‘ನನಗೆ ಅವರೇ ಸ್ಪೂರ್ತಿ’, ಪುನೀತ್ ರಾಜ್ಕುಮಾರ್ ನೆನಪು ಮಾಡಿಕೊಂಡ ಬಾಲಿವುಡ್ ನಟಿ
Puneeth Rajkumar: ಪುನೀತ್ ರಾಜ್ಕುಮಾರ್ ತಮ್ಮ ವ್ಯಕ್ತಿತ್ವದಿಂದ ಕೋಟ್ಯಂತರ ಜನರಿಗೆ ಸ್ಪೂರ್ತಿ ತುಂಬಿದ್ದಾರೆ. ಪುನೀತ್ ಅವರ ಸಿನಿಮಾ, ಅವರ ಜೀವನ ಕಂಡು ಅವರಂತೆ ಬದುಕಲು ಪ್ರಯತ್ನಿಸುತ್ತಿರುವ ಹಲವಾರು ಮಂದಿ ಇದ್ದಾರೆ. ಕೇವಲ ಅವರ ಅಭಿಮಾನಿಗಳು, ಸಾಮಾನ್ಯ ಜನರು ಮಾತ್ರವೇ ಅಲ್ಲ ಸಿನಿಮಾ ಸೆಲೆಬ್ರಿಟಿಗಳಿಗೆ ಸಹ ಪುನೀತ್ ರಾಜ್ಕುಮಾರ್ ಅವರು ಸ್ಪೂರ್ತಿ ತುಂಬಿದ್ದಾರೆ. ಬಾಲಿವುಡ್ ನಟಿಯೊಬ್ಬರು ಪುನೀತ್ ರಾಜ್ಕುಮಾರ್ ಬಗ್ಗೆ ಬರೆದಿರುವ ಈ ಸಾಲುಗಳನ್ನು ನೋಡಿ..

ಪುನೀತ್ ರಾಜ್ಕುಮಾರ್ (Puneeth Rajkumar) ಅದೆಷ್ಟೋ ಕೋಟ್ಯಂತರ ಅಭಿಮಾನಿಗಳಿಗೆ ಸ್ಪೂರ್ತಿ ನೀಡಿದ್ದಾರೆ. ಅಪ್ಪು ಮಾಡಿದ್ದಾರೆಂದು ಲಕ್ಷಾಂತರ ಜನ ನೇತ್ರದಾನ ಮಾಡಿದ್ದಾರೆ. ಅಪ್ಪು ಮಾಡಿದ್ದಾರೆಂದು ಅದೆಷ್ಟೋ ಜನ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಪ್ಪು ಅವರ ಸಿನಿಮಾಗಳನ್ನು ನೋಡಿ ಐಪಿಎಸ್ ಕಲಿತವರು ಸಹ ಇದ್ದಾರೆ. ಅಪ್ಪು ಅವರನ್ನು ಸ್ಪೂರ್ತಿಯಾಗಿಟ್ಟುಕೊಂಡು ಬದುಕು ನಡೆಸುತ್ತಿರುವ ಜನ ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಇದ್ದಾರೆ. ಅಂದಹಾಗೆ ಅಪ್ಪು ಕೇವಲ ಅಭಿಮಾನಿಗಳಿಗೆ, ಸಾಮಾನ್ಯ ಜನರಿಗೆ ಮಾತ್ರವೇ ಸ್ಪೂರ್ತಿ ಅಲ್ಲ, ಸಿನಿಮಾ ತಾರೆಯವರಿಗೂ ಸ್ಪೂರ್ತಿ. ಬಾಲಿವುಡ್ ನಟಿಯೊಬ್ಬರು ಇದೀಗ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದ್ದು, ಮಾತ್ರವಲ್ಲದೆ, ಅವರ ವ್ಯಕ್ತಿತ್ವದಿಂದ ಪ್ರೇರಣೆ ಪಡೆದಿದ್ದಾರೆ.
‘ದಿ ಕೇರಳ ಸ್ಟೋರಿ’, ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’, ಅಕ್ಷಯ್ ಕುಮಾರ್ ಜೊತೆಗೆ ‘ಸೆಲ್ಫಿ’ ಇನ್ನೂ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಅದಾ ಶರ್ಮಾ, ಕೇವಲ ಒಂದೇ ಒಂದು ಕನ್ನಡ ಸಿನಿಮಾನಲ್ಲಿ ಮಾತ್ರವೇ ನಟಿಸಿದ್ದಾರೆ. ಅದು ಪುನೀತ್ ರಾಜ್ಕುಮಾರ್ ನಟನೆಯ ‘ರಣ ವಿಕ್ರಮ’. ದೊಡ್ಡ ದೊಡ್ಡ ಬಾಲಿವುಡ್, ಟಾಲಿವುಡ್ ಸ್ಟಾರ್ಗಳ ಜೊತೆಗೆ ಭಾರಿ ದೊಡ್ಡ ಬಜೆಟ್ನ ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ಅವರು ಮಾರು ಹೋಗಿದ್ದು ಮಾತ್ರ ಕನ್ನಡದ ಹೆಮ್ಮೆಯ ನಟ ಪುನೀತ್ ರಾಜ್ಕುಮಾರ್ ಅವರ ವ್ಯಕ್ತಿತ್ವಕ್ಕೆ.
ಪುನೀತ್ ರಾಜ್ಕುಮಾರ್, ಅದಾ ಶರ್ಮಾ ನಟನೆಯ ‘ರಣವಿಕ್ರಮ’ ಸಿನಿಮಾ 2015 ರ ಏಪ್ರಿಲ್ 10 ರಂದು ಬಿಡುಗಡೆ ಆಗಿತ್ತು. ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ನಟಿ ಅದಾ ಶರ್ಮಾ, ‘ಬೆಂಗಳೂರು ಏರ್ಪೋರ್ಟ್ನಿಂದ ನಾನು ಉಳಿದುಕೊಂಡಿದ್ದ ಹೋಟೆಲ್ಗೆ ಹೋಗುವಷ್ಟರಲ್ಲಿ ಸುಮಾರು 50 ಹೋಲ್ಡಿಂಗ್ಸ್ಗಳಲ್ಲಿ ಪುನೀತ್ ಅವರ ಫೋಟೊ ಇತ್ತು. ಎಲ್ಲವೂ ದೊಡ್ಡ ಬ್ರ್ಯಾಂಡ್ಗಳು. ಶೂಟಿಂಗ್ ಸೆಟ್ನ ಬಳಿಯೂ ಎಷ್ಟೋಂದು ಜನ ಅವರಿಗಾಗಿ ಕಾಯುತ್ತಿದ್ದರು. ಆದರೆ ಎಲ್ಲರನ್ನೂ ಅವರು ಶಾಂತವಾಗಿ ಭೇಟಿ ಆದರು. ಎಲ್ಲರೂ ನನಗೆ ನೀನು ಅದೃಷ್ಟವಂತೆ ದೊಡ್ಡ ಸ್ಟಾರ್ ಜೊತೆ ನಟಿಸುತ್ತಿದ್ದೀರ ಎನ್ನುತ್ತಿದ್ದರು’ ಎಂದು ಅದಾ ಶರ್ಮಾ ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್ಕುಮಾರ್: ವಿಡಿಯೋ
ಪುನೀತ್ ಅವರೊಟ್ಟಿಗೆ ನಟಿಸುವಾಗ ನಾನು ಬಹಳ ನರ್ವಸ್ ಆಗಿದ್ದೆ. ಆದರೆ ಪುನೀತ್ ತಮ್ಮ ಸ್ಟಾರ್ಡಮ್ಗೆ ವಿರುದ್ಧವಾಗಿ ಬಹಳ ವಿನಯದಿಂದ, ಫ್ರೆಂಡ್ಲಿಯಾಗಿ ನಡೆದುಕೊಂಡರು. ಪ್ರತಿದಿನ ನಿಗದಿತ ಸಮಯಕ್ಕೆ ಸೆಟ್ಗೆ ಬರುತ್ತಿದ್ದರು. ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಿದ್ದರೂ ಸಹ ರಿಹರ್ಸಲ್ ತಪ್ಪಿಸುತ್ತಿರಲಿಲ್ಲ. ಶೂಟ್ ಮಾಡುವಾಗ 45 ಡಿಗ್ರಿ ಬಿಸಿಲು ಇರುತ್ತಿತ್ತು, ಆದರೆ ಸೆಟ್ನಲ್ಲಿ ಎನರ್ಜಿ ಡ್ರಾಪ್ ಆಗದಂತೆ ನೋಡಿಕೊಳ್ಳುತ್ತಿದ್ದರು. ಎಲ್ಲರೊಟ್ಟಿಗೆ ಮಾತನಾಡುತ್ತಾ ಎನರ್ಜಿ ತುಂಬುತ್ತಿದ್ದರು. ಸಹನಟರೊಟ್ಟಿಗೆ ಹೊಂದಿಕೊಂಡು ನಟಿಸುತ್ತಿದ್ದರು’ ಎಂದಿದ್ದಾರೆ ಅದಾ ಶರ್ಮಾ.
‘ಅಂದು ಪುನೀತ್ ಅನ್ನು ನೋಡಿದಾಗ ಅನಿಸಿದ್ದು, ನಾನು ಎಂದಾದರೂ ಪುನೀತ್ ಅವರಂತೆ ಸ್ಟಾರ್ ಆದರೆ ನಾನೂ ಸಹ ಅವರಂತೆ ನಡೆದುಕೊಳ್ಳಬೇಕು, ಅವರಂತೆ ವಿನಯದಿಂದ ಇರಬೇಕು, ಎಲ್ಲರನ್ನೂ ಪ್ರೀತಿಸಬೇಕು ಎಂದುಕೊಂಡಿದ್ದರಂತೆ ಅದಾ ಶರ್ಮಾ. ಪುನೀತ್ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದ ಅದಾ ಶರ್ಮಾ, ಪುನೀತ್ ಅವರು ಎಲ್ಲಿಯೇ ಇರಲಿ ಅವರಿಗೆ ನನ್ನ ಧನ್ಯವಾದ’ ಎಂದಿದ್ದಾರೆ ನಟಿ. ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸುವ ಮುಂದೆ ಅದಾ ಶರ್ಮಾ, ಅಲ್ಲು ಅರ್ಜುನ್, ಸಿದ್ಧಾರ್ಥ್ ಮಲ್ಹೋತ್ರಾ, ಸಂಜಯ್ ದತ್ ಅವರುಗಳೊಟ್ಟಿಗೆ ನಟಿಸಿದ್ದರು. ಆದರೆ ನಟಿಗೆ ಇಷ್ಟವಾಗಿದ್ದು ಪುನೀತ್ ರಾಜ್ಕುಮಾರ್ ವ್ಯಕ್ತಿತ್ವ ಎಂಬುದು ಗಮನಾರ್ಹ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ