SSLC ಪರೀಕ್ಷೆಗೆ ಕ್ಷಣಗಣನೆ: ಇನ್ನೂ ಹಾಲ್ ಟಿಕೆಟ್ ಸಿಗದೇ ವಿದ್ಯಾರ್ಥಿಗಳು ಕಂಗಾಲು, ಪೋಷಕರು ಆತಂಕ
ಬಾಗಲಕೋಟೆಯ ಸರ್ಕಾರಿ ಶಾಲೆಯಲ್ಲಿ ಎಂಟು ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯಿಂದಾಗಿ ಎಸ್ಎಸ್ಎಲ್ಸಿ ಹಾಲ್ ಟಿಕೆಟ್ ನಿರಾಕರಿಸಲಾಗಿದೆ. ಈ ವಿಚಾರವಾಗಿ ಪೋಷಕರು ಮತ್ತು ಮುಖ್ಯ ಶಿಕ್ಷಕಿರ ಮಧ್ಯ ಮಾತಿನಿ ಚಕಮಕಿ ನಡೆದಿದೆ. ಉದ್ದೇಶಪೂರ್ವಕ ಹಾಜರಾತಿ ಕಡಿಮೆ ಕೊಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಬಿಇಒ ಪರಿಸ್ಥಿತಿಯನ್ನು ಪರಿಶೀಲಿಸಿ ಎರಡನೇ ಪರೀಕ್ಷೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.

ಬಾಗಲಕೋಟೆ, ಮಾರ್ಚ್ 20: ಅವರು ಎಲ್ಲ ವಿದ್ಯಾರ್ಥಿಗಳಂತೆ ಶಾಲೆಗೆ ಎಸ್ಎಸ್ಎಲ್ಸಿ (SSLC) ಹಾಲ್ ಟಿಕೆಟ್ ಪಡೆಯುವುದಕ್ಕೆ ಹೋಗಿದ್ದರು. ಆದರೆ ಹಾಜರಾತಿ ಕೊರತೆ ಅಂತ ಅವರಿಗೆ ಹಾಲ್ ಟಿಕೆಟ್ ಬಂದಿಲ್ಲ. ಇದರಿಂದ ಪೋಷಕರನ್ನು (parents) ಕರೆದುಕೊಂಡು ಬಂದ ವಿದ್ಯಾರ್ಥಿಗಳು ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು. ಹಾಲ್ ಟಿಕೆಟ್ ವಿಚಾರವಾಗಿ ಸ್ಥಳದಲ್ಲಿ ಹೈಡ್ರಾಮಾವೇ ನಡೆದು ಹೋಗಿದೆ. ನಗರದ ಬಿಟಿಡಿಎ ಪ್ರೌಢ ಶಾಲೆಯಲ್ಲಿ ನಡೆದಿದೆ. ಫೇಲ್ ಆದರೆ ಶಾಲೆಗೆ ಕಳಂಕ ಬರುತ್ತದೆ ಅಂತ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿರುವ ಪೋಷಕರು ಕಣ್ಣೀರು ಹಾಕಿದ್ದಾರೆ.
ಎಂಟು ವಿದ್ಯಾರ್ಥಿಗಳಿಗೆ ಸಿಗದ ಹಾಲ್ ಟಿಕೆಟ್
ಬಾಗಲಕೋಟೆಯ ಬಿಟಿಡಿಎ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿಯ ಒಟ್ಟು ಎಂಟು ಜನ ವಿದ್ಯಾರ್ಥಿಗಳಿ ಹಾಲ್ ಟಿಕೆಟ್ ಬಂದಿಲ್ಲ. ಇದೇ ಕಾರಣಕ್ಕೆ ಇಲ್ಲಿ ಹೈಡ್ರಾಮಾವೇ ಕ್ರಿಯೇಟ್ ಆಗಿದೆ. ವಿದ್ಯಾರ್ಥಿನಿಯರ ಹಾಜರಾತಿ ಕಡಿಮೆ ಹಿನ್ನೆಲೆ ಹಾಲ್ ಟಿಕೆಟ್ ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ಪೋಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೋಷಕರು, ಹಾಜರಾತಿ ತೋರಿಸಿ. ಅಭ್ಯಾಸದಲ್ಲಿ ವಿದ್ಯಾರ್ಥಿಗಳು ವೀಕ್ ಆಗಿದ್ದು, ಫೇಲ್ ಆದರೆ ಶಾಲೆಗೆ ಕೆಟ್ಟ ಹೆಸರು ಬರುತ್ತೆ ಅಂತ ಉದ್ದೇಶಪೂರ್ವಕವಾಗಿ ಹಾಜರಾತಿ ಕಡಿಮೆ ತೋರಿಸಿದ್ದೀರಿ. ಎಂಟು ಜನ ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಿದ್ದೀರಿ ಎಂದು ತರಾಟೆ ತೆಗೆದುಕೊಂಡರು. ವಿದ್ಯಾರ್ಥಿಗಳು ನಾವು ಹಾಜರಾಗಿದ್ದೇವೆ, ಸಿಸಿ ಕ್ಯಾಮೆರಾ ಚೆಕ್ ಮಾಡಿಸಿ, ಬಿಸಿಯೂಟ ಹಾಜರಾತಿ ಬೇಕಾದರೆ ಚೆಕ್ ಮಾಡಿ ಎಂದಿದ್ದಾರೆ.
ಇದನ್ನೂ ಓದಿ: SSLC Exams Preparation Tips: ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭ, ಒಂದು ದಿನದ ಸಿದ್ಧತೆ ಹೀಗಿರಲಿ
ಇದೆ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ಹೈಡ್ರಾಮಾ ಕ್ರಿಯೇಟ್ ಆಯ್ತು. ಪೋಷಕರು ಮುಖ್ಯಶಿಕ್ಷಕಿ ಜಿಎಸ್ ಖೋತ್ ಅವರ ಜೊತೆಗೆ ವಾಗ್ವಾದಕ್ಕೆ ಇಳಿದರು. ಹಾಜರಾತಿ ಪುಸ್ತಕ ತೋರಿಸಿ ಎಂದು ಪಟ್ಟು ಹಿಡಿದರು. ಆಗ ಹಾಜರಾತಿ ಪುಸ್ತಕ ತೋರಿಸಬೇಕಾಯಿತು. ಬಿಸಿಯೂಟದ ಹಾಜರಿ ಪುಸ್ತಕ ತೋರಿಸಿ ಎಂದರೆ ಅಡುಗೆ ಸಿಬ್ಬಂದಿಯೊಬ್ಬಳು ಕೀಲಿ ಒಯ್ದಿದ್ದಾಳೆ ಎಂದು ಬಿಸಿಯೂಟ ಹಾಜರಾತಿ ಪುಸ್ತಕವನ್ನು ಶಾಲಾ ಸಿಬ್ಬಂದಿ ತೋರಿಸಲು ವಿಫಲರಾದರು.
ಉದ್ದೇಶಪೂರ್ವಕವಾಗಿ ಹಾಜರಾತಿ ಕಡಿಮೆ ತೋರಿಸಿಲ್ಲ ಎಂದ ಮುಖ್ಯಶಿಕ್ಷಕಿ ಜಿಎಸ್ ಖೋತ್
ಇಷ್ಟರಲ್ಲಿ ಬಾಗಲಕೋಟೆ ಬಿಇಒ ಎಮ್‌ಎಸ್ ಬಡದಾನಿ ಶಾಲೆಗೆ ಆಗಮಿಸಿದರು. ಮುಖ್ಯಶಿಕ್ಷಕಿ ಜೊತೆ ಚರ್ಚಿಸಿದರು. ಪೋಷಕರು, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತಾಡಿದ ಮುಖ್ಯಶಿಕ್ಷಕಿ ಜಿಎಸ್ ಖೋತ್, ಎಂಟು ವಿದ್ಯಾರ್ಥಿಗಳ ಹಾಜರಾತಿ ಕೊರತೆಯಿದೆ. ಹಾಜರಾತಿ ಕಡಿಮೆ ಇದ್ದ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ. ಆ ಪ್ರಕಾರ ಆನ್ ಲೈನ್ ಪ್ರಕ್ರಿಯೆಯಲ್ಲಿ ಹಾಲ್ ಟಿಕೆಟ್ಗೆ ಅವರು ಅರ್ಹರಾಗಿಲ್ಲ. ಎರಡನೇ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು. ಉದ್ದೇಶಪೂರ್ವಕವಾಗಿ ಹಾಜರಾತಿ ಕಡಿಮೆ ತೋರಿಸಿಲ್ಲ ಎಂದು ಹೇಳಿದ್ದಾರೆ.
ಹಾಜರಾತಿ 75% ರಷ್ಟು ಇರಬೇಕು ಎಂಬ ನಿಯಮವಿದೆ. ಆದರೆ ಹಾಜರಾತಿ ಕಡಿಮೆಯಿದೆ. ಈ ಹಿನ್ನೆಲೆ ಹಾಲ್ ಟಿಕೆಟ್ ಸಿಕ್ಕಿಲ್ಲ. ಹಾಜರಾತಿ ಬಗ್ಗೆ ಪೋಷಕರಿಗೆ ನೀಡಿದ ಮಾಹಿತಿ ಬಗ್ಗೆ ಮಾಹಿತಿ ಕಲೆ ಹಾಕಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ. ಸದ್ಯಕ್ಕೆ ನಾಳಿನ ಪರೀಕ್ಷೆಗೆ ಹಾಲ್ ಟಿಕೆಟ್ ಕೊಡುವುದು ಸಾಧ್ಯವಿಲ್ಲ. ಎರಡನೇ ಪರೀಕ್ಷೆಗೆ ಅವಕಾಶವಿದೆ ಎಂದಿದ್ದಾರೆ.
ಇದನ್ನೂ ಓದಿ: 9 ವಿಶ್ವವಿದ್ಯಾಲಯ ಮುಚ್ಚಲ್ಲ: ಬಿಎಸ್ವೈ ಮೊಮ್ಮಗನ ಉದಾಹರಣೆಯೊಂದಿಗೆ ಡಿಕೆಶಿ ಸ್ಪಷ್ಟನೆ
ಒಟ್ಟಿನಲ್ಲಿ ಹಾಜರಾತಿ ಕೊರತೆ ಅಂತ ಎಂಟು ವಿದ್ಯಾರ್ಥಿಗಳ ಪರೀಕ್ಷೆಗೆ ಅವಕಾಶ ಕೈ ತಪ್ಪಿದೆ. ಅಧಿಕಾರಿಗಳು ಎರಡನೇ ಪರೀಕ್ಷೆಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದು, ಸದ್ಯ ವಿದ್ಯಾರ್ಥಿಗಳು, ಪೋಷಕರು ಶಾಂತವಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.