ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ; 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ
Bank Janardhan Passes Away: ಹಿರಿಯ ನಟ ಬ್ಯಾಂಕ್ ಜನಾರ್ಧನ್ ಅವರು 76ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 800ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ ಅವರು 1985ರಲ್ಲಿ 'ಪಿತಾಮಹ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ವಿಜಯಾ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರಿಗೆ ಬ್ಯಾಂಕ್ ಜನಾರ್ಧನ್ ಎಂಬ ಹೆಸರು ಬಂದಿತು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಭಾರೀ ನಷ್ಟವಾಗಿದೆ.

ಕನ್ನಡ ಚಿತ್ರರಂಗಕ್ಕೆ ಸೋಮವಾರ (ಏಪ್ರಿಲ್ 14) ಒಂದು ದುಃಖದ ಸುದ್ದಿ ಎದುರಾಗಿದೆ. ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ (Bank Janardhan) ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಲವು ದಿನಗಳ ಕಾಲ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ರಾತ್ರಿ 2.30ರ ಸುಮಾರಿಗೆ ಬ್ಯಾಂಕ್ ಜನಾರ್ಧನ್ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅವರ ಪಾರ್ಥೀವ ಶರೀರ ಇಡಲಾಗಿದೆ.
1949ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸಿದರು. 1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಶ್..’, ‘ತರ್ಲೆ ನನ್ಮಗ’ ಹೀಗೆ ಹಲವು ಚಿತ್ರಗಳಲ್ಲಿ ಅವರು ನಟಿಸಿದರು. 2016ರಿಂದ ಈಚೆಗೆ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿರಲಿಲ್ಲ. 2022ರ ‘ಮಠ’ ಹಾಗೂ 2023ರ ‘ಉಂಡೇನಾಮ’ ಚಿತ್ರದಲ್ಲಿ ಅವರು ನಟಿಸಿದ್ದರು.
ಹೆಸರು ಬಂದಿದ್ದು ಹೇಗೆ?
ಜನಾರ್ಧನ್ ಅವರಿಗೆ ಬ್ಯಾಂಕ್ ಜನಾರ್ಧನ್ ಎಂದು ಹೆಸರು ಬರಲೂ ಕೂಡ ಕಾರಣವಿದೆ. ಜನಾರ್ಧನ್ ಅವರು ಚಿತ್ರದುರ್ಗದ ಸಮೀಪದ ಹೊಳಲ್ಕೆರೆ ಬಳಿಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಕಲೆಯ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ, ನಾಟಕಗಳನ್ನು ಮಾಡಿಕೊಂಡಿದ್ದರು. ಅವರ ನಾಟಕವನ್ನು ನೋಡಿ ಧೀರೇಂದ್ರ ಗೋಪಾಲ್ ಅವರು ಇಂಪ್ರೆಸ್ ಆದರು. ಬೆಂಗಳೂರಿಗೆ ಬರುವಂತೆ ಅವರು ಹೇಳಿದ್ದರು.
ಇದನ್ನೂ ಓದಿ: ಹಿರಿಯ ನಟ ಬ್ಯಾಂಕ್ ಜನಾರ್ದನ್ಗೆ ಹೃದಯಾಘಾತ; ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಪುತ್ರ
ನಂತರ ಒಂದೂವರೆ ವರ್ಷ ಬಿಟ್ಟು ಜನಾರ್ಧನ್ ಅವರು ಬೆಂಗಳೂರಿಗೆ ಬಂದರು. ಅವರು ‘ಊರಿಗೆ ಉಪಕಾರಿ’ ಸಿನಿಮಾದಲ್ಲಿ ವಜ್ರಮುನಿ ಬಾಡಿಗಾರ್ಡ್ ಪಾತ್ರ ಮಾಡಿದರು. ವಿಷ್ಣುವರ್ಧನ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಇದ್ದರು. ಜನಾರ್ಧನ್ ಅವರು ಸುಮಾರು 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಾಟಕಗಳಿಂದ ಆರಂಭ ಆದ ಅವರ ಬದುಕು ನಂತರ ಸಿನಿಮಾಗಳತ್ತ ಹೊರಳಿತು. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡೇ ಅವರು ಆರಂಭದಲ್ಲಿ ಚಿತ್ರರಂಗದಲ್ಲಿ ಸಮಯ ಕಳೆದರು. ನಂತರದ ದಿನಗಳಲ್ಲಿ ಅವರಿಗೆ ದೊಡ್ಡ ದೊಡ್ಡ ಆಫರ್ಗಳು ಬರೋಕೆ ಆರಂಭ ಆದವು. ಅವರು ಚಿತ್ರರಂಗದಲ್ಲಿ ಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:11 am, Mon, 14 April 25