ಕರುಣ್ ನಾಯರ್ ಜೊತೆ ಜಗಳಕ್ಕಿಳಿದ ಬುಮ್ರಾ: ನೋಡ್ತಾ ಖುಷಿಪಟ್ಟ ರೋಹಿತ್ ಶರ್ಮಾ
IPL 2025 DC vs MI: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025 ರ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿದೆ. ಈ ಗೆಲುವಿನ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಪರ ಮಿಂಚಿದ್ದು ಕರುಣ್ ನಾಯರ್. 40 ಎಸೆತಗಳನ್ನು ಎದುರಿಸಿದ ಕರುಣ್ 5 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 89 ರನ್ ಬಾರಿಸಿದ್ದರು. ಇದರ ನಡುವೆ ಕರುಣ್ ನಾಯರ್ ಹಾಗೂ ಜಸ್ಪ್ರೀತ್ ಬುಮ್ರಾ ಕಿತ್ತಾಡಿಕೊಂಡಿದ್ದಾರೆ.

IPL 2025: ಐಪಿಎಲ್ನ 29ನೇ ಪಂದ್ಯದಲ್ಲಿ ಕರುಣ್ ನಾಯರ್ (Karun Nair) ಹಾಗೂ ಜಸ್ಪ್ರೀತ್ ಬುಮ್ರಾ (Jasprit Bumrah) ಮೈದಾನದಲ್ಲೇ ಕಿತ್ತಾಡಿಕೊಂಡ ಘಟನೆ ನಡೆದಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಪರ ತಿಲಕ್ ವರ್ಮಾ (59) ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಜೇಕ್ ಫ್ರೇಸರ್ ಮೆಕ್ಗುರ್ಕ್ (0) ಮೊದಲ ಎಸೆತದಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ಹಂತದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕರುಣ್ ನಾಯರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
ಅದರಲ್ಲೂ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್ನಲ್ಲಿ ಕರುಣ್ ನಾಯರ್ 18 ರನ್ಗಳನ್ನು ಚಚ್ಚಿದ್ದರು. ಇತ್ತ ಕರುಣ್ ಬ್ಯಾಟ್ನಿಂದ ಸಿಕ್ಸ್-ಫೋರ್ಗಳನ್ನು ಹೊಡೆಸಿಕೊಂಡ ಬುಮ್ರಾ ವಿಚಲಿತರಾದಂತೆ ಕಂಡು ಬಂದರು.
ಇದರ ನಡುವೆ ಕರುಣ್ ನಾಯರ್ ರನ್ ಓಡುವಾಗ ಗೊತ್ತಿಲ್ಲದೆ ಬುಮ್ರಾ ಅವರ ಮೈಗೆ ತಾಗಿದ್ದಾರೆ. ಇದಕ್ಕೆ ಕೋಪಗೊಂಡ ಜಸ್ಪ್ರೀತ್ ಬುಮ್ರಾ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಜೊತೆ ಜಗಳಕ್ಕಿಳಿದಿದ್ದಾರೆ. ಆದರೆ ಗೊತ್ತಿಲ್ಲದೆ ಮೈಗೆ ತಾಗಿದ್ದರಿಂದ ಅದಾಗಲೇ ಕರುಣ್ ನಾಯಕ ಕ್ಷಮೆ ಸಹ ಕೇಳಿದ್ದರು.
ಇದಾಗ್ಯೂ ಓವರ್ ಮುಕ್ತಾಯದ ಬಳಿಕ ಮತ್ತೆ ಜಸ್ಪ್ರೀತ್ ಬುಮ್ರಾ ಕರುಣ್ ಅವರೊಂದಿಗೆ ಜಗಳವನ್ನು ಮುಂದುವರೆಸಿದರು. ಭಾರತೀಯ ಆಟಗಾರರ ನಡುವಣ ಈ ಮಾತಿನ ಚಕಮಕಿ ನಡುವೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ನಗುತ್ತಾ ನಿಂತಿದ್ದು ಅಚ್ಚರಿಗೆ ಕಾರಣವಾಗಿತ್ತು.
ಹಿರಿಯ ಆಟಗಾರನಾಗಿರುವ ಹಿಟ್ಮ್ಯಾನ್ ಇಬ್ಬರ ನಡುವಣ ಜಗಳ ಬಿಡಿಸುವುದನ್ನು ಬಿಟ್ಟು ಖುಷಿಪಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಈ ಜಗಳದ ನಡುವೆ ಕರುಣ್ ನಾಯರ್ ತನ್ನ ತಪ್ಪಿಲ್ಲ ಎಂದು ಹಾರ್ದಿಕ್ ಪಾಂಡ್ಯಗೆ ಮನವರಿಕೆ ಮಾಡಲು ಮುಂದಾದರು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಅನ್ನು ಪಾಂಡ್ಯ ಸಮಾಧಾನಪಡಿಸಿದ್ದಾರೆ.
ಇದನ್ನೂ ಓದಿ: ಭಾರತೀಯರು ನಿಮ್ಮನ್ನು… ಪಾಕ್ ಪತ್ರಕರ್ತನ ಪ್ರಶ್ನೆಗೆ ಡೇವಿಡ್ ವಾರ್ನರ್ ಖಡಕ್ ಉತ್ತರ
ಇದೀಗ ಜಸ್ಪ್ರೀತ್ ಬುಮ್ರಾ ಬುಮ್ರಾ ಹಾಗೂ ಕರುಣ್ ನಾಯರ್ ನಡುವಣ ಜಗಳದ ವಿಡಿಯೋ ವೈರಲ್ ಆಗಿದ್ದು, ರೋಹಿತ್ ಶರ್ಮಾ ನಡೆಗೆ ಪರ – ವಿರೋಧ ಚರ್ಚೆಗಳು ಶುರುವಾಗಿದೆ.
ಕರುಣ್ – ಬುಮ್ರಾ ನಡುವಣ ಜಗಳದ ವಿಡಿಯೋ:
The average Delhi vs Mumbai debate in comments section 🫣
Don’t miss @ImRo45 ‘s reaction at the end 😁
Watch the LIVE action ➡ https://t.co/QAuja88phU#IPLonJioStar 👉 #DCvMI | LIVE NOW on Star Sports Network & JioHotstar! pic.twitter.com/FPt0XeYaqS
— Star Sports (@StarSportsIndia) April 13, 2025
ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಚಕ ಗೆಲುವು:
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ನೀಡಿದ 205 ರನ್ಗಳ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತ್ತು. ಆದರೆ 19ನೇ ಓವರ್ನಲ್ಲಿ ಮೂವರು ಬ್ಯಾಟರ್ಗಳು ರನೌಟ್ ಆಗುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 193 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 12 ರನ್ಗಳ ರೋಚಕ ಜಯ ಸಾಧಿಸಿದೆ.