ಕಂಗನಾ ರಣಾವತ್, ಜಾವೇದ್ ಅಖ್ತರ್ ನಡುವಿನ ಸುದೀರ್ಘ ಕೋರ್ಟ್ ಕೇಸ್ ಅಂತ್ಯ
ಜಾವೇದ್ ಅಖ್ತರ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದ್ದ ಕಂಗನಾ ರಣಾವತ್ ಅವರು ಈಗ ಕ್ಷಮೆ ಕೇಳಿದ್ದಾರೆ. ಹಾಗಾಗಿ ಇಬ್ಬರ ನಡುವಿನ ಕೋರ್ಟ್ ಕೇಸ್ ಅಂತ್ಯವಾಗಿದೆ. ತಮಗೆ ಜಾವೇದ್ ಅಖ್ತರ್ ಬೆದರಿಕೆ ಹಾಕಿದ್ದರು ಎಂದು 2020ರಲ್ಲಿ ಕಂಗನಾ ರಣಾವತ್ ಹೇಳಿದ್ದರು. ಆದರೆ ಆ ಆರೋಪವನ್ನು ಜಾವೇದ್ ಅಖ್ತರ್ ತಳ್ಳಿ ಹಾಕಿದ್ದರು.

ಫೆಬ್ರವರಿ 28, ಮುಂಬೈ: ನಟಿ ಕಂಗನಾ ರಣಾವತ್ ಅವರು ಬಹುತೇಕ ಎಲ್ಲರ ಜೊತೆ ಕಿರಿಕ್ ಮಾಡಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಅವರು ಮಾಡಿಕೊಂಡ ವಿವಾದಗಳು ಹಲವು. ಹಿರಿಯ ಚಿತ್ರಸಾಹಿತಿ ಜಾವೇದ್ ಅಖ್ತರ್ ಜೊತೆಗೂ ಅವರು ಜಗಳ ಮಾಡಿಕೊಂಡಿದ್ದರು. ಆ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಸುದೀರ್ಘ 5 ವರ್ಷಗಳ ಕಾಲ ವಾದ-ಪ್ರತಿವಾದ ನಡೆದಿತ್ತು. ಈಗ ಇಬ್ಬರೂ ರಾಜಿ ಮಾಡಿಕೊಂಡಿದ್ದಾರೆ. ಜಾವೇದ್ ಅಖ್ತರ್ ಗೆ ಕಂಗನಾ ಅವರು ಕ್ಷಮೆ ಕೇಳಿದ್ದಾರೆ. ಹಾಗಾಗಿ ಮಾನಹಾನಿ ಮೊಕದ್ದಮೆಯನ್ನು ಜಾವೇದ್ ಅಖ್ತರ್ ವಾಪಸ್ ತೆಗೆದುಕೊಂಡಿದ್ದಾರೆ.
ಇದು ಹಳೇ ಪ್ರಕರಣ. ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಹಿಂದಿ ಚಿತ್ರರಂಗದಲ್ಲಿನ ಹುಳುಕುಗಳ ಬಗ್ಗೆ ಅನೇಕರು ಮಾತನಾಡಲು ಆರಂಭಿಸಿದ್ದರು. ಆಗ ಕಂಗನಾ ರಣಾವತ್ ಅವರು ಅನೇಕರ ಬಗ್ಗೆ ಆರೋಪ ಹೊರಿಸಲು ಶುರು ಮಾಡಿದ್ದರು. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಜಾವೇದ್ ಅಖ್ತರ್ ಬಗ್ಗೆ ಮಾತನಾಡಿದ್ದರು. ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದ್ದರು.
ಒಂದು ಕಾಲದಲ್ಲಿ ಹೃತಿಕ್ ರೋಷನ್ ಮತ್ತು ಕಂಗನಾ ರಣಾವತ್ ನಡುವೆ ರಿಲೇಷನ್ ಶಿಪ್ ಮೂಡಿತ್ತು. ಬಳಿಕ ಬ್ರೇಕಪ್ ಮಾಡಿಕೊಂಡಿದ್ದರು. ಅದು ರಂಪಾಟ ಆಗಿತ್ತು. ಆ ಬಗ್ಗೆ ತಮಗೆ ಜಾವೇದ್ ಅಖ್ತರ್ ಬೆದರಿಕೆ ಹಾಕಿದ್ದರು ಎಂಬುದು ಕಂಗನಾ ಅವರ ಆರೋಪ ಆಗಿತ್ತು. ಅದನ್ನು ಸುಳ್ಳು ಎಂದು ಜಾವೇದ್ ಅಖ್ತರ್ ಹೇಳಿದ್ದರು ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
‘ಒಮ್ಮೆ ಜಾವೇದ್ ಅಖ್ತರ್ ಅವರು ನನಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಬೆದರಿಕೆ ಹಾಕಿದ್ದರು. ರೋಷನ್ ಕುಟುಂಬದವರು ತುಂಬ ದೊಡ್ಡವರು. ನೀನು ಅವರ ಕ್ಷಮೆ ಕೇಳದೇ ಇದ್ದರೆ ನಿನ್ನನ್ನು ಜೈಲಿಗೆ ಕಳಿಸುತ್ತಾರೆ. ನೀನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಅಂತ ಜಾವೇದ್ ಅಖ್ತರ್ ನನಗೆ ಹೇಳಿದ್ದರು. ನನ್ನ ಮೇಲೆ ಅವರು ಕಿರುಚಾಡಿದ್ದರು. ಅವರ ಮನೆಯಲ್ಲಿ ನಾನು ನಡುಗುತ್ತಿದ್ದೆ’ ಎಂದು ಕಂಗನಾ ರಣಾವತ್ ಅವರು ಆರೋಪ ಹೊರಿಸಿದ್ದರು. ಕಂಗನಾ ಅವರ ಆರೋಪಗಳನ್ನು ತಳ್ಳಿ ಹಾಕಿದ್ದ ಜಾವೇದ್ ಅಖ್ತರ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದನ್ನೂ ಓದಿ: ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ ಕಂಗನಾ ರನೌತ್, ಸಿನಿಮಾದಲ್ಲಿ ಲಾಸ್ ಕಾರಣವೇ?
ಆದರೆ ಈಗ ಕಂಗನಾ ಅವರು ಜಾವೇದ್ ಅಖ್ತರ್ ಗೆ ಕ್ಷಮೆ ಕೇಳಿದ್ದಾರೆ. ‘ಇಂದು ಜಾವೇದ್ ಅಖ್ತರ್ ಮತ್ತು ನಾನು ಮಧ್ಯಸ್ಥಿಕೆ ಮೂಲಕ ನಮ್ಮ ಕೇಸ್ ಅಂತ್ಯಗೊಳಿಸಿದ್ದೇವೆ.ಈ ವೇಳೆ ಅವರು ತುಂಬ ಕರುಣೆಯಿಂದ ನಡೆದುಕೊಂಡರು. ಅಲ್ಲದೇ ನನ್ನ ಮುಂದಿನ ಸಿನಿಮಾಗೆ ಹಾಡು ಬರೆಯಲು ಕೂಡ ಒಪ್ಪಿದ್ದಾರೆ’ ಎಂದು ಕಂಗನಾ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.