20 ವರ್ಷದಿಂದ ಸಿನಿಮಾಕ್ಕೆ ಸಂಭಾವನೆಯನ್ನೇ ಪಡೆದಿಲ್ಲ ಆಮಿರ್ ಖಾನ್
Aamir Khan: ಸ್ಟಾರ್ ನಟರು ಭಾರಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಇದು ನಿರ್ಮಾಪಕರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಬಗ್ಗೆ ಕರಣ್ ಜೋಹರ್, ಅಲ್ಲು ಅರವಿಂದ್, ದಿಲ್ ರಾಜು, ಸುರೇಶ್ ಇನ್ನೂ ಹಲವು ದೊಡ್ಡ ನಿರ್ಮಾಪಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಭಾರತದ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ಆಮಿರ್ ಖಾನ್ ಕಳೆದ 20 ವರ್ಷಗಳಿಂದ ಸಿನಿಮಾಗಳಿಗೆ ಸಂಭಾವನೆ ಪಡೆದಿಲ್ಲವಂತೆ.

ಸ್ಟಾರ್ ನಟರ ಸಂಭಾವನೆ ಬಗ್ಗೆ ಇಡೀ ಭಾರತೀಯ ಚಿತ್ರರಂಗದಲ್ಲಿ ಜೋರು ಚರ್ಚೆಗಳಾಗುತ್ತಿದೆ. ಬಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗಗಳಲ್ಲಿಯೂ ಸಿನಿಮಾ ನಿರ್ಮಾಣ ವೆಚ್ಚ ಬಹಳ ಹೆಚ್ಚಾಗಿರುವುದೇ ಈ ಚರ್ಚೆಗೆ ಕಾರಣ. ಸಿನಿಮಾ ನಿರ್ಮಾಣಕ್ಕೆ ಖರ್ಚಾಗುವ ಹಣಕ್ಕೆ ದುಪ್ಪಟ್ಟು ಹಣವನ್ನು ಸಿನಿಮಾದ ಸ್ಟಾರ್, ನಟಿಯರಿಗೆ ಕೊಡಬೇಕಾಗಿದೆ. ಮಾತ್ರವಲ್ಲದೆ ಸಿನಿಮಾಕ್ಕೆ ಕೆಲಸ ಮಾಡುವ ಕೆಲ ಸಣ್ಣ-ಪುಟ್ಟ ತಂತ್ರಜ್ಞರು ಸಹ ಭಾರಿ ಮೊತ್ತದ ಸಂಭಾವನೆಯನ್ನು ಬೇಡಿಕೆಯಿಟ್ಟು ಪಡೆಯುತ್ತಿದ್ದಾರೆ. ಕರಣ್ ಜೋಹರ್ ಸೇರಿದಂತೆ ಚಿತ್ರರಂಗದ ಹಲವರು ದೊಡ್ಡ ನಿರ್ಮಾಪಕರು ಏರಿರುವ ಸ್ಟಾರ್ ನಟರ ಸಂಭಾವನೆ ಬಗ್ಗೆ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ನಟ ಆಮಿರ್ ಖಾನ್, ತಾವು ಕಳೆದ 20 ವರ್ಷದಿಂದ ಸಂಭಾವನೆಯನ್ನೇ ಪಡೆದಿಲ್ಲ ಎಂದಿದ್ದಾರೆ.
ಸ್ವತಃ ಆಮಿರ್ ಖಾನ್ ಹೇಳಿಕೊಂಡಿರುವಂತೆ ಕಳೆದ 20 ವರ್ಷದಲ್ಲಿ ಅವರು ಯಾವ ಸಿನಿಮಾಕ್ಕೂ ಸಂಭಾವನೆಯನ್ನೇ ಪಡೆದಿಲ್ಲವಂತೆ. ಹಾಗೆಂದು ಆಮಿರ್ ಖಾನ್ ಇಷ್ಟು ವರ್ಷ ಸಿನಿಮಾಗಳಲ್ಲಿ ಉಚಿತವಾಗಿ ನಟಿಸಿಲ್ಲ, ಬದಲಿಗೆ ಲಾಭದಲ್ಲಿ ಭಾಗ ಪಡೆದಿದ್ದಾರೆ. ಇದರಿಂದಾಗಿ ಸಿನಿಮಾಗಳ ಬಜೆಟ್ ಮಿತಿಯಲ್ಲಿ ಇರುತ್ತವೆ ಮತ್ತು ಸಿನಿಮಾಗಳು ಲಾಭ ಮಾಡುವ ಸಾಧ್ಯತೆ ಬಹಳ ಹೆಚ್ಚಾಗುತ್ತದೆ. ಆಮಿರ್ ಖಾನ್ಗೂ ಸಹ ಲಾಭವೇ ಆಗುತ್ತದೆ.
‘ನನಗೆ ‘ತಾರೇ ಜಮೀನ್ ಪರ್’ ಕತೆ ಬಹಳ ಇಷ್ಟವಾಗಿತ್ತು, ಆ ಸಿನಿಮಾದ ಕತೆ ನನ್ನನ್ನು ಕಾಡಿಬಿಟ್ಟಿತ್ತು, ಆ ಸಿನಿಮಾ ಮಾಡಲೇ ಬೇಕಿತ್ತು, ನನ್ನ ಸ್ಟಾರ್ಡಂ ಲೆಕ್ಕ ಹಾಕಿದ್ದರೆ ಆ ಸಿನಿಮಾ ಆಗುತ್ತಲೇ ಇರಲಿಲ್ಲ. ಪ್ರಾಫಿಟ್ ಷೇರ್ ಮಾದರಿಯಲ್ಲಿ ಕೆಲಸ ಮಾಡಿದ್ದರಿಂದಲೇ ಆ ಸಿನಿಮಾ ಕೇವಲ 10-12 ಕೋಟಿಯಲ್ಲಿ ಮುಗಿಯಿತು. ವರ್ಷಗಳಿಂದಲೂ ನಾನು ಇದನ್ನೇ ಮಾಡುತ್ತಾ ಬಂದಿದ್ದೇನೆ. ಇದು ಹಳೆಯ ಮಾದರಿ ಬೀದಿಯಲ್ಲಿ ಕಲಾವಿದ ತಮ್ಮ ಕಲೆ ಪ್ರದರ್ಶಿಸುತ್ತಾನೆ, ಅವನ ಕಲೆ ಇಷ್ಟವಾಯ್ತು ಎಂದರೆ ಜನ ಹಣ ಕೊಡುತ್ತಾರೆ ಇಲ್ಲವಾದರೆ ಇಲ್ಲ. ನನ್ನದೂ ಹಾಗೆಯೇ ನಾನು ಸಿನಿಮಾ ಮಾಡುತ್ತೇನೆ, ಜನ ನೋಡಿದರೆ ನನಗೆ ಹಣ ಬರುತ್ತದೆ, ನೋಡಲಿಲ್ಲವೆಂದರೆ ನನಗೆ ಹಣ ಬರುವುದಿಲ್ಲ’ ಎಂದಿದ್ದಾರೆ ಆಮಿರ್ ಖಾನ್.
ಇದನ್ನೂ ಓದಿ:ಶೂಟಿಂಗ್ ವೇಳೆ ಈ ಕಾರಣಕ್ಕೆ ಕನ್ಫ್ಯೂಸ್ ಆಗ್ತಾರೆ ಆಮಿರ್ ಖಾನ್
‘ಕಳೆದ 20 ವರ್ಷಗಳಿಂದಲೂ ನಾನು ಇದನ್ನೇ ಮಾಡುತ್ತಾ ಬಂದಿದ್ದೇನೆ. ಈಗ ‘3 ಇಡಿಯಟ್ಸ್’ ಸಿನಿಮಾ ಉದಾಹರಣೆಯಾಗಿ ತೆಗೆದುಕೊಳ್ಳಿ. ಆ ಸಿನಿಮಾವನ್ನು ಬಹಳ ಜನ ನೋಡಿದರು, ಮತ್ತೆ ಮತ್ತೆ ನೋಡಿದರು, ಈಗಲೂ ನೋಡುತ್ತಲೇ ಇದ್ದಾರೆ. ಇದರಿಂದ ನನಗೆ ಸತತವಾಗಿ ಹಣ ಬಂತು, ಹೆಚ್ಚಿಗೆ ಹಣ ಬಂತು. ಈ ರೀತಿ ಪ್ರಾಫಿಟ್ ಷೇರ್ ಮಾದರಿಯಲ್ಲಿ ಸಂಭಾವನೆ ಪಡೆಯುವುದರಿಂದ ನನಗೆ ಸ್ವಾತಂತ್ರ್ಯ ಇದೆ. ನನಗೆ ಬೇಕಾದ ಸಿನಿಮಾಗಳನ್ನು ನಾನು ಮಾಡಬಹುದು, ನಿರ್ಮಾಪಕರಿಗೆ ಅತಿಯಾದ ಹಣ ಖರ್ಚು ಮಾಡುವ ಅಗತ್ಯ ಇರುವುದಿಲ್ಲ. ಬಜೆಟ್ಗಳು ಹೆಚ್ಚಾಗುವುದಿಲ್ಲ. ಈಗಲೂ ನನ್ನ ಸಿನಿಮಾಗಳು 20-30 ಕೋಟಿ ರೂಪಾಯಿಯನ್ನು ಮಾಡಿ ಮುಗಿಸಬಹುದು’ ಎಂದಿದ್ದಾರೆ ಆಮಿರ್ ಖಾನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ