IPL 2025: ಡೆಲ್ಲಿ- ಮುಂಬೈ ಪಂದ್ಯಕ್ಕೂ ಮುನ್ನ ಮೈದಾನಕ್ಕೆ ಬಂದ ರೋಬೋ ಶ್ವಾನ; ವಿಡಿಯೋ ನೋಡಿ
*Robot Dog Surprises IPL Players: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಂಬೈ ಮತ್ತು ಡೆಲ್ಲಿ ತಂಡಗಳ ಆಟಗಾರರ ಅಭ್ಯಾಸದ ವೇಳೆ, ರೋಬೋಟ್ ಶ್ವಾನ ಮೈದಾನಕ್ಕೆ ಪ್ರವೇಶಿಸಿ ಆಟಗಾರರನ್ನು ಆಶ್ಚರ್ಯಚಕಿತಗೊಳಿಸಿತು. ಆರಂಭದಲ್ಲಿ ಭಯಭೀತರಾದ ಆಟಗಾರರು ಮತ್ತು ನಿರೂಪಕರು ನಂತರ ರೋಬೋಟ್ ಶ್ವಾನದೊಂದಿಗೆ ಸಂವಾದ ನಡೆಸಿದರು.
2025 ರ ಇಂಡಿಯನ್ ಪ್ರೀಮಿಯರ್ ಲೀಗ್ನ 29ನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಂಬೈ ಹಾಗೂ ಡೆಲ್ಲಿ ನಡುವೆ ನಡೆಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಆಟಗಾರರು ಅಭ್ಯಾಸ ನಡೆಸುತ್ತಿದ್ದ ವೇಳೆ ಮೈದಾನಕ್ಕೆ ಎಂಟ್ರಿಕೊಟ್ಟ ರೋಬೋ ಶ್ವಾನ ಒಂದು ಕ್ಷಣ ಎರಡೂ ತಂಡಗಳ ಆಟಗಾರರಲ್ಲಿ ಅಚ್ಚರಿ ಮೂಡಿಸಿದೆ. ಆರಂಭದಲ್ಲಿ ಈ ರೋಬೋ ಶ್ವಾನವನ್ನು ನೋಡಿ ಆಟಗಾರರು ಕೂಡ ಕೊಂಚ ಭಯ ಭೀತರಾಗಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಆಟಗಾರರು ಮತ್ತು ವೀಕ್ಷಕ ವಿವರಣೆಗಾರರು ರೋಬೋಟ್ ಶ್ವಾನವನ್ನು ನೋಡಿ ಆರಂಭದಲ್ಲಿ ಹೆದರಿದ್ದಾರೆ. ಈ ರೋಬೋ ಶ್ವಾನವನ್ನು ನೋಡಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಬೆರಗಾದರು. ಮುಂಬೈ ಇಂಡಿಯನ್ಸ್ ವೇಗಿ ರೀಸ್ ಟಾಪ್ಲಿ ಮತ್ತು ನಿರೂಪಕ ಡ್ಯಾನಿ ಮಾರಿಸನ್ ರೋಬೋಟ್ ನೋಡಿ ಭಯಭೀತರಾಗಿ, ‘ಇದು ಯಾವ ರೀತಿಯ ಶ್ವಾನ?” ಎಂದು ಕೇಳಿದರು.
ಅನುಭವಿ ನಿರೂಪಕ ಡ್ಯಾನಿ ಮಾರಿಸನ್ ಈ ರೋಬೋಟ್ ಶ್ವಾನವನ್ನು ನೋಡಿದ ನಂತರ ಆರಂಭದಲ್ಲಿ ಭಯಭೀತರಾದರು. ಆದರೆ ಆ ನಂತರ ಈ ಶ್ವಾನದ ಬಗ್ಗೆ ಮಾಹಿತಿ ಪಡೆದ ಬಳಿಕ ಅಭಿಮಾನಿಗಳು ಈ ತಂತ್ರಜ್ಞಾನವನ್ನು ಆನಂದಿಸುತ್ತಾರೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಮಾರಿಸನ್ ಈ ಯಂತ್ರದ ಕೆಲವು ವಿಶಿಷ್ಟ ಲಕ್ಷಣಗಳನ್ನು ತೋರಿಸಿದರು. ಈ ರೋಬೋ ಶ್ವಾನ ತನ್ನ ರೋಬೋಟಿಕ್ ಪಂಜಗಳನ್ನು ಬಳಸಿಕೊಂಡು ಆಟಗಾರರೊಂದಿಗೆ ಕೈಕುಲುಕುವ ಮೂಲಕ ಸ್ವಾಗತಿಸಿತು. ಇದರಲ್ಲಿ ಅಳವಡಿಸಲಾಗಿರುವ ಅತ್ಯಧಿಕ ರೆಸಲ್ಯೂಶನ್ ಕ್ಯಾಮೆರಾದ ಬಗ್ಗೆ ಮಾತನಾಡಿದ ಮಾರಿಸನ್, ಈ ಸಾಧನವು ಪ್ರಸಾರಕ್ಕೆ ಸಂಪೂರ್ಣವಾಗಿ ಹೊಸ ಆಯಾಮವನ್ನು ನೀಡುತ್ತದೆ ಎಂದು ಹೇಳಿದರು.
ಇದೇ ವೇಳೆ ಈ ಶ್ವಾನ ಮಾರಿಸನ್ ಅವರಿಗೆ “ಲವ್ ಪೋಸ್” ನೀಡಿತು. ಅದನ್ನು ನೋಡಿ ಇತರ ಆಟಗಾರರು ಕೂಡ ನಗಲು ಪ್ರಾರಂಭಿಸಿದರು. ಅಲ್ಲದೆ ಈ ರೋಬೋ ಶ್ವಾನಕ್ಕೆ ವಿನೂತನ ಹೆಸರನ್ನು ಹೆಸರಿಸುವಂತೆ ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಅತ್ಯುತ್ತಮ ಹೆಸರನ್ನು ಸೂಚಿಸುವ ಅಭಿಮಾನಿಗೆ ವಿಶೇಷ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ ಎಂದು ಮಾರಿಸನ್ ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ