Karnataka Political Development: ಬಿಜೆಪಿ ಹೈಕಮ್ಯಾಂಡ್​ನ ಸಿದ್ಧ ಮಾದರಿಯ ಆಯ್ಕೆ ವಿಧಾನದಲ್ಲಿ ಕರ್ನಾಟಕದಿಂದ ಇವರೆಲ್ಲ ರೇಸಲ್ಲಿ

ದೇಶದ ನಾನಾ ಭಾಗಗಳಲ್ಲಿ ಮುಖ್ಯಮಂತ್ರಿ ನೇಮಕ ಮಾಡುವಾಗ ಬಿಜೆಪಿ ಹೈಕಮ್ಯಾಂಡ್ ಅನುಸರಿಸುತ್ತಿರುವ ಸಿದ್ಧ ಮಾದರಿ ಏನು ಎಂಬ ಬಗ್ಗೆ ವಿವರಣೆ ಹಾಗೂ ಕರ್ನಾಟಕದಲ್ಲಿ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದಲ್ಲಿ ಯಾರಿಗೆ ಅವಕಾಶ ಆಗಬಹುದು ಎಂಬ ವಿಶ್ಲೇಷಣೆ ಇಲ್ಲಿದೆ.

Karnataka Political Development: ಬಿಜೆಪಿ ಹೈಕಮ್ಯಾಂಡ್​ನ ಸಿದ್ಧ ಮಾದರಿಯ ಆಯ್ಕೆ ವಿಧಾನದಲ್ಲಿ ಕರ್ನಾಟಕದಿಂದ ಇವರೆಲ್ಲ ರೇಸಲ್ಲಿ
ನರೇಂದ್ರ ಮೋದಿ- ಅಮಿತ್ ಶಾ (ಸಂಗ್ರಹ ಚಿತ್ರ)

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ ಹೊಸಬರು ಬಂದು ಕೂರಲಿದ್ದಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಕಾವು ಪಡೆದುಕೊಂಡಿದೆ. ಈ ಸನ್ನಿವೇಶದಲ್ಲಿ ಬಿಜೆಪಿ ಹೈಕಮ್ಯಾಂಡ್ (BJP High Command) ಯಾರನ್ನು ಆ ಸ್ಥಾನಕ್ಕೆ ತರಬಹುದು ಎಂಬ ಬಗ್ಗೆ ಅಷ್ಟೇ ಕುತೂಹಲವೂ ಇದೆ. ಆದರೆ ಇಲ್ಲಿ ಗಮನಿಸಬೇಕಾದದ್ದು ಏನೆಂದರೆ, ಈಗಿನ ಬಿಜೆಪಿ ಹೈಕಮ್ಯಾಂಡ್ ದೇಶದ ವಿವಿಧ ಭಾಗಗಳಲ್ಲಿ ಮುಖ್ಯಮಂತ್ರಿಗಳ ಆಯ್ಕೆಗೆ ಆರಿಸಿಕೊಂಡಿರುವ ಮಾನದಂಡಗಳನ್ನ. ಹಾಗೇ ಗಮನಿಸಿ ನೋಡಿ, ಬಹುತೇಕ ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಇರುವಂಥವರು ಸಂಸದರು. ಹಾಗೂ ನೇರವಾಗಿ ಹೈಕಮ್ಯಾಂಡ್​ನ ಇಶಾರೆಯಂತೆ ನಡೆದುಕೊಂಡು, ಪಕ್ಷವನ್ನು ಮುನ್ನಡೆಸುವಂಥವರು. ಇನ್ನು ವಯಸ್ಸಿನ ವಿಚಾರಕ್ಕೆ ಬಂದರೆ ಕನಿಷ್ಠ ಮೂರರಿಂದ ನಾಲ್ಕು ಅವಧಿಗೆ ಮುಖ್ಯಮಂತ್ರಿ ಆಗುವಷ್ಟು ವಯಸ್ಸಿರುವಂಥವರು. ಆರೆಸ್ಸೆಸ್ ಹಾಗೂ ಬಿಜೆಪಿ ಎರಡರಲ್ಲೂ ತಮ್ಮ ವರ್ಚಸ್ಸನ್ನು ಉಳಿಸಿಕೊಂಡಂಥವರು. ಈ ಎಲ್ಲಕ್ಕಿಂತ ಮುಖ್ಯವಾಗಿ ಭ್ರಷ್ಟಾಚಾರದ ಆರೋಪಗಳು ಇಲ್ಲದವರು.

ಜಾತಿ ನೋಡಿರುವ ಉದಾಹರಣೆಗಳಿಲ್ಲ
ಬಿಜೆಪಿಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರು ಸೂಚನೆ ಆಗುವಾಗ ಈ ಎಲ್ಲ ಅಂಶಗಳು ಪರಿಗಣನೆಗೆ ಬರುತ್ತವೆ. ವಿವಿಧ ರಾಜ್ಯಗಳಲ್ಲಿ ಬಿಜೆಪಿಯಿಂದ ಎರಡು- ಮೂರು ಅವಧಿಗೆ ಮುಖ್ಯಮಂತ್ರಿ ಆದವರು ಕಾಣಸಿಗುತ್ತಾರೆ. ಜತೆಗೆ ಜಾತಿಯನ್ನು ತುಂಬ ಪ್ರಮುಖ ಮಾನದಂಡವಾಗಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಹಿಂದುತ್ವದ ಅಜೆಂಡಾ ಕೆಲಸ ಮಾಡಬಹುದೇ ವಿನಾ ಆಯಾ ರಾಜ್ಯದಲ್ಲಿನ ಬಹುಸಂಖ್ಯಾತ ಜಾತಿ ಇದು ಎಂಬ ಕಾರಣಕ್ಕೆ ಒಬ್ಬ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿದ ಉದಾಹರಣೆ ಕಾಣಸಿಗುವುದಿಲ್ಲ. ಆದರೆ ಯಡಿಯೂರಪ್ಪ ಅವರ ವಿಚಾರದಲ್ಲಿ ಈ ಪೈಕಿ ಬಹುತೇಕ ನಿಯಮ, ಪದ್ಧತಿಗಳು ಪಕ್ಕಕ್ಕೆ ಸರಿದವು. ಹಾಗಂತ ಯಡಿಯೂರಪ್ಪನವರ ಕೊಡುಗೆ ಏನಿಲ್ಲದೆ ಇಂಥದ್ದೊಂದು ವಿನಾಯಿತಿ ಸಿಕ್ಕಿತು ಅಂತಲ್ಲ. ಕರ್ನಾಟಕದ ಮಟ್ಟಿಗೆ ಬಿಜೆಪಿಯ ಸಾಧನೆಯಲ್ಲಿ ಯಡಿಯೂರಪ್ಪನವರೇ ಬಹುಪಾಲು ಆವರಿಸಿಕೊಂಡಿದ್ದಾರೆ. ಆದರೆ ಅವರ ಮೇಲಿನ ಆರೋಪಗಳು, ಈಗಿನ ವಯಸ್ಸು ಇನ್ನೊಂದು ಅವಧಿಗೆ ಚುನಾವಣೆಗೆ ಬಿಎಸ್​ವೈ ನೇತೃತ್ವದಲ್ಲಿ ಹೋಗಲು ಸಾಧ್ಯವಿಲ್ಲ ಅನ್ನೋದನ್ನೇ ಹೇಳುತ್ತಿವೆ.

ಈಗ ಕರ್ನಾಟಕದ ವಿಚಾರಕ್ಕೆ ಬಂದರೂ ದೇಶದ ಉಳಿದೆಡೆ ಇರುವ ನಿಯಮಗಳೇ ಅನ್ವಯ ಆಗುತ್ತವೆ. ಆರೆಸ್ಸೆಸ್ ಹಾಗೂ ಬಿಜೆಪಿ ಎರಡರಲ್ಲೂ ವರ್ಚಸ್ಸಿರುವಂಥವರು, ಹೈಕಮ್ಯಾಂಡ್ ಜತೆಗೆ ಉತ್ತಮ ಸಂವಹನ/ಸಂಪರ್ಕ ಇರುವಂಥವರು, ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲದಂಥವರು, ಇನ್ನು ಕನಿಷ್ಠ ಎರಡರಿಂದ ಮೂರು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಸಲು ಸಾಧ್ಯ ಇರುವಂಥವರನ್ನು ಆಯ್ಕೆ ಮಾಡಬಹುದು. ಆದರೆ ಕರ್ನಾಟಕದ ವಿಚಾರಕ್ಕೆ ಬಂದಾಗ ಯಡಿಯೂರಪ್ಪ ಫ್ಯಾಕ್ಟರ್ ಬರಲಿದೆ. ಒಂದು ವೇಳೆ ಲಿಂಗಾಯತರನ್ನು ಇಳಿಸಿ, ಬೇರೆಯವರನ್ನು ತಂದು ಕೂರಿಸಿದ್ದಾರೆ ಎಂಬ ಮಾತು ಬರುವ ಸಾಧ್ಯತೆ ಇದೆ. ಆ ಕಾರಣಕ್ಕೆ ಲಿಂಗಾಯತ, ಒಕ್ಕಲಿಗ, ದಲಿತ, ಹಿಂದುಳಿದ ವರ್ಗ ಹಾಗೂ ಆರೆಸ್ಸೆಸ್​ನಲ್ಲಿ ಪ್ರಬಲವಾಗಿರುವ ಬ್ರಾಹ್ಮಣರನ್ನು ಪ್ರತಿನಿಧಿಸುವಂತೆ ತಂಡವನ್ನು ರಚಿಸುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ ಮುಖ್ಯಮಂತ್ರಿ ಆಯ್ಕೆ ಅಂತ ಬಂದಾಗ ಜಾತಿಯು ಗೌಣ ಆಗಬಹುದು. ಇದರ ಜತೆಗೆ ಈ ಸಲ ಉತ್ತರ ಕರ್ನಾಟಕದ ಕಡೆಗೆ ಹೆಚ್ಚಿನ ಒಲವು ಕಂಡುಬರುತ್ತಿದೆ.

ಇವರೆಲ್ಲರೂ ಸಿಎಂ ಕುರ್ಚಿಯ ರೇಸ್​ನಲ್ಲಿ
ಹಾಗೆ ನೋಡಿದರೆ, ಸದ್ಯಕ್ಕೆ ಕೇಳಿಬರುತ್ತಿರುವ ಪ್ರಮುಖ ಹೆಸರುಗಳೆಂದರೆ, ಅರವಿಂದ್ ಬೆಲ್ಲದ, ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ. ಇದರಾಚೆಗೆ ಕೇಳಿಬರುವ ಮುಖ್ಯ ಹೆಸರು ಬಿ.ಎಲ್.ಸಂತೋಷ್ ಅವರದು. ಇನ್ನು ಯಡಿಯೂರಪ್ಪ ಅವರ ಮಾತು ನಡೆದರೆ ಬೆಂಗಳೂರು ನಗರದಲ್ಲಿ ಪ್ರಭಾವಿ ಆಗಿರುವ ಆರ್.ಅಶೋಕ ಅವರಿಗೆ ಅವಕಾಶ ದೊರೆಯಲಿದೆ. ಬಸವರಾಜ ಬೊಮ್ಮಾಯಿ ಅವರನ್ನೂ ಯಡಿಯೂರಪ್ಪ ಅವರ ನೆಚ್ಚಿನ ಕ್ಯಾಂಡಿಡೇಟ್​ ಎನ್ನಲಾಗುತ್ತಿದೆ. ಇನ್ನು ಕೊನೆಯದಾಗಿ ಡಿಸಿಎಂ ಅಶ್ವತ್ಥನಾರಾಯಣ್ ಹೆಸರು ಕೂಡ ಇದೆ.

ಕರ್ನಾಟಕದಲ್ಲಿ ಇನ್ನೆರಡು ವರ್ಷಕ್ಕೆ ಚುನಾವಣೆಗೆ ತಾಲೀಮು ಶುರುವಾಗಲಿದೆ. ಮುಖ್ಯಮಂತ್ರಿ ಆಯ್ಕೆ ವೇಳೆ ಈ ಅಂಶವನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತೆ. ಇದರ ಜೊತೆಗೆ ವಯಸ್ಸು, ಆರೆಸ್ಸೆಸ್- ಪಕ್ಷದೊಳಗಿನ ವರ್ಚಸ್ಸು, ಹೈಕಮ್ಯಾಂಡ್ ಜತೆಗಿನ ಸಂಪರ್ಕ/ಸಂವಹನ, ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲದಿರುವ ಕ್ಲೀನ್ ಇಮೇಜ್ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು, ಬಿಜೆಪಿಗೆ ಈಗ ಇಮೇಜ್ ಬಿಲ್ಟಿಂಗ್ ತೀರಾ ಅಗತ್ಯ ಇದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪಾಲಿಗೆ ದೊಡ್ಡ ಭರವಸೆ ಅಂದರೆ ಕರ್ನಾಟಕ. ಈಗ ಯಡಿಯೂರಪ್ಪ ಅವರನ್ನು ಸಮಾಧಾನ ಮಾಡಿಯೇ ಬೀಳ್ಕೊಡಬೇಕು. ಅದಾಗದಿದ್ದಲ್ಲಿ ಅಧಿಕಾರ ಸೂತ್ರ ಸಲೀಸಲ್ಲ.

ಮೂಲಗಳು ತಿಳಿಸುವ ಪ್ರಕಾರ, ಲಿಂಗಾಯತ ಸ್ವಾಮೀಜಿಗಳಿಗೆ ಪರಿಸ್ಥಿತಿಯನ್ನು ವಿವರಿಸಲು ಉತ್ತರ ಕರ್ನಾಟಕದ ಪ್ರಮುಖ ನಾಯಕರೊಬ್ಬರ ಮೂಲಕ ತಿಂಗಳುಗಳಿಂದ ಪ್ರಯತ್ನಿಸಲಾಗಿದೆ. ಪ್ರಮುಖ ಸಚಿವ ಹುದ್ದೆಯಲ್ಲೂ ಇರುವ ಅವರು ಮಠ-ಮಾನ್ಯಗಳನ್ನು ಸುತ್ತಿ ಡ್ಯಾಮೇಜ್ ಕಂಟ್ರೋಲ್​ಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಟ್ಟಿದ್ದಾರೆ. ಅದೇ ರೀತಿ ಹೊಸದಾಗಿ ಮುಖ್ಯಮಂತ್ರಿ ಆರಿಸಿದ ಮೇಲೆ ಯಡಿಯೂರಪ್ಪ ಅಥವಾ ಮತ್ಯಾವುದೇ ಬಣದಿಂದ ಅಧಿಕಾರಕ್ಕೆ ಸಮಸ್ಯೆ ಆಗದಂತೆ ಎಲ್ಲ ಕಡೆಯಿಂದಲೂ ಸರಿ ಮಾಡಿಕೊಂಡ ನಂತರವೇ ಈಗಿನ ನಿರ್ಣಯಕ್ಕೆ ಬರಲಾಗಿದೆ ಎನ್ನುತ್ತವೆ ಮೂಲಗಳು.

ಇದನ್ನೂ ಓದಿ: CM BS Yediyurappa: ಇವತ್ತಿನ ಕ್ಯಾಬಿನೆಟ್ ಸಭೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಕೊನೆಯ ಸಭೆ?

ಇದನ್ನೂ ಓದಿ: BS Yediyurappa: ಸಿಎಂ ಹುದ್ದೆಗೆ ರಾಜೀನಾಮೆ? ಸುಳಿವು ನೀಡಿದ ಬಿಎಸ್ ಯಡಿಯೂರಪ್ಪ

(Political Analysis How BJP High Command Choose CM Candidates And Who Have More Chance To Become CM In Karnataka)