‘ಮೈ ಡಿಯರ್ ಸುಹಾಸ್, ಕ್ಷಮಿಸು, ನಿನ್ನ ನೋಡಿ ನಗಬಾರದಿತ್ತು’
3 Idiots: ತನ್ನ ಒಂದೂವರೆ ಲಕ್ಷದ ಶೂ ಮೇಲೆ ಚಟ್ನಿ ಬಿದ್ದಾಗ ಸಿಟ್ಟಾದ, ತಮ್ಮ ಮೂರು ಲಕ್ಷದ ಸೂಟನ್ನು ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟಾಗ ಕೂಗಾಡಿದ ಸುಹಾಸ್. ನಾಲ್ಕು ಲಕ್ಷದ ವಾಚು ಕಳೆದು ಹೋಗಿದೆ ಎಂದಾಗ ಬೈದ ಸುಹಾಸ್. ಸಿನಿಮಾದಲ್ಲಿ ಆತನನ್ನು ನೋಡಿ ಆಗ ನಕ್ಕಿದ್ದೆವು, ಆದರೆ ನಾವು ನಗಬಾರದಿತ್ತು ಎಂಬುದು ಈಗ ಅರ್ಥವಾಗುತ್ತಿದೆ.

‘3 ಇಡಿಯಟ್ಸ್’ (3 Idiots) ಸಿನಿಮಾ ನೋಡಿದ ಯಾರಿಗಾದರೂ ಸುಹಾಸ್ ನೆನಪಿದ್ದಾನೆಯೇ ಎಂದು ಕೇಳಿದರೆ ಯಾರೂ ಹೌದು ಎನ್ನುವುದಿಲ್ಲ. ಆ ಸಿನಿಮಾದ ಪಾತ್ರಗಳಾದ ರ್ಯಾಂಚೊ, ಚತುರ್, ವೈರಸ್, ರಾಜು, ಫರ್ಹಾನ್ ಎಲ್ಲರಿಗೂ ನೆನಪಿದ್ದಾರೆ, ಆದರೆ ಸುಹಾಸ್ ಯಾರಿಗೂ ನೆನಪಿಲ್ಲ. ಕರೀನಾ ಕಪೂರ್ ಅನ್ನು ಮದುವೆ ಆಗಲೆಂದು ಅಮೆರಿಕದಿಂದ ಬಂದಿದ್ದ ಯುವಕ ಸುಹಾಸ್, ತನ್ನ ಒಂದೂವರೆ ಲಕ್ಷದ ಶೂ ಮೇಲೆ ಚಟ್ನಿ ಬಿದ್ದಾಗ ಸಿಟ್ಟಾದ, ತಮ್ಮ ಮೂರು ಲಕ್ಷದ ಸೂಟನ್ನು ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟಾಗ ಕೂಗಾಡಿದ ಸುಹಾಸ್. ನಾಲ್ಕು ಲಕ್ಷದ ವಾಚು ಕಳೆದು ಹೋಗಿದೆ ಎಂದಾಗ ಹುಡುಕಾಡಿದ ಸುಹಾಸ್. ಸಿನಿಮಾದಲ್ಲಿ ಆತನನ್ನು ನೋಡಿ ಆಗ ನಕ್ಕಿದ್ದೆವು, ಆದರೆ ನಾವು ನಗಬಾರದಿತ್ತು ಎಂಬುದು ಈಗ ಅರ್ಥವಾಗುತ್ತಿದೆ.
‘3 ಇಡಿಯಟ್ಸ್’ ಸಿನಿಮಾ ನೋಡಿದವರಿಗೆ ಸುಹಾಸ್ ಹೆಸರು ನೆನಪಿಲ್ಲದೇ ಹೋಗಬಹುದು ಆದರೆ ಆ ಪಾತ್ರ ಚೆನ್ನಾಗಿ ನೆನಪಿರುತ್ತದೆ. ನಾಯಕಿ ಕರೀನಾಳನ್ನು ಮದುವೆ ಆಗಲು ಬಯಸಿದ್ದ ಯುವಕ ಸುಹಾಸ್. ಆದರೆ ರ್ಯಾಂಚೊ, ಕರೀನಾಳಿಗೆ ಬಿಟ್ಟಿ ಸಲಹೆ (ಫ್ರೀ ಅಡ್ವೈಸ್) ನೀಡಿ ಸುಹಾಸ್ ಮನೀ ಮೈಂಡೆಡ್ ಅವನನ್ನು ಮದುವೆ ಆಗಬೇಡ ಎನ್ನುತ್ತಾನೆ. ಅದನ್ನು ಸಾಬೀತು ಪಡಿಸಲು ಆತನ ದುಬಾರಿ ಶೂ ಮೇಲೆ ಚಟ್ನಿ ಚೆಲ್ಲುತ್ತಾನೆ. ಚಟ್ನಿ ಎಸೆದವನ ಮೇಲೆ ಸುಹಾಸ್ ಕೂಗಾಡುತ್ತಾನೆ. ಆಗ ಅದನ್ನು ನೋಡಿ ನಾವೆಲ್ಲ ನಕ್ಕಿದ್ದೇವೆ. ಆದರೆ ಈಗ ಅರ್ಥವಾಗುತ್ತಿದೆ, ಕಷ್ಟಪಟ್ಟು ದುಡಿದ ಹಣದಲ್ಲಿ ಖರೀದಿಸದ ಶೂ ಮೇಲೆ ಯಾರಾದರೂ ಚಟ್ನಿ ಚೆಲ್ಲಿದರೆ ಅದೆಷ್ಟು ಸಿಟ್ಟು ಬರುತ್ತದೆ ಎಂದು. ಅಂದು ಸುಹಾಸ್ ಮಾಡಿದ್ದು ಖಂಡಿತ ತಪ್ಪಲ್ಲ ಎಂದು ಈಗ ಅರ್ಥವಾಗಿದೆ.
ಅದೇ ಸಿನಿಮಾದ ಮತ್ತೊಂದು ಸೀನ್ನಲ್ಲಿ ಕರೀನಾ, ಆಮಿರ್ ಉರ್ಫ್ ರ್ಯಾಂಚೊ ಮಾತು ಕೇಳಿ ಸುಹಾಸ್ ಕೊಟ್ಟಿದ್ದ ನಾಲ್ಕು ಲಕ್ಷದ ವಾಚು ಕಳೆದು ಹೋಗಿದೆ ಎಂದು ಸುಳ್ಳು ಹೇಳುತ್ತಾಳೆ. ಆಗ ಸುಹಾಸ್ಗೆ ಶಾಕ್ ಆಗುತ್ತದೆ. ಅಲ್ಲಿ ಇಲ್ಲಿ ಹುಡುಕಲು ಆರಂಭಿಸುತ್ತಾನೆ. ಅದು ಕಾಣದೇ ಇದ್ದಾಗ ಕರೀನಾಳ ಬೇಜವಾಬ್ದಾರಿ ತನಕ್ಕೆ ಬೈಯ್ಯುತ್ತಾನೆ. ಆಗ ನಾವು ಸುಹಾಸ್ ಎಷ್ಟು ಕೆಟ್ಟವ ಎಂದುಕೊಂಡಿದ್ದೆವು, ಆದರೆ ಈಗ ಅರ್ಥವಾಗುತ್ತಿದೆ. ನಾಲ್ಕು ಲಕ್ಷಕ್ಕೆ ಎಷ್ಟು ಮೌಲ್ಯ ಇದೆ. ನಾಲ್ಕು ಲಕ್ಷದ ವಸ್ತು ಕಳೆದು ಹೋದರೆ ಎಷ್ಟು ಆಘಾತವಾಗುತ್ತದೆ ಎಂಬುದು ಅರ್ಥವಾಗಿದೆ. ಅಲ್ಲಿಯೂ ಸಹ ಸುಹಾಸ್ ವರ್ತನೆ ಸರಿಯಾಗಿಯೇ ಇತ್ತು, ಆದರೆ ನಾವು ಅವನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆವು.
ನಾಲ್ಕು ಲಕ್ಷದ ವಾಚು ಕಳೆದುಕೊಂಡ ಕರೀನಾಳನ್ನು ಬೈದಿದ್ದಕ್ಕೆ ಕರೀನಾ, ಸುಹಾಸ್ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳುತ್ತಾಳೆ. ನಡು ರಸ್ತೆಯಲ್ಲಿ ಕತ್ತೆ ಎಂದು ಬೈದು ಹೋಗುತ್ತಾಳೆ, ಬಳಿಕ ರ್ಯಾಂಚೊ ಅನ್ನು ಪ್ರೀತಿಸುತ್ತಾಳೆ, ಆದರೆ ಈ ರ್ಯಾಂಚೊ, ಪ್ರೀತಿಯ ಕರೀನಾಗೆ ಒಂದು ಮಾತು ಸಹ ಹೇಳದೆ ಕಾಣೆ ಆಗಿ ಹೋಗುತ್ತಾನೆ. ಆದರೆ ಬ್ರೇಕ್ ಅಪ್ ಮಾಡಿಕೊಂಡಿದ್ದರೂ ಪರವಾಗಿಲ್ಲ, ತನಗೆ ಬೈದು ಅವಮಾನ ಮಾಡಿದ್ದರೂ ಪರವಾಗಿಲ್ಲ ಎಂದುಕೊಂಡು ಮತ್ತೆ ಕರೀನಾಳನ್ನು ಮದುವೆ ಆಗಲು ಅಮೆರಿಕದಿಂದ ವಾಪಸ್ಸಾಗುತ್ತಾನೆ ಸುಹಾಸ್. ಆದರೆ ಆಗ ರಾಜು, ಸುಹಾಸ್ನ ಮದುವೆಯ ಸೂಟ್ ಅನ್ನು ಇಸ್ತ್ರಿ ಪೆಟ್ಟಿಗೆ ಇಟ್ಟು ಸುಟ್ಟು ಬಿಡುತ್ತಾನೆ. ಮದುವೆಯ ದಿನ ತನ್ನ ಮದುವೆಗೆ ಹಾಕಲು ತಂದಿದ್ದ ಸೂಟ್ ಅನ್ನು ಯಾರಾದರೂ ಸುಟ್ಟರೆ ಸಿಟ್ಟು ಬರದೇ ಇರುತ್ತದೆಯೇ? ಸುಹಾಸ್ ಆಗಲೂ ಸಿಟ್ಟು ಮಾಡಿಕೊಳ್ಳುತ್ತಾನೆ. ಆದರೆ ಆಗಲೂ ನಾವು ಅವನನ್ನು ನೋಡಿ ನಕ್ಕಿದ್ದೆವು. ಆದರೆ ಈಗ ಅನಿಸುತ್ತದೆ, ಸುಹಾಸ್ ಸರಿಯಾಗಿಯೇ ಇದ್ದ, ನಾವು ಅವನನ್ನು ಅರ್ಥ ಮಾಡಿಕೊಳ್ಳಲಿಲ್ಲ.
ಇದನ್ನೂ ಓದಿ:20 ವರ್ಷದಿಂದ ಸಿನಿಮಾಕ್ಕೆ ಸಂಭಾವನೆಯನ್ನೇ ಪಡೆದಿಲ್ಲ ಆಮಿರ್ ಖಾನ್
ಇನ್ನು ಸುಹಾಸ್, ಎಂಜಿನಿಯರಿಂಗ್ ಓದಿ ಅಮೆರಿಕದಲ್ಲಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆ ಬಗ್ಗೆ ರ್ಯಾಂಚೊ ಸುಹಾಸ್ ಅನ್ನು ಗೇಲಿ ಮಾಡುತ್ತಾನೆ. ಅಸಲಿಗೆ ಫರ್ಹಾನ್ ಇದನ್ನೇ ಮಾಡಲು ಹೊರಟಿದ್ದಲ್ಲವೆ, ಯಾರಿಗೆ ಗೊತ್ತು ಫರ್ಹಾನ್ನ ಪೋಷಕರ ಆಸೆಯಂತೆ ಸುಹಾಸ್ನ ಪೋಷಕರು ಸಹ ಮಗ ಎಂಜಿನಿಯರಿಂಗ್ ಮಾಡಲಿ ಎಂದು ಒತ್ತಾಯ ಮಾಡಿದ್ದರೇನೊ? ಪೋಷಕರ ಆಸೆ ಈಡೇರಿಸಲು ತನ್ನ ಇಷ್ಟವನ್ನು ಬಲಿಕೊಟ್ಟಿದ್ದನೇನೋ? ಪಾಪ ಸುಹಾಸ್.
ಈಗ ನಿಧಾನಕ್ಕೆ ಅರ್ಥವಾಗುತ್ತಿದೆ, ರ್ಯಾಂಚೊ ಸರಿಯಿದ್ದ, ಆದರೆ ಸುಹಾಸ್ ತಪ್ಪಲ್ಲ. ಮಾತ್ರವಲ್ಲ ರ್ಯಾಂಚೊಗಳು ಈ ಸಮಾಜದಲ್ಲಿ ಲಕ್ಷಕ್ಕೊಬ್ಬರು ಸಹ ಇಲ್ಲ, ಎಲ್ಲರೂ ಸುಹಾಸ್ಗಳೇ, ಮತ್ತು ಸುಹಾಸ್ಗಳು ತಪ್ಪಲ್ಲ. ತಾವು ದುಡಿದ ಹಣದಲ್ಲಿ ಖರೀದಿಸಿದ ವಸ್ತುಗಳಿಗೆ ಹಾನಿ ಆದರೆ ಆಗುವ ನೋವು, ದುಡಿದ ಹಣದಲ್ಲಿ ಖರೀದಿಸಿದ ಬೆಲೆ ಬಾಳುವ ವಸ್ತು ಕಳೆದು ಹೋದಾಗ ಆಗುವ ನೋವು ದುಡಿದವರಿಗಷ್ಟೆ ಗೊತ್ತು. ಕ್ಷಮಿಸು ಸುಹಾಸ್ ನಿನ್ನನ್ನು ನೋಡಿ ನಗಬಾರದಿತ್ತು.
*ಅತುಲ್ ಅಶ್ವಿನ್ ಇನ್ಸ್ಟಾಗ್ರಾಂ ರೀಲ್ಸ್ನಿಂದ ಸ್ಪೂರ್ತಿ ಪಡೆದು ಬರೆದ ಲೇಖನ
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:19 pm, Fri, 28 February 25