ರಾಜಣ್ಣ ಮಾತ್ರವಲ್ಲಇನ್ನೂ ಮೂರು ಮಂತ್ರಿಗಳಿಗೂ ಹನಿಟ್ರ್ಯಾಪ್: ಗ್ಯಾಂಗ್ನ ಹಿಡಿದು ಬಾಯ್ಬಿಡಿಸಿದ ಸಚಿವ!
ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಸುದ್ದಿ ಸಂಚಲನ ಸೃಷ್ಟಿಸಿದೆ. ರಾಜಕೀಯವಾಗಿ ಮುಗಿಸುವ ಹುನ್ನಾರದಿಂದ ಹನಿಟ್ರ್ಯಾಪ್ಗೆ ಯತ್ನಿಸಿದ್ದಾರೆ ಎನ್ನುವುದು ಸದ್ದು ಮಾಡುತ್ತಿದೆ. ಈ ಹಿಂದೆಯೂ ಹನಿಟ್ರ್ಯಾಪ್ ಪ್ರಕರಣದಲ್ಲಿ ಕೆಲ ರಾಜಕೀಯ ನಾಯಕರು, ತಮ್ಮ ಅಸ್ತಿತ್ವವೇ ಕಳೆದುಕೊಂಡಿರೋ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇದರ ಮಧ್ಯೆಯೇ ಇದೀಗ ಶಕ್ತಿ ಸೌಧ, ವಿಧಾನಸೌಧದ ಕಚೇರಿಯಲ್ಲೇ ಕೆಲ ಸಚಿವರನ್ನ ಹನಿಟ್ರ್ಯಾಪ್ಗೆ ಯತ್ನಿಸಿರುವುದು ಸಂಚಲನ ಸೃಷ್ಟಿಸಿದೆ. ಹನಿಟ್ರ್ಯಾಪ್ಗೆ ಯತ್ನಿಸಿದ್ದ ತಂಡವನ್ನೇ ಸಚಿವರೊಬ್ಬರು ಹಿಡಿದು ಎಲ್ಲಾ ಬಾಯ್ಬಿಡಿಸಿದ್ದಾರೆ.

ಬೆಂಗಳೂರು, (ಮಾರ್ಚ್ 20): ರಾಜ್ಯ ರಾಜಕಾರಣದಲ್ಲಿ (Karnataka Poliitcs) ಹನಿಟ್ರ್ಯಾಪ್(Honeytrap) ಮತ್ತೆ ಸದ್ದು ಮಾಡತೊಡಗಿದ್ದು, ಇಂದು (ಮಾರ್ಚ್ 20) ವಿಧಾನಸಭೆ ಸದನ (Assembly Session) ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ. ಶಾಸಕ ಯತ್ನಾಳ್ ಸಿಡಿಸಿದ ಹನಿಟ್ರ್ಯಾಪ್ ಬಾಂಬ್, ಸಂಚಲನವನ್ನೇ ಸೃಷ್ಟಿಸಿದೆ. ಸಹಕಾರಿ ಸಚಿವರಿಗೆ ಹನಿಟ್ರ್ಯಾಪ್ ಆಗಿದೆ ಎಂದು ಬಹಿರಂಗವಾಗಿಯೇ ಹೇಳಿಬಿಟ್ಟರು. ಬಳಿಕ ಖುದ್ದು ಸಹಕಾರಿ ಸಚಿವ ಕೆಎನ್ ರಾಜಣ್ಣ ಎದ್ದು ನಿಂತು ತಮ್ಮನ್ನು ಹನಿಟ್ರ್ಯಾಪ್ನಲ್ಲಿ ಸಿಲುಕಿಸುವ ಯತ್ನ ನಡೆದಿತ್ತು ಎನ್ನುವುದನ್ನು ಒಪ್ಪಿಕೊಂಡರು. ಅಲ್ಲದೇ 48 ಜನರ ಸಿಡಿ ಇದೆ ಎಂದು ಹೊಸ ಬಾಂಬ್ ಸಿಡಿಸಿದರು. ಹೌದು.. ರಾಜಣ್ಣ ಹೇಳಿರುವುದು ನಿಜ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತ್ರವಲ್ಲದೆ ರಾಜ್ಯ ಸಚಿವ ಸಂಪುಟದ ಇನ್ನೂ ಮೂರು ಜನರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲು ಯತ್ನ ನಡೆದಿತ್ತು ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಸಚಿವರನ್ನೇ ಟಾರ್ಗೆಟ್ ಮಾಡಲಾಗಿದೆ ಎಂದು ಕಾಂಗ್ರೆಸ್ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ
ಹನಿಟ್ರ್ಯಾಪ್ ತಂಡವನ್ನು ಲಾಕ್ ಮಾಡಿದ ಸಚಿವ
ರಾಜ್ಯ ರಾಜಧಾನಿ ಬೆಂಗಳೂರಿನ ಇಬ್ಬರು ಸಚಿವರು ಮತ್ತು ಮುಂಬೈ-ಕರ್ನಾಟಕ ಭಾಗದ ಪ್ರಭಾವಿ ಸಚಿವರೊಬ್ಬರನ್ನು ಖೆಡ್ಡಾಗೆ ಕೆಡವಲು ಯತ್ನ ನಡೆದಿತ್ತು. ಈ ಹನಿಟ್ರ್ಯಾಪ್ ನ ಸುಳಿವು ಸಿಗುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರಿನ ಓರ್ವ ಸಚಿವರು ಹನಿಟ್ರ್ಯಾಪ್ ಮಾಡಲು ಬಂದ ತಂಡವನ್ನು ಲಾಕ್ ಮಾಡಿದ್ದಾರೆ. ಅಲ್ಲದೇ ಹನಿಟ್ರ್ಯಾಪ್ ಮಾಡಲು ಬಂದಿದ್ದವರನ್ನೇ ಟ್ರ್ಯಾಪ್ ಮಾಡಿ ಸರಿಯಾಗಿ ಒದ್ದು, ಬೆಂಡೆತ್ತಿ ಈ ಕೃತ್ಯದ ಕರ್ತೃ ಯಾರೆಂದು ಕಕ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ನನ್ನ ಮೇಲೆ ಹನಿಟ್ರ್ಯಾಪ್ ಯತ್ನ: ಸದನದಲ್ಲೇ ಬಹಿರಂಗಪಡಿಸಿದ ಸಚಿವ ರಾಜಣ್ಣ
ಒದೆ ಬೀಳುತ್ತಿದ್ದಂತೆಯೇ ಕಂಗಾಲಾದ ಹನಿಟ್ರ್ಯಾಪ್ ತಂಡ ತಮ್ಮ ಹಿಂದೆ ಯಾರಿದ್ದಾರೆಂದು ಬಾಯ್ಬಿಟ್ಟಿದೆ. ಅಲ್ಲದೇ ಸಚಿವರು, ಹನಿಟ್ರ್ಯಾಪ್ ಗ್ಯಾಂಗ್ ಬಾಯಿಂದಲೇ ಇದರ ಸೂತ್ರಧಾರ ಯಾರೆಂಬ ಬಗ್ಗೆ ಎಳೆ ಎಳೆಯಾಗಿ ವಿವರ ಪಡೆದುಕೊಂಡಿದ್ದಾರೆ. ಹಾಗೇ ಯಾರೆಂದು ತಿಳಿದುಕೊಂಡು ಬಿಟ್ಟು ಕಳುಹಿಸಿದರೆ ಮುಂದೆ ಉಲ್ಟಾ ಹೊಡೆದರೆ ಹೇಗೆಂದು ಮುಂದಾಲೋನೆ ಮಾಡಿ ಹನಿಟ್ರ್ಯಾಪ್ ತಂಡ ಬಿಚ್ಚಿಟ್ಟ ಮಾಹಿತಿಯನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಗ್ಯಾಂಗ್ ಬ್ಯಾಯ್ಬಿಟ್ಟಿದ್ದನ್ನು ಚಿತ್ರೀಕರಿಸಿಕೊಂಡಿರುವ ಸಚಿವ
ಇಷ್ಟಕ್ಕೆ ಸುಮ್ಮನಾದಗ ಬೆಂಗಳೂರಿನ ಆ ಸಚಿವ, ತಮ್ಮಂತೆಯೇ ಇನ್ನೂ ಯಾರ್ಯಾರನ್ನು ಈ ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಯತ್ನ ನಡೆದಿದೆ ಎಂದು ಗ್ಯಾಂಗ್ನಿಂದ ಮಾಹಿತಿಯನ್ನೂ ಸಹ ಪಡೆದುಕೊಂಡಿದ್ದಾರೆ. ಆಗ ರಾಜಣ್ಣ ಮಾತ್ರವಲ್ಲ ಇನ್ನುಳಿದ ಮೂವರು ಸಚಿವರಿಗೂ ಸಹ ಬಲೆ ಬೀಸಲಾಗಿತ್ತು ಎನ್ನುವ ಸ್ಫೋಟಕ ಮಾಹಿತಿಯನ್ನು ಹನಿಟ್ರ್ಯಾಪ್ ತಂಡ ಬಾಯ್ಬಿಟ್ಟಿದೆ. ಹೀಗೆ ಹನಿಟ್ರ್ಯಾಪ್ ತಂಡದಿಂದ ಇಂಚಿಚೂ ಮಾಹಿತಿ ಪಡೆದುಕೊಂಡ ಬೆಂಗಳೂರಿನ ಸಚಿವ, ವಿಡಿಯೋ ಸಮೇತ ಇತರೆ ಮೂವರು ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೇ ಈ ಕುರಿತು ಪಕ್ಷದ ಹೈಕಮಾಂಡ್ ಗಮನಕ್ಕೆ ತರುವಂತೆ ಒತ್ತಾಯಿಸಿದ್ದಾರೆ.
ಸಂಪುಟದ ನಾಲ್ವರು ಸದಸ್ಯರ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಮಂಡಲ ಅಧಿವೇಶನ ಮುಗಿದ ನಂತರ ದಿಲ್ಲಿಗೆ ತೆರಳಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಹನಿಟ್ರ್ಯಾಪ್ ಕುರಿತು ವಿವರ ನೀಡಲು ಸಜ್ಜಾಗಿದ್ದರು. ಆದ್ರೆ, ಅಷ್ಟರೊಳಗೆ ಇಂದು ಸದನದಲ್ಲಿ ಸ್ವತಃ ಕೆಎನ್ ರಾಜಣ್ಣ ತಮ್ಮನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಪ್ರಯತ್ನ ನಡೆದಿರುವ ಬಗ್ಗೆ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
ಸಿಎಂಗೆ ದೂರು ನೀಡುವ ಮೊದಲು ಸಭೆ ನಡೆಸಿದ್ದ ಸಚಿವರು
ಹೌದು…ಈ ಹನಿಟ್ರ್ಯಾಪ್ ಯತ್ನದ ಬಗ್ಗೆ ಸಂಪೂರ್ಣ ವಿವರ ಪಡೆದ ಸಚಿವ, ತಮ್ಮ ಇನ್ನೂ ಮೂರು ಸಹೋದ್ಯೋಗಿ ಸಚಿವರನ್ನು ಕರೆದು ಒಂದು ಸ್ಥಳದಲ್ಲಿ ಸಭೆ ನಡೆಸಿದ್ದಾರೆ. ಆ ಸಚಿವರು ಬೇರೆ ಯಾರು ಅಲ್ಲ ಸಿದ್ದರಾಮಯ್ಯನವರ ಬಣದವರೇ ಆಗಿದ್ದು, ಎಲ್ಲರೂ ಒಂದು ಕಡೆ ಸೇರಿ ಹನಿಟ್ರ್ಯಾಪ್ ಯತ್ನ ಹಾಗೂ ಈ ಹನಿಟ್ರ್ಯಾಪ್ ಹಿಂದಿರುವವರ ಕೈವಾಡ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಅಲ್ಲದೇ ಹನಿಟ್ರ್ಯಾಪ್ ಗ್ಯಾಂಗ್ನ ಟ್ರ್ಯಾಪ್ ಮಾಡಿರುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನೆಲ್ಲ ಕೇಳಿ ಸಚಿವರು ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಹನಿಟ್ರ್ಯಾಪ್ ಸೂತ್ರಧಾರನ ವಿರುದ್ಧ ನಿಗಿ ನಿಗಿ ಕೆಂಡವಾಗಿದ್ದಾರೆ. ಬಳಿಕ ಒಟ್ಟಿಗೆ ಹೋಗಿ ಸಿಎಂಗೆ ಈ ಬಗ್ಗೆ ದೂರು ನೀಡಿದ್ದರು.
ಹೈಕಮಾಂಡ್ ಗಮನಕ್ಕೂ ತಂದಿರುವ ಸಚಿವರು
ಇನ್ನು ಸಿಎಂ ಗಮನಕ್ಕೆ ತಂದ ಬಳಿಕ ಸಚಿವರು ಸುಮ್ಮನೇ ಕೂತಿಲ್ಲ. ತಮ್ಮನ್ನು ಇಂತಹ ನೀಚ ಕೃತ್ಯಕ್ಕೆ ಕೆಡವಲು ಯತ್ನಿಸಿದವರಿಗೆ ತಕ್ಕ ಪಾಠ ಕಲಿಸಲೇಬೇಕೆಂದು ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರ ಗಮನಕ್ಕೆ ಈ ಹನಿಟ್ರ್ಯಾಪ್ ವಿಚಾರವನ್ನು ತಿಳಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಯಾವ್ಯಾವ ಸಚಿವರು ದೆಹಲಿಗೆ ಹೋಗಿಬಂದಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಈಗ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಗೆ ತೆರಳಿ ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುವ ಸಾಧ್ಯತೆಗಳಿವೆ.
ಸದನದಲ್ಲಿ ಕಿಡಿಹೊತ್ತಿಸಿದ ಸುನಿಲ್ ಕುಮಾರ್
ಸಿಎಂ ಬಣದ ಸಚಿವರ ಸಭೆ ಮೇಲೆ ಸಭೆ, ದೆಹಲಿ ಪ್ರಯಾಣ ಸೇರಿದಂತೆ ಕಳೆದ ಹಲವು ದಿನಗಳಿಂದ ರಾಜ್ಯ ಕಾಂಗ್ರೆಸ್ನಲ್ಲಾಗುತ್ತಿರುವ ಕೆಲ ಮಹತ್ವದ ಬೆಳವಣಿಗೆಗಳಿಂದ ಕೆಲವರಿಗೆ ಅನುಮಾನ ಬಂದಿದೆ. ಈ ಬಗ್ಗೆ ಕೆಲ ಹಿರಿಯ ಕೆಲ ಪತ್ರಕರ್ತರಿಗೂ ಈ ಹನಿಟ್ರ್ಯಾಪ್ ಸುದ್ದಿ ಮುಟ್ಟಿದೆ. ಬಳಿಕ ಒಬ್ಬರ ಬಾಯಿಂದ ಮತ್ತೊಬ್ಬರಿಗೆ ಹರಡಿ ಕೊನೆಗೆ ಅದು ವಿಪಕ್ಷ ಬಿಜೆಪಿ ನಾಯಕರ ಕಿವಿಗೂ ಸಹ ಬಂದು ಅಪ್ಪಳಿಸಿದೆ. ಹೀಗೆ ಸುದ್ದಿ ತಿಳಿಯುತ್ತಿದ್ದಂತೆಯೇ ನಿನ್ನೆ(ಮಾರ್ಚ್ 19) ಸುನಿಲ್ ಕುಮಾರ್ ಅವರು ಸದನದಲ್ಲಿ ಸಚಿವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಯತ್ನ ನಡೆದಿದೆ ಎನ್ನುವುದನ್ನು ಪ್ರಸ್ತಾಪಿಸಿದ್ದರು. ಬಳಿಕ ಅದು ಜಗಜ್ಜಾಹೀರಾಯ್ತು.
ಸಚಿವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಚರ್ಚೆ ಕಾಂಗ್ರೆಸ್ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇಷ್ಟು ದಿನ ರೆಕ್ಕೆಪುಕ್ಕ ಕಟ್ಟಿಕೊಂಡು ಹರಿದಾಡ್ತಿದ್ದ ಈ ಸುದ್ದಿಗೆ ಮೊದಲು ಸಚಿವ ಸತೀಶ್ ಜಾರಕಿಹೊಳಿ ಅವರೇ ಪ್ರತಿಕ್ರಿಯಿಸಿ ಹನಿಟ್ರ್ಯಾಪ್ ಯತ್ನ ನಡೆದಿರುವುದನ್ನ ಖಚಿತಪಡಿಸಿದರು. ಇದಾದ ಮೇಲೆ ಸದನದಲ್ಲಿ ಹನಿಟ್ರ್ಯಾಪ್ ಬಿರುಗಾಳೇ ಎದ್ದಿತು. ಅಲ್ಲದೇ ಇಂದು ಮತ್ತೆ ಯತ್ನಾಳ್ ಸದನದಲ್ಲಿ ಕಿಡಿ ಹೊತ್ತಿಸಿ ಹನಿಟ್ರ್ಯಾಪ್ಗೆ ಬಲೆ ಬೀಳುತ್ತಿದ್ದವರ ಬಾಯಿಂದಲೇ ಸ್ಫೋಟಗೊಳ್ಳುವಂತೆ ಮಾಡಿದರು.
ಸದ್ಯ ಕಾವು ಪಡೆದುಕೊಂಡಿರುವ ಹನಿಟ್ರ್ಯಾಪ್ ವಿಚಾರ ವಿಧಾನಸಭೆ ಅಧಿವೇಶನ ಮುಕ್ತಾಯಗೊಂಡ ಬಳಿಕ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಒಬ್ಬ ಸಚಿವರಿಗಷ್ಟೇ ಅಲ್ಲ, ಮೂವರಿಗೆ ಹನಿಟ್ರ್ಯಾಪ್ ಖೆಡ್ಡಾ ತೊಡಿರುವ ಮಾಹಿತಿ ಲಭ್ಯವಾಗಿದ್ದು, ಹೀಗಾಗಿ ಹನಿಟ್ರಾಪ್ ಯತ್ನಕ್ಕೆ ಒಳಗಾಗಿರುವ ಪ್ರಮುಖ ಸಚಿವ ಸೇರಿದಂತೆ ಅವರ ಆಪ್ತ ಸಚಿವರು ಹೈಕಮಾಂಡ್‌ಗೆ ಮತ್ತೊಮ್ಮೆ ದೂರು ನೀಡಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಸ್ಫೋಟವಾದ ಈ ಹನಿಟ್ರ್ಯಾಪ್ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದ್ದು, ಮುಂದೆ ಇದು ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ. ಮೊದಲೇ ಕಾಂಗ್ರೆಸ್ನಲ್ಲಿ ಬಣ ಕಿತ್ತಾಟ ಇದ್ದು, ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತೋ.
Published On - 10:49 pm, Thu, 20 March 25