ಕಂಗನಾ ಮನೆಗೆ 1 ಲಕ್ಷ ರೂ. ಕರೆಂಟ್ ಬಿಲ್ ಬಂದಿದ್ದು ನಿಜವೇ? ನಟಿಯ ಕಳ್ಳಾಟ ಬಯಲು
ನಟಿ ಕಂಗನಾ ರಣಾವತ್ ಅವರ ಮನೆಗೆ 1 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ ಎಂಬುದನ್ನು ತಿಳಿದು ಜನರಿಗೆ ಅಚ್ಚರಿ ಆಗಿತ್ತು. ಆದರೆ ಅದಕ್ಕೆ ಕಾರಣ ಏನು ಎಂಬುದು ಈಗ ಬಹಿರಂಗ ಆಗಿದೆ. ಹಳೇ ಬಾಕಿ ಪಾವತಿ ಮಾಡದೇ ಇರುವ ಕಾರಣದಿಂದ ಕಂಗನಾ ಮನೆಗೆ ಲಕ್ಷಾಂತರ ರೂಪಾಯಿ ಬಿಲ್ ಬಂದಿದೆ. ಆ ಬಗ್ಗೆ ಇಲ್ಲಿದೆ ವಿವರ..

ಇತ್ತೀಚೆಗೆ ನಟಿ ಕಂಗನಾ ರಣಾವತ್ (Kangana Ranaut) ಅವರು ನೀಡಿದ ಒಂದು ಹೇಳಿಕೆಯಿಂದ ಎಲ್ಲರಿಗೂ ಅಚ್ಚರಿ ಆಗಿತ್ತು. ತಮ್ಮ ಮನೆಗೆ ಒಂದು ಲಕ್ಷ ರೂಪಾಯಿ ಕರೆಂಟ್ ಬಿಲ್ (Electricity Bill) ಬಂದಿದೆ ಎಂದು ಅವರು ಹೇಳಿದ್ದರು. ಹಿಮಾಚಲ ಪ್ರದೇಶದಲ್ಲಿ ಸಾವರ್ಜನಿಕವಾಗಿ ಮಾತನಾಡುವಾಗ ಅವರು ಈ ವಿಚಾರ ಬಹಿರಂಗಪಡಿಸಿದ್ದರು. ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿರುವುದಕ್ಕೆ ರಾಜ್ಯ ಸರ್ಕಾರದ ನಿಲರ್ಕ್ಷ್ಯವೇ ಕಾರಣ ಎಂದು ಅವರು ಹೇಳಿದ್ದರು. ಆದರೆ ಈಗ ಅಸಲಿ ವಿಷಯ ಏನು ಎಂಬುದು ಬಹಿರಂಗ ಆಗಿದೆ. ಕಂಗನಾ ಹೇಳಿಕೆಗೆ ಹಿಮಾಚಲ ಪ್ರದೇಶ (Himachal Pradesh) ಸರ್ಕಾರ ಉತ್ತರ ನೀಡಿದೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಕ್ವಿಂದರ್ ಸಿಂಗ್ ಅವರು ಕಂಗನಾ ಹೇಳಿಕೆಯನ್ನು ಟೀಕಿಸಿದ್ದಾರೆ. ‘ನಾನು ಆಕೆಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ಆಗಾಗ ಇಂಥ ಹೇಳಿಕೆಗಳನ್ನು ನೀಡುತ್ತಾ ಇರುತ್ತಾರೆ’ ಎಂದು ಸುಕ್ವಿಂದರ್ ಸಿಂಗ್ ಹೇಳಿದ್ದಾರೆ. ಹಿಮಾಚಲ ಪ್ರದೇಶ ರಾಜ್ಯ ವಿದ್ಯುತ್ ಮಂಡಳಿ ಈಗ ಲೆಕ್ಕ ಸಮೇತ ಪ್ರತಿಕ್ರಿಯಿಸಿದೆ.
ಹಿಮಾಚಲ ಪ್ರದೇಶ ರಾಜ್ಯ ವಿದ್ಯುತ್ ಮಂಡಳಿಯ ಮ್ಯಾನೇಜಿಂಗ್ ಡೈರೆಕ್ಟರ್ ಸಂದೀಪ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಕಂಗನಾ ಅವರು ಹಳೇ ಬಾಕಿ 32,287 ರೂಪಾಯಿ ಪಾವತಿ ಮಾಡಿರಲಿಲ್ಲ. ಅದನ್ನೂ ಸೇರಿಸಿ ಜನವರಿ ಮತ್ತು ಫೆಬ್ರವರಿ ತಿಂಗಳ ವಿದ್ಯುತ್ ಬಿಲ್ 90,384 ರೂಪಾಯಿ ಆಗಿದೆ’ ಎಂದು ಅವರು ಲೆಕ್ಕ ನೀಡಿದ್ದಾರೆ. ತಡವಾಗಿ ವಿದ್ಯುತ್ ಬಿಲ್ ಪಾವತಿ ಮಾಡುವುದನ್ನೇ ಕಂಗನಾ ಅಭ್ಯಾಸ ಮಾಡಿಕೊಂಡಿದ್ದಾರೆ ಎಂದು ಕೂಡ ಸಂದೀಪ್ ಕುಮಾರ್ ಆರೋಪಿಸಿದ್ದಾರೆ.
2024ರ ಅಕ್ಟೋಬರ್ ತಿಂಗಳಿಂದ ಡಿಸೆಂಬರ್ ತಿಂಗಳ ತನಕ ಕಂಗನಾ ರಣಾವತ್ ಮನೆಗೆ 82,061 ರೂಪಾಯಿ ವಿದ್ಯುತ್ ಬಿಲ್ ಬಂದಿತ್ತು. ಅದನ್ನು ಅವರು 2025ರ ಜನವರಿ 16ರಂದು ಪಾವತಿಸಿದ್ದಾರೆ. ಹಾಗೆಯೇ, ಈ ವರ್ಷ ಜನವರಿ ಮತ್ತು ಫೆಬ್ರವರಿಯ ಬಿಲ್ ಅನ್ನು ಮಾರ್ಚ್ 28ರಂದು ಪಾವತಿ ಮಾಡಿದ್ದಾರೆ. 700 ರೂಪಾಯಿ ಸಬ್ಸಿಡಿ ಕೂಡ ಕಂಗನಾ ಪಡೆಯುತ್ತಾರೆ ಎಂದು ಸಂದೀಪ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಕಂಗನಾ-ಹೃತಿಕ್ ಮಧ್ಯೆ ನಡೆದಿತ್ತು ಕೀಳು ಮಟ್ಟದ ಫೈಟ್; ಕಾರಣವಾಗಿದ್ದು ಆ ಒಂದು ಪದ
ಕಂಗನಾ ಆರೋಪ ಏನು?
‘ಈ ತಿಂಗಳು ಮನಾಲಿಯಲ್ಲಿ ಇರುವ ನನ್ನ ಮನೆಗೆ ಒಂದು ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಆ ಮನೆಯಲ್ಲಿ ನಾನು ವಾಸ ಮಾಡುತ್ತಿಲ್ಲ. ಇದು ನಿಜಕ್ಕೂ ಶೋಚನೀಯ ಪರಿಸ್ಥಿತಿ. ಅದನ್ನು ಓದಿ ನನಗೆ ನಾಚಿಕೆ ಆಯಿತು. ಎಂಥ ಸ್ಥಿತಿ ಬಂತು ಎನಿಸಿತು’ ಎಂದು ಕಂಗನಾ ರಣಾವತ್ ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.