26 ಮರೀನ್ ರಫೇಲ್ ಮತ್ತು ಸ್ಕಾರ್ಪೀನ್ ಸಬ್‌ಮರೀನ್ ಖರೀದಿಗಿಂತಲೂ ಹೆಚ್ಚಾಗಿ ಬೆಳೆಯಬೇಕಿದೆ ಭಾರತ-ಫ್ರಾನ್ಸ್ ಸಂಬಂಧ

ಭಾರತದ ರಕ್ಷಣಾ ಸಚಿವರು ಈಗಾಗಲೇ ಭಾರತೀಯ ನೌಕಾಪಡೆಗಾಗಿ ಮೂರು ಸ್ಕಾರ್ಪೀನ್ ಸಬ್‌ಮರೀನ್‌ಗಳು ಮತ್ತು 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.

26 ಮರೀನ್ ರಫೇಲ್ ಮತ್ತು ಸ್ಕಾರ್ಪೀನ್ ಸಬ್‌ಮರೀನ್ ಖರೀದಿಗಿಂತಲೂ ಹೆಚ್ಚಾಗಿ ಬೆಳೆಯಬೇಕಿದೆ ಭಾರತ-ಫ್ರಾನ್ಸ್ ಸಂಬಂಧ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on:Jul 12, 2023 | 10:28 PM

ಫ್ರಾನ್ಸ್ (France) ಮತ್ತು ಭಾರತ ಎರಡು ರಾಷ್ಟ್ರಗಳಿಗೂ ತಮ್ಮ ವ್ಯವಹಾರ, ಸಂಬಂಧ 26 ಮರೀನ್ ರಫೇಲ್ ಯುದ್ಧ ವಿಮಾನಗಳು ಮತ್ತು ಸ್ಕಾರ್ಪೀನ್ ಸಬ್‌ಮರೀನ್ ಖರೀದಿಗಿಂತ ಹೆಚ್ಚಾಗಬೇಕಿದೆ. ಭಾರತದ ರಕ್ಷಣಾ ಸಚಿವರು ಈಗಾಗಲೇ ಭಾರತೀಯ ನೌಕಾಪಡೆಗಾಗಿ ಮೂರು ಸ್ಕಾರ್ಪೀನ್ ಸಬ್‌ಮರೀನ್‌ಗಳು ಮತ್ತು 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.

ಆಯುಧಗಳ ಖರೀದಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಜವಾಬ್ದಾರವಾಗಿರುವ ರಕ್ಷಣಾ ಉಪಕರಣಗಳ ಖರೀದಿ ಸಮಿತಿ (ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ – ಡಿಎಸಿ) ಹಾಗೂ ಕೇಂದ್ರ ಸಚಿವ ಸಂಪುಟ ಈ ಒಪ್ಪಂದದ ಕುರಿತು ಇನ್ನೂ ಖಚಿತಪಡಿಸಿಲ್ಲ ಎನ್ನಲಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಫ್ರಾನ್ಸ್ ಪ್ರವಾಸದ ವೇಳೆಗೆ ಈ ಕುರಿತ ಘೋಷಣೆ ನೆರವೇರುವ ನಿರೀಕ್ಷೆಗಳಿವೆ. ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸಿನ ಬಾಸ್ಟಿಲ್ ಡೇ ಸಮಾರಂಭದಲ್ಲಿ ಭಾಗವಹಿಸಲು ಗುರುವಾರ ಫ್ರಾನ್ಸ್‌ಗೆ ಭೇಟಿ ನೀಡಲಿದ್ದಾರೆ. ಶುಕ್ರವಾರ ಅವರು ಫ್ರೆಂಚ್ ಅಧ್ಯಕ್ಷರಾದ ಇಮ್ಮಾನುವಲ್ ಮಾಕ್ರೋನ್ ಅವರೊಂದಿಗೆ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಂದು ವೇಳೆ, ಎಲ್ಲವೂ ಅಂದುಕೊಂಡಂತೆಯೇ ನೆರವೇರಿದರೆ, 2016ರಲ್ಲಿ ಭಾರತ ನಡೆಸಿದ 36 ರಫೇಲ್ ಯುದ್ಧ ವಿಮಾನಗಳ ‘ಆಫ್ ದ ಶೆಲ್ಫ್’ ಖರೀದಿಗೆ ಇದು ಹೊಸ ಸೇರ್ಪಡೆಯಾಗಲಿದೆ.

ಈ ವರ್ಷದ ಆರಂಭದಲ್ಲಿ, ಡಸಾಲ್ಟ್ ಏವಿಯೇಷನ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಎರಿಕ್ ಟ್ರಾಪಿಯರ್ ಅವರು ಭಾರತ ಸರ್ಕಾರ ತಮ್ಮ ಸಂಸ್ಥೆಯ ವಿಮಾನವನ್ನು ಆರಿಸಿಕೊಳ್ಳುವುದು ಒಂದು ತಾರ್ಕಿಕ ಆಯ್ಕೆಯೇ ಆಗಿದೆ ಎಂದಿದ್ದಾರೆ. “ಭಾರತ ರಫೇಲ್ ವಿಮಾನಗಳನ್ನು ಆಯ್ಕೆ ಮಾಡಿಕೊಳ್ಳುವುದು ತಾರ್ಕಿಕವಾಗಿ ಸೂಕ್ತವಾಗಿದ್ದು, ಆಸಕ್ತಿಕರ ಬೆಳವಣಿಗೆಯಾಗಿದೆ. ಯಾಕೆಂದರೆ, ಭಾರತೀಯ ವಾಯುಪಡೆಯ ಬಳಿ ಈಗಾಗಲೇ ರಫೇಲ್ ಯುದ್ಧ ವಿಮಾನಗಳಿವೆ. ನೌಕಾಪಡೆಯ ಬಳಿಯೂ ಇದೇ ವಿಮಾನ ಇರುವುದು ಹೆಚ್ಚು ಸೂಕ್ತವಾಗಿದೆ” ಎಂದು ಅವರು ವಿವರಿಸಿದ್ದಾರೆ.

ಡಸಾಲ್ಟ್ ಏವಿಯೇಷನ್‌ ಬಳಿ ಇರುವ ರಫೇಲ್ ಮಾರಾಟದ ಮಾಹಿತಿಯ ಪ್ರಕಾರ, 2022ರ ಕೊನೆಯ ವೇಳೆಗೆ ಸಂಸ್ಥೆ 164 ವಿಮಾನಗಳನ್ನು ಮಾರಾಟ ಮಾಡಿದ್ದು, ಅವುಗಳಲ್ಲಿ 39 ವಿಮಾನಗಳು ಫ್ರಾನ್ಸ್ ಬಳಕೆಗಾದರೆ, ಉಳಿದ 125 ವಿಮಾನಗಳನ್ನು ರಫ್ತು ಮಾಡಲಾಗುತ್ತದೆ. ಈ ವರ್ಷ, ಕಂಪೆನಿ 15 ವಿಮಾನಗಳನ್ನು ಉತ್ಪಾದಿಸುವ ಗುರಿ ಹೊಂದಿದ್ದು, ಅದರಲ್ಲಿ 14 ವಿಮಾನಗಳು ಫ್ರಾನ್ಸ್ ಬಳಕೆಗೆ ಸೇರಿದರೆ, ಇನ್ನುಳಿದ ಒಂದು ವಿಮಾನ ಗ್ರೀಸ್‌ಗೆ ರಫ್ತಾಗಲಿದೆ.

ಇದನ್ನೂ ಓದಿ: Chandrayaan-3 Mission: ಚಂದ್ರಯಾನ ಯೋಜನೆಗಳು: ಭಾರತದ ಚಂದ್ರ ಅನ್ವೇಷಣೆ ಮತ್ತು ಸಾಧನೆಗಳು

ಡಸಾಲ್ಟ್ ಏವಿಯೇಷನ್‌ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದು, ಇನ್ನೂ ಬರಲಿರುವ ಹೊಸ ಖರೀದಿ ಆದೇಶಗಳು ಕಂಪನಿಗೆ ಮುಂದಿನ ದಿನಗಳಲ್ಲಿ ಉತ್ಪಾದನಾ ದರವನ್ನು ಹೆಚ್ಚಿಸಲು ನೆರವಾಗಲಿವೆ. ಇತರ ವಿಮಾನ ಉತ್ಪಾದಕ ಸಂಸ್ಥೆಗಳ ರೀತಿಯಲ್ಲೇ, ಡಸಾಲ್ಟ್ ಏವಿಯೇಷನ್‌ ಸಹ ಉತ್ಪಾದನಾ ಸರಪಳಿಯಲ್ಲಿ ತೊಂದರೆಗಳನ್ನು ಎದುರಿಸುತ್ತಿದೆ.

“ಇನ್ನೂ ಮುಂದುವರಿದಿರುವ ಕೋವಿಡ್ ಸಾಂಕ್ರಾಮಿಕದ ಪರಿಣಾಮ ಮತ್ತು ಉಕ್ರೇನ್ ಯುದ್ಧದ ಕಾರಣದಿಂದ ಪೂರೈಕೆಯಲ್ಲಿನ ವಿಳಂಬದಿಂದ ಸಾಗಾಣಿಕೆ ಮತ್ತು ಪೂರೈಕೆಯಲ್ಲಿ ತೊಡಕುಗಳು ಎದುರಾಗಿವೆ. ಇದರಿಂದಾಗಿ ನಮ್ಮ ಪೂರೈಕೆ ಸರಪಳಿಯೂ ತೊಂದರೆ ಎದುರಿಸುತ್ತಿದೆ” ಎಂದು ಎರಿಕ್ ಟ್ರಾಪಿಯರ್ ಮಾರ್ಚ್ ತಿಂಗಳಲ್ಲಿ ಅಭಿಪ್ರಾಯ ಪಟ್ಟಿದ್ದರು. ಡಸಾಲ್ಟ್ ಏವಿಯೇಷನ್‌ ತನ್ನ ಉತ್ಪಾದನಾ ದರವನ್ನು ಪ್ರತಿ ತಿಂಗಳಿಗೆ ಮೂರು ವಿಮಾನಗಳಿಗೆ ತಲುಪಿಸುವ ಉದ್ದೇಶ ಹೊಂದಿದೆ.

ಖರೀದಿ ಆದೇಶಗಳಿಗೆ ಸಂಬಂಧಿಸಿದಂತೆ, ರಫೇಲ್‌ಗೆ ಇನ್ನಷ್ಟು ಖರೀದಿ ಆದೇಶದ ನಿರೀಕ್ಷೆಗಳಿವೆ. ಕೊಲಂಬಿಯಾ ತನ್ನ ಬಳಕೆಗೆ 16 ಯುದ್ಧ ವಿಮಾನಗಳ ಖರೀದಿಗೆ ನಿರ್ಣಯ ಕೈಗೊಂಡಿದೆ. ಆದರೆ 2022ರ ಕೊನೆಯ ವೇಳೆಗೂ ಎರಡು ಪಕ್ಷಗಳಿಗೂ ಒಂದು ಅಂತಿಮ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ಅದು ಈ ವರ್ಷ ನೆರವೇರಲಿದೆಯೇ ಎಂದು ಕಾದು ನೋಡಬೇಕಿದೆ.

ಇನ್ನೊಂದೆಡೆ, ಇಂಡೋನೇಷ್ಯಾ ಡಸಾಲ್ಟ್ ಏವಿಯೇಷನ್‌ ಸಂಸ್ಥೆಗೆ 42 ವಿಮಾನಗಳ ಖರೀದಿಗೆ ಆದೇಶಿಸಿದ್ದು, ಅದರಲ್ಲಿ ಕೇವಲ ಆರು ವಿಮಾನಗಳ ಪೂರೈಕೆಯಾಗಿದೆ. ಇಂಡೋನೇಷ್ಯಾ ಇನ್ನುಳಿದ ವಿಮಾನಗಳ ಖರೀದಿ ಪ್ರಕ್ರಿಯೆಯನ್ನು ಆರಂಭಿಸುವ ಸಾಧ್ಯತೆಗಳಿವೆ. ಇರಾಕ್ ಮತ್ತು ಸರ್ಬಿಯಾ ದೇಶಗಳೂ ಈಗಾಗಲೇ ವಿಮಾನ ಖರೀದಿಗೆ ಮುಂದೆ ಬಂದಿವೆ.

ಟಿಇಡಿಬಿಎಫ್ ಮತ್ತು ನ್ಯೂಕ್ಲಿಯರ್ ಅಟ್ಯಾಕ್ ಸಬ್‌ಮರೀನ್‌ಗೆ ಬೆಂಬಲ

ನವದೆಹಲಿ ಮತ್ತು ಪ್ಯಾರಿಸ್ ನಡುವಿನ ಮಿಲಿಟರಿ ಮತ್ತು ಔದ್ಯಮಿಕ ಸಹಕಾರ ಈ ಬಹುನಿರೀಕ್ಷಿತ, ಜನರಿಗೆ ಚಿರಪರಿಚಿತವಾಗಿರುವ ಯೋಜನೆಗಳಿಗೂ ಹೆಚ್ಚಿನದಾಗಿದೆ.

ಪ್ರಸ್ತುತ ಎಲ್ಲ ಬೆಳವಣಿಗೆಗಳು ನೇವಲ್ ಗ್ರೂಪ್ ಮತ್ತು ಫ್ರೆಂಚ್ ನೌಕಾ ಉದ್ಯಮಗಳು ಭಾರತದ ಪ್ರಥಮ ದೇಶಿಯ ನಿರ್ಮಾಣದ ನ್ಯೂಕ್ಲಿಯರ್ ಅಟ್ಯಾಕ್ ಸಬ್‌ಮರೀನ್ (ಎಸ್ಎಸ್ಎನ್) ಯೋಜನೆಗೆ ಸಕ್ರಿಯ ಬೆಂಬಲ ನೀಡಲಿವೆ ಎಂಬುದನ್ನು ಸೂಚಿಸುತ್ತಿವೆ. ಮೂರು ಹೆಚ್ಚುವರಿ ಸ್ಕಾರ್ಪಿನ್ ಸಬ್‌ಮರೀನ್ ಖರೀದಿಯ ಜೊತೆಗೆ, ಸ್ಟೈಲ್ತ್ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ ನೌಕೆಯ ನಿರ್ಮಾಣ ತಂತ್ರಜ್ಞಾನ ವರ್ಗಾವಣೆಯೂ ಇದಕ್ಕೆ ಪೂರಕವಾಗಿದೆ.

ಭವಿಷ್ಯದಲ್ಲಿ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ), ಅವಳಿ ಇಂಜಿನ್ ಕ್ಯಾರಿಯರ್ ಆಧಾರಿತ ಯುದ್ಧ ವಿಮಾನ ನಿರ್ಮಾಣ ಯೋಜನೆಯಾದ, ಟ್ವಿನ್ ಇಂಜಿನ್ ಡೆಕ್ ಬೇಸ್ಡ್ ಫೈಟರ್ (ಟಿಇಡಿಬಿಎಫ್) ಯೋಜನೆಯಲ್ಲಿ ಇಂಜಿನ್ ಉತ್ಪಾದಕ ಸಂಸ್ಥೆಯಾದ ಸಫ್ರಾನ್ ಭಾಗಿಯಾಗುವ ಕುರಿತೂ ಮಾತುಕತೆಗಳು ನಡೆಯುವ ನಿರೀಕ್ಷೆಗಳಿವೆ. ಈ ಸಹಯೋಗ, 12 ಟನ್ ಥ್ರಸ್ಟ್ ಹೊಂದಿರುವ, 26 ಟನ್ ವಿಮಾನದಲ್ಲಿ ಬಳಸಲ್ಪಡುವ ಒಂದು ನೂತನ ಟರ್ಬೋಜೆಟ್ ಇಂಜಿನ್ ನಿರ್ಮಿಸುವ ಉದ್ದೇಶ ಹೊಂದಿದೆ.

ಈ ಯೋಜನೆಗಳು ಭಾರತ ಮತ್ತು ಫ್ರಾನ್ಸ್ ನಡುವಿನ ರಕ್ಷಣಾ ಸಹಯೋಗವನ್ನು ವೃದ್ಧಿಸಲಿದ್ದು, ಇದು ಪ್ರಸ್ತುತ ಖರೀದಿಗಳನ್ನು ಮೀರಿ, ರಕ್ಷಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ದೀರ್ಘಕಾಲದ ಕಾರ್ಯತಂತ್ರದ ಸಹಕಾರವನ್ನು ಹೊಂದಲು ನೆರವಾಗಲಿದೆ.

ಇದನ್ನೂ ಓದಿ: India-China: ಮಿಲಿಟರಿ ವಲಯಕ್ಕೆ ತಲುಪಿದ ಬಾಹ್ಯಾಕಾಶ ಸ್ಪರ್ಧೆ: ಮುಖಾಮುಖಿಯಾದ ಭಾರತ – ಚೀನಾ

ಟಿಇಡಿಬಿಎಫ್ 2035ರ ವೇಳೆಗೆ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದ್ದು, ಪ್ರಸ್ತುತ ಐಎನ್ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆಯಲ್ಲಿ ಬಳಕೆಯಾಗುತ್ತಿರುವ ಮಿಗ್-29 ವಿಮಾನಗಳ ಬದಲಿಗೆ ಸೇರ್ಪಡೆಗೊಳ್ಳಲಿವೆ. ಐಎನ್ಎಸ್ ವಿಕ್ರಮಾದಿತ್ಯ ರಷ್ಯಾದಿಂದ ಖರೀದಿಸಿರುವ ವಿಮಾನವಾಹಕ ನೌಕೆಯಾಗಿದ್ದು, ಭಾರತೀಯ ಶಿಪ್‌ಯಾರ್ಡ್‌ಗಳಲ್ಲಿ ಮರುನಿರ್ಮಾಣಗೊಂಡು, 2014ರಲ್ಲಿ ಸೇವೆಗೆ ಸೇರ್ಪಡೆಗೊಂಡಿತು. ಟಿಇಡಿಬಿಎಫ್ ಕೆಲವು ತಿಂಗಳುಗಳ ಹಿಂದೆ ಘೋಷಿಸಲ್ಪಟ್ಟ, ಭಾರತದ ಮೂರನೇ ವಿಮಾನವಾಹಕ ನೌಕೆಯಲ್ಲಿ ಬಳಕೆಗೆ ಲಭ್ಯವಾಗುವ ಸಾಧ್ಯತೆಗಳಿವೆ.

ಹಾಗೆಂದು, ಸಫ್ರಾನ್ ಒಂದೇ ಟಿಇಡಿಬಿಎಫ್ ಯೋಜನೆಯಲ್ಲಿ ಪಾಲ್ಗೊಳ್ಳುವ ಫ್ರೆಂಚ್ ಸಂಸ್ಥೆ ಎನ್ನಲು ಸಾಧ್ಯವಿಲ್ಲ. ಭಾರತದ ಎಸ್ಎಸ್ಎನ್ ಯೋಜನೆಯಲ್ಲಿ ನೇವಲ್ ಗ್ರೂಪ್ ಭಾಗವಹಿಸುತ್ತಿರುವ ರೀತಿಯಲ್ಲೇ, ಡಸಾಲ್ಟ್ ಏವಿಯೇಷನ್‌ ಟಿಇಡಿಬಿಎಫ್ ಏರ್‌ಕ್ರಾಫ್ಟ್ ನಿರ್ಮಾಣದಲ್ಲಿ ಭಾರತೀಯ ಏರೋಸ್ಪೇಸ್ ಉದ್ಯಮದೊಂದಿಗೆ ಕೈಜೋಡಿಸುವ ಸಾಧ್ಯತೆಗಳಿವೆ.

ಇದು ಭಾರತ ಮತ್ತು ಫ್ರಾನ್ಸ್‌ನ ರಕ್ಷಣಾ ಸಂಸ್ಥೆಗಳ ನಡುವಿನ ಸಹಯೋಗಕ್ಕೆ ಹೆಚ್ಚಿನ ಒತ್ತು ನೀಡಿ, ಭಾರತದ ದೇಶೀಯ ರಕ್ಷಣಾ ಅಭಿವೃದ್ಧಿ ಸಾಮರ್ಥ್ಯ ವೃದ್ಧಿಸಲು ಪರಸ್ಪರ ಸಹಕಾರ ಹೊಂದಲು ಅವಕಾಶ ಕಲ್ಪಿಸುತ್ತದೆ. ಈ ಸಹಯೋಗಗಳು ಆಧುನಿಕ ರಕ್ಷಣಾ ಉಪಕರಣಗಳ ನಿರ್ಮಾಣದಲ್ಲಿ ಎರಡೂ ರಾಷ್ಟ್ರಗಳ ತಾಂತ್ರಿಕ ಸಾಮರ್ಥ್ಯ ಮತ್ತು ಅನುಭವವನ್ನು ಬಳಸಿಕೊಳ್ಳಬಹುದು.

ಈ ಎಲ್ಲ ಸಾಧ್ಯತೆಗಳ ಸಂಭವನೀಯತೆಯನ್ನು ಜಾಗರೂಕತೆಯಿಂದ ಗಮನಿಸಬೇಕಾಗುತ್ತದೆ. ಯಾಕೆಂದರೆ ಎಲ್ಲ ಊಹಾಪೋಹಗಳು, ಸುದ್ದಿಗಳು ನಿಜವಾಗಬೇಕೆಂದೇನೂ ಇಲ್ಲ. ಆದರೆ, ಭಾರತೀಯ ವಿಮಾನವಾಹಕ ನೌಕೆಗಳಲ್ಲಿ ಬಳಸಲು 26 ರಫೇಲ್ ಎಂ ಯುದ್ಧ ವಿಮಾನಗಳನ್ನು ಖರೀದಿಸುವುದು ಭಾರತಕ್ಕೆ ಮತ್ತು ಫ್ರೆಂಚ್ ವಿಮಾನ ಉತ್ಪಾದಕ ಸಂಸ್ಥೆಗೆ ಸೂಕ್ತ ಆಯ್ಕೆಯಾಗಿದೆ.

ಇನ್ನು ಐಎನ್ಎಸ್ ವಿಕ್ರಮಾದಿತ್ಯ ವಿಮಾನವಾಹಕ ನೌಕೆಯಲ್ಲಿ ಬಳಸುತ್ತಿರುವ ಮಿಗ್-21 ವಿಮಾನಗಳನ್ನು 2035ರ ವೇಳೆಗೆ ಬದಲಿಸುವುದು ಭಾರತೀಯ ನೌಕಾಪಡೆಗೆ ಅತ್ಯವಶ್ಯಕವಾಗಿದೆ. ಆದ್ದರಿಂದ, ಟಿಇಡಿಬಿಎಫ್ ಯೋಜನೆಯನ್ನು ಯಾವುದೇ ತಾಂತ್ರಿಕ ಅಥವಾ ಕಾರ್ಯಾತ್ಮಕ ಅಡಚಣೆಗಳಿಲ್ಲದೆ, ಸರಿಯಾದ ಸಮಯಕ್ಕೆ ಅಭಿವೃದ್ಧಿ ಪಡಿಸುವುದು ಅನಿವಾರ್ಯವಾಗಿದೆ.

ಇಂತಹ ಪರಿಸ್ಥಿತಿಗಳಲ್ಲಿ, ಭಾರತೀಯ ಏರೋಸ್ಪೇಸ್ ಉದ್ಯಮ ತೇಜಸ್ ಯೋಜನೆಯನ್ನು ಅಭಿವೃದ್ಧಿ ಪಡಿಸುವ ಸಂದರ್ಭದಲ್ಲಿ ಕಷ್ಟಪಟ್ಟದ್ದನ್ನು ಗಮನಿಸುವಾಗ, ಈ ಉದ್ಯಮದಲ್ಲಿ ಅಪಾರ ಅನುಭವ ಹೊಂದಿರುವ ಫ್ರೆಂಚ್ ವಿಮಾನ ನಿರ್ಮಾಣ ಸಂಸ್ಥೆ ಮತ್ತು ಇಂಜಿನ್ ನಿರ್ಮಾಣ ಸಂಸ್ಥೆಗಳು ಭಾಗಿಯಾಗುವುದು ಹೆಚ್ಚಿನ ಮೌಲ್ಯವನ್ನು ಒದಗಿಸುತ್ತದೆ. ಅದರೊಡನೆ, ಈ ಯೋಜನೆ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಮತ್ತು ತನ್ನ ಉದ್ದೇಶಿತ ಸಾಮರ್ಥ್ಯವನ್ನು ಪ್ರದರ್ಶಿಸಲು ಇದು ಸೂಕ್ತ ಕ್ರಮವೂ ಹೌದು.

ಈ ಸಂಸ್ಥೆಗಳ ಪಾಲ್ಗೊಳ್ಳುವಿಕೆಯ ಕಾರಣದಿಂದ, ಫ್ರೆಂಚ್ ಉದ್ಯಮ ತನ್ನ ತಂತ್ರಜ್ಞಾನ ವರ್ಗಾವಣೆ ನಡೆಸಿ, ಎರಡು ರಾಷ್ಟ್ರಗಳ ನಡುವೆ ಔದ್ಯಮಿಕ ಮತ್ತು ತಾಂತ್ರಿಕ ಬಂಧ ರೂಪಿಸಲು ಸಾಧ್ಯವಾಗುತ್ತದೆ. ಅದರೊಡನೆ ಭಾರತದಲ್ಲಿ ಫ್ರೆಂಚ್ ಉದ್ಯಮದ ಪಾಲ್ಗೊಳ್ಳುವಿಕೆ ಹೆಚ್ಚಾಗಲಿದೆ.

ಡಸಾಲ್ಟ್ ಏವಿಯೇಷನ್‌ ಹಾಗೂ ಸಫ್ರಾನ್ ಸಂಸ್ಥೆಗಳು ಭಾರತೀಯ ಉದ್ಯಮದೊಂದಿಗೆ ತಮ್ಮ ಸಹಯೋಗ ವಿಸ್ತರಿಸಲು ಉತ್ತಮ ಅವಕಾಶಗಳನ್ನು ಹೊಂದಿವೆ. ಅವುಗಳು ಅವಶ್ಯಕವಾಗಿರುವ ಎಂಎಂಆರ್‌ಸಿಎ 2 ನಂತಹ ತಕ್ಷಣದ ಅವಶ್ಯಕತೆಗಳನ್ನು ಪೂರೈಸಿ, ಸು-30ಎಂಕೆಐ ವಿಮಾನಗಳ ಬದಲಿಗೆ ಕಾರ್ಯಾಚರಿಸಲಿರುವ ಎಎಂಸಿಎ ಯುದ್ಧ ವಿಮಾನದಂತಹ ಭವಿಷ್ಯದ ಯೋಜನೆಗಳಲ್ಲಿ ಭಾಗಿಯಾಗಬಹುದು.

ಎರಡೂ ಸಂಸ್ಥೆಗಳು 2010ರ ದಶಕದ ಆರಂಭದಲ್ಲಿ ಎಂಆರ್‌ಸಿಎ ಯೋಜನೆಯ ಮೂಲಕ ಭಾರತದ ಉದ್ಯಮದಲ್ಲಿ ಭಾಗಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದವು. ಆದರೆ ಈ ಯೋಜನೆಯ ಬದಲಿಗೆ ಭಾರತ ತನ್ನ ವಾಯುಪಡೆಗೆ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ನಿರ್ಧರಿಸಿತು.

ಎಸ್ಎಸ್ಎನ್ ಹಾಗೂ ಟಿಇಡಿಬಿಎಫ್ ಕ್ಯಾರಿಯರ್ ಬೇಸ್ಡ್ ಫೈಟರ್ ಯೋಜನೆಗಳ ಭಾಗವಾಗುವ ಮೂಲಕ, ಫ್ರೆಂಚ್ ಉದ್ಯಮ ಭಾರತದ ಎರಡು ಪ್ರಮುಖ ಮತ್ತು ಅತ್ಯಂತ ಪ್ರಸ್ತುತ ರಕ್ಷಣಾ ಯೋಜನೆಗಳ ಭಾಗವಾಗುವಂತಾಗುತ್ತದೆ. ಇದು ಭಾರತ ಮತ್ತು ಫ್ರಾನ್ಸ್‌ ದೇಶಗಳನ್ನು ಪ್ರಮುಖ ಸಹಯೋಗಿ ರಾಷ್ಟ್ರಗಳನ್ನಾಗಿಸಲಿದೆ.

ಆದರೆ ಈ ಪರಸ್ಪರ ಸಹಕಾರದ ರೀತಿ ಮತ್ತು ವ್ಯಾಪ್ತಿಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೆ ಪ್ರಸ್ತುತ ಬೆಳವಣಿಗೆಗಳ ಪ್ರಕಾರ, ಈ ಸಹಯೋಗ ಎರಡೂ ರಾಷ್ಟ್ರಗಳಿಗೆ, ಅವುಗಳ ರಕ್ಷಣಾ ಉದ್ಯಮಗಳಿಗೆ ಮತ್ತು ಸೇನಾಪಡೆಗಳಿಗೆ ಅನುಕೂಲಕರವಾದ ಹೊಸ ಮಾರ್ಗವನ್ನು ಆರಿಸಿಕೊಳ್ಳುವ ಸಾಧ್ಯತೆಗಳನ್ನು ತೋರುತ್ತಿವೆ.

ಭಾರತ ಮತ್ತು ಫ್ರಾನ್ಸ್ ರಕ್ಷಣಾ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ಸಹಯೋಗ ಒಂದು ಮಹತ್ವದ ಹೆಜ್ಜೆಯಾಗಿದೆ. ಇದು ಹೆಚ್ಚಿನ ರಕ್ಷಣಾ ಸಹಕಾರ, ಜಂಟಿ ಅಭಿವೃದ್ಧಿ, ಹಾಗೂ ರಕ್ಷಣಾ ವಿಚಾರಗಳಲ್ಲಿ ದೀರ್ಘಕಾಲದ ಕಾರ್ಯತಂತ್ರದ ಸಂಬಂಧವನ್ನು ಸಾಧಿಸಲು ನೆರವಾಗಲಿದೆ.

Girish Linganna

ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಈ ವಿಭಾಗದಲ್ಲಿ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:26 pm, Wed, 12 July 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ