ಹೆಚ್ಚಿನ ಭೂ ವೀಕ್ಷಣೆಗಾಗಿ ಡಿಎಸ್-ಎಸ್ಎಆರ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಪಿಎಸ್ಎಲ್‌ವಿ-ಸಿ56 ಯೋಜನೆ

|

Updated on: Jul 29, 2023 | 8:59 PM

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 30 ರಂದು ಉಡಾವಣೆಗೊಳ್ಳಲಿರುವ ಪಿಎಸ್ಎಲ್‌ವಿ-ಸಿ56 ರಾಕೆಟ್ ಡಿಎಸ್-​ಎಸ್ಎಆರ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ. ಡಿಎಸ್-ಎಸ್ಎಆರ್ ಉಪಗ್ರಹ ಒಂದು ಸಿಂಥೆಟಿಕ್ ಅಪರ್ಚರ್ ರೇಡಾರ್ (SAR) ಉಪಗ್ರಹವಾಗಿದೆ.

ಹೆಚ್ಚಿನ ಭೂ ವೀಕ್ಷಣೆಗಾಗಿ ಡಿಎಸ್-ಎಸ್ಎಆರ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಪಿಎಸ್ಎಲ್‌ವಿ-ಸಿ56 ಯೋಜನೆ
ಹೆಚ್ಚಿನ ಭೂ ವೀಕ್ಷಣೆಗಾಗಿ ಡಿಎಸ್-ಎಸ್ಎಆರ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಪಿಎಸ್ಎಲ್‌ವಿ-ಸಿ56
Follow us on

ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 30ರಂದು ಬೆಳಗ್ಗೆ 6:30ಕ್ಕೆ ಉಡಾವಣೆಗೊಳ್ಳಲಿರುವ ಪಿಎಸ್ಎಲ್‌ವಿ-ಸಿ56 ರಾಕೆಟ್ (PSLV-C56 mission) ಡಿಎಸ್-​ಎಸ್ಎಆರ್ ಉಪಗ್ರಹವನ್ನು (DS-SAR Satellite) ಬಾಹ್ಯಾಕಾಶಕ್ಕೆ ಒಯ್ಯಲಿದೆ. ಈ ಉಪಗ್ರಹವನ್ನು ಸಿಂಗಾಪುರದ ಡಿಫೆನ್ಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಏಜೆನ್ಸಿ (ASTA) ಹಾಗೂ ಎಸ್‌ಟಿ ಇಂಜಿನಿಯರಿಂಗ್ ಸಂಸ್ಥೆಗಳು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಜೊತೆಗೆ ಸಹಯೋಗ ಹೊಂದಿ ಅಭಿವೃದ್ಧಿ ಪಡಿಸಿವೆ.

ಡಿಎಸ್-​ಎಸ್ಎಆರ್ ಉಪಗ್ರಹ ಒಂದು ಸಿಂಥೆಟಿಕ್ ಅಪರ್ಚರ್ ರೇಡಾರ್ (SAR) ಉಪಗ್ರಹವಾಗಿದೆ. ಅಂದರೆ, ಇದು ಭೂಮಿಯ ಮೇಲ್ಮೈ ಚಿತ್ರಣವನ್ನು ಪಡೆಯಲು ರೇಡಾರನ್ನು ಬಳಸುತ್ತದೆ. ಎಸ್ಎಆರ್ ಉಪಗ್ರಹ ಎಲ್ಲಾ ರೀತಿಯ ಹವಾಮಾನ ಪರಿಸ್ಥಿತಿಯಲ್ಲಿ, ಹಗಲು ಮತ್ತು ರಾತ್ರಿ ಎರಡು ಸಮಯದಲ್ಲೂ ಕಾರ್ಯಾಚರಿಸಬಲ್ಲದು. ಇದು ಮೋಡಗಳು ಮತ್ತು ಮಂಜಿನ ನಡುವೆಯೂ ಭೂಮಿಯ ಅತ್ಯಂತ ಸ್ಪಷ್ಟ ಚಿತ್ರಣ ಪಡೆಯಬಲ್ಲದು. ಈ ಕಾರಣದಿಂದ ಎಸ್ಎಆರ್ ವಿಪತ್ತು ನಿರ್ವಹಣೆ, ಭೂಮಿಯ ನಿರ್ವಹಣೆ ಮತ್ತು ಸಾಗರ ವಿಚಕ್ಷಣೆಯಂತಹ ಹಲವಾರು ಉದ್ದೇಶಗಳಿಗೆ ಪೂರಕವಾಗಿದೆ.

ಡಿಎಸ್​-ಎಸ್ಎಆರ್ ಉಪಗ್ರಹವನ್ನು ಭೂಮಿಯಿಂದ 500 ಕಿಲೋಮೀಟರ್ ಎತ್ತರದಲ್ಲಿರುವ ಸನ್ ಸಿಂಕ್ರೊನಸ್ ಕಕ್ಷೆಗೆ ಅಳವಡಿಸಲಾಗುತ್ತದೆ. ಇದು ಪೂರ್ಣ ಪೋಲಾರಿಮೆಟ್ರಿಯಲ್ಲಿ ಐವತ್ತು ಕಿಲೋಮೀಟರ್‌ಗಳ ಸ್ವಾತ್ ವ್ಯಾಪ್ತಿ ಮತ್ತು ಒಂದು ಮೀಟರ್ ರೆಸಲ್ಯೂಷನ್ ಹೊಂದಿದೆ. ಅಂದರೆ, ಈ ಉಪಗ್ರಹ ಯಾವುದೇ ಸಮಯದಲ್ಲಿ, ಹಗಲು ರಾತ್ರಿಯ ವ್ಯತ್ಯಾಸವಿಲ್ಲದೆ ಭೂಮಿಯ ಸ್ಪಷ್ಟ ಚಿತ್ರಣವನ್ನು ರಚಿಸಬಲ್ಲದಾಗಿದೆ.

ಡಿಎಸ್-​ಎಸ್ಎಆರ್ ಉಪಗ್ರಹವನ್ನು ವಿವಿಧ ಉದ್ದೇಶಗಳಿಗೆ ಬಳಸಲಿದ ಸಿಂಗಾಪುರ ಸರ್ಕಾರ

  1. ವಿಪತ್ತು ನಿರ್ವಹಣೆ: ಈ ಉಪಗ್ರಹ ಎಂತಹ ಹವಾಮಾನ ಪರಿಸ್ಥಿತಿಯಲ್ಲೂ ಭೂಮಿಯ ಚಿತ್ರಣ ಮಾಡುವ ಸಾಮರ್ಥ್ಯ ಹೊಂದಿದ್ದು, ಇದನ್ನು ಪ್ರವಾಹ, ಭೂಕಂಪ, ಭೂಕುಸಿತದಂತಹ ನೈಸರ್ಗಿಕ ವಿಕೋಪಗಳನ್ನು ಅಂದಾಜಿಸಲು ಬಳಸಲಾಗುತ್ತದೆ.
  2. ಭೂ ನಿರ್ವಹಣೆ: ಡಿಎಸ್-ಎಸ್ಎಆರ್ ಉಪಗ್ರಹ ಅತ್ಯಂತ ಗುಣಮಟ್ಟದ ಛಾಯಾಗ್ರಹಣ ನಡೆಸಬಲ್ಲದಾಗಿದ್ದು, ಇದನ್ನು ಭೂಮಿಯ ಬಳಕೆ, ಅರಣ್ಯ ನಾಶ, ಹಾಗೂ ಅಕ್ರಮ ಭೂಕಬಳಿಕೆಗಳನ್ನು ಪರೀಕ್ಷಿಸಲು ಬಳಸಲಾಗುತ್ತದೆ.
  3. ಸಾಗರ ವಿಚಕ್ಷಣೆ: ಈ ಉಪಗ್ರಹ ಚಿತ್ರಗಳನ್ನು ಹಡಗುಗಳ ಸಂಚಾರ, ಅಕ್ರಮ ಮೀನುಗಾರಿಕೆ, ಹಾಗೂ ಸಿಂಗಾಪುರದ ಗಡಿಗಳಿಗೆ ಸಾಗರದಿಂದ ಸಂಭಾವ್ಯ ಅಪಾಯಗಳನ್ನು ಪರಿಶೀಲಿಸಲು ಬಳಸಬಹುದು.
  4. ಭದ್ರತೆ ಮತ್ತು ರಕ್ಷಣೆ: ಈ ಉಪಗ್ರಹ ಚಿತ್ರಗಳನ್ನು ಸಿಂಗಾಪುರ ಸರ್ಕಾರದ ಭದ್ರತೆ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ.

ಇದನ್ನೂ ಓದಿ: 26 ಮರೀನ್ ರಫೇಲ್ ಮತ್ತು ಸ್ಕಾರ್ಪೀನ್ ಸಬ್‌ಮರೀನ್ ಖರೀದಿಗಿಂತಲೂ ಹೆಚ್ಚಾಗಿ ಬೆಳೆಯಬೇಕಿದೆ ಭಾರತ-ಫ್ರಾನ್ಸ್ ಸಂಬಂಧ

ವಾಣಿಜ್ಯಿಕ ಗ್ರಾಹಕರ ವಿವಿಧ ಉದ್ದೇಶಗಳಿಗಾಗಿ ಡಿಎಸ್-ಎಸ್ಎಆರ್ ಉಪಗ್ರಹ ಬಳಕೆ

  • ತೈಲ ಮತ್ತು ಅನಿಲ ಅನ್ವೇಷಣೆ: ಈ ಉಪಗ್ರಹ ಚಿತ್ರಗಳನ್ನು ಭೂಮಿಯಲ್ಲಿರುವ ಸಂಭಾವ್ಯ ಅನಿಲ ಮತ್ತು ತೈಲ ನಿಕ್ಷೇಪಗಳನ್ನು ಹುಡುಕಲು ಬಳಸಬಹುದು.
  • ಕೃಷಿ: ಈ ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು, ಬೆಳೆಗಳ ಪ್ರಮಾಣ ಅಳೆಯಲು, ಕೀಟಾಣುಗಳು ಮತ್ತು ಖಾಯಿಲೆಗಳನ್ನು ತಿಳಿಯಲು, ಹಾಗೂ ನೀರಾವರಿ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ.
  • ಮೂಲಭೂತ ವ್ಯವಸ್ಥೆಗಳ ನಿರ್ವಹಣೆ: ಈ ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು, ಸೇತುವೆಗಳು, ರಸ್ತೆಗಳು ಮತ್ತು ಇತರ ಮೂಲಭೂತ ವ್ಯವಸ್ಥೆಗಳನ್ನು ನಿರ್ವಹಿಸಲು ಬಳಸಲು ಸಾಧ್ಯವಿದೆ.
  • ಪರಿಸರ ವಿಚಕ್ಷಣೆ: ಈ ಉಪಗ್ರಹ ಚಿತ್ರಗಳನ್ನು ಅರಣ್ಯ ನಾಶ ಗುರುತಿಸಲು, ಹವಾಮಾನ ಬದಲಾವಣೆ ಗುರುತಿಸಲು ಮತ್ತು ಹೆಚ್ಚಿನ ಮಾಲಿನ್ಯಕರ ಪ್ರದೇಶಗಳನ್ನು ಗುರುತಿಸಲು ಬಳಸಬಹುದು.

ಯೋಜನೆಯಡಿ ಆರು ಸಹ ಪ್ರಯಾಣಿಕ ಉಪಗ್ರಹಗಳ ಉಡಾವಣೆ

  1. ವೆಲಾಕ್ಸ್-ಎಎಂ (VELOX-AM) ಒಂದು ತಂತ್ರಜ್ಞಾನ ಪ್ರದರ್ಶಕ ಮೈಕ್ರೋ ಉಪಗ್ರಹವಾಗಿದ್ದು, ಇದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಭಿವೃದ್ಧಿ ಪಡಿಸಿದೆ. ಇದನ್ನು ಭವಿಷ್ಯದ ಮೈಕ್ರೋ ಉಪಗ್ರಹಗಳ ನೂತನ ತಂತ್ರಜ್ಞಾನಗಳಾದ ಸೋಲಾರ್ ಪವರ್ ವ್ಯವಸ್ಥೆಗಳು, ಆಲ್ಟಿಟ್ಯೂಡ್ ಕಂಟ್ರೋಲ್ ವ್ಯವಸ್ಥೆಗಳು, ಹಾಗೂ ಮಾಹಿತಿ ಸಂವಹನ ವ್ಯವಸ್ಥೆಗಳನ್ನು ಪರೀಕ್ಷಿಸಲು ನಿರ್ಮಿಸಲಾಗಿದೆ.
  2. ಆರ್ಕೇಡ್ (ARCADE) ಎನ್ನುವುದು ಒಂದು ಪ್ರಾಯೋಗಿಕ ಉಪಗ್ರಹವಾಗಿದ್ದು, ಇದನ್ನು ನ್ಯಾಷನಲ್ ಯುನಿವರ್ಸಿಟಿ ಆಫ್ ಸಿಂಗಾಪುರ (ಎನ್‌ಯುಎಸ್) ಅಭಿವೃದ್ಧಿ ಪಡಿಸಿದೆ. ಇದು ಸಾಗರ ಮತ್ತು ವಾತಾವರಣದ ನಡುವಿನ ಸಂಬಂಧವನ್ನು ಅಧ್ಯಯನ ನಡೆಸುವ ಗುರಿ ಹೊಂದಿದೆ. ಈ ಉಪಗ್ರಹ ವಾತಾವರಣದ ತಾಪಮಾನ, ತೇವಾಂಶ, ಹಾಗೂ ಗಾಳಿಯನ್ನು ಅಳೆಯಲು ಅಗತ್ಯವಿರುವ ಹಲವು ವೈಜ್ಞಾನಿಕ ಉಪಕರಣಗಳನ್ನು ಒಯ್ಯಲಿದೆ. ಅದರೊಡನೆ ಸಮುದ್ರದ ತಾಪಮಾನ ಮತ್ತು ಲವಣಾಂಶವನ್ನೂ ಅಳೆಯಲಿದೆ.
  3. ಸ್ಕೂಬ್-2 ಒಂದು 3ಯು ನ್ಯಾನೋ ಉಪಗ್ರಹವಾಗಿದ್ದು, ಇದನ್ನು ಯುನಿವರ್ಸಿಟಿ ಆಫ್ ಟೊರಾಂಟೋ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಸ್ಟಡೀಸ್ (ಯುಟಿಐಎಎಸ್) ವಿನ್ಯಾಸಗೊಳಿಸಿದೆ. ಇದು ಸಣ್ಣ ಉಪಗ್ರಹಗಳ ನೂತನ ತಂತ್ರಜ್ಞಾನಗಳಾದ ಸೋಲಾರ್ ಪವರ್ ವ್ಯವಸ್ಥೆ, ಆಲ್ಟಿಟ್ಯೂಡ್ ಕಂಟ್ರೋಲ್ ವ್ಯವಸ್ಥೆ, ಹಾಗೂ ಮಾಹಿತಿ ವಿನಿಮಯ ವ್ಯವಸ್ಥೆಗಳನ್ನು ಪರೀಕ್ಷಿಸಲಿದೆ.
  4. ನಲ್ಲಾನ್ (NuLloN) ಒಂದು ಆಧುನಿಕ ನ್ಯಾನೋ ಉಪಗ್ರಹವಾಗಿದ್ದು, ಇದನ್ನು ನುಸ್ಪೇಸ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅನಿಯಮಿತ ಐಒಟಿ ಸಂಪರ್ಕವನ್ನು ಒದಗಿಸಲು ಅಭಿವೃದ್ಧಿ ಹೊಂದಿದೆ. ಈ ಉಪಗ್ರಹ ಹಲವಾರು ಪೇಲೋಡ್‌ಗಳನ್ನು ಹೊಂದಿದ್ದು, ಐಒಟಿ ಸಂಪರ್ಕದ ನೂತನ ತಂತ್ರಜ್ಞಾನಗಳಾದ ಹೈ ಥ್ರೂಔಟ್ ಡೇಟಾ ಕಮ್ಯುನಿಕೇಷನ್ ಸಿಸ್ಟಮ್ ಮತ್ತು ಲೋ ಪವರ್ ಸೆನ್ಸರ್ ನೆಟ್‌ವರ್ಕ್​​ಗಳನ್ನು ಪರೀಕ್ಷಿಸಲಿದೆ.
  5. ಗಲಾಸ್ಸಿಯಾ-2 (Galassia-2) ಒಂದು 3ಯು ನ್ಯಾನೋ ಉಪಗ್ರಹವಾಗಿದ್ದು, ಇದನ್ನು ಇಟಾಲಿಯನ್ ಸಂಸ್ಥೆಯಾದ ಡಿ-ಆರ್ಬಿಟ್ ಅಭಿವೃದ್ಧಿ ಪಡಿಸಿದೆ. ಇದು ಭೂ ವೀಕ್ಷಣಾ ಸೇವೆಗಳನ್ನು ಒದಗಿಸಲಿದೆ. ಈ ಉಪಗ್ರಹ ಭೂಮಿಯ ಮೇಲ್ಮೈಯನ್ನು ಚಿತ್ರಿಸಲು ಹಲವಾರು ಪೇಲೋಡ್‌ಗಳನ್ನು ಒಯ್ಯಲಿದೆ. ಅದರಲ್ಲಿ ಹೈ ರೆಸಲ್ಯೂಷನ್ ಕ್ಯಾಮರಾ ಮತ್ತು ಮಲ್ಟಿಸ್ಪೆಕ್ಟ್ರಲ್ ಕ್ಯಾಮರಾಗಳು ಸೇರಿವೆ.
  6. ಒಆರ್‌ಬಿ-12 ಸ್ಟ್ರೈಡರ್ ಉಪಗ್ರಹವನ್ನು ವಿವಿಧ ಸಂಸ್ಥೆಗಳ ನಡುವಿನ ಅಂತಾರಾಷ್ಟ್ರೀಯ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಲಾಗಿದೆ. ಇದು ಬಾಹ್ಯಾಕಾಶ ಅನ್ವೇಷಣೆಯಲ್ಲಿ ನೂತನ ತಂತ್ರಜ್ಞಾನಗಳನ್ನು ಪರೀಕ್ಷಿಸಲು ವಿನ್ಯಾಸಗೊಂಡಿದೆ. ಅದರಲ್ಲಿ ನೂತನ ಪ್ರೊಪಲ್ಷನ್ ವ್ಯವಸ್ಥೆ, ಸಂವಹನ ವ್ಯವಸ್ಥೆಗಳು ಸೇರಿವೆ.

ಪಿಎಸ್ಎಲ್‌ವಿ-ಸಿ56 ಯೋಜನೆಯ ಉಡಾವಣೆ ಭಾರತ ಮತ್ತು ಸಿಂಗಾಪುರದ ಬಾಹ್ಯಾಕಾಶ ಯೋಜನೆಗಳಿಗೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ಯೋಜನೆ ಪಿಎಸ್ಎಲ್‌ವಿ ರಾಕೆಟ್‌ನ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದು, ಎರಡೂ ದೇಶಗಳು ಅಭಿವೃದ್ಧಿ ಪಡಿಸಿರುವ ನೂತನ ತಂತ್ರಜ್ಞಾನಗಳನ್ನು ಪರೀಕ್ಷೆಗೊಳಪಡಿಸಲಿವೆ. ಭಾರತ ಮೊದಲ ಬಾರಿಗೆ ಸಿಂಗಾಪುರದ ಉಪಗ್ರಹಗಳನ್ನು ಉಡಾವಣೆಗೊಳಿಸಲಿದೆ.

ಪಿಎಸ್ಎಲ್‌ವಿ-ಸಿ56 ರಾಕೆಟ್ ಈ ಉಡಾವಣೆಯಲ್ಲಿ ಕೇವಲ ತನ್ನ ಕೋರ್ ಹಂತವನ್ನು ಮಾತ್ರವೇ ಬಳಸಲಿದೆ. ಅಂದರೆ, ರಾಕೆಟ್ ತನ್ನ ಸ್ಟ್ರಾಪ್ ಆನ್ ಬೂಸ್ಟರ್‌ಗಳನ್ನು ಬಳಸುವುದಿಲ್ಲ. ಈ ಮೂಲಕ ರಾಕೆಟ್ ಕಡಿಮೆ ಪ್ರಮಾಣದ ಪೇಲೋಡ್‌ಗಳನ್ನು ಒಯ್ಯಬಹುದಾಗಿದ್ದು, ಹೆಚ್ಚಿನ ಇಂಧನ ದಕ್ಷತೆ ಹೊಂದಿದೆ ಮತ್ತು ನಿರ್ವಹಿಸಲು ಸುಲಭವಾಗಿದೆ.

ಪಿಎಸ್ಎಲ್‌ವಿ ಸಿ56 ಯೋಜನೆಯನ್ನು ಅದರ ಕೋರ್ ಅಲೋನ್ ಸ್ಥಿತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಯಾಕೆಂದರೆ, ಈ ಬಾರಿ ಇದು ಡಿಎಸ್-ಎಸ್ಎಆರ್ ಸೇರಿದಂತೆ, ಸಾಕಷ್ಟು ಕಡಿಮೆ ಪ್ರಮಾಣದ ಪೇಲೋಡನ್ನು ಒಯ್ಯಲಿದೆ. ಡಿಎಸ್-ಎಸ್ಎಆರ್ ಉಪಗ್ರಹ ಕೇವಲ 360 ಕೆಜಿ ತೂಕ ಹೊಂದಿದ್ದು, ಇದು ಪಿಎಸ್ಎಲ್‌ವಿ ರಾಕೆಟ್‌ನ ಕೋರ್ ಹಂತದ ಸಾಮರ್ಥ್ಯದ ಒಳಗಿದೆ. ಕೇವಲ ಕೋರ್ ಹಂತವನ್ನು ಮಾತ್ರವೇ ಬಳಸುವುದರಿಂದ, ಇಸ್ರೋಗೆ ಇಂಧನ ಮತ್ತು ಉಡಾವಣಾ ವೆಚ್ಚದಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

 

 

 

 

 

 

 

ಮತ್ತಷ್ಟು ಅಭಿಮತ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ