ಬ್ಯಾಂಕ್ ಜನಾರ್ಧನ್ 860 ಸಿನಿಮಾ ಮಾಡಿದರೂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ; ತಪ್ಪಿನ ಬಗ್ಗೆ ಮರುಗಿದ್ದ ನಟ
Bank Janaradhan Death: ಪ್ರಸಿದ್ಧ ಕನ್ನಡ ನಟ ಬ್ಯಾಂಕ್ ಜನಾರ್ಧನ್ ಅವರು 76 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 860ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರೂ, ಆರ್ಥಿಕ ಸಂಕಷ್ಟ ಅವರನ್ನು ಕಾಡುತ್ತಿತ್ತು. ಬ್ಯಾಂಕ್ ಉದ್ಯೋಗ ಮತ್ತು ನಟನೆಯ ನಡುವೆ ಸಮಯ ಹೊಂದಿಸಲು ಸಾಧ್ಯವಾಗದೆ, ಸಂಬಳ ಕಡಿತ ಮತ್ತು ಕಡಿಮೆ ಸಂಭಾವನೆಯಿಂದ ಅವರು ತೊಂದರೆ ಅನುಭವಿಸಿದ್ದರು.

ಬ್ಯಾಂಕ್ ಜನಾರ್ಧನ್ (Bank Janardhan) ಅವರು ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಜನಾರ್ಧನ್ ಅವರು ಬರೋಬ್ಬರಿ 860 ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಅವರಿಗೆ ಆರ್ಥಿಕವಾಗಿ ಸಾಕಷ್ಟು ತೊಂದರೆಗಳು ಇದ್ದವು. ಇದಕ್ಕೆ ಅವರು ಮಾಡಿದ ತಪ್ಪೇ ಕಾರಣವಂತೆ. ಈ ಬಗ್ಗೆ ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನ ಒಂದರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಹೇಳಿಕೊಂಡು ಮರುಗಿದ್ದರು. ಅಷ್ಟೆಲ್ಲ ಸಿನಿಮಾಗಳನ್ನು ಮಾಡಿದರೂ ಹಣ ಗಳಿಸಲು ಏಕೆ ಸಾಧ್ಯವಾಗಿಲ್ಲ ಎಂಬುದನ್ನು ವಿವರಿಸಿದ್ದರು.
ಜನಾರ್ಧನ್ ಅವರು ಬ್ಯಾಂಕ್ ಜನಾರ್ಧನ್ ಆಗಲು ಕಾರಣವಾಗಿದ್ದು ಅವರ ವೃತ್ತಿ ಜೀವನ. ಬ್ಯಾಂಕ್ನಲ್ಲಿ ಕೆಲಸ ಮಾಡಿಕೊಂಡಿದ್ದ ಅವರು, ನಂತರ ನಟನೆಗೆ ಹೊರಳಿದರು. ಆದರೆ, ಬ್ಯಾಂಕ್ ಕೆಲಸ ಬಿಟ್ಟಿರಲಿಲ್ಲ. ನಟನೆಯ ಕಾರಣಕ್ಕೆ ಅವರು ಬ್ಯಾಂಕ್ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೆಲ್ಲ ರಜಗಳೂ ಇಲ್ಲದ ಕಾರಣ ಸಂಬಳ ಕಟ್ ಮಾಡಿಕೊಳ್ಳುತ್ತಿದ್ದರು. ಇತ್ತ ಸಿನಿಮಾಗಳಲ್ಲಿ ನಟಿಸುವಾಗ ಹೆಚ್ಚಿನ ಸಂಭಾವನೆ ನೀಡುತ್ತಿರಲಿಲ್ಲ. ಇದರಿಂದ ಅವರಿಗೆ ಜೀವನ ನಡೆಸೋದೇ ಕಷ್ಟ ಆಗಿತ್ತು.
‘ಇವತ್ತಿನವರೆಗೆ 860 ಸಿನಿಮಾ ಮಾಡಿದ್ದೇನೆ. ಇದರಲ್ಲಿ ಮೂರು ತೆಲುಗು, ಮೂರು ತಮಿಳು, ನಾಲ್ಕು ತುಳು ಮಾಡಿದ್ದೇನೆ. ಆದರೆ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲ. ಯಾಕೆಂದರೆ ಡಿಮ್ಯಾಂಡ್ ಮಾಡೋಕೆ ಹೋಗಿಲ್ಲ. ಎಷ್ಟು ಕೊಟ್ಟರೋ ಅಷ್ಟೇ ತೆಗೆದುಕೊಳ್ಳುತ್ತಿದ್ದೆ. ಪಾತ್ರದ ಬಗ್ಗೆ ವ್ಯಾಮೋಹ ಇತ್ತು. ಹೀಗಾಗಿ, ಎಷ್ಟು ಕೊಡಲಿ ಎಂದು ಕೇಳಿದಾಗ ಇಷ್ಟೇ ಕೊಡಿ ಎಂದು ಕೇಳಲಿಲ್ಲ’ ಎಂದಿದ್ದರು ಬ್ಯಾಂಕ್ ಜನಾರ್ಧನ್. ಮೊದಲ ಮಗಳ ಮದುವೆ ಮಾಡುವಾಗ ಅವರ ಬಳಿ ಹಣ ಇರಲಿಲ್ಲ. ಆಗ ಸಹಾಯಕ್ಕೆ ಬಂದಿದ್ದರು ಕುಮಾರ್ ಬಂಗಾರಪ್ಪ. ಮಗಳ ಮದುವೆ ಖರ್ಚಿಗೆ ಆಗಿನ ಕಾಲಕ್ಕೆ ಬರೋಬ್ಬರಿ 50 ಸಾವಿರ ರೂಪಾಯಿ ನೀಡಿದ್ದರು. ‘ನಾನು ಇಂದಿಗೂ ಯಾರನ್ನಾದರೂ ನೆನಪಿಸಿಕೊಳ್ಳುತ್ತೇನೆ ಎಂದರೆ ಕುಮಾರ್ ಬಂಗಾರಪ್ಪ ಅವರನ್ನು’ ಎಂದು ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ನಲ್ಲಿ ಬ್ಯಾಂಕ್ ಜನಾರ್ಧನ್ ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ: ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ; 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
ಬ್ಯಾಂಕ್ ಜನಾರ್ಧನ್ ಇಂದು (ಏಪ್ರಿಲ್ 24) ಬೆಳಿಗ್ಗೆ 2.30ಕ್ಕೆ ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಲವು ದಿನಗಳ ಕಾಲ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅವರ ಪಾರ್ಥೀವ ಶರೀರ ಇಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:22 am, Mon, 14 April 25