ಕಳೆದ 10 ದಿನಗಳಿಂದ ಮುಂಬೈನಲ್ಲಿ ರಾಜಕಿಯದ ಬಿಸಿ ತೀವ್ರವಾಗಿತ್ತು. ಅದನ್ನ ತಣಿಸಲೆಂದೇ ಕಳೆದರೆಡು ದಿನಗಳಿಂದ ವಾಣಿಜ್ಯ ನಗರಿಯಲ್ಲಿ ಮಳೆ ಜೋರಾಗಿದೆಯೇನೋ? ಅದೇನೇ ಇರಲಿ ಮಹಾರಾಷ್ಟ್ರ ರಾಜಕೀಯದ ವಿಚಾರವಾಗಿ ಎಲ್ಲಾ ಪೊಲಿಟಿಕಲ್ ಪಂಡಿತರ ಲೆಕ್ಕಾಚಾರ ತಲೆ ಕೆಳಗಾಗಿದೆ. ಯಾವ ಪತ್ರಿಕೆ ಟಿವಿಗಳನ್ನ ನೋಡಿದರೂ “ಮಾಸ್ಟರ್ ಸ್ಟ್ರೋಕ್” ಶಿವಸೇನಾ ಖತಂ ಎಂಬ ಚರ್ಚೆ ನಡೆಯುತ್ತಿದೆ. ಅತ್ತ ಉದ್ದವ್ ಬೆಂಬಲಿಗರು ” ಅಮಿ ಸದೈವ್ ತುಮ್ಚ್ಯಾ ಸೋಬತಾ” ಎಂಬ ದೊಡ್ಡ ದೊಡ್ಡ ಬ್ಯಾನರ್ ಹಾಕುವ ಮೂಲಕ “ನಾವು ಎಂದೆಂದಿಗೂ ನಿಮ್ಮ ಜೊತೆ ಇದ್ದೇವೆ”ಎಂಬ ಸಂದೇಶ ನೀಡ್ತಾ ಇದಾರೆ.
ಹಾಲಿ ಪರಿಸ್ಥಿತಿ ನೋಡುತ್ತಿದ್ದರೆ ಶಿವಸೇನೆ ಮುಳುಗುತ್ತಿರುವುದೇನೋ ನಿಜ, ಆದರೆ ಬಿಜೆಪಿ ಇದನ್ನೇ ಬಯಸುತ್ತಿದೆಯೇ? ಮರಾಠ ಮಣ್ಣಿನ ರಾಜಕೀಯದ ಏರಿಳಿತ ಬಲ್ಲವರು ಇದಕ್ಕೆ ಸಹಮತಿ ವ್ಯಕ್ತಪಡಿಸುತ್ತಿಲ್ಲ. ಇತ್ತ ಜಗತ್ತು ಶಿವಸೇನೆ ಮುಗಿಸಲು ಬಿಜೆಪಿ ಹೂಡಿರುವ ದೊಡ್ಡ ಅಸ್ತ್ರ ಎಂದು ಬೊಬ್ಬೆ ಹೊಡೆಯುತ್ತಿದ್ದರೂ ಒಳಗೊಳಗೆ ಕೇಸರಿ ಪಡೆಯ ಲೆಕ್ಕಾಚಾರ ಬೇರೆಯೇ ಇದ್ದಂತಿದೆ. 1990 ರಿಂದಲೂ ಬಿಜೆಪಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸುತ್ತಿದೆ. 1990 ರಿಂದ 2014 ರ ವರೆಗಿನ ವಿಧಾನ ಸಭಾ ಚುನಾವಣೆ ಅಂಕಿಅಂಶವನ್ನ ನೋಡಿದ್ರೆ, 2009 ರ ವರೆಗೆ ಶಿವಸೇನೆಯೇ ಬಿಜೆಪಿಗಿಂತ ಹೆಚ್ಚಿನ ಸ್ಥಾನ ಪಡೆದಿತ್ತು. 2009 ರಲ್ಲಿ ಬಿಜೆಪಿ 46 ಸ್ಥಾನ ಪಡೆದು ಶಿವಸೇನೆಗಿಂತ ಒಂದು ಸ್ಥಾನ ಹೆಚ್ಚು ಪಡೆಯಿತಾದರೂ ಅದು ನಗಣ್ಯವಾಗಿತ್ತು.
ವರದಿ: ಪ್ರಮೋದ್ ಶಾಸ್ತ್ರಿ, ಟಿವಿ9 ಹಿರಿಯ ವರದಿಗಾರ
ಆದರೆ 2014 ರಲ್ಲಿ ಮೊದಲ ಬಾರಿಗೆ ಬಿಜೆಪಿ ಹಾಗೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧಿಸಿದಾಗ ಬಿಜೆಪಿ ಹೆಚ್ಚಿನ ಸ್ಥಾನಗಳನ್ನ ಪಡೆಯಿತು. ಇನ್ನು 2009 ರಿಂದ 2014 ರ ಚುನಾವಣಾ ಸಮೀಕರಣವನ್ನ ನೋಡುವುದಾದರೆ, ಮಹಾರಾಷ್ಟ್ರ ದಲ್ಲಿ ರಾಷ್ಟ್ರೀಯ ಪಕ್ಷಗಳ ಇರುವುದು ನಿಜವಾದರೂ ಮರಾಠಿ ಅಸ್ಮಿತೆಯ ಪ್ರಾದೇಶಿಕ ಪಕ್ಷಗಳಾದ ಶಿವಸೇನೆ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಪಾರ್ಟಿಯ ನಡುವೆ ನೇರ ಹಣಾಹಣಿ ಇದೆ. ಅರ್ಥಾತ್ ಪ್ರಾದೇಶಿಕ ಪಕ್ಷಕ್ಕೆ ಹಾಕುವ ಮತವನ್ನ ಮತದಾರ ಇನ್ನೊಂದು ಪ್ರಾದೇಶಿಕ ಪಕ್ಷಕ್ಕೇ ಹಾಕುತ್ತಿದ್ದಾನೆಯೇ ಹೊರತು ಪ್ರಾದೇಶಿಕ ಪಕ್ಷವನ್ನ ಸಾರಾಸಗಟಾಗಿ ತಳ್ಳಿ ಹಾಕಿ ರಾಷ್ಟ್ರೀಯ ಪಕ್ಷಗಳಿಗೆ ಮಣೆ ಹಾಕಿಲ್ಲ.
ಹೀಗಾಗಿ ಮಹಾ ನೆಲದಲ್ಲಿ ಬಿಜೆಪಿ ಎನ್ ಸಿ ಪಿ ಮತಗಳನ್ನ ಪೂರ್ಣ ಪ್ರಮಾಣದಲ್ಲಿ ಕನ್ನಹಾಕಿದ್ದಾಗಲಿ ಅಥವಾ ಕಾಂಗ್ರೆಸ್ ಶಿವಸೇನೆಯ ಮತಗಳನ್ನ ಏಕಸ್ವಾಮ್ಯ ಮಾಡುವುದಾಗಲಿ ಇದುವರೆಗೂ ಸಾಧ್ಯವಾಗಿಲ್ಲ. ಎನ್ ಸಿ ಪಿ ಜನ್ಮ ತಾಳಿದಾಗನಿಂದ ಆರಂಭವಾದ ಚತುರ್ಕೊನ ಪೈಪೋಟಿಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಾದೇಶಿಕ ಪಕ್ಷಗಳು ಅನಿವಾರ್ಯ ಎಂಬಂತ ಪರಿಸ್ಥಿತಿ ಇದೆ. ಹೀಗಿರುವಾಗ ಬಿಜೆಪಿ, ಶಿವಸೇನೆಯನ್ನ ಸಂಪೂರ್ಣ ನೆಲಸಮ ಮಾಡಲು ಮುಂದಾಗುತ್ತಾ?
ಏಕನಾಥ್ ಶಿಂಧೆ ಮುಖ್ಯಮಂತ್ರಿ ಮಾಡಿದ್ದೇಕೆ?
ಈಗಾಗಲೇ ರಾಜಕೀಯವಾಗಿ ನಜ್ಜುಗುಜ್ಜಾಗಿರುವ ಕಾರಣ ಬಿಜೆಪಿಗೆ ಉದ್ದವ್ ಠಾಕ್ರೆ ಬೇಡವಾದರೂ ಕನಿಷ್ಠ ಹೋರಾಟದ ಸಾಮರ್ಥ್ಯವುಳ್ಳ ಶಿವಸೇನೆಯ ಅಗತ್ಯ ಖಂಡಿತ ಇದೆ. ಕ್ಷೀಣವಾಗಿರುವ ಉದ್ದವ್ ಠಾಕ್ರೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿರುವಾಗ, ಬಂಡಾಯ ಶಿವಸೇನೆ ನಾಯಕ ಶಿಂಧೆಯನ್ನ ಉಪ ಮುಖ್ಯಮಂತ್ರಿ ಮಾಡಿದರೆ ಶಿವಸೇನೆ ಕಾರ್ಯಕರ್ತರಲ್ಲಿ ಇನ್ನಷ್ಟು ಗೊಂದಲವಾಗುತ್ತೆ ವಿನಹ ದೇವೇಂದ್ರ ಫಡ್ನವೀಸ್ ಎಂಬ ದೊಡ್ಡ ನಾಯಕನ ನೆರಳಿನಿಂದ ಹೊರಬಂದ ಉದ್ದವ್ ಠಾಕ್ರೆಗೆ ಪರ್ಯಾಯ ಎಂದು ನಿರೂಪಿಸುವುದು ಕಷ್ಟ ಸಾಧ್ಯ. ಶಿವಸೇನೆಯ ಎರಡೂ ಬಣ ಇನ್ನಷ್ಟು ವೀಕ್ ಆಗಲಿದೆ.
ಅತ್ತ ಉದ್ದವ್ ಬಣದ ಸಂಜಯ್ ರಾವುತ್ ಎಂಬ ನಿರುಪಯೋಗಿ ಕೂಗುಮಾರಿ ವಾತಾವರಣವನ್ನ ಇನ್ನಷ್ಟು ಹಾಳುಗೆಡಿಸುತ್ತಾರೆಯೇ ವಿನಹ ಹೆಚ್ಚಿನದೇನು ಮಾಡಲು ಸಾಧ್ಯವಿಲ್ಲ. ಅಬ್ಬಬ್ಬಾ ಅಂದರೆ ಶಿಂಧೆ ಬಣವನ್ನ ಹಿಗ್ಗಾಮುಗ್ಗಾ ಬೈದು ಸಾಮ್ನಾ ಪತ್ರಿಕೆಯಲ್ಲಿ ಇನ್ನೆರಡು ಆರ್ಟಿಕಲ್ ಬರೆಯಬಹುದು ಅಷ್ಟೇ.
ಏಷಿಯಾದ ಅತಿ ದೊಡ್ಡ ಮಹಾ ನಗರ ಪಾಲಿಕೆ, ಗೋವಾ ಮಣಿಪುರ ರಾಜ್ಯಕ್ಕಿಂತ ಹೆಚ್ಚಿನ ಬಜೆಟ್ ಇರುವ ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಆಡಳಿತದ ಚುಕ್ಕಾಣಿ ಹಿಡಿಯಲು ಶಿವಸೇನೆ ಇಲ್ಲದೇ ಸಾಧ್ಯವಿಲ್ಲ. ಅದರಲ್ಲೂ ಶಿವಸೇನೆಯ ಅಖಾಡ ಎಂದೇ ಪರಿಗಣಿಸುವ ಮುಂಬೈನಲ್ಲಿ ಬಾಳಾಸಾಬ್ ಠಾಕ್ರೆಯ ಹೆಸರು ಇಂದಿಗೂ ಟ್ರಂಪ್ ಕಾರ್ಡ್. ಅತ್ತ ಉದ್ದವ್ ಸಿಎಂ ಸ್ಥಾನಕ್ಕೆ ರಾಜೀನಾಮೆಗೂ ಮುನ್ನ “ನೀವು ಬಾಳಾಸಾಬ್ ಠಾಕ್ರೆ ಮಗನನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ್ರಿ ಎಂಬುದು ನೆನಪಿರಲಿ” ಎಂದಿರುವ ಮಾತುಗಳು ಚುನಾವಣೆ ಮೇಲೆ ಪರಿಣಾಮ ಬೀರಬಲ್ಲದು.
ಹೀಗಾಗಿ ಬಿಜೆಪಿ ತನ್ನ ರಾಜಕೀಯ ಗಣಿತವನ್ನ ಜಾಗರೂಕವಾಗಿ ಲೆಕ್ಕ ಹಾಕಿದೆ. ಬಿಜೆಪಿಗೆ ಉದ್ದವ್ ಠಾಕ್ರೆ ಬೇಡದಿದ್ದರೂ ಬಾಳಾ ಸಾಹೇಬ್ ಠಾಕ್ರೆಯ ಶಿವಸೇನೆಯ ಅಗತ್ಯ ಖಂಡಿತ ಇದೆ. ಇದೇ ಕಾರಣಕ್ಕೆ ಬಿಜೆಪಿ ಏಕನಾಥ್ ಶಿಂಧೆ ಎಂಬ ಮರಾಠ ಸಮುದಾಯದ ನಾಯಕನಿಗೆ ಸಿಎಂ ಪಟ್ಟ ಕಟ್ಟಿ ಬಾಳಾ ಸಾಹೇಬ್ ಠಾಕ್ರೆ ಸಿದ್ದಂತವಾದಿ ನಾಯಕನ ಸರ್ಕಾರ ಎಂದು ಮುಂಬೈನ ರಸ್ತೆ ರಸ್ತೆಗಳಲ್ಲಿ ಘೋಷಣೆ ಕೂಗಲಿದೆ.
ಪುತ್ರ ಉದ್ದವ್ , ಬಾಳಾ ಸಾಹೇಬ್ ರ ಸಿದ್ದಂತಾಕ್ಕೆ ತಿಲಾಂಜಲಿ ಬಿಟ್ರೂ, ನಾವು ಮಾತ್ರ ಬಾಳಾಸಾಬ್ ರನ್ನ ಬಿಟ್ಟಿಲ್ಲ ಎಂಬ ಸಂದೇಶ ಸಾರಿದೆ. ಈ ಮೂಲಕ ಈಗಾಗಲೇ ಗೊಂದಲದಲ್ಲಿದ್ದ ಸಂಪೂರ್ಣ ಶಿವಸೇನೆ ಕಾರ್ತಕರ್ತರು ಶಿಂಧೆ ಬಣದತ್ತ ತಿರುಗುವಂತೆ ಮಾಡಿದೆ. ಶಿಂಧೆಯನ್ನ ಸಿಎಂ ಮಾಡಿ ತಾನು ಹಿಂದಿನ ಸೀಟ್ ನಲ್ಲಿ ಕುಳಿತುಕೊಳ್ಳುವ ಮೂಲಕ ಬಿಜೆಪಿಯ ಮೇಲೆ ಸಿಟ್ಟಾಗಿದ್ದ ಸಾಂಪ್ರದಾಯಿಕ ಶಿವಸೇನೆ ಕಾರ್ಯಕರ್ತರು ಸಹ ತಿರುಗಿ ನೋಡುವಂತೆ ಮಾಡಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಪ್ರಾದೇಶಿಕವಾಗಿ ತನ್ನ ಅಸ್ತಿತ್ವ ಕಳೆದುಕೊಂಡು ಎನ್ ಸಿ ಪಿಗೆ ಸಂಪೂರ್ಣ ಶರಣಾಗಿದ್ದ ಶಿವಸೇನೆಯನ್ನ ಮತ್ತೆ ಮುಂದೆ ನಿಲ್ಲಿಸಿದಂತಾಗಿದೆ. ಅದರಲ್ಲೂ ಪಶ್ಚಿಮಿ ಮಹಾರಾಷ್ಟ್ರ ಹಾಗೂ ವಿಧರ್ಬದ ಕೆಲ ಜಿಲ್ಲೆಗಳಲ್ಲಿ ಎನ್ ಸಿ ಪಿ ಗೆ ನೇರಾನೇರ ಹಣಾಹಣಿ ಇರುವ ಕ್ಷೇತ್ರಗಳಲ್ಲಿ ಕಳೆದುಹೋಗಿದ್ದ ಶಿವಸೇನೇ ಮತ್ತೆ ಜೀವ ತುಂಬಿದಂತಾಗಿದೆ.
ಅದರಲ್ಲೂ ಮರಾಠ ಸಮುದಾಯದ ಏಕನಾಥ್ ಶಿಂಧೆಯನ್ನೇ ಸಿಎಂ ಮಾಡುವ ಮೂಲಕ ಮರಾಠ ಸ್ಟ್ರಾಂಗ್ ಮ್ಯಾನ್ ಎಂಬ ಶರದ್ ಪವಾರ್ ಕೋಟೆಯ ಮುಂದೆ ಶಿಂಧೆಯನ್ನ ನಿಲ್ಲಿಸಿದೆ. ಇಲ್ಲವಾದಲ್ಲಿ ಎನ್ ಸಿ ಪಿ ಹಾಗೂ ಶಿವಸೇನೆ ನಡುವೆ ನೇರಾ ನೇರ ಹಣಾಹಣಿ ಇರುವ ೧೦ ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗೊಂದಲದಲ್ಲಿದ್ದ ಶಿವಸೇನೆಯ ಬಹುದೊಡ್ಡ ಕಾರ್ಯಕರ್ತರ ಪಡೆ ಎನ್ ಸಿ ಪಿ ಪಾಲಾಗುತ್ತಿತ್ತು. ಇದರ ಪರಿಣಾಮ ನೇರವಾಗಿ ಮುಂದಿನ ಚುನಾವಣೆಯಲ್ಲಿ ಎನ್ ಸಿ ಪಿ ಬಹುದೊಡ್ಡ ಲಾಭ ತಂದುಕೊಡಲಿತ್ತು. ಈಗಿನ ನಷ್ಟಕ್ಕಿಂತ ಮುಂದಿನ ಲಾಭವನ್ನ ಬಿಜೆಪಿ ಎದುರು ನೋಡುತ್ತಿದೆ. ಹಾಗಾದರೆ ನಾವಂದುಕೊಂಡಂತೆ ಇಷ್ಟು ದೊಡ್ಡ ಲೆಕ್ಕಾಚಾರವನ್ನ ಬಿಜೆಪಿ ಕೊನೆ ಕ್ಷಣದಲ್ಲಿ ಮಾಡ್ತಾ?
ಲೈಟ್..ಕ್ಯಾಮರಾ.. ಆ್ಯಕ್ಷನ್..
ಬಿಜೆಪಿ ಎಂಬ ರಾಜಕೀಯ ಪಕ್ಷದ ಒಳನುಗ್ಗಿ ಅಂತರಂಗದ ಸುದ್ದಿಯನ್ನ ಹೊರತೆಗೆಯಲು RSS ಪ್ರಣೀತ ಪತ್ರಕರ್ತರಿಗೂ ಇದುವರೆಗೆ ಸಾಧ್ಯವಿಲ್ಲ. ವಿಧಾನ ಪರಿಷತ್, ರಾಜ್ಯಸಭೆ, ಸಿಎಂ ಅಭ್ಯರ್ಥಿ, ರಾಷ್ಟ್ರಪತಿ ಅಭ್ಯರ್ಥಿ ಸೇರಿದಂತೆ ರಾಜಕೀಯದ ಬಹುದೊಡ್ಡ ನಿರ್ಣಯಗಳೆಲ್ಲವು ಕೊನೆ ಕ್ಷಣದ ಅಚ್ಚರಿಗಳೇ. ಯಾವುದೇ ನಿರ್ಧಾರಗಳಾದರೂ ಅದು ನಾಲ್ಕು ಗೋಡೆಯ ಮಧ್ಯೆಯೇ ನಿರ್ಣಯವಾಗುತ್ತವೆ. ಅಂತಹದ್ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರೇ ಮಾಧ್ಯಮದ ಮುಂದೆ ಬಂದು ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ವೈಯಕ್ತಿಕ ಆಗ್ರಹ ಎಂದರೆ ನಂಬಲು ಸಾಧ್ಯವೇ?
ಆದೇಶಗಳನ್ನಷ್ಟೇ ಜಾರಿ ಮಾಡಿ ಗೊತ್ತಿರುವ ದೆಹಲಿ ನಾಯಕರು ದೇವೇಂದ್ರ ಫಡ್ನವೀಸ್ ಗೆ ಮನವಿ ಮಾಡ್ತಾರೆ ಎಂದರೆ ಬಿಜೆಪಿಯನ್ನ ಬಲ್ಲವರ್ಯಾರು ನಂಬುವುದು ಕಷ್ಟ. ಅದರಲ್ಲೂ ಮಧ್ಯಾಹ್ನ 4.30 ಕ್ಕೆ ಮಹಾರಾಷ್ಟ ರಾಜಭವನದಲ್ಲಿ ಕಿಕ್ಕಿರಿದು ತುಂಬಿದ್ದ ಕ್ಯಾಮರಾಗಳ ಮುಂದೆ ಮಹಾರಾಷ್ಟ್ರ ಉಸ್ತುವಾರಿ ಸಿ ಟಿ ರವಿಯವರನ್ನ ಪಕ್ಕದಲ್ಲಿ ಕುಳ್ಳಿರಿಸಿ “ನಾನು ಸರ್ಕಾರದಿಂದ ಹೊರಗಿದ್ದು ಸಹಕಾರ ನೀಡ್ತಿನಿ” ಎಂದು ಫಡ್ನವೀಸ್ ತಮ್ಮ ನಿರ್ಧಾರ ಪ್ರಕಟಿಸಿದ್ದು ಹೈಕಮಾಂಡ್ ಗೆ ಗೊತ್ತಿರಲಿಲ್ಲ ಎಂದರೆ ಅದು ಜೋಕ್ ಅಷ್ಟೇ. ಹಾಗಾದ್ರೆ ಮಧ್ಯಾಹ್ನ 4.30 ಕ್ಕೆ ತ್ಯಾಗಮಯಿಯಾಗಿದ್ದ ಫಡ್ನವೀಸ್ 6.30 ಕ್ಕೆ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು ಹೇಗೆ?
ರಾಜಕಾರಣದಲ್ಲಿ ಜನಮಾನಸವನ್ನ ಮುಟ್ಟುವ ಫಾರ್ಮುಲಾವನ್ನ ಕರಗತ ಮಾಡುಕೊಂಡಿರುವ ಬಿಜೆಪಿ ಇಲ್ಲೂ ಸಹ ಉತ್ತಮ ಕ್ಲೈಮ್ಯಾಕ್ಸ್ ಸ್ಕ್ರೀನ್ ಪ್ಲೇ ರಚಿಸಿತು. ದೇವೇಂದ್ರ ಫಡ್ನವೀಸ್ “ನೋ” ಎನ್ನುತ್ತಿದ್ದಂತೆ ಜೆ ಪಿ ನಡ್ಡಾ ಕ್ಯಾಮರಾ ಮುಂದೆಯೇ… ಇದು ಕೇಂದ್ರ ನಿರ್ಣಯ ಎಂದು ಫರ್ಮಾನ್ ಹೊರಡಿಸಿದರು. ಕೂಡಲೇ ಫಡ್ನವೀಸ್ ಪಕ್ಷದ ಆದೇಶ ನನಗೆ “ಸರ್ವಪರಿ” ಎಂದು ಒಪ್ಪಿದರು.
ಇದಕ್ಕೆ ಗೃಹ ಸಚಿವ ಅಮಿತ್ ಶಾ, ಫಡ್ನವೀಸ್ ರ ನಿರ್ಧಾರ ಮೆಚ್ಚಿ ಟ್ವೀಟ್ ಮಾಡುವ ಮೂಲಕ ಅನುಮೋದಿಸಿದರು! ಪ್ರಧಾನಿ ನರೇಂದ್ರ ಮೋದಿ ಫಡ್ನವೀಸ್ ಗೆ ” ಶಹಬಾಶ್ ಗಿರಿ” ನೀಡುವ ಟ್ವೀಟ್ ಮಾಡಿ ಕ್ಲೈಮ್ಯಾಕ್ಸ್ ಮುಕ್ತಾಯಗೊಳಿಸಿದರು. ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗುದಾಗಲಿ, ದೇವೇಂದ್ರ ಫಡ್ನವೀಸ್ ಉಪ ಮುಖ್ಯಮಂತ್ರಿಯಾಗುದಾಗಲಿ ಯಾವುದೇ ಕೊನೆ ಕ್ಷಣದ ನಿರ್ಧಾರವಲ್ಲ. ಈ ಪ್ರಕರಣದಲ್ಲಿ ಬಿಜೆಪಿ ರಾಜಕೀಯವಾಗಿ ತನ್ನ “POSTURING ” ಅನ್ನ ಅದ್ಬುತವಾಗಿ ಮಾಡಿ ಮುಗಿಸಿದೆ.
ಜಗತ್ತು ಬೇರೆಯದ್ದೇ ಲೆಕ್ಕಾಚಾರ ಮಾಡ್ತಾ ಇದ್ರೆ ಇತ್ತ ಕೇಸರಿ ಪಾಳಯದ ಹೈಕಮಾಂಡ್ ಮುಂದಿನ ಅಶ್ಚಮೇಧದ ಕುದುರೆಯನ್ನ ಸದ್ದಿಲ್ಲದೇ ಸಿದ್ದಪಡಿಸುತ್ತಿದೆ. ಇದು ಮಾಸ್ಟರ್ ಸ್ಟ್ರೋಕಾ ಅಥವಾ ರಾಜಕೀಯದ ಜೂಜಾಟವೇ ಎಂಬುದು 2024 ರಲ್ಲಿ ತಿಳಿಯಲಿದೆ. ಮಹಾರಾಷ್ಟ್ರದ ರಾಜಕೀಯ ಹೈಡ್ರಾಮಾ ವರದಿ ಮುಗಿಸಿ ಮುಂಬೈನಿಂದ ಹೊರಡುವ ಮುನ್ನ ಇನ್ನಷ್ಟು ಪ್ರಶ್ನೆಗಳು ಹುಟ್ಟುತ್ತಲೇ ಇವೆ.ಇಲ್ಲಿ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳನ್ನ ಕಂಡುಹಿಡಿದರೆ ಅಂತರಂಗದ ಸುದ್ದಿ ಸಿಗಬಹುದೇನೋ...???