Facebook: ನಿಮ್ಮ ಟೈಮ್​ಲೈನ್; ಮೊನ್ನೆ ಹುಟ್ಟಿದ ನನ್ನ ಮಗುವಿಗೆ ಕೂಡ ಲಿಂಗಸೂಚಕ ಹೆಸರು ಇಟ್ಟಿಲ್ಲ!

|

Updated on: Mar 29, 2022 | 4:46 PM

Sringeri : ತರಕಾರಿಗೆ ಕಟ್ಟೆಬಾಗಿಲ ಕಾಮತ್ ಆದ್ರೆ ಎಲ್ಲ ತರಹದ ಸ್ಟೇಷನರಿ ಐಟಂಗಳಿಗೆ ಕಟ್ಟೆಬಾಗಿಲ ಶೆಟ್ಟರ ಅಂಗಡಿಯೇ. ರವಿ ಸ್ಟುಡಿಯೋ ಫೋಟೋಗ್ರಫಿಗೆ. ಸಂಬಂಧಿಕರ ಮನೆಗೆ ಹೋಗಿದ್ದಕ್ಕಿಂತ ಜಾಸ್ತಿ ಖಲೀಲ್ ಮನೆಗೆ, ಅಮ್ಮಿ ಶೆಟ್ಟರ ಮನೆಗೆ ಹೋಗ್ತೀನಿ.

Facebook: ನಿಮ್ಮ ಟೈಮ್​ಲೈನ್; ಮೊನ್ನೆ ಹುಟ್ಟಿದ ನನ್ನ ಮಗುವಿಗೆ ಕೂಡ ಲಿಂಗಸೂಚಕ ಹೆಸರು ಇಟ್ಟಿಲ್ಲ!
ಅರವಿಂದ ದೇವರಮನೆ
Follow us on

ನಿಮ್ಮ ಟೈಮ್​ಲೈನ್​ | Nimma Timeline ಸೋಷಿಯಲ್ ಮೀಡಿಯಾದಿಂದ ದೂರ ಉಳಿದು ಬಹಳ ಸಮಯ ಆಗಿತ್ತು. ಒಂಥರಾ ನೆಮ್ಮದಿ. ಆದ್ರೆ ನಿನ್ನೆ ಶೃಂಗೇರಿ ಪೇಟೆ ಕಡೆ ಹೋದಾಗ ಸೋಷಿಯಲ್ ಮಿಡಿಯಾನೇ ಜೀವಂತವಾಗಿ ಕಂಡ ಹಾಗಾಯ್ತು! ಆಗಿದ್ದಿಷ್ಟೇ, ಒಂದು ಅಂಗಡಿಯಲ್ಲಿ ಕೇಳಿ ಬಂದಂತಹ ಸಂಭಾಷಣೆ, ‘ನಾವು ಇನ್ಮುಂದೆ ಅವ್ರ ಹತ್ರ ವ್ಯವಹಾರ ಮಾಡಲ್ಲ, ನೀವೂ ಮಾಡ್ಬೇಡಿ’ ಕೇಳಿದಾಗ ಆಶ್ಚರ್ಯ ಆಗಿದ್ದು ಹೌದು. ಆಮೇಲೆ ಮನೆಗೆ ಬಂದು ಸ್ವಲ್ಪ ಹುಡುಕಿದಾಗ ಗೊತ್ತಾಗಿದ್ದು ಇದು ನಮ್ಮ ಸಮಾಜದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕುದಿಯುತ್ತಾ ಇರುವ ಕೋಮು ದಳ್ಳುರಿ ಅಂತ. ಬೇಸಿಕಲಿ ಹಿಂದೂ ಮುಸ್ಲಿಂ ವಿಷಯ ಅಂತೆ. ಇವರು ಅವರ ಹತ್ರ ವ್ಯವಹಾರ ಮಾಡಲ್ಲ ಅಂತೆ ಅವ್ರು ಇವ್ರ ಹತ್ರ ಬರಬಾರದು ಅಂತೆ. ನಂಗೆ ಇದೆಲ್ಲ ಯಾವತ್ತೂ ಅರ್ಥ ಆಗಲ್ಲ ಯಾಕಂದ್ರೆ ನಂಗೆ ಧರ್ಮ ಬಿಡಿ, ಜಾತಿ ಮತ ಲಿಂಗ ಬೇಧದಲ್ಲಿಯೂ ನಂಬಿಕೆ ಇಲ್ಲ. ಮೊನ್ನೆ ಹುಟ್ಟಿದ ನನ್ನ ಮಗುವಿಗೆ ಕೂಡ ಲಿಂಗಸೂಚಕ ಹೆಸರು ಇಟ್ಟಿಲ್ಲ!
ಅರವಿಂದ ದೇವರಮನೆ, ಇಂಡಸ್ಟ್ರೀಯಲ್ ಡಿಸೈನರ್, ಶೃಂಗೇರಿ

 

ಜಾತಿ ಧರ್ಮ ಹಾಗಿರಲಿ. ಇನ್ನು ವ್ಯವಹಾರದ ವಿಷಯಕ್ಕೆ ಬಂದ್ರೆ, ನಮ್ಮ ಮನೆಯಲ್ಲಿ ಜೀಪು ಇದ್ರೂ ವಾರಕ್ಕೊಮ್ಮೆ ಆದ್ರೂ ಗೂಡ್ಸ್ ಗಾಡಿಯ ಅವಶ್ಯಕತೆ ಬೀಳುತ್ತೆ. ಇವತ್ತಿಗೂ ನಮ್ಮ ‘ಗೋ ಟು ಗೂಡ್ಸ್’ ಗಾಡಿಯವರು ಅಂದ್ರೆ ಖಾದರ್ ಅವರು. ದೇವರಮನೆಯಲ್ಲಿ ಮಾತ್ರ ಅಲ್ಲ, ಬೆಂಗಳೂರಿಗೂ ನಾನು ಖಾದರ್ ಸಾಹೇಬರನ್ನೇ ಕರೆಸುತ್ತಾ ಇದ್ದಿದ್ದು. ಅಷ್ಟು ನಂಬಿಕೆ ನಮ್ಮ ಕುಟುಂಬಕ್ಕೆ ಅವರ ಮೇಲೆ. ಇನ್ನು ಮನೆಯ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ವಾಸುದೇವ್ ಜೋಯಿಸರೇ ಆಗಬೇಕು. ದಿನಸಿ ಅಂಗಡಿ ಸುಬ್ರಾಯ ನಾಯ್ಕರ ಸೂಪರ್ ಬಜಾರ್ ಮತ್ತು ಇಬ್ರಾಹಿಂ ಅಂಗಡಿ. ಹಾರ್ಡವೇರ್​ಗೆ ದುರ್ಗಾ ಆದ್ರೆ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಚಂದ್ರು, ಇನ್ನು ಯುಪಿಎಸ್ ಸೋಲಾರ್ ನಿಂದ ಹಿಡಿದು ಐಬೆಕ್ಸ್ ಕಾರು ಬೈಕು ಎಲ್ಲಾ ಬ್ಯಾಟರಿಗಳಿಗೂ ಸಮೀರ್ ಬ್ಯಾಟರಿ. ನಮ್ಮ ಮನೆಯಲ್ಲಿ ತಗೊಂಡ ಪ್ರತಿಯೊಂದು ಚಪ್ಪಲಿ ಶೂಗಳು ಬಸ್​ಸ್ಟ್ಯಾಂಡ್ ಸಾಯೇಬ್ರ ಅಂಗಡಿಯದ್ದೆ.

ಹಾಗೇ ನಮ್ಮನೆಯಲ್ಲಿರುವ ಕಾರುಗಳಲ್ಲಿ ಒಂದು ಕ್ರಿಶ್ಚಿಯನ್ ಒಡೆತನದ ಕಂಪೆನಿಯದ್ದಾದರೆ ಒಂದು ಫಾರ್ಸಿ  ಕಂಪನಿ, ಇನ್ನೊಂದು ಬನಿಯ ಆದ್ರೆ ಮತ್ತೊಂದು ಬೌದ್ಧರ ಒಡೆತನದ್ದು. ದೊಡ್ಡ ಸಮಾರಂಭಗಳಿಗೆ ಕ್ಯಾಟರಿಂಗ್ ಬೇಕಂದ್ರೆ ಹನುಮಂತನಗರದ ಶೃಂಗೇಶ್ವರ ಭಟ್ಟರಾದರೆ ಎಲ್ಲಾ ಕೃಷಿ ಉಪಕರಣಗಳಿಗೆ ಪ್ರಸನ್ನ ಇಲ್ಲವೇ ವಿದ್ಯಾಧರ. ಇನ್ನು ತರಕಾರಿಗೆ ಕಟ್ಟೆಬಾಗಿಲ ಕಾಮತ್ ಆದ್ರೆ ಎಲ್ಲ ತರಹದ ಸ್ಟೇಷನರಿ ಐಟಂಗಳಿಗೆ ಕಟ್ಟೆಬಾಗಿಲ ಶೆಟ್ಟರ ಅಂಗಡಿಯೇ. ಕಾಫಿ ಪುಡಿಗೆ ಸುಬ್ಬಣ್ಣ ಶೆಟ್ಟರ ಅಂಗಡಿಯಾದ್ರೆ ರವಿ ಸ್ಟುಡಿಯೋ ಫೋಟೋಗ್ರಫಿಗೆ. ಸಂಬಂಧಿಕರ ಮನೆಗೆ ಹೋಗಿದ್ದಕ್ಕಿಂತ ಜಾಸ್ತಿ ಖಲೀಲ್ ಮನೆಗೆ, ಅಮ್ಮಿ ಶೆಟ್ಟರ ಮನೆಗೆ ಹೋಗ್ತೀನಿ.

ಇದನ್ನೂ ಓದಿ : ಸ್ವಭಾವ ಪ್ರಭಾವ: ಈಗಲೂ ಲತೀಫ್ ಸಾಹೇಬರ ಹೆಂಡತಿಯ ಮಸಾಲೆಖಾರವೇ ನನ್ನಡುಗೆಗೆ

ಇಷ್ಟೆಲ್ಲಾ ಲಿಸ್ಟ್ ಮಾಡಲು ಕಾರಣ ಇದೆ, ಇಲ್ಲೆಲ್ಲೂ ಇವರು ಇಂತಹದ್ದೇ ಜಾತಿ/ಧರ್ಮ ಅಂತ ನೋಡಿ ವ್ಯವಹಾರ ಮಾಡಿದ್ದೂ ಅಲ್ಲ. ಬದಲಿಗೆ ಅವರಿಂದ ದೊರೆತ ಸರ್ವಿಸ್ ಅಥವಾ ಸೇವೆ. ಇದು ವ್ಯವಹಾರದ ಬಹುಮುಖ್ಯ ಭಾಗ. ನಾನು ಕೂಡ ಚಿಕ್ಕ ಉದ್ಯಮ ನಡೆಸುವವನೇ. ನನ್ನ ಕ್ಲೈಂಟ್​ಗಳಲ್ಲಿ ಎಲ್ಲಾ ಧರ್ಮೀಯರೂ ಇದ್ದಾರೆ ಆದ್ರೆ ಯಾವತ್ತೂ ಧರ್ಮ ಜಾತಿ ನೋಡಿ ವ್ಯವಹಾರ ಮಾಡಿಲ್ಲ. ಅದಕ್ಕೆ ಇರಬೇಕು ಜೀವನದಲ್ಲಿ ಇಷ್ಟು ಬೆಳೆಯಲು ಸಾಧ್ಯ ಆಗಿದ್ದು.

ನಾನು ಬೆಳೆದಿದ್ದು ಒಂದು ಜಾತ್ಯಾತೀತ ಧರ್ಮಾತೀತ ವಾತಾವರಣದಲ್ಲಿ. ಗುಡ್ಡದ ಹೈಸ್ಕೂಲಿನಲ್ಲಿ ಮಂಜುನಾಥ್ ಗೌಡರು ಹೇಳಿಕೊಟ್ಟ ವಿಶ್ವಮಾನವ ಪಾಠ ಇನ್ನೂ ಮನಸ್ಸಿನಲ್ಲಿ ಹಸಿರಾಗಿ ಉಳಿದಿದೆ. ಅದನ್ನೇ ಪ್ರಾಥಮಿಕ ಶಾಲೆಯಲ್ಲಿ ಸತ್ಯನಾರಾಯಣ ಮೇಷ್ಟ್ರು ಹೇಳಿಕೊಟ್ಟಿದ್ದು. ಸಮಾಜ ಇರುವುದೇ ಹೀಗೆ. ಈ ಕೋಮು, ದಳ್ಳುರಿ, ಜಾತಿ, ಧರ್ಮ, ವಿಷ, ಎಲ್ಲ ಶಾಶ್ವತ ಅಲ್ಲ. ಜೀವನದಲ್ಲಿ ಬೆಳೆಯಬೇಕು ಅಂದ್ರೆ ಮನಸ್ಸು ವಿಶಾಲ ಇರಬೇಕು. ಇಲ್ಲ ಅಂದ್ರೆ ಇಲ್ಲೇ ಮಣ್ಣು ಹೊರುತ್ತಾ ಇರ್ಬೇಕು.

*

ಗಮನಿಸಿ: ನಿಮ್ಮ ಟೈಮ್​ಲೈನ್ ಇದು ಇಂದಿನಿಂದ ಶುರುವಾಗುವ ಹೊಸ ಅಂಕಣ. ಆಗಾಗ ಪ್ರಕಟವಾಗುವ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com 

ಇದನ್ನೂ ಓದಿ : ಸ್ವಭಾವ ಪ್ರಭಾವ: ಗೊತ್ತಾ ಇಮಾಂಸಾಬಿಗೂ, ಗೋಕುಲಾಷ್ಟಮಿಗೂ ಇರುವ ಸಂಬಂಧ

Published On - 4:16 pm, Tue, 29 March 22