ಇಂಡೋನೇಷ್ಯಾದಲ್ಲಿ ಮಾನವೀಯ ನೆಲೆಯ ಜಂಟಿ ನೌಕಾ ಅಭ್ಯಾಸದಲ್ಲಿ ಪಾಲ್ಗೊಂಡ 36 ರಾಷ್ಟ್ರಗಳ ನೌಕಾಪಡೆಗಳು

|

Updated on: Jun 13, 2023 | 4:39 PM

ಕೋವಿಡ್ - 19 ಸಾಂಕ್ರಾಮಿಕದ ಬಳಿಕ, ಇದೇ ಮೊದಲ ಬಾರಿಗೆ 2023ರಲ್ಲಿ ಈ ಸಮರಾಭ್ಯಾಸವನ್ನು ಆಯೋಜಿಸಲಾಗುತ್ತಿದೆ. ಈ ವರ್ಷದ ಎಂಎನ್ಇಕೆಯನ್ನು 'ಚೇತರಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಸಹಯೋಗ' ಎಂಬ ಹೆಸರಿನಲ್ಲಿ ಆಯೋಜಿಸಲಾಗಿತ್ತು.

ಇಂಡೋನೇಷ್ಯಾದಲ್ಲಿ ಮಾನವೀಯ ನೆಲೆಯ ಜಂಟಿ ನೌಕಾ ಅಭ್ಯಾಸದಲ್ಲಿ ಪಾಲ್ಗೊಂಡ 36 ರಾಷ್ಟ್ರಗಳ ನೌಕಾಪಡೆಗಳು
ಸಾಂದರ್ಭಿಕ ಚಿತ್ರ
Follow us on

ಜಾಗತಿಕ ರಾಜಕಾರಣದ ಎದುರಾಳಿ ರಾಷ್ಟ್ರಗಳಾದ ಅಮೆರಿಕಾ ಸಂಯುಕ್ತ ಸಂಸ್ಥಾನ, ಚೀನಾ ಮತ್ತು ರಷ್ಯಾಗಳು ಜೊತೆಯಾಗಿ ಇಂಡೋನೇಷ್ಯಾದ ಸಾಗರದಲ್ಲಿ ನಡೆದ ಮಲ್ಟಿಲ್ಯಾಟರಲ್ ನೇವಲ್ ಎಕ್ಸಸೈಸ್ ಕೊಮೊಡೊ (ಎಂಎನ್ಇಕೆ) ನೌಕಾ ಅಭ್ಯಾಸದಲ್ಲಿ ಭಾಗಿಯಾಗಿದ್ದವು. ಈ ಅಭ್ಯಾಸವನ್ನು ಮಾನವೀಯ ಸಂಕಷ್ಟಗಳ ಸಂದರ್ಭದಲ್ಲಿ ಒಂದಾಗಿ ಕಾರ್ಯಾಚರಿಸುವ ಸಾಮರ್ಥ್ಯವನ್ನು ವೃದ್ಧಿಸುವ ಉದ್ದೇಶದಿಂದ ಆಯೋಜಿಸಲಾಗಿದೆ. ಮಕಾಸರ್ ಜಲಸಂಧಿಯಲ್ಲಿ ಜೂನ್ 5ರಿಂದ 8ರ ತನಕ ನಡೆದ ಮಿಲಿಟರಿ ಅಭ್ಯಾಸದ ಆತಿಥ್ಯವನ್ನು ಇಂಡೋನೇಷ್ಯಾ ವಹಿಸಿತ್ತು. ಬೋರ್ನಿಯೊ ಮತ್ತು ಸುಲಾವೆಸಿ ಮಧ್ಯ ನಡೆದ ಅಭ್ಯಾಸದಲ್ಲಿ 49 ರಾಷ್ಟ್ರಗಳು ಭಾಗವಹಿಸಬೇಕಿತ್ತು. ಈ ದೇಶಗಳಲ್ಲಿ ಎದುರಾಳಿಗಳಾದ ಉತ್ತರ ಕೊರಿಯಾ – ದಕ್ಷಿಣ ಕೊರಿಯಾ, ಭಾರತ ಮತ್ತು ಪಾಕಿಸ್ತಾನಗಳೂ ಸೇರಿದ್ದವು.

ಕೋವಿಡ್ – 19 ಸಾಂಕ್ರಾಮಿಕದ ಬಳಿಕ, ಇದೇ ಮೊದಲ ಬಾರಿಗೆ 2023ರಲ್ಲಿ ಈ ಸಮರಾಭ್ಯಾಸವನ್ನು ಆಯೋಜಿಸಲಾಗುತ್ತಿದೆ. ಈ ವರ್ಷದ ಎಂಎನ್ಇಕೆಯನ್ನು ‘ಚೇತರಿಸಿಕೊಳ್ಳಲು ಮತ್ತು ಅಭಿವೃದ್ಧಿ ಹೊಂದಲು ಸಹಯೋಗ’ ಎಂಬ ಹೆಸರಿನಲ್ಲಿ ಆಯೋಜಿಸಲಾಗಿತ್ತು. ಕೊಮೊಡೊ ಸಮರಾಭ್ಯಾಸದ ಸಂದರ್ಭದಲ್ಲಿ ಭಾಗವಹಿಸಿದ್ದ ಪಡೆಗಳು ಸಮುದ್ರ ಮತ್ತು ನೆಲದಲ್ಲಿ ತುರ್ತು ಪರಿಸ್ಥಿತಿಗಳಿಗೆ ಮತ್ತು ನೈಸರ್ಗಿಕ ದುರಂತಗಳಿಗೆ ಸ್ಪಂದಿಸುವುದನ್ನು ಅಭ್ಯಾಸ ಮಾಡಿದರು. ಇದರಲ್ಲಿ ನಗರ ಪರೇಡ್, ಆಹಾರ ಕಾರ್ಯಕ್ರಮಗಳು, ಸಾಗರ ಸಂಬಂಧಿ ಪ್ರದರ್ಶನಗಳು ಸೇರಿದ್ದವು.

ಇದನ್ನೂ ಓದಿ: Expert Opinion: ಭಾರತದ ವಿದ್ಯುತ್ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಒದಗಿಸಿದ ಸೋಲಾರ್, ಪವನ ವಿದ್ಯುತ್ ಉಪಕ್ರಮ

2014ರಿಂದ, ಜಗತ್ತಿನಾದ್ಯಂತ ವಿವಿಧ ರಾಷ್ಟ್ರಗಳು ಎರಡು ವರ್ಷಗಳಿಗೊಮ್ಮೆ ನಡೆಯುವ ಬಹುರಾಷ್ಟ್ರೀಯ ಕೊಮೊಡೊ ಅಭ್ಯಾಸದಲ್ಲಿ ಭಾಗವಹಿಸಿವೆ. ಈ ಅಭ್ಯಾಸದ ಪರಿಣಾಮವಾಗಿ, ರಷ್ಯಾ ಮತ್ತು ಚೀನಾಗಳೊಡನೆ ತಲೆದೋರಬಹುದಾದ ಸಮಸ್ಯೆಗಳ ಕುರಿತು ಪ್ರಶ್ನಿಸಿದಾಗ ಅಮೆರಿಕನ್ ನೌಕಾಡೆಯ ಅಧಿಕಾರಿಯೊಬ್ಬರು ಅಮೆರಿಕಾ ಮುಂದಿನ ದಿನಗಳಲ್ಲೂ ಈ ಪ್ರಾಂತ್ಯವನ್ನು ಪ್ರವೇಶಿಸುವಂತೆ ಮಾಡಲು ಮತ್ತು ತೆರೆದಿಡಲು ಇಂಡೋನೇಷ್ಯಾದೊಡನೆ ಸಹಕರಿಸುವುದಾಗಿ ಭರವಸೆ ನೀಡಿದೆ.

ಅಮೆರಿಕಾದ ನೌಕಾಪಡೆಯನ್ನು ಡೆಸ್ರಾನ್ 7, ಇಂಡಿಪೆಂಡೆನ್ಸ್ ಕ್ಲಾಸ್ ಲಿಟ್ಟೋರಲ್ ಯುದ್ಧ ನೌಕೆ ಯುಎಸ್ಎಸ್ ಮ್ಯಾಂಚೆಸ್ಟರ್‌ (ಎಲ್‌ಸಿಎಸ್ 14) ಹಾಗೂ ಎಂಎಚ್-60ಆರ್ ಸೀಹಾಕ್‌ಗಳು ಪ್ರತಿನಿಧಿಸಿದ್ದವು. ಡೆಸ್ರಾನ್ 7 ಆಗ್ನೇಯ ಏಷ್ಯಾದಲ್ಲಿ ಮುಂಚೂಣಿಯಲ್ಲಿರುವ ಅಮೆರಿಕನ್ ನೌಕಾಪಡೆಯ ಡೆಸ್ರಾನ್ (ಡೆಸ್ಟ್ರಾಯರ್ ಸ್ಕ್ವಾಡ್ರನ್) ಆಗಿದೆ. ಈ ಸಾಮರ್ಥ್ಯದಲ್ಲಿ ಇದು ಆವರ್ತಕವಾಗಿ ಸಿಂಗಾಪುರಕ್ಕೆ ನೇಮಕಗೊಳ್ಳುವ ಪ್ರಾಥಮಿಕ ಕಾರ್ಯತಂತ್ರದ ಮತ್ತು ಕಾರ್ಯಾಚರಣಾ ಕಮಾಂಡರ್ ಆಫ್ ಲಿಟ್ಟೋರಲ್ ಯುದ್ಧನೌಕೆಯಾಗಿ ಸೇವೆ ಸಲ್ಲಿಸುತ್ತದೆ. ಅದರೊಡನೆ, ಇದು ಎಕ್ಸ್‌ಪೆಡಿಶನರಿ ಸ್ಟ್ರೈಕ್ ಗ್ರೂಪ್ 7ರ ಸೀ ಕಾಂಬ್ಯಾಟ್ ಕಮಾಂಡರ್ ಆಗಿ ಕಾರ್ಯಾಚರಿಸುತ್ತಿದ್ದು, ಮಿಲಿಟರಿಗಳ ಮಟ್ಟದ ಕಾರ್ಯಾಚರಣಾ ಅಭ್ಯಾಸಗಳ ಮೂಲಕ ಸಹಯೋಗಗಳನ್ನು ಸ್ಥಾಪಿಸುತ್ತದೆ.

ರಷ್ಯಾದ ರಕ್ಷಣಾ ಸಚಿವಾಲಯ ಜೂನ್ 10ರಂದು ಹೇಳಿಕೆ ನೀಡಿದ್ದು, ತನ್ನ ಪೆಸಿಫಿಕ್ ಫ್ಲೀಟ್‌ನ ನೌಕೆಗಳು ಏಷ್ಯಾ – ಪೆಸಿಫಿಕ್ ಪ್ರಾಂತ್ಯದ ಅಂತಾರಾಷ್ಟ್ರೀಯ ಅಭ್ಯಾಸದಲ್ಲಿ ಭಾಗಿಯಾಗಿವೆ ಎಂದು ಹೇಳಿಕೆ ನೀಡಿದೆ. ಈ ನೌಕೆಗಳು, ವಿದೇಶೀ ನೌಕಾಪಡೆಗಳ ನೇವಲ್ ಏವಿಯೇಷನ್‌ ವಿಮಾನಗಳೊಡನೆ ಜಾವಾ ಸಮುದ್ರದ ನೀರಿನಲ್ಲಿ ವಿವಿಧ ಜಂಟಿ ಅಭ್ಯಾಸಗಳನ್ನು ಯಶಸ್ವಿಯಾಗಿ ಕೈಗೊಂಡವು ಎಂದು ರಷ್ಯಾ ಮಾಹಿತಿ ನೀಡಿದೆ. ರಷ್ಯಾ ಈ ಅಭ್ಯಾಸಕ್ಕೆ ತನ್ನ ಮಧ್ಯಮ ಗಾತ್ರದ ಟ್ಯಾಂಕರ್ ಪೆಚೆಂಗಾ ಜೊತೆಗೆ ಗ್ರೋಂಕಿ ಹಾಗೂ ಪರ್ಫೆಕ್ಟ್ ಕಾರ್ವೆಟ್‌ಗಳನ್ನು ಕಳುಹಿಸಿತ್ತು.

ಮೇ 31ರಂದು ಚೀನಾದ ರಕ್ಷಣಾ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ, ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ ನೇವಿಯ ಜಾ಼ಂಜಿಯಾಂಗ್ ಹಾಗೂ ಕ್ಸುಚಾಂಗ್ ನೌಕೆಗಳು ಇಂಡೋನೇಷ್ಯಾ ನೌಕಾಪಡೆಯ ಆಹ್ವಾನದ ಮೇರೆಗೆ ಇಂಡೋನೇಷ್ಯಾಗೆ ತೆರಳಿ, ಜೂನ್ ಆರಂಭದಲ್ಲಿ ನಡೆಯಲಿರುವ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿವೆ ಎಂದಿತ್ತು.

ಜಂಟಿ ಸಮರಾಭ್ಯಾಸದಲ್ಲಿ ಎಷ್ಟು ರಾಷ್ಟ್ರಗಳು ಪಾಲ್ಗೊಂಡಿದ್ದವು ಎಂಬ ಸಂಖ್ಯೆಯ ಕುರಿತು ಹಲವು ಗೊಂದಲಗಳಿವೆ. ಇಂಡೋನೇಷ್ಯಾ ನೌಕಾಪಡೆಯ ಅಡ್ಮಿರಲ್ ಡೆನ್ನಿ ಪ್ರಾಸೇಶಿಯೋ ಅವರು ಇಂಡೋನೇಷ್ಯಾ ನೌಕಾಪಡೆ ಒಟ್ಟು 45 ರಾಷ್ಟ್ರಗಳಿಗೆ ಕೊಮೊಡೊ 2023 ಜೂನ್ ನೌಕಾಪಡೆ ಅಭ್ಯಾಸದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿತ್ತು ಎಂದಿದ್ದರು. ನ್ಯೂಸ್ ಏಜೆನ್ಸಿ ಅಂತರಾ ಜೂನ್ 5ರಂದು ನೀಡಿರುವ ವರದಿಯ ಪ್ರಕಾರ, ಸಮಾರಂಭದಲ್ಲಿ 36 ರಾಷ್ಟ್ರಗಳು ಪಾಲ್ಗೊಂಡಿದ್ದವು. ವರದಿಗಳ ಪ್ರಕಾರ, ಒಟ್ಟು 47 ರಾಷ್ಟ್ರಗಳಿಗೆ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿತ್ತು. ಆದರೆ, ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಅಂದಾಜು 30 ರಾಷ್ಟ್ರಗಳು ಅಭ್ಯಾಸದಲ್ಲಿ ಪಾಲ್ಗೊಂಡಿದ್ದವು. ಇದೇ ಸಮಯದಲ್ಲಿ, ಅಮೆರಿಕಾದ ನೌಕಾಪಡೆ 20 ವಿವಿಧ ರಾಷ್ಟ್ರಗಳ ನೌಕಾಪಡೆಗಳು ಅಭ್ಯಾಸದಲ್ಲಿ ಪಾಲ್ಗೊಂಡಿದ್ದವು ಎಂದಿತು.

ಎಂಎನ್ಇಕೆ 2023 ಈ ಪ್ರಾಂತ್ಯದಲ್ಲಿ ನಡೆದ ಇನ್ನಾವುದೇ ಬಹುರಾಷ್ಟ್ರೀಯ ಅಭ್ಯಾಸಕ್ಕಿಂತ ಭಿನ್ನವಾಗಿದೆ. ಯಾಕೆಂದರೆ, ಇದು ಕಾರ್ಯಾಚರಣಾ ಹಂತದ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡುತ್ತದೆಯೇ ಹೊರತು, ಯುದ್ಧದ ಅಭ್ಯಾಸಕ್ಕಲ್ಲ. ಈ ಅಭ್ಯಾಸ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ನಾಗರಿಕ ಕಾರ್ಯಾಚರಣೆ, ಅಂತಾರಾಷ್ಟ್ರೀಯ ಸಾಗರ ಸುರಕ್ಷತಾ ಸಮ್ಮೇಳನ, ಸಮುದಾಯದ ಕುರಿತ ಕಾರ್ಯಕ್ರಮ, ಮಿಲಿಟರಿ ಕ್ರೀಡಾ ಚಟುವಟಿಕೆಗಳು, ಹಾಗೂ ಅಂತಾರಾಷ್ಟ್ರೀಯ ಪಡೆಗಳ ಅಧ್ಯಯನಗಳನ್ನು ಒಳಗೊಂಡಿತ್ತು. ಇದು ಯಾವುದೇ ನೈಜ ಯುದ್ಧದಂತಹ ಅಭ್ಯಾಸ ಚಟುವಟಿಕೆಗಳನ್ನು ಒಳಗೊಂಡಿರಲಿಲ್ಲ.

ಸುದ್ದಿ ಸಂಸ್ಥೆ ಅಂತರ ಜೂನ್ 5ರಂದು ಮಾಡಿದ ವರದಿಯ ಪ್ರಕಾರ, ವಿವಿಧ ರಾಷ್ಟ್ರಗಳ ನೌಕಾಪಡೆಗಳ ಪ್ರತಿನಿಧಿಗಳು ಜಂಟಿ ಬಲವರ್ಧನೆ ಮತ್ತು ಚೇತರಿಕೆಯ ಎಂಒಯುಗೆ ಸಹಿ ಹಾಕಿದ್ದರು.

ಇಂಡೋನೇಷ್ಯಾದ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಅಭ್ಯಾಸದ ಉದ್ಘಾಟನಾ ಸಮಾರಂಭದಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ವಿವಿಧ ರಾಷ್ಟ್ರಗಳು ತಮ್ಮ ವೈಮಾನಿಕ ಸಾಮರ್ಥ್ಯವನ್ನು ಪ್ರದರ್ಶಿಸಿದವು. ಇದರಲ್ಲಿ ರಷ್ಯಾದ ಸುಖೋಯಿ 27/30, ಕೆನಡಾದ ಥಂಡರ್ ಫ್ಲೈಟ್ ಹಾಗೂ ಇಂಡೋನೇಷ್ಯಾದ ಬೊನಾನ್ಜ಼ಾ ವಿಮಾನಗಳ ಹಾರಾಟ ಪ್ರದರ್ಶನ ನಡೆದಿತ್ತು.

ಎಲ್ಲ ವಿದೇಶೀ ನೌಕೆಗಳು ಸುಲಾವೆಸಿ ಸಾಗರದಲ್ಲಿ ನಿಲುಗಡೆಯಾಗಿದ್ದವು. ಅವುಗಳ ಸಿಬ್ಬಂದಿಗಳನ್ನು ಇಂಡೋನೇಷ್ಯಾದ ನೌಕೆಗಳ ಮೂಲಕ ದಡಕ್ಕೆ ಕರೆದೊಯ್ಯಲಾಯಿತು. ಇಂಡೋನೇಷ್ಯಾ ತಾನು ಅತಿಥಿಗಳಿಗೆ ಮನರಂಜನಾ ಚಟುವಟಿಕೆಗಳು, ನಗರ ಪ್ರವಾಸಗಳು, ಸಂಗೀತ ಕಚೇರಿಗಳು, ವೈದ್ಯಕೀಯ ತರಬೇತಿ, ಸಾಗರ ಭದ್ರತೆಯ ಕುರಿತಾದ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಏರ್ಪಡಿಸಿದ್ದಾಗಿ ತಿಳಿಸಿದೆ. ಆ ಬಳಿಕ ಅತಿಥಿಗಳು ಅವರ ನೌಕೆಗಳಿಗೆ ತೆರಳಿದರು ಎನ್ನಲಾಗಿದೆ.

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಆರ್ಥಿಕತೆ ಸಂಬಂಧಿಸಿದ ಮತ್ತಷ್ಟು ಬರಹಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ