Maryada Hatya: ಶತಮಾನಗಳೇ ಉರುಳಿದರೂ ಸಮಾಜದಲ್ಲಿ ಇನ್ನೂ ಬೇರೂರಿದೆ ಜಾತಿ ವ್ಯವಸ್ಥೆ, ಮರ್ಯಾದೆ ಹೆಸರಲ್ಲಿ ಹತ್ತವರಿಂದಲೇ ಮಕ್ಕಳ ಬಲಿ!

| Updated By: ಸಾಧು ಶ್ರೀನಾಥ್​

Updated on: Aug 30, 2023 | 4:19 PM

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಇಂತಹ ಮನಸ್ಥಿತಿ ಸೃಷ್ಟಿಸಿರುವ ಜಾತಿಗ್ರಸ್ತ ಸಮಾಜದಲ್ಲಿ ಪರಿವರ್ತನೆ, ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಬರೆದಿದ್ದಾರೆ. ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರು ದಲಿತರಿಗೆ ಅವಕಾಶ ನೀಡದ ಆಚರಣೆ, ಸಂಪ್ರದಾಯ ನಮ್ಮಲ್ಲಿವೆ. ಸಮಾಜವನ್ನ ಜಾತಿ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ ಎಲ್ಲಾ ಸಮಾಜ ಸುಧಾರಕರ ಆಶಯಗಳನ್ನ ವ್ಯಾಪಕವಾಗಿ ಪ್ರಚುರಪಡಿಸುವುದು ಅಗತ್ಯವಾಗಿದೆ, ಈ ದಿಕ್ಕಿನಲ್ಲಿ ಸರ್ಕಾರವು ರಚನಾತ್ಮಕ ಕಾರ್ಯಕ್ರಮಗಳಿಗೆ ಮುಂದಾಗಲಿದೆ ಎಂದಿದ್ದಾರೆ.

Maryada Hatya: ಶತಮಾನಗಳೇ ಉರುಳಿದರೂ ಸಮಾಜದಲ್ಲಿ ಇನ್ನೂ ಬೇರೂರಿದೆ ಜಾತಿ ವ್ಯವಸ್ಥೆ, ಮರ್ಯಾದೆ ಹೆಸರಲ್ಲಿ ಹತ್ತವರಿಂದಲೇ ಮಕ್ಕಳ ಬಲಿ!
ನಮ್ಮ ಸಮಾಜದಲ್ಲಿ ಕರುಳ ಬಳ್ಳಿಯ ಸಂಬಂಧಕ್ಕಿತ ಗಟ್ಟಿಯಾಗಿದೆ ಜಾತಿ ವ್ಯವಸ್ಥೆಯ ಬಂಧ
Follow us on

ಕಳೆದ ಎರಡು ತಿಂಗಳ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ಮರ್ಯಾದೆಗೆ ಅಂಜಿ, ಜಾತಿ ವ್ಯವಸ್ಥೆಗೆ ಕಟ್ಟುಬಿದ್ದು, ತಾವು ಹೆತ್ತು ಹೊತ್ತ ಮಕ್ಕಳನ್ನು ತಾವೇ ಕೈಯಾರೆ ಕೊಂದು ಹಾಕಿರುವ ಕರುಣಾಜನಕ, ಇಡೀ ಮಾನವೀಯ ಸಮಾಜವೇ ತಲೆ ತಗ್ಗಿಸುವಂತ ಘಟನೆಗಳು (Maryada Hatya) ನಡೆದಿವೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೋಡಗುರ್ಕಿಯಲ್ಲಿ ಜೂನ್​ 27 ರಂದು ತನ್ನ ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಅನ್ನೋ ಕಾರಣಕ್ಕೆ ತಂದೆಯೇ ಮಗಳನ್ನು ಕೊಂದು ಹಾಕಿದ್ದ ಘಟನೆ ನಡೆದಿತ್ತು. ಆ ಘಟನೆ ಮಾಸುವ ಮೊದಲೇ ಕೋಲಾರ ತಾಲ್ಲೂಕು ತೊಟ್ಲಿ ಗ್ರಾಮದಲ್ಲಿ ಅಂಥದ್ದೇ ಇನ್ನೊಂದು ಘಟನೆ ನಡೆದಿದೆ. ಈ ಘಟನೆ ಇಡೀ ಸಮಾಜವನ್ನು ಒಂದು ರೀತಿಯ ಆತಂಕಕ್ಕೆ ದೂಡಿದೆ, ಸದ್ಯ ಈ ಕುರಿತು ಸಿಎಂ ಸಿದ್ದರಾಮಯ್ಯ ನವರು ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಘಟನೆಗಳು ನಮ್ಮೆಲ್ಲರ ಮನ ಕಲಕುವಂತೆ ಮಾಡಿದೆ, ಸಮಾಜವನ್ನು ಜಾತಿ ಸಂಕೋಲೆಗಳಿಂದ ಬಿಡುಗಡೆ ಗೊಳಿಸಲು ಸಮಾಜ ಸುಧಾರಕರ ಆಶಯಗಳು ಪ್ರಚುರಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ, ಜೊತೆಗೆ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಮಾನವೀಯ ಅಂತಃಕರಣದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹನ್ನೊಂದು-ಹನ್ನೆರಡನೇ ಶತಮಾನದಿಂದಲೂ ಕೂಡಾ ಸಮಾಜದಲ್ಲಿ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಸುಧಾರಣೆಗಳು ನಡೆಯುತ್ತಲೇ ಇವೆ, ಹಲವು ಸಮಾಜ ಸುಧಾರಕರು ಬಂದು ಹೋದರು, ಆದರೆ ಸಮಾಜ ಸುಧಾರಕರ ಹೆಸರಷ್ಟೇ ಸಮಾಜದಲ್ಲಿ ಅಚ್ಚಳಿಯದೆ ಉಳಿಯಿತೆ ಹೊರತು ಜಾತಿ ವ್ಯವಸ್ಥೆ ಮಾತ್ರ ಹೋಗಲಿಲ್ಲ. ಇಂದಿಗೂ ನಮ್ಮ ನಾಯಕರುಗಳ, ಬುದ್ದಿಜೀವಿಗಳ, ಮಾತಿನಲ್ಲಿ ಇರುವ ಜಾತ್ಯಾತೀತ ಭಾವನೆ ಯಾರೊಬ್ಬರ ಮನಸ್ಸಿನಲ್ಲಿಯೂ ಇಲ್ಲ. ಪ್ರತಿ ಹಂತದಲ್ಲೂ ಜಾತಿಯಿಂದಲೇ ಸಮಾಜವನ್ನು ವಿವಿಧ ರೀತಿಯಲ್ಲಿ ವಿಭಜಿಸುವ, ಜಾತಿಯಿಂದಲೇ ವಿವಿಧ ಯೋಜನೆಗಳನ್ನು ರೂಪಿಸುವ ಆಡಳಿತ ವ್ಯವಸ್ಥೆ ಇರುವಾಗ ಜಾತಿ ವ್ಯವಸ್ಥೆಯನ್ನು ಹೇಗೆ ಸಮಾಜದಿಂದ ಹೊರದೂಡಲು ಸಾಧ್ಯವಾಗುತ್ತದೆ ಅನ್ನೋ ಆಲೋಚನೆ ಮೂಡುತ್ತದೆ. ಪುಟ್ಟ ಪುಟ್ಟ ಮಕ್ಕಳಿಗೆ ಬುದ್ದ ಬಸವರ ಪಾಠ ಹೇಳುವ ಶಾಲೆಗಳಲ್ಲೂ ಕೂಡಾ ಮಕ್ಕಳನ್ನ ಶಾಲೆಗೆ ದಾಖಲಾತಿಗೂ ಮುನ್ನ ಜಾತಿ ಯಾವುದು ಎಂದು ಕೇಳುವ ವ್ಯವಸ್ಥೆಯಲ್ಲಿ ಜಾತ್ಯಾತೀತವಾಗಿ ಸಮಾಜದಲ್ಲಿ ಜಾತ್ಯಾತೀತ ಭಾವನೆಯನ್ನು ಬಿತ್ತುವುದು ಹೇಗೆ. ಪ್ರತಿ ಕುಟುಂಬದಲ್ಲೂ ಕೂಡಾ ತನ್ನ ಹೆಸರಲ್ಲೂ ಕೂಡಾ ಜಾತಿಯನ್ನು ಇಟ್ಟುಕೊಳ್ಳುವ ಫ್ಯಾಷನ್​ ಶುರುವಾಗಿರುವಾಗ ಜಾತಿ ವ್ಯವಸ್ಥೆಯ ತೊಡೆದು ಹಾಕುವುದು ಪ್ರಯತ್ನಕ್ಕಿಂತ ಜಾತಿ ವ್ಯವಸ್ಥೆಯನ್ನು ಸದೃಢವಾಗಿಸುವ ಪ್ರಯತ್ನವೇ ಸದ್ದಿಲ್ಲದೆ ನಡೆಯುತ್ತಿದೆ ಅನ್ನೋದನ್ನ ಎಲ್ಲರೂ ಕೂಡಾ ಒಪ್ಪಿಕೊಳ್ಳಲೇಬೇಕಿದೆ.

ನಾವು ವೈಜ್ಞಾನಿಕವಾಗಿ ಮುಂದುವರೆದಿದ್ದೇವೆ, ನಮ್ಮ ವಿಜ್ಞಾನ ಮುಂದುವರೆದಿದೆ, ನಮ್ಮ ದೇಶದ ವಿಜ್ಞಾನಿಗಳು ಇಡೀ ಪ್ರಪಂಚವನ್ನು ಹಿಂದಿಕ್ಕಿ ಚಂದ್ರ ಲೋಕಕ್ಕೆ ಕಾಲಿಟ್ಟಿದ್ದಾರೆ ಎಂದೆಲ್ಲಾ ಹೇಳಿಕೊಳ್ಳುವ ಸಮಾಜ ಸುಧಾಕರ ನಡುವೆ ಚಂದ್ರನ ಮೇಲೆ ಕಾಲಿಡಲು ಶ್ರಮಿಸಿದ ವಿಜ್ಞಾನಿ ಯಾವ ಜಾತಿ ಯಾವ ಸಮುದಾಯದವರು ಎಂದು ಗುರುತಿಸಿ ಅವರನ್ನು ಸಮುದಾಯವನ್ನು ಪ್ರತಿನಿಧಿಸಿಕೊಂಡು ಹೋಗಿ ಅಭಿನಂಧನೆ ಸಲ್ಲಿಸುವ ಫ್ಯಾಷನ್​ ನಮ್ಮಲ್ಲಿದೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ಬೇಡ ಎಂದು ಹೇಳುವವರೇ ಪ್ರತ್ಯೇಕವಾಗಿ ಜಾತಿಗೊಂದು ಮಠ ಮಾನ್ಯಗಳನ್ನು ಕಟ್ಟಿ ಅವುಗಳನ್ನು ಉಳಿಸುವ ಬೆಳೆಸುವ ಪ್ರಯತ್ನ, ಒಂದೊಂದು ಜಾತಿಗೆ ಪ್ರತ್ಯೇಕವಾಗಿ ಅವರ ಜನಸಂಖ್ಯೆ ಅವರ ಶಕ್ತಿಗೆ, ಅವರ ಪ್ರಭಾವಕ್ಕೆ ಅನುಸಾರವಾಗಿ ಅನುಧಾನಗಳನ್ನು ಬಿಡುಗಡೆ ಮಾಡುವ ಅವರಿಗೆ ಮಾನ್ಯತೆ ಕೊಡುವ ಪ್ರಯತ್ನಗಳು ಕೂಡಾ ನಮ್ಮಲ್ಲಿ ನಿತ್ಯ ನಡೆಯುತ್ತಿದೆ. ಇನ್ನು ಚುನಾವಣೆಗಳು ಬಂದಾಗ ಜಾತಿ ಸಮೀಕರಣ ಮಾಡಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರ ಬಹಿರಂಗವಾಗಿಯೇ ಮಾಡಲಾಗುತ್ತದೆ. ಚುನಾವಣೆ ಸಂದರ್ಭಗಳಲ್ಲಿ ಜಾತಿ ಪ್ರಾಬಲ್ಯದ ಆಧಾರದ ಮೇಲೆ ಸಮಾವೇಶಗಳನ್ನು ಮಾಡುವ ಪ್ರಬಲ ಸಮುದಾಯಗಳಿಗೆ ಮೀಸಲಾತಿ ಹಾಗೂ ವಿಶೇಷ ಅನುಧಾನಗಳನ್ನು ಬಿಡುಗಡೆ ಮಾಡುವ ಸರ್ಕಾರದ ವ್ಯವಸ್ಥೆಯೇ ಇರುವಾಗ ಜಾತಿ ವ್ಯವಸ್ಥೆ ಅನ್ನೋದು ನಮ್ಮ ಸಮಾಜದ ಒಂದು ಪಿಡುಗು ಅನ್ನೋದನ್ನ ಹೇಳಲು ಸಾಧ್ಯ, ಜಾತಿ ವ್ಯವಸ್ಥೆಯನ್ನು ಸಮಾಜದಿಂದ ಯಾವ ರೀತಿ ತೆಗೆದು ಹಾಕಲು ಸಾಧ್ಯವಾಗುತ್ತದೆ.

ಹೀಗೆ ಜಾತಿ ವ್ಯವಸ್ಥೆ ಅನ್ನೋದು ನಮ್ಮ ಸಮಾಜದಲ್ಲಿ ಬಲವಾಗಿ ಬೇರೂರಿದೆ, ಸಮಾಜ ಸುಧಾರಕರು ಶತ ಶತಮಾನಗಳ ಕಾಲ ಹೋರಾಟ ಮಾಡಿ ಜಾತಿ ವ್ಯವಸ್ಥೆಯನ್ನು ಸಮಾಜದಿಂದ ತೊಡೆದು ಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ ನಮ್ಮ ಸಮಾಜ ನಮ್ಮ ಸಮಾಜ ಸುಧಾರಕರು ಹೇಳಿದ ಸಮಾಜ ಸುಧಾರಣಾ ತತ್ವಗಳನ್ನು ಪಾಲಿಸೋದನ್ನ ಬಿಟ್ಟು ಸಮಾಜ ಸುಧಾರಕರು ಯಾವ ಜಾತಿಯವರು ಅನ್ನೋದನ್ನ ಹುಡುಕಿ ಅವರ ಸಮುದಾಯದ ಗುರುವನ್ನಾಗಿಸಿ ಕೊಂಡು ಅವರನ್ನು ಪೂಜಿಸುವ ವ್ಯವಸ್ಥೆ ನಮ್ಮ ಸಮಾಜದಲ್ಲಿರುವಾಗ ಜಾತಿ ವ್ಯವಸ್ಥೆಯನ್ನು ತೊಡೆದು ಹಾಕುವುದು ಹೇಗೆ, ತೊಡೆದು ಹಾಕುವವರು ಯಾರು ಅನ್ನೋದು ಸದ್ಯ ನಮ್ಮ ಸಮಾಜ ಪ್ರಶ್ನೆ ಮಾಡಿಕೊಳ್ಳಬೇಕಿದೆ.
ಸದ್ಯ ಇಂಥ ಮನಸ್ಥಿತಿಯಲ್ಲಿರುವ ಸಮಾಜದಲ್ಲಿ ಸಿಲುಕಿರುವ ಎರಡು ಕುಟುಂಬಗಳು ತಾವೇ ಹೆತ್ತು ಹೊತ್ತು,ಲಾಲನೆ ಪಾಲನೆ ಮಾಡಿದ ಮಕ್ಕಳನ್ನೇ ತಾವು ಕೊಂದು ಹಾಕುವ ಮನಸ್ಥಿತಿಗೆ ತಲುಪಿದ್ದಾರೆ ಎಂದರೆ, ಇಲ್ಲಿ ಜಾತಿ ವ್ಯವಸ್ಥೆ ಬಲವಾಗಿದೆಯಾ ನಮ್ಮ ಕರುಳ ಬಳ್ಳಿಯ ಸಂಭಂದ ಬಲವಾಗಿದೆಯಾ ಅನ್ನೋದು ತಿಳಿಯುತ್ತದೆ. ಹೀಗೆ ಜಾತಿ ವ್ಯವಸ್ಥೆಯ ವ್ಯಾಮೋಹಕ್ಕೆ ಬಿದ್ದಿರುವ ಈ ಕುಟುಂಬಗಳು ತಮ್ಮ ಮಕ್ಕಳನ್ನೇ ನಿರ್ದಾಕ್ಷಣ್ಯವಾಗಿ ಕೊಂದು ಹಾಕುತ್ತಿದ್ದಾರೆ ಎಂದರೆ ಕೊಂದ ಮನಸ್ಸಿನ ಸಂಕಷ್ಟ ಎಷ್ಟಿರಬೇಕು, ಈ ಜಾತಿ ವ್ಯವಸ್ಥೆ ಹೆತ್ತವರ ಮನಸ್ಸನ್ನು ಎಷ್ಟು ಗಾಸಿ ಮಾಡಿಬೇಕು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಸದ್ಯ ಇಂಥ ಮನಸ್ಥಿತಿಗೆ ಬಿದ್ದಿರುವ ಕೋಲಾರದ ಎರಡು ಕುಟುಂಬಗಳು ತಮ್ಮ ಮಕ್ಕಳು ಅನ್ಯ ಜಾತಿಯವರ ಮೋಹಕ್ಕೆ ಬಿದ್ದಿದ್ದಾರೆ ಎಂದು ತಿಳಿದು, ಸಮಾಜವನ್ನು ಎದುರಿಸಲು ಸಾಧ್ಯವಾಗದೆ ತಮ್ಮ ಮಕ್ಕಳನ್ನೇ ಕೊಂದು ಹಾಕಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಕೇಲವ ಎರಡು ತಿಂಗಳ ಅವದಿಯಲ್ಲಿ ಎರಡು ಮರ್ಯಾದ ಹತ್ಯೆ ಘಟನೆ ನಡೆದಿದೆ, ಜೂನ್​-27 ರಂದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೋಡಗುರ್ಕಿ ಅನ್ನೋ ಗ್ರಾಮದ ಗೊಲ್ಲ ಸಮುದಾಯಕ್ಕೆ ಸೇರಿದ ಕೃಷ್ಣಮೂರ್ತಿ ಎಂಬುವರ ಮಗಳು 20 ವರ್ಷದ ಕೀರ್ತಿ ಎಂಬಾಕೆ,ಇದೇ ಗ್ರಾಮದ, ಎದುರುಗಿನ ಮನೆಯ ಪರಿಶಿಷ್ಟ ಜನಾಂಗಕ್ಕೆ ಸೇರಿದ ಗಂಗಾಧರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಾಳೆ ಅನ್ನೋ ವಿಚಾರ ತಿಳಿದು ಮಗಳಿಗೆ ತಂದೆ ತಾಯಿ ಬುದ್ದಿ ಹೇಳಿದ್ದಾರೆ ಆದರೆ ತಂದೆಯ ಮಾತು ಕೇಳದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿದ್ದ. ದುರಂತ ಅಂದ್ರೆ ತಾನು ಪ್ರೀತಿಸುತ್ತಿದ್ದ ಹುಡುಗಿ ತನ್ನ ತಂದೆಯಿಂದಲೇ ಕೊಲೆಯಾಗಿದ್ದಾನೆ ಅನ್ನೋ ವಿಷಯ ತಿಳಿದು ಆಘಾತಕ್ಕೊಳಗಾದ ಆ ಯುವಕ ಕೂಡಾ ತಕ್ಷಣವೇ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಇಂಥಾದೊಂದು ದುರ್ಘಟನೆ ನಡೆದು ನೆನಪು ಮಾಸುವ ಮೊದಲೇ ಕೋಲಾರ ತಾಲ್ಲೂಕು ತೊಟ್ಲಿ ಗ್ರಾಮದಲ್ಲಿ ಮತ್ತೊಂದು ಮರ್ಯಾದ ಹತ್ಯೆ ನಡೆದು ಹೋಗಿದೆ, ತೊಟ್ಲಿ ಗ್ರಾಮದ ವೆಂಕಟೇಶಗೌಡ ಎಂಬುವರ ಮಗಳು, ಅನ್ಯ ಜಾರಿಗೆ ಸೇರಿದ ಹಾಗೂ ಅಪ್ರಾಪ್ತ ಹುಡುಗನೊಂದಿಗೆ ಪ್ರೀತಿ ಪ್ರೇಮೆ ಎಂದು ಓಡಾಡುತ್ತಿದ್ದಾಳೆ ಎಂದು ತಿಳಿದು ಮಗಳಿಗೆ ಬುದ್ದಿ ಹೇಳಿದ್ದಾರೆ, ಆದರೆ ಹೆತ್ತವರ ಮಾತು ಕೇಳದೆ ಹೋದಾಗ ಮಗಳನ್ನೇ ಕೊಂದುಹಾಕಿರುವ ಘಟನೆ ನಡೆದಿದೆ. ಸದ್ಯ ಈ ಎರಡು ಘಟನೆ ಇಡೀ ರಾಜ್ಯಾಧ್ಯಂತ ಸಂಚಲನ ಮೂಡಿಸಿದೆ.

ಜಾತಿ ವ್ಯವಸ್ಥೆ ಎಂಬ ಕಟ್ಟುಪಾಡಿಗೆ ಬಿದ್ದು ಸಮಾಜದಲ್ಲಿ ಅಮಾನವೀಯ ಘಟನೆಗಳು ನಡೆಯುತ್ತಿವೆ ಅನ್ನೋದನ್ನು ತಿಳಿದು ಸಿಎಂ ಸಿದ್ದರಾಮಯ್ಯ ಅವರು ಕೂಡಾ ಘಟನೆಯ ಕುರಿತು ಟ್ವೀಟ್​ ಮಾಡಿ ತಮ್ಮ ಆಘಾತ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ ಸಮಾಜದಲ್ಲಿನ ಜಾತಿ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ರಾಜ್ಯದ ಕೋಲಾರ ಜಿಲ್ಲೆಯಲ್ಲಿ 2 ಕಡೆಗಳಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆದಿವೆ, ಇದು ನಮ್ಮೆಲ್ಲರ ಮನ ಕಲುಕಿದೆ, ಸಮಾಜದಲ್ಲಿ ಅಂತರ್ಗತ ಜಾತಿ ವ್ಯವಸ್ಥೆ ಸಾಮಾಜಿಕ ಕಟ್ಟು ಪಾಡುಗಳ ಹೀನ ಮನಸ್ಥಿತಿ ಇಂತಹ ಘಟನೆಗಳು ಪ್ರತಿಫಲಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಪ್ರಕರಣಗಳಲ್ಲಿ ನಮ್ಮ ಸರ್ಕಾರ ಕಾನೂನಾತ್ಮಕ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ. ಪ್ರಕರಣದ ತನಿಖೆ, ವಿಚಾರಣೆಯಲ್ಲಿ ಯಾವುದೆ ಲೋಪವಾಗದಂತೆ ಎಚ್ಚರವಹಿಸಲಿದೆ ಎಂದು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಇಂತಹ ಮನಸ್ಥಿತಿ ಸೃಷ್ಟಿಸಿರುವ ಜಾತಿಗ್ರಸ್ತ ಸಮಾಜದಲ್ಲಿ ಪರಿವರ್ತನೆ, ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಬರೆದಿದ್ದಾರೆ. ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರು ದಲಿತರಿಗೆ ದೇವಸ್ಥಾನ, ಮನೆಗಳಲ್ಲಿ ಕಾಲಿರಿಸಲು ಅವಕಾಶ ನೀಡದ ಆಚರಣೆ, ಸಂಪ್ರದಾಯ ನಮ್ಮಲ್ಲಿವೆ. ಜಾತಿ ಸಂರಚನೆಯ ಕಟ್ಟು ಪಾಡುಗಳನ್ನ ಮೀರಲು ಮಾನವೀಯತೆ, ವಿಚಾರಪರತಯೆ ದಾರಿ, ಜಾಗೃತಿಯೇ ಅಸ್ತ್ರವಾಗಿದೆ. ಸಮಾಜವನ್ನ ಜಾತಿ ಸಂಕೋಲೆಗಳಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದ ಎಲ್ಲಾ ಸಮಾಜ ಸುಧಾರಕರ ಆಶಯಗಳನ್ನ ವ್ಯಾಪಕವಾಗಿ ಪ್ರಚುರಪಡಿಸುವುದು ಅಗತ್ಯವಾಗಿದೆ, ಈ ದಿಕ್ಕಿನಲ್ಲಿ ಸರ್ಕಾರವು ರಚನಾತ್ಮಕ ಕಾರ್ಯಕ್ರಮಗಳಿಗೆ ಮುಂದಾಗಲಿದೆ ಎಂದಿದ್ದಾರೆ.

Published On - 4:17 pm, Wed, 30 August 23