‘ಶಿವನೇ ಶಂಭುಲಿಂಗ’ ಎಂದು ಫೇಮಸ್ ಆಗಿದ್ದ ಧೀರೇಂದ್ರ ಗೋಪಾಲ್ ಪಡೆಯುತ್ತಿದ್ದ ಸಂಭಾವನೆ ಇಷ್ಟೇನಾ?
ಧೀರೇಂದ್ರ ಗೋಪಾಲ್ ಅವರಿಗೆ ಇಂದು ಜನ್ಮದಿನ. ನಾಟಕದಿಂದ ಸಿನಿಮಾ ರಂಗಕ್ಕೆ ಕಾಲಿಟ್ಟ ಅವರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ಮಿಶ್ರಿತ ಖಳನಟನ ಪಾತ್ರಗಳಿಂದ ಹೆಸರು ಮಾಡಿದ ಅವರು, ಆಗಿನ ಕಾಲದಲ್ಲಿ ಕಡಿಮೆ ಸಂಭಾವನೆ ಪಡೆಯುತ್ತಿದ್ದರು ಎಂದು ಅವರ ಅಳಿಯ ಶ್ರೀನಿವಾಸ್ ತಿಳಿಸಿದ್ದಾರೆ.

‘ಶಿವನೇ ಶಂಭುಲಿಂಗ, ಗುರುವೇ ತಿಪ್ಪೇಶ..’ ಈ ಡೈಲಾಗ್ ಕೇಳಿದಾಕ್ಷಣ ನೆನಪಾಗೋದು ಧೀರೇಂದ್ರ ಗೋಪಾಲ್ (Dheerendra Gopal). ವಿಲನ್ ಪಾತ್ರಗಳನ್ನು ಮಾಡಿ, ಅದರಲ್ಲೇ ಹಾಸ್ಯವನ್ನೂ ಬೆರೆಸಿ ಪ್ರೇಕ್ಷಕರನ್ನು ರಂಜಿಸುವ ಕೆಲಸವನ್ನು ಧೀರೇಂದ್ರ ಗೋಪಾಲ್ ಮಾಡುತ್ತಿದ್ದರು. ಧೀರೇಂದ್ರ ಗೋಪಾಲ್ ಅವರಿಗೆ ಇಂದು (ಏಪ್ರಿಲ್ 12) ಜನ್ಮದಿನ. 1940ರಲ್ಲಿ ಜನಿಸಿದ ಅವರು, 2000ನೇ ಇಸ್ವಿಯಲ್ಲಿ ನಿಧನ ಹೊಂದಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಅವರು ಆಗಿನ ಕಾಲದಲ್ಲಿ ತೆಗೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು? ಆ ಬಗ್ಗೆ ಅವರ ಅಳಿಯ ಈ ಮೊದಲು ಮಾತನಾಡಿದ್ದರು.
ಧೀರೇಂದ್ರ ಗೋಪಾಲ್ ಅವರು 70ರ ದಶಕದಲ್ಲಿ ಚಿತ್ರರಂಗಕ್ಕೆ ಬಂದರು. ಅದಕ್ಕೂ ಮೊದಲು ಅವರು ನಾಟಕಗಳಲ್ಲಿ ನಟಿಸುತ್ತಿದ್ದರು. ‘ಗುಬ್ಬಿ ವೀರಣ್ಣ’ ನಾಟಕ ಕಂಪನಿ ಧೀರೇಂದ್ರ ಗೋಪಾಲ್ ಅವರನ್ನು ಗುರುತಿಸಿ ಅವಕಾಶ ನೀಡಿತು. ಅವರು ‘ಎಚ್ಚಮ್ಮ ನಾಯಕ’ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಆ ಬಳಿಕ ಅವರು ಎಂದಿಗೂ ಹಿಂದಿರುಗಿ ನೋಡಲೇ ಇಲ್ಲ. ಆ ಬಳಿಕ ಧೀರೇಂದ್ರ ಗೋಪಾಲ್ ಸಿನಿಮಾಗೆ ಕಾಲಿಟ್ಟರು. ಅವರ ಮೊದಲ ಸಿನಿಮಾ ‘ನಾಗರಹಾವು’.
ಆ ಬಳಿಕ ಧೀರೇಂದ್ರ ಗೋಪಾಲ್ ಅವರು 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಾಜಕಾರಣಿಯಾಗಿ, ವಿಲನ್ ಆಗಿ, ಉದ್ಯಮಿ ಆಗಿ ನಟಿಸಿ ಅವರು ಗಮನ ಸೆಳೆದರು. ‘ಪಡುವಾರಹಳ್ಳಿ ಪಾಂಡವರು’, ‘ಸುಭದ್ರ ಕಲ್ಯಾಣ’, ‘ಗಜಪತಿ ಘರ್ವಭಂಗ’, ‘ನಂಜುಂಡಿ ಕಲ್ಯಾಣ’ ರೀತಿಯ ಸಿನಿಮಾಗಳನ್ನು ಅವರು ಮಾಡಿದರು.
ಧೀರೇಂದ್ರ ಗೋಪಾಲ್ ಅವರು ಆಗಿನ ಕಾಲದಲ್ಲಿ ಪಡೆಯುತ್ತಿದ್ದ ಸಂಭಾವನೆ ಎಷ್ಟು? ಈ ಬಗ್ಗೆ ಅವರ ಅಳಿಯ ಶ್ರೀನಿವಾಸ್ ಅವರು, ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. ‘ಧೀರೇಂದ್ರ ಗೋಪಾಲ್ ಸಾಕಷ್ಟು ಹೆಸರು ಮಾಡಿದ್ದರು. ಅವರಿಗೆ ನಟನೆ ಬಗ್ಗೆ ತುಂಬಾನೇ ಆಸಕ್ತಿ ಇತ್ತು. ಸಮಯ ಸ್ಫೂರ್ತಿ ಇತ್ತು. ದುಡ್ಡು ಮಾತ್ರ ಅಷ್ಟಾಗಿ ಮಾಡಿಕೊಂಡಿರಲಿಲ್ಲ’ ಎಂದಿದ್ದರು.
ಇದನ್ನೂ ಓದಿ: ಹೃದಯಾಘಾತದಿಂದ ನಟ ಧೀರೇಂದ್ರ ಗೋಪಾಲ್ ಪತ್ನಿ ನಿಧನ
‘ಪ್ರತಿ ಕಲಾವಿದರು ಈಗ ಲಕ್ಷಗಳಲ್ಲಿ ಒಂದು ದಿನಕ್ಕೆ ಸಂಭಾವನೆ ಪಡೆಯುತ್ತಾರೆ. ಆದರೆ, ಆಗಿನ ಕಾಲದಲ್ಲಿ ನಮ್ಮ ಮಾವ ಹೆಚ್ಚು ಎಂದರೆ 70 ಸಾವಿರ ರೂಪಾಯಿ ಪಡೆಯುತ್ತಿದ್ದರು. ಅದು ಕೂಡ ಒಂದು ಚಿತ್ರಕ್ಕೆ. ಆಗ ದಿನದ ಲೆಕ್ಕ ಇರಲಿಲ್ಲ. ಅವರ ಜೊತೆ ತುಂಬಾ ವರ್ಷ ಇದ್ದೆ. ಆಗಿನ ಕಾಲಕ್ಕೆ ಅದುವೇ ಹೆಚ್ಚಾಗಿತ್ತು. ಅದನ್ನು ಈಗಿನ ಕಾಲಕ್ಕೆ ಹೋಲಿಕೆ ಮಾಡೋಕೆ ಆಗಲ್ಲ’ ಎಂದಿದ್ದಾರೆ ಶ್ರೀನಿವಾಸ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.