Chandrayaan-3 Mission: ಚಂದ್ರಯಾನ ಯೋಜನೆಗಳು: ಭಾರತದ ಚಂದ್ರ ಅನ್ವೇಷಣೆ ಮತ್ತು ಸಾಧನೆಗಳು
ಚಂದ್ರಯಾನ 3ರ ಉಡಾವಣೆಗೆ ಮುಂಚಿತವಾಗಿ ಈ ಮೊದಲಿನ ಚಂದ್ರಯಾನ ಯೋಜನೆಗಳ ಕುರಿತು ಒಂದಷ್ಟು ಪ್ರಶ್ನೆಗಳೂ ಮೂಡಿವೆ. ಜನರು ಚಂದ್ರಯಾನ 3 ಮತ್ತು ವೈಫಲ್ಯ ಕಂಡ ಚಂದ್ರಯಾನ 2ರ ನಡುವಿನ ವ್ಯತ್ಯಾಸಗಳನ್ನು ತಿಳಿಯಲು ಕುತೂಹಲ ಹೊಂದಿದ್ದಾರೆ. ಅದರೊಡನೆ ಚಂದ್ರಯಾನ 3 ಹೇಗೆ ಕಾರ್ಯಾಚರಿಸಲಿದೆ ಎನ್ನುವುದೂ ಒಂದು ಪ್ರಶ್ನೆಯಾಗಿದೆ.
ಭಾರತದ ಮೂರನೇ ಚಂದ್ರ ಅನ್ವೇಷಣಾ ಯೋಜನೆ ಚಂದ್ರಯಾನ -3 (Chandrayaan-3) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14ರ ಮಧ್ಯಾಹ್ನ 2:35ಕ್ಕೆ ಉಡಾವಣೆಗೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆಯೇ ನೆರವೇರಿದರೆ ಚಂದ್ರಯಾನ 3 ಆಗಸ್ಟ್ 23 ಅಥವಾ 24ರಂದು ಚಂದ್ರನ ಮೇಲೆ ಇಳಿಯಲಿದೆ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದನ್ನು ಈಗಾಗಲೇ ಉಡಾವಣಾ ವಾಹನವಾದ ಮಾರ್ಕ್ 3ಗೆ (ಎಲ್ಎಂವಿ3) ಜೋಡಿಸಿದೆ.
ಚಂದ್ರಯಾನ 3ರ ಉಡಾವಣೆಗೆ ಮುಂಚಿತವಾಗಿ ಈ ಮೊದಲಿನ ಚಂದ್ರಯಾನ ಯೋಜನೆಗಳ ಕುರಿತು ಒಂದಷ್ಟು ಪ್ರಶ್ನೆಗಳೂ ಮೂಡಿವೆ. ಜನರು ಚಂದ್ರಯಾನ 3 ಮತ್ತು ವೈಫಲ್ಯ ಕಂಡ ಚಂದ್ರಯಾನ 2ರ ನಡುವಿನ ವ್ಯತ್ಯಾಸಗಳನ್ನು ತಿಳಿಯಲು ಕುತೂಹಲ ಹೊಂದಿದ್ದಾರೆ. ಅದರೊಡನೆ ಚಂದ್ರಯಾನ 3 ಹೇಗೆ ಕಾರ್ಯಾಚರಿಸಲಿದೆ ಎನ್ನುವುದೂ ಒಂದು ಪ್ರಶ್ನೆಯಾಗಿದೆ. ಅವೆಲ್ಲವುಗಳ ವಿವರಣೆಯನ್ನು ನಾವು ಇಲ್ಲಿ ಗಮನಿಸೋಣ.
ಚಂದ್ರಯಾನ 2 ಹೊಂದಿದ್ದ ಹಾಗೆ, ಚಂದ್ರಯಾನ 3 ಯಾವುದೇ ಆರ್ಬಿಟರ್ ಹೊಂದಿಲ್ಲ. ಅದರ ಬದಲು, ಚಂದ್ರಯಾನ 3 ಒಂದು ಲ್ಯಾಂಡರ್ ಮತ್ತು ಒಂದು ರೋವರ್ ಅನ್ನು ಹೊಂದಿದೆ. ಇವೆರಡು ಚಂದ್ರನ ಮೇಲ್ಮೈಯಲ್ಲಿ ಒಂದು ಲೂನಾರ್ ದಿನ (ಚಂದ್ರನ ದಿನ) ಅಂದರೆ, ಭೂಮಿಯ ಲೆಕ್ಕಾಚಾರದಲ್ಲಿ 14 ದಿನಗಳು ಕಾರ್ಯಾಚರಿಸಲಿವೆ. ಇದು ಚಂದ್ರಯಾನ 3 ಯೋಜನೆಯ ಒಟ್ಟಾರೆ ಕಾರ್ಯಾವಧಿಯಾಗಿದೆ. ಒಂದು ಬಾರಿ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಬಳಿಕ, ರೋವರ್ ಅದರಿಂದ ಬಿಡುಗಡೆಯಾಗಿ ಚಂದ್ರನ ಮೇಲ್ಮೈಯನ್ನು ಅನ್ವೇಷಿಸಿ, ಪ್ರಯೋಗಗಳನ್ನು ನಡೆಸಿ, ಮಾಹಿತಿ ಕಲೆಹಾಕಲಿದೆ.
ಇದನ್ನು ಓದಿ: Chandrayaan 3 Budget: ಚಂದ್ರಯಾನ-3 ಮಿಷನ್ ಬಜೆಟ್ ಎಷ್ಟು? ಚಂದ್ರಯಾನ-2ಕ್ಕೆ ಎಷ್ಟು ಖರ್ಚಾಗಿತ್ತು?
ಚಂದ್ರಯಾನ 2 ಜಗತ್ತಿನಲ್ಲಿ ಮೊದಲ ಬಾರಿಗೆ ಯಾವುದಾದರೂ ದೇಶ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ನಡೆಸಲು ಪ್ರಯತ್ನಿಸಿದ ಯೋಜನೆಯಾಗಿತ್ತು. ಆದರೆ ದುರದೃಷ್ಟವಶಾತ್ ಜುಲೈ 22, 2019ರಂದು ಉಡಾವಣೆಯಾದ ವಿಕ್ರಮ್ ಎಂಬ ಲೂನಾರ್ ಲ್ಯಾಂಡರ್ ಚಂದ್ರನ ಮೇಲೆ ಸೆಪ್ಟೆಂಬರ್ 7ರಂದು ಪತನಗೊಂಡಿತು. ಅದಾಗಿ ಮೂರು ತಿಂಗಳ ಬಳಿಕ, ನಾಸಾ ಚಂದ್ರನ ಮೇಲೆ ಲ್ಯಾಂಡರ್‌ನ ಅವಶೇಷಗಳನ್ನು ಗುರುತಿಸಿತು. ಈ ಹಿನ್ನಡೆಯ ಹೊರತಾಗಿಯೂ, ಚಂದ್ರಯಾನ 2 ಸಂಪೂರ್ಣ ವಿಫಲ ಯೋಜನೆಯಲ್ಲ. ಯಾಕೆಂದರೆ, ಚಂದ್ರಯಾನ 2ರ ಆರ್ಬಿಟರ್ ಸರಿಯಾಗಿ ಕಾರ್ಯ ನಿರ್ವಹಿಸಿ, ಮೌಲ್ಯಯುತ ನೂತನ ಮಾಹಿತಿಗಳನ್ನು ಕಲೆ ಹಾಕಿ, ಚಂದ್ರ ಮತ್ತು ಚಂದ್ರನ ಸುತ್ತಮುತ್ತಲಿನ ಕುರಿತಾದ ನಮ್ಮ ಜ್ಞಾನವನ್ನು ವಿಸ್ತರಿಸುತ್ತಾ ಬಂದಿದೆ.
ಚಂದ್ರಯಾನ 2 ತನ್ನ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಿ, ಪ್ರಗ್ಯಾನ್ ರೋವರ್ ಅನ್ನು ಚಂದ್ರನ ವೈಜ್ಞಾನಿಕ ಅನ್ವೇಷಣೆಗೆ ಕಳುಹಿಸಬೇಕಿತ್ತು. ಚಂದ್ರಯಾನ 1 ಉಡಾವಣೆಯ ವೇಳೆಗೆ 1,380 ಕೆಜಿ ತೂಕ ಹೊಂದಿದ್ದರೆ, ಚಂದ್ರಯಾನ 2 ಉಡಾವಣೆಯ ವೇಳೆಗೆ 3,850 ಕೆಜಿ ತೂಕ ಹೊಂದಿತ್ತು.
ಚಂದ್ರಯಾನ 1 ಚಂದ್ರನೆಡೆಗೆ ಭಾರತದ ಮೊದಲ ಯೋಜನೆಯಾಗಿದ್ದು, ಅಕ್ಟೋಬರ್ 22, 2008ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡಿತ್ತು. ಇದು ಕನಿಷ್ಠ 312 ದಿನಗಳು, ಅಂದರೆ ಆಗಸ್ಟ್ 29, 2009ರ ತನಕ ಕಾರ್ಯಾಚರಿಸಿ, ಚಂದ್ರನ ಸುತ್ತ 3,400 ಸುತ್ತು ಬಂದಿತ್ತು.
ಚಂದ್ರಯಾನ 1 ಚಂದ್ರನ ಅನ್ವೇಷಣೆಗಾಗಿ ಭಾರತದ ದೇಶೀಯ ನಿರ್ಮಾಣದ ತಂತ್ರಜ್ಞಾನವಾಗಿದ್ದು, ದೇಶದ ಬಾಹ್ಯಾಕಾಶ ಯೋಜನೆಗಳಿಗೆ ಭಾರೀ ಉತ್ತೇಜನ ನೀಡಿತ್ತು. ಚಂದ್ರಯಾನ-1 ಅನ್ನು ಪಿಎಸ್ಎಲ್‌ವಿ-ಸಿ11 ಉಡಾವಣಾ ವಾಹನದ ಮೂಲಕ ಉಡಾಯಿಸಲಾಗಿತ್ತು. ಈ ರಾಕೆಟ್ ಸ್ಪೇಸ್‌ಕ್ರಾಫ್ಟ್ ಅನ್ನು ನವೆಂಬರ್ 8, 2008ರಂದು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಅಳವಡಿಸಿತು.
ಇದರಲ್ಲಿ ಮಹತ್ವದ ಸಾಧನೆ ನವೆಂಬರ್ 14, 2008ರಂದು ನಡೆಯಿತು. ಆ ದಿನ ಮೂನ್ ಇಂಪ್ಯಾಕ್ಟ್ ಪ್ರೋಬ್ (ಎಂಐಪಿ) ಯಶಸ್ವಿಯಾಗಿ ಬೇರ್ಪಟ್ಟು, ಚಂದ್ರನ ದಕ್ಷಿಣ ಧ್ರುವದ ಮೇಲಿಳಿಯಿತು. ಇದರ ಮೂಲಕ ಭಾರತ ಚಂದ್ರನ ಮೇಲೆ ತನ್ನ ರಾಷ್ಟ್ರಧ್ವಜ ಇಟ್ಟ ನಾಲ್ಕನೆಯ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಬಹುತೇಕ ಒಂದು ವರ್ಷಗಳ ಕಾಲ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದ ಬಳಿಕ, ಚಂದ್ರಯಾನ 1 ಅಂತಿಮವಾಗಿ ಆಗಸ್ಟ್ 29, 2009ರಂದು ಸಂವಹನ ವೈಫಲ್ಯದಿಂದ ಕಾರ್ಯ ಸ್ಥಗಿತಗೊಳಿಸಿತು. ಅಲ್ಲಿಗೆ ಇಸ್ರೋ ಚಂದ್ರಯಾನ 1 ಯೋಜನೆ ಪೂರ್ಣಗೊಂಡಿತು ಎಂದು ಘೋಷಿಸಿತು. ಈ ಸ್ಪೇಸ್‌ಕ್ರಾಫ್ಟ್ ಪೂರ್ವನಿರ್ಧರಿತ ಎರಡು ವರ್ಷ ಕಾರ್ಯಾಚರಿಸುವ ಬದಲು, 312 ದಿನಗಳ ಕಾಲ ಕಾರ್ಯಾಚರಿಸಿತು. ಆದರೂ, ಚಂದ್ರಯಾನ 1 ತನ್ನ ಉದ್ದೇಶದ ಶೇ.95 ರಷ್ಟು ಗುರಿಗಳನ್ನು ಸಾಧಿಸಿತ್ತು.
ಚಂದ್ರಯಾನ 1 ಯೋಜನೆಯ ಮಹತ್ವದ ಸಾಧನೆಯೆಂದರೆ, ಚಂದ್ರನ ಮೇಲೆ ನೀರಿನ ಲಕ್ಷಣಗಳನ್ನು ಕಂಡುಹಿಡಿದಿದ್ದು. ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನಕ್ಕೂ ಒಂದು ಮಹತ್ವದ ಮೈಲಿಗಲ್ಲಾಗಿತ್ತು. ಈ ಅನ್ವೇಷಣೆ ಇಸ್ರೋಗೆ ಚಂದ್ರನೆಡೆಗೆ ಆಸಕ್ತಿ ಹೆಚ್ಚಿಸಿ, ಚಂದ್ರಯಾನ 2 ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮಾಡಿತು. ಅದರೊಡನೆ, ಈ ಸ್ಪೇಸ್‌ಕ್ರಾಫ್ಟ್ ಚಂದ್ರನ ಉತ್ತರ ಧ್ರುವ ಪ್ರದೇಶದಲ್ಲಿ ಮಂಜುಗಡ್ಡೆಯ ರೂಪದಲ್ಲಿ ನೀರಿರುವುದನ್ನು ಗುರುತಿಸಿ, ಚಂದ್ರನ ಮೇಲ್ಮೈಯಲ್ಲಿ ಮೆಗ್ನೀಸಿಯಂ, ಅಲ್ಯುಮಿನಿಯಮ್ ಹಾಗೂ ಸಿಲಿಕಾನ್‌ಗಳನ್ನು ಗುರುತಿಸಿತ್ತು.
Published On - 10:23 pm, Tue, 11 July 23