ಮಾಸ್ಟರ್ ಮೈಂಡ್… ಮೈದಾನಕ್ಕಿಳಿಯದೇ ಪಂದ್ಯದ ಚಿತ್ರಣ ಬದಲಿಸಿದ ರೋಹಿತ್ ಶರ್ಮಾ
IPL 2025 DC vs MI: ಐಪಿಎಲ್ 2025 ರ 29ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 205 ರನ್ ಕಲೆಹಾಕಿದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ 193 ರನ್ಗಳಿಗೆ ಆಲೌಟ್ ಆಗಿ 12 ರನ್ಗಳಿಂದ ಸೋಲೊಪ್ಪಿಕೊಂಡಿತು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ (MI) ತಂಡವು ಕೊನೆಗೂ ಗೆಲುವಿನ ಲಯಕ್ಕೆ ಮರಳಿದೆ. ಅದು ಸಹ ಅಜೇಯರಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ಸೋಲುಣಿಸುವ ಮೂಲಕ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಗೆಲುವಿನ ಹಿಂದೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಕಾರ್ಯತಂತ್ರ ಕೂಡ ಅಡಗಿದೆ.
ಏಕೆಂದರೆ ಒಂದು ಹಂತದವರೆಗೆ ಇಡೀ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ನತ್ತ ವಾಲಿತ್ತು. ಈ ಹಂತದಲ್ಲಿ ರೋಹಿತ್ ಶರ್ಮಾ ನೀಡಿದ ಕೆಲ ಸಲಹೆಗಳೇ ಪಂದ್ಯ ಚಿತ್ರಣವನ್ನು ಬದಲಿಸುವಂತೆ ಮಾಡಿತ್ತು ಎಂದರೆ ತಪ್ಪಾಗಲಾರದು.
13 ಓವರ್ಗಳ ಮುಕ್ತಾಯದ ವೇಳೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ವಿಕೆಟ್ ಕಳೆದುಕೊಂಡು 145 ರನ್ ಕಲೆಹಾಕಿ ಸುಸ್ಥಿತಿಯಲ್ಲಿತ್ತು. ಈ ವೇಳೆ ಡಗೌಟ್ನಲ್ಲಿದ್ದ ರೋಹಿತ್ ಶರ್ಮಾ ಚೆಂಡು ಬದಲಿಸುವಂತೆ ಕೋಚ್ ಮಹೇಲ ಜಯವರ್ಧನೆ ಹಾಗೂ ನಾಯಕ ಹಾರ್ದಿಕ್ ಪಾಂಡ್ಯಗೆ ಸೂಚಿಸಿದ್ದರು. ಅದರಂತೆ ಬಾಲ್ ಬದಲಿಸಲಾಯಿತು.
ಕೋಚ್ಗೆ ರೋಹಿತ್ ಶರ್ಮಾ ಸಲಹೆ:
This was the moment where MI turned back the game. Rohit Sharma is their leader.🥶🔥 pic.twitter.com/lw4neuQO5G
— Aniket 𝕏 (@ImAniket264) April 14, 2025
ಸ್ಪಿನ್ನರ್ ರಣತಂತ್ರ:
ಚೆಂಡು ಬದಲಿಸಿದ ಬಳಿಕ ರೋಹಿತ್ ಶರ್ಮಾ ಸ್ಪಿನ್ನರ್ಗೆ ಬಾಲ್ ನೀಡುವಂತೆ ಸಲಹೆ ನೀಡಿದ್ದಾರೆ. ಅದರಂತೆ 14ನೇ ಓವರ್ನಲ್ಲಿ ದಾಳಿಗಿಳಿದ ಕರ್ಣ್ ಶರ್ಮಾ ಟ್ರಿಸ್ಟನ್ ಸ್ಟಬ್ಸ್ ವಿಕೆಟ್ ಪಡೆದರು. 16ನೇ ಓವರ್ನಲ್ಲಿ ಕರ್ಣ್ ಶರ್ಮಾ ಎಸೆತದಲ್ಲಿ ಕೆಎಲ್ ರಾಹುಲ್ ಸಹ ಕ್ಯಾಚ್ ನೀಡಿದರು. ಈ ಎರಡು ವಿಕೆಟ್ಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದ ರನ್ ಗತಿಯನ್ನು ನಿಯಂತ್ರಿಸಿತು.
ಇದನ್ನೂ ಓದಿ: ಭಾರತೀಯರು ನಿಮ್ಮನ್ನು… ಪಾಕ್ ಪತ್ರಕರ್ತನ ಪ್ರಶ್ನೆಗೆ ಡೇವಿಡ್ ವಾರ್ನರ್ ಖಡಕ್ ಉತ್ತರ
ಪರಿಣಾಮ ಕೊನೆಯ 2 ಓವರ್ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 23 ರನ್ಗಳ ಅಗತ್ಯವಿತ್ತು. ಆದರೆ 19ನೇ ಓವರ್ನಲ್ಲಿ ಮೂವರು ರನೌಟ್ ಆಗುವುದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಇನಿಂಗ್ಸ್ 193 ರನ್ಗಳಿಗೆ ಅಂತ್ಯಗೊಂಡಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡವು 12 ರನ್ಗಳ ರೋಚಕ ಜಯ ಸಾಧಿಸಿತು.
ಹಿಟ್ಮ್ಯಾನ್ ಮಾಸ್ಟರ್ ಪ್ಲ್ಯಾನ್:
13ನೇ ಓವರ್ ಮುಕ್ತಾಯದ ಬೆನ್ನಲ್ಲೇ ರೋಹಿತ್ ಶರ್ಮಾ ನೀಡಿದ ಸಲಹೆಯು ಮುಂಬೈ ಇಂಡಿಯನ್ಸ್ ಪಾಲಿಗೆ ವರದಾನವಾಯಿತು. ಅದರಲ್ಲೂ ಡಗೌಟ್ನಲ್ಲೇ ಕೂತು ಇಡೀ ಪಂದ್ಯದ ಚಿತ್ರಣ ಬದಲಿಸಿದ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕನ ನಡೆಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಡಗೌಟ್ನಿಂದಲೇ ರೋಹಿತ್ ಶರ್ಮಾ ಸಲಹೆ ಸೂಚನೆ:
Rohit Sharma literally changed the match from dugout 🤣❤️#mivsdc #RohithSharma pic.twitter.com/OeDKbLxWls
— Vrutik (@vrutik_kadu) April 13, 2025
ಇಂತಹ ನಾಯಕತ್ದದ ನಡೆಗಳಿಂದಲೇ ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಟ್ರೋಫಿ ಎತ್ತಿ ಹಿಡಿದಿದೆ ಎಂದು ಅಭಿಮಾನಿಗಳು ರೋಹಿತ್ ಶರ್ಮಾಗೆ ಬಹುಪರಾಕ್ ಅನ್ನುತ್ತಿದ್ದಾರೆ.