬಹುತ್ ಸೂಕ್ಶ್ಮ ಯೋಗಿ ಹೈ” ಅಂದರು.

ಅವರ ನಿರ್ಗಮನದ ನಂತರ ನಮಗೆ, ಅಮಿತ್ ಶಾ ಜೀ ಅವರನ್ನು ಯಾಕೆ ಚಾಣಕ್ಯ ಎನ್ನುತ್ತಾರೆ ಎನ್ನುವುದು ಸ್ಪಷ್ಟವಾಯಿತು. ಮಗಧ ರಾಜ್ಯದ ದೊರೆ ಧನನಂದನ ಚಾಣಕ್ಯನಿಗೆ ಸಾಕಷ್ಟು ಕಿರುಕುಳ ಕೊಟ್ಟು, ಕೊಲ್ಲಲು ಯತ್ನಿಸಿದರೂ ಚಾಣಕ್ಯ ಖಂಡತುಂಡವಾದ ಭಾರತವನ್ನು ಅಖಂಡಗೊಳಿಸುವ ಪ್ರಯತ್ನವನ್ನು ಮಾತ್ರ ನಿಲ್ಲಿಸಲಿಲ್ಲ.  ತನ್ನ ಶತ ಪ್ರಯತ್ನದಿಂದ ಒಬ್ಬ ಸಾಮಾನ್ಯ ಬಾಲಕ ಚಂದ್ರಗುಪ್ತನನ್ನು ಮೌರ್ಯ ಸಾಮ್ರಾಜ್ಯದ ಚಕ್ರವರ್ತಿಯಾಗಿಸಿದ. ಈ ಹಿಂದೆ ಯಾರೊಂದಿಗೆ ಹೋರಾಡಿದ್ದನೋ ಅದೇ ಅಮಾತ್ಯ ರಾಕ್ಷಸನನ್ನು ಮಗಧದ ಪ್ರಧಾನ ಅಮಾತ್ಯನನ್ನಾಗಿ ನಿಯೋಜಿಸುತ್ತಾನೆ.ತನಗಾಗಿ ಅಲ್ಲ, ಮಗಧಕ್ಕಾಗಿ, ಭವ್ಯ ಭಾರತ ಕಟ್ಟುವುದಕ್ಕಾಗಿ.  ಅಮಿತ್ ಶಾ ಜೀ ಅವರು ಅಖಂಡ ಭಾರತ ಪುನರ್ ನಿರ್ಮಾಣದ ಬಗ್ಗೆ ಭಾವುಕರಾಗಿ ಮಾತನಾಡಿದ್ದನ್ನು ಕೇಳುತ್ತಿದ್ದಾಗ ಚಾಣಕ್ಯ ಕಣ್ಣ ಮುಂದೆ ಸುಳಿದಂತಾಯಿತು.  ಅಮಿತ್ ಶಾ ಅವರು ತಮಗಾಗಿ ಬದುಕುತ್ತಿಲ್ಲ ದೇಶಕ್ಕಾಗಿ ಬದುಕುತ್ತಿದ್ದಾರೆ ಅನ್ನಿಸಿತು.  ಇವರ ಕೈಗೆ ದೇಶದ ಚುಕ್ಕಾಣಿ ಸಿಕ್ಕಿದ್ದು ದೇಶದ ಪುಣ್ಯ ಅನ್ನಿಸಿತು.

-ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ