ನಟ ಶರಣ್ ಕಂಠದಲ್ಲಿ ಮೂಡಿಬಂತು ‘ಟಕೀಲಾ’ ಸಿನಿಮಾದ ಹೊಸ ಹಾಡು
‘ಟಕೀಲಾ’ ಸಿನಿಮಾಗೆ ದೇವರಾಯನದುರ್ಗ, ಬೆಂಗಳೂರು, ಸಕಲೇಶಪುರ ಮುಂತಾದೆಡೆ ಶೂಟಿಂಗ್ ಮಾಡಲಾಗಿದೆ. ನಟ ಧರ್ಮ ಕೀರ್ತಿರಾಜ್ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಡಾ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದ ಹಾಡಿಗೆ ಶರಣ್ ಅವರು ಧ್ವನಿ ನೀಡಿದ್ದಾರೆ. ಈ ಚಿತ್ರಕ್ಕೆ ಕೆ. ಪ್ರವೀಣ್ ನಾಯಕ್ ಆ್ಯಕ್ಷನ್-ಕಟ್ ಹೇಳಿದ್ದಾರೆ.

ಖ್ಯಾತ ನಟ ಶರಣ್ (Sharan) ಅವರು ಉತ್ತಮ ಗಾಯಕ ಕೂಡ ಹೌದು. ಈಗಾಗಲೇ ಅವರ ಕಂಠದಲ್ಲಿ ಬಂದ ಅನೇಕ ಹಾಡುಗಳು ಸೂಪರ್ ಹಿಟ್ ಆಗಿವೆ. ಅವರ ಧ್ವನಿಯಲ್ಲಿ ಸಾಂಗ್ ಕೇಳಲು ಅಭಿಮಾನಿಗಳು ಇಷ್ಟಪಡುತ್ತಾರೆ. ಅಂಥವರಿಗೆ ಇಲ್ಲಿದೆ ಗುಡ್ ನ್ಯೂಸ್. ‘ಟಕೀಲಾ’ (Tequila) ಸಿನಿಮಾದ ಹೊಸ ಹಾಡಿಗೆ ಶರಣ್ ಅವರು ಧ್ವನಿ ನೀಡಿದ್ದಾರೆ. ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ‘ಟಕೀಲಾ’ ಸಿನಿಮಾಗೆ ಕೆ. ಪ್ರವೀಣ್ ನಾಯಕ್ ಅವರು ನಿರ್ದೇಶನ ಮಾಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಧರ್ಮ ಕೀರ್ತಿರಾಜ್ (Dharma Keerthiraj) ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.
ಶೀರ್ಷಿಕೆ ಕಾರಣದಿಂದ ‘ಟಕೀಲಾ’ ಸಿನಿಮಾ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಶರಣ್ ಹಾಡಿರುವ ಗೀತೆಗೆ ಡಾ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ‘ಟಕೀಲಾ’ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಜೊತೆ ನಿಖಿತಾ ಸ್ವಾಮಿ ಅವರು ನಾಯಕಿಯಾಗಿ ನಟಿಸಿದ್ದಾರೆ. ನಾಗೇಂದ್ರ ಅರಸ್, ಸುಮನ್ ಶರ್ಮ, ಕೋಟೆ ಪ್ರಭಾಕರ್, ಅರುಣ್ ಮೇಸ್ಟ್ರು ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
‘ಟಕೀಲಾ’ ಸಿನಿಮಾಗೆ ಕೆ. ಪ್ರವೀಣ್ ನಾಯಕ್ ಅವರು ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಸಂಭಾಷಣೆ, ಚಿತ್ರಕಥೆ ಹಾಗೂ ಸಾಹಿತ್ಯ ಕೂಡ ಬರೆದಿದ್ದಾರೆ. ಕೆ. ಪ್ರವೀಣ್ ನಾಯಕ್ ಅವರು ಈ ಮೊದಲು ‘ಜಡ್’, ‘ಮೀಸೆ ಚಿಗುರಿದಾಗ’, ‘ಹೂ ಅಂತಿಯಾ ಉಹೂ ಅಂತೀಯ’ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದರು. ಈಗ ‘ಟಕೀಲಾ’ ಸಿನಿಮಾವನ್ನು ಪ್ರೇಕ್ಷಕರ ಎದುರು ತರುತ್ತಿದ್ದಾರೆ.
ಮರಡಿಹಳ್ಳಿ ನಾಗಚಂದ್ರ ಅವರು ‘ಟಕೀಲಾ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಹಿಂದೆ ‘ವಿದ್ಯಾರ್ಥಿ’, ‘ಮುನಿಯ’. ‘ಜನ್‌ಧನ್’ ಚಿತ್ರಗಳಿಗೆ ಮರಡಿಹಳ್ಳಿ ನಾಗಚಂದ್ರ ನಿರ್ದೇಶನ ಮಾಡಿದ್ದರು. ಈ ಬಾರಿ ಅವರು ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಶಂಕರ್ ರಾಮರೆಡ್ಡಿ ಅವರು ಸಹ ನಿರ್ಮಾಪಕರಾಗಿದ್ದಾರೆ. ನಿರ್ಮಾಣದಲ್ಲಿ ಇದು ಅವರಿಗೆ ಮೊದಲ ಅನುಭವ.
ಇದನ್ನೂ ನೋಡಿ: ಟಾಲಿವುಡ್ಗೆ ಧರ್ಮ ಕೀರ್ತಿರಾಜ್; ಅಪ್ಸರೆಯ ಜೊತೆ ಸಿನಿಮಾ
‘ಶ್ರೀ ಸಿದ್ದಿ ವಿನಾಯಕ ಫಿಲ್ಮ್ಸ್’ ಮೂಲಕ ‘ಟಕೀಲಾ’ ಸಿನಿಮಾ ನಿರ್ಮಾಣ ಆಗಿದೆ. ಪಿ.ಕೆ.ಹೆಚ್. ದಾಸ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಟಾಪ್ ಸ್ಟಾರ್ ರೇಣು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆ. ಗಿರೀಶ್ ಕುಮಾರ್ ಅವರ ಸಂಕಲನ ಈ ಸಿನಿಮಾಗಿದೆ. ಜಾಗ್ವರ್ ಸಣ್ಣಪ್ಪ ಮತ್ತು ರಮೇಶ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಸ್ಟಾರ್ ನಾಗಿ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಪ್ರಶಾಂತ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.