ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆದ ರವಿತೇಜ ಮಗಳು ಮೋಕ್ಷಧಾ
ರವಿತೇಜ ಮಕ್ಕಳಾದ ಮಹಾದನ್ ಮತ್ತು ಮೋಕ್ಷಧಾ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದಾರೆ. ಮಹಾದನ್ ನಿರ್ದೇಶಕರಾಗುವ ಗುರಿ ಹೊಂದಿದ್ದರೆ, ಮೋಕ್ಷಧಾ ಅವರು ಆನಂದ್ ದೇವರಕೊಂಡ ನಟನೆಯ ಚಿತ್ರದಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ರವಿತೇಜ ತಮ್ಮ ಮಕ್ಕಳಿಗೆ ಚಿತ್ರರಂಗದಲ್ಲಿ ಉತ್ತಮ ಬುನಾದಿ ಹಾಕಿಕೊಡುವ ಪ್ರಯತ್ನದಲ್ಲಿದ್ದಾರೆ.

ಮಾಸ್ ಮಹರಾಜ ರವಿತೇಜ (Ravi Teja) ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರ ಕೆಲವು ಸಿನಿಮಾಗಳು ಹಿಟ್ ಆದರೆ ಇನ್ನೂ ಕೆಲವು ಫ್ಲಾಪ್ ಎನಿಸಿಕೊಂಡಿವೆ. ಈಗ ಅವರು ತಮ್ಮ ಮಕ್ಕಳಿಗೆ ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಅವರ ಮಗ ಮಹಾಧನ್ ಈಗಾಗಲೇ ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ರವಿತೇಜ ಮಗಳು ಮೋಕ್ಷಧಾ ಭೂಪತಿರಾಜು ಅವರು ಸಿನಿಮಾ ರಂಗದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ.
ರವಿತೇಜ ಅವರಿಗೆ ಚಿತ್ರರಂಗದಲ್ಲಿ ಎಲ್ಲರ ಪರಿಚಯ ಇದೆ. ಈ ಸಂದರ್ಭದಲ್ಲಿ ಮಕ್ಕಳನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿದರೆ ಅವರಿಗೂ ಒಂದು ನೆಲೆ ಸಿಗುತ್ತದೆ ಎಂಬುದು ಇವರ ಆಲೋಚನೆ. ರವಿತೇಜ ಮಗ ಮಹಾಧನ್ ಅವರು ಶೀಘ್ರವೇ ನಿರ್ದೇಶಕರಾಗುವ ಕನಸು ಕಾಣುತ್ತಿದ್ದಾರೆ. ಈಗ ಅವರ ಮಗಳು ನಿರ್ಮಾಪಕಿ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಸಿನಿಮಾ ಒಂದರಲ್ಲಿ ಕಾರ್ಯಕಾರಿ ನಿರ್ಮಾಪಕಿ ಆಗಿ ಅವರು ಕೆಲಸ ಮಾಡಲಿದ್ದಾರೆ.
ಮೋಕ್ಷಧಾ ಅವರಿಗೆ ನಿರ್ಮಾಪಕಿ ಆಗುವ ಕನಸು ಇದೆ. ಆನಂದ್ ದೇವರಕೊಂಡ ನಟನೆಯ, ವಿನೋದ್ ಅನಂತೋಜು ನಿರ್ದೇಶನದ ಚಿತ್ರದ ಮೇಲುಸ್ತುವಾರಿಯನ್ನು ಮೋಕ್ಷಧಾ ನೋಡಿಕೊಳ್ಳಲಿದ್ದಾರೆ. ವಿನೋದ್ ಹಾಗೂ ಆನಂದ್ ಈ ಮೊದಲು ‘ಮಿಡಲ್ ಕ್ಲಾಸ್ ಮೆಲೋಡಿ’ ಹೆಸರಿನ ಸಿನಿಮಾ ಮಾಡಿದ್ದರು.
ಈ ಚಿತ್ರವನ್ನು ಸಿತಾರಾ ಎಂಟರ್ಟೇನ್ಮೆಂಟ್ಸ್ ನಿರ್ಮಾಣ ಮಾಡುತ್ತಿದೆ. ಮೋಕ್ಷಧಾ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಆಯ್ಕೆ ಆಗಿದ್ದಾರೆ. ಸಿನಿಮಾ ನಿರ್ಮಾಣ ಯಾವ ರೀತಿಯಲ್ಲಿ ಆಗುತ್ತದೆ, ಅಲ್ಲಿ ಕಾರ್ಯವೈಖರಿ ಹೇಗೆ ಎಂಬುದನ್ನು ಮಗಳಿಗೆ ತಿಳಿಸಿಕೊಡುವ ಆಲೋಚನೆ ಇವರದ್ದು. ರವಿತೇಜ ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಮೋಕ್ಷಧಾ ಅವರ ತರಬೇತಿ ಪೂರ್ಣಗೊಂಡ ನಂತರದಲ್ಲಿ ಅವರು ತಂದೆಯ ನಿರ್ಮಾಣ ಸಂಸ್ಥೆಯನ್ನು ನೋಡಿಕೊಳ್ಳಲಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇಲ್ಲ.
ಇದನ್ನೂ ಓದಿ: ಯಶ್ ಅಭಿಮಾನಿಗಳಿಗೆ ನೋವಾಗುವಂತೆ ಮಾತಾಡಿದ ರವಿತೇಜ; ಕ್ಷಮೆ ಕೇಳುವಂತೆ ಫ್ಯಾನ್ಸ್ ಒತ್ತಾಯ
ಸಾಮಾನ್ಯವಾಗಿ ಸೆಲೆಬ್ರಿಟಿ ಮಕ್ಕಳು ಹೀರೋ/ಹೀರೋಯಿನ್ ಆಗಲು ಬಯಸುತ್ತಾರೆ. ಆದರೆ, ಮೋಕ್ಷಧಾ ಹಾಗೂ ಮಹಾಧನ್ ಮಾತ್ರ ಈ ವಿಚಾರದಲ್ಲಿ ಭಿನ್ನ. ಅವರು ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.