Karnataka Honey trap case: ಕಾಮಖೆಡ್ಡಾ ಕೇಸಿನ ಸೂತ್ರಧಾರ ತಪ್ಪಿಸಿಕೊಳ್ಳುವುದು ಗ್ಯಾರೆಂಟಿ
ದೇಶದ ವಿರೋಧಿಗಳನ್ನು ಸೋಲಿಸಲು ಎರಡನೇ ಮಹಾಯುದ್ಧದಲ್ಲಿ ಬಳಸಿದ Honeytrap Method ಅಥವಾ ಕಾಮಖೆಡ್ಡಾ ವಿಧಾನವನ್ನು ಕರ್ನಾಟಕದಲ್ಲಿ ರಾಜಕೀಯ ದಾಳವಾಗಿ ಬಳಕೆ ಮಾಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಮಹಾಯುದ್ಧದಲ್ಲಿ ಕಾಮಖೆಡ್ಡಾಕ್ಕೆ ಯಾರು ಇಳಿಸಿದ್ದರೆಂಬುದು ಗೊತ್ತಾಗುತ್ತಿತ್ತು, ಆದರೆ ನಮ್ಮಲ್ಲ ಆ ಮಾಹಿತಿ ಹೊರಗೆ ಬರುವುದಿಲ್ಲ!

ನಿಮ್ಮ ಮೊಬೈಲ್ನಲ್ಲಿ ಬರೆದು ಪಿನ್ ಮಾಡಿಟ್ಟುಕೊಳ್ಳಿ. ಕರ್ನಾಟಕದ ಕಾಮಖೆಡ್ಡಾ ಕೇಸಿನ (Honey trap case) ನಿಜವಾದ ಸೂತ್ರಧಾರ ಸಿಗುವುದೇ ಇಲ್ಲ. ನೋಡುತ್ತಿರಿ, ಆತನ ಹೆಸರು ಹೊರಗೆ ಬರುವುದಿಲ್ಲ, ಇನ್ನು ಆತನಿಗೆ ಶಿಕ್ಷೆ ಆಗುವುದಂತೂ ಬಹು ದೂರದ ಮಾತು. ದಿನ ಬೆಳಗಾದರೆ ಶೋಷಿತರ ಪರ, ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡಗಳ ಪರ ಅಂತ ಘಂಟಾಘೋಷವಾಗಿ ಹೇಳುತ್ತಾ, ಕೆಂಪು ಹೊದಿಕೆಯ ಸಂವಿಧಾನದ ಪ್ರತಿಯೊಂದಿಗೆ ಹೋದಲ್ಲಿ ಬಂದಲ್ಲಿ ಭಾರತೀಯ ಜನತಾ ಪಕ್ಷವನ್ನು (BJP) ಹಣಿಯಲು ಏನೆಲ್ಲ ಮಾಡಲು ಸಾಧ್ಯವೋ ಅದನ್ನು ಮಾಡುತ್ತ ಬಂದ ಪಕ್ಷದ ನಾಯಕರು, ತಮ್ಮದೇ ಪಕ್ಷದ ಓರ್ವ ದಮನಿತ ಸಮುದಾಯದ ನಾಯಕ ಕೆ.ಎನ್. ರಾಜಣ್ಣ (KN Rajanna) ಅವರಿಗೆ ಆದ ಅನ್ಯಾಯಕ್ಕೆ ನಿಜವಾದ ನ್ಯಾಯ ಒದಗಿಸಲು ಕಾಂಗ್ರೆಸ್ ಪಕ್ಷದಿಂದ ಸಾಧ್ಯವಾಗುವುದಿಲ್ಲ.
ದೇಶಾದ್ಯಂತ ಕುತೂಹಲ ಮೂಡಿಸಿರುವ ಈ ಬೆಳವಣಿಗೆಗೆ ಹಲವಾರು ಆಯಾಮ ಇದ್ದರೂ, ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಈ ಸಮುದಾಯಗಳ ಬಗ್ಗೆ ಕಣ್ಣೀರು ಸುರಿಸಿದ್ದರೂ ಈ ಕೇಸು ಹಳ್ಳ ಹಿಡಿಯುವುದು ಯಾಕೆ? ‘ಇದರ ಕತೆಯೂ ಇಷ್ಟೇ’ ಎಂದು ಆ ಪಕ್ಷದ ನಾಯಕರು ತಮ್ಮ ಮನೆಯ ಮೊಗಸಾಲೆಯಲ್ಲಿ ಮಾತನಾಡುತ್ತಿರುವುದೇಕೆ?
ಸಚಿವ ಮತ್ತು ಈ ಕೇಸಿನ ಬಲಿಪಶು ಕೆ.ಎನ್. ರಾಜಣ್ಣ ದೂರು ನೀಡಿದರೆ, ಉನ್ನತ ತನಿಖೆ ಮಾಡಿಸುವುದು ಖಂಡಿತ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಒಳಗೆ ಹೇಳಿದ್ದಾರೆ. ಇಷ್ಟೆಲ್ಲ ಹೇಳಿದರೂ, ಇನ್ನೂ ಯಾಕೆ ಅನುಮಾನ? ಸಿದ್ದರಾಮಯ್ಯ ಅವರ ಕುರ್ಚಿ ಬುಡಕ್ಕೆ ಬೆಂಕಿ ಇಡಲು ಹೆಣೆದ ಈ ಕಾಮಖೆಡ್ಡಾದ ಸೂತ್ರಧಾರರನ್ನು ಮುಖ್ಯಮಂತ್ರಿ ಹೆಡೆಮುರಿ ಕಟ್ಟುವುದು ಗ್ಯಾರೆಂಟಿ ಎಂದು ನಾವೆಲ್ಲ ಅಂದುಕೊಂಡರೂ ಪ್ರಸ್ತುತ ರಾಜಕೀಯ ಮತ್ತು ಪೊಲೀಸ್ ತನಿಖೆ, ಯಾವತ್ತೂ ಭಾವನೆ ಮೇಲೆ ನಡೆಯುವುದಿಲ್ಲ ಅಲ್ಲವೇ?
ವಿಧಾನಸಭೆ ಒಳಗೆ ರಾಜಣ್ಣ ಏನೇ ಹೇಳಿದರೂ ಹೊರಗೆ ನಡೆಯೋದೇ ಬೇರೆ. ಮೊದಲನೆಯ ವಿಚಾರ; ಹೈಕಮಾಂಡ್ ರಾಜಣ್ಣನಿಗೆ ಹಸಿರು ನಿಶಾನೆ ತೋರೋವರೆಗೂ, ಅವರು ದೂರು ನೀಡಲಾಗದು. ಇದು ಕಟು ಸತ್ಯ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವವರು, ಮಲ್ಲಿಕಾರ್ಜುನ ಖರ್ಗೆ. ತಮ್ಮ ತವರಿನ ರಾಜ್ಯದಲ್ಲಿ ಈ ರೀತಿ ಆಗುತ್ತಿದೆ ಎಂಬುದು ರಾಷ್ಟ್ರಕ್ಕೆ ಅಧಿಕೃತವಾಗಿ ಗೊತ್ತಾದರೆ, ಅದು ರಾಷ್ಟ್ರ ಮಟ್ಟದಲ್ಲಿ ಮುಜುಗರ ತರುವ ಸಂಗತಿಯಾಗುವುದು ಗ್ಯಾರೆಂಟಿ. ಆದ್ದರಿಂದ, ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ, ಇದನ್ನು ಅದುಮಿಡಲು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮತ್ತು ಖರ್ಗೆಯವರು ಪ್ರಯತ್ನ ಪಡುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ಒಮ್ಮೆ ಒತ್ತಡ ಜಾಸ್ತಿ ಆಗಿ ರಾಜಣ್ಣ ದೂರು ಕೊಡಲು ಒಪ್ಪಿಗೆ ನೀಡಿದರೂ, ಒಂದು ಕಣ್ಣೊರೆಸುವ ಪೊಲೀಸ್ ತನಿಖೆ (botched up investigation) ಆಗುವುದು ಗ್ಯಾರೆಂಟಿ. ಯಾಕೆಂದರೆ, ಸೂತ್ರಧಾರ ಬಹಳ ಬೆರಕಿ! ಆತ ಖುದ್ದಾಗಿ ನೋಟಿನ ಕಂತೆ (Hard Cash) ನೀಡಿ, ಕಾಮಖೆಡ್ಡಾ ನಡೆಸುವ ಯಾವುದೋ ಒಬ್ಬನಿಗೆ ಬಾಡಿಗೆ ನೀಡಿದ್ದರೆ ಅದನ್ನು ತನಿಖೆಯಲ್ಲಿ ನಿರೂಪಿಸುವುದು ಪ್ರಾಯಶಃ ಅಸಾಧ್ಯದ ಮಾತು. ಬಾಡಿಗೆ ಪಡೆದವನನ್ನು ಏರೋಪ್ಲೇನ್ ಹತ್ತಿಸಿ ಬಾಯಿ ಬಿಡಿಸಿದರೂ, ಹಣ ಸಂದಾಯದ ಸಾಕ್ಷ್ಯಾಧಾರಗಳು ಸಿಗದಿದ್ದರೆ ನಿಜವಾದ ಸೂತ್ರಧಾರ ತಪ್ಪಿಸಿಕೊಳ್ಳುವುದು ಗ್ಯಾರೆಂಟಿ.
ಹನಿಟ್ರ್ಯಾಪ್ ಸೂತ್ರಧಾರ ಯಾರು?
ಇದು ಬಹಳ ಕುತೂಹಲಕ್ಕೆ ಎಡಮಾಡಿದೆ. ಬೇರೆ ಎಲ್ಲ ವಿಚಾರದಲ್ಲಿ ವಿರೋಧ ಪಕ್ಷವನ್ನು ದೂರುವ ಕಾಂಗ್ರೆಸ್ ಪಕ್ಷದ ನಾಯಕರು ಈ ವಿಚಾರದಲ್ಲಿ ಬಿಜೆಪಿ ಅಥವಾ ಜೆಡಿಎಸ್ ನಾಯಕರುಗಳ ಹೆಸರನ್ನು ಹೇಳಿಲ್ಲ. ಸಿದ್ಧರಾಮಯ್ಯ ಸರಕಾರ ಇಳಿಸಲು ಮಾಡಿದ ತಂತ್ರಗಾರಿಕೆಯ ಭಾಗವೇ ಈ ಕಾಮಖೆಡ್ಡಾ ಎಂದು ಬಿಜೆಪಿ ನಾಯಕರುಗಳು ಹೇಳಿದರೂ ಇದನ್ನು ಯಾವ ಕಾಂಗ್ರೆಸ್ ನಾಯಕರು ಕೂಡ ಅಲ್ಲಗಳೆದಿಲ್ಲ. ಇದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ರಾಜಕೀಯಕ್ಕೆ ಸಂಬಂಧಿಸದ ಯಾವನೋ ವ್ಯಕ್ತಿ ಇದನ್ನು ಮಾಡಿಸಿದ್ದರೆ ಇಷ್ಟೊತ್ತಿಗಾಗಲೇ ಆತನ ಜನ್ಮ ಜಾಲಾಡಿ ಬಂಧನ ಮಾಡಿಸುವ ತಾಕತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇತ್ತು. ಆ ವ್ಯಕ್ತಿಯ ಬಂಧನ ಆಗಿಲ್ಲ ಎಂದರೆ ಆ ವ್ಯಕ್ತಿ ಸ್ವತಃ ಶಿವಕುಮಾರ್ ಅವರಿಗಿಂತ ಬಲಾಢ್ಯನೇ ಇರಬೇಕು!
ಇದನ್ನೂ ಓದಿ: ರಾಜಣ್ಣ ಮಾತ್ರವಲ್ಲ ಇನ್ನೂ ಮೂರು ಮಂತ್ರಿಗಳಿಗೂ ಹನಿಟ್ರ್ಯಾಪ್: ಗ್ಯಾಂಗ್ನ ಹಿಡಿದು ಬಾಯ್ಬಿಡಿಸಿದ ಸಚಿವ!
ಈ ಎಲ್ಲ ಬೆಳವಣಿಗೆಗಳನ್ನು ನೋಡುವಾಗ, ಸಾಮಾನ್ಯ ಜನರ ಕುತೂಹಲ ದಿನೇ ದಿನೇ ಹೆಚ್ಚುತ್ತಿದ್ದರೂ, ಈ ಕಾಮಖೆಡ್ಡಾ ಕೇಸು ಕೂಡ ಬಹುಬೇಗ ಜನರ ಸ್ಮೃತಿಯಿಂದ ಮರೆಯುವಂತೆ ಮಾಡುವ ಜಾಣತನ ರಾಜಕೀಯ ನಾಯಕರಿಗೆ ಇದೆ ಮತ್ತು ಪಕ್ಷದ ಮರ್ಯಾದೆ ಪ್ರಶ್ನೆಯ ಹಿತದೃಷ್ಟಿಯಿಂದ ಈ ಕೇಸನ್ನು ಅದೇ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಾರೆ. ನಿಜವಾದ ಸೂತ್ರಧಾರನ್ನ ಬಿಟ್ಟು, ಒಂದು ತನಿಖೆಯ ನಾಟಕ ಮಾಡಿ ಯಾರದೋ ತಲೆಗೆ ಕಟ್ಟಿ ಇದಕ್ಕೊಂದು ಇತಿಶ್ರೀ ಹಾಡುವ ಎಲ್ಲ ಲಕ್ಷಣ ಕಾಣುತ್ತಿದೆ.
ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:52 pm, Sat, 22 March 25