ಫಿಲ್ಮ್ ಫೆಸ್ಟಿವಲ್ಗಳಲ್ಲಿ ಗಮನ ಸೆಳೆದ ‘ಗ್ರೀನ್’ ಸಿನಿಮಾ; ಮುಖ್ಯ ಪಾತ್ರದಲ್ಲಿ ಪ್ರತಿಭಾವಂತ ಕಲಾವಿದರು
‘ಗ್ರೀನ್’ ಸಿನಿಮಾದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್ ಮುಂತಾದವರು ನಟಿಸಿದ್ದಾರೆ. ರಾಜ್ ವಿಜಯ್ ಹಾಗೂ ಬಿ.ಎನ್. ಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ರಾಜ್ ವಿಜಯ್ ನಿರ್ದೇಶನ ಮಾಡಿದ್ದಾರೆ. ಒಂದು ಡಿಫರೆಂಟ್ ಕಥೆ ಈ ಸಿನಿಮಾದಲ್ಲಿದೆ ಎಂದು ಚಿತ್ರತಂಡ ಹೇಳಿದೆ. ‘ಗ್ರೀನ್’ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..

ಭಿನ್ನ ಶೀರ್ಷಿಕೆ ಇರುವ ‘ಗ್ರೀನ್’ ಸಿನಿಮಾ (Green Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾವನ್ನು ರಾಜ್ ವಿಜಯ್ ಮತ್ತು ಬಿ.ಎನ್. ಸ್ವಾಮಿ ಅವರು ನಿರ್ಮಾಣ ಮಾಡಿದ್ದಾರೆ. ರಾಜ್ ವಿಜಯ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ವಿಭಿನ್ನ ಕಥಾಹಂದರ ಇದೆ ಎಂದು ಚಿತ್ರತಂಡ ಹೇಳಿದೆ. ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಿನಿಮೋತ್ಸಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಸೈಕಲಾಜಿಕಲ್ ಮೈಂಡ್ ಬೆಂಡಿಂಗ್ ಕಥಾಹಂದರವಿದೆ. ಪ್ರಮುಖ ಪಾತ್ರಗಳಲ್ಲಿ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ (Gopalkrishna Deshpande), ಬಾಲಾಜಿ ಮನೋಹರ್, ವಿಶ್ವನಾಥ್ ಮಾಂಡಲಿಕ, ಆರ್.ಜೆ. ವಿಕ್ಕಿ, ಶಿವ ಮಂಜು, ಡಿಂಪಿ ಫದ್ಯಾ, ರಾಮಚಂದ್ರ, ಮುರುಡಯ್ಯ, ಗಿರೀಶ್ ಮುಂತಾದವರು ನಟಿಸಿದ್ದಾರೆ.
‘ಗ್ರೀನ್’ ಸಿನಿಮಾಗೆ ಕೆ. ಮಧುಸೂದನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಶಕ್ತಿ ಸ್ಯಾಕ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇದು ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವಾಗಿದ್ದು, ಪ್ರೇಕ್ಷಕರ ಮನಸ್ಸಿನ ಆಳಕ್ಕೆ ಕರೆದೊಯ್ಯುತ್ತದೆ. ತನ್ನ ಇಡೀ ಬದುಕನ್ನೇ ನಿಯಂತಣ ಮಾಡುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಪ್ರಯತ್ನಿಸುವ ನಾಯಕನ ಕಥೆಯೇ ಗ್ರೀನ್ ಎಂದು ಚಿತ್ರತಂಡ ಹೇಳಿದೆ.
ಕಥೆಯ ಬಗ್ಗೆ ‘ಗ್ರೀನ್’ ಚಿತ್ರತಂಡ ಒಂದಷ್ಟು ಮಾಹಿತಿ ಬಿಟ್ಟುಕೊಟ್ಟಿದೆ. ‘ತನ್ನೊಳಗಿನ ಆಂತರಿಕ ಹೋರಾಟದ ನಡುವೆ, ಸಿನಿಮಾದ ಕಥಾನಾಯಕ ತಾನು ನಿಜವಾಗಿಯೂ ಯಾರು ಎಂಬುದನ್ನು ಹುಡುಕಲು ಯತ್ನಿಸುತ್ತಾನೆ. ತನ್ನೊಳಗಿನ ರಾಕ್ಷಸ ತನ್ನ ಪೂರ್ತಿ ಜೀವನವನ್ನೇ ನುಂಗುವ ಮೊದಲು ನೆರವು ಹುಡುಕುವ ಮಹತ್ವವನ್ನು ಈ ಸಿನಿಮಾ ಒತ್ತಿಹೇಳುತ್ತದೆ. ಮನಸ್ಸಿನ ಘೋರ ಅಂಧಕಾರವನ್ನು ಅನ್ವೇಷಿಸುವ ಸಿನಿಮಾ ಇದು’ ಎಂದು ನಿರ್ದೇಶಕ ರಾಜ್ ವಿಜಯ್ ಅವರು ಹೇಳಿದ್ದಾರೆ.
‘ಈ ಸಿನಿಮಾ ಮೂಲಕ ನಮ್ಮ ಕರಾಳ ಆಲೋಚನೆಗಳನ್ನು ಎದುರಿಸುವ ಮತ್ತು ಅವು ಮೇಲುಗೈ ಸಾಧಿಸುವ ಮೊದಲು ಸಹಾಯವನ್ನು ಪಡೆಯುವ ಮಹತ್ವವನ್ನು ನಾನು ಎತ್ತಿ ತೋರಿಸಲು ಬಯಸುತ್ತೇನೆ. ಈ ಕಥೆ ಒಂದು ಆಳವಾದ ಅನುಭವವಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅನುಭವಿಸುವ ಆಂತರಿಕ ಹೋರಾಟಗಳು ಹಾಗೂ ಅದನ್ನು ಜಯಿಸಲು ಬೇಕಾದ ಧೈರ್ಯದ ಮಹತ್ವವನ್ನು ಒತ್ತಿಹೇಳುತ್ತದೆ’ ಎಂದಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: ‘ಓದೆಲ 2’ ಟ್ರೇಲರ್: ತಮನ್ನಾ, ವಸಿಷ್ಠ ಸಿಂಹ ಮುಖಾಮುಖಿ; ಹಾರರ್ ಪ್ರಿಯರಿಗೆ ಹಬ್ಬ
‘ಮಾನವನ ಮನಸ್ಸಿನ ಸಂಕೀರ್ಣತೆಯನ್ನು ಪರಿಶೋಧಿಸುವ ಈ ಕಥೆ ವೈಯಕ್ತಿಕವಾಗಿ ನಮಗೆ ತುಂಬಾ ಹತ್ತಿರವಾಗಿದೆ. ವಾಸ್ತವದ ಮೇಲಿನ ನಮ್ಮ ನಂಬಿಕೆಗಳನ್ನು ಈ ಸಿನಿಮಾ ಪ್ರಶ್ನಿಸುತ್ತದೆ. ನಮ್ಮೊಳಗೇ ಅವಿತಿರುವ ಭಯವನ್ನು ಎದುರಿಸುವುದು, ಎದುರಿಸಲು ನೆರವು ಬೇಕಾದಲ್ಲಿ ಸಹಾಯ ಕೋರುವುದು ಎಷ್ಟು ಅವಶ್ಯಕ ಎಂಬುದನ್ನು ಹೇಳುತ್ತದೆ’ ಎಂದು ನಿರ್ಮಾಪಕ ರಾಜ್ ವಿಜಯ್ ಮತ್ತು ಸಹ ನಿರ್ಮಾಪಕ ಬಿ.ಎನ್. ಸ್ವಾಮಿ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.