MI vs DC: ಮೂರು ಎಸೆತಗಳಲ್ಲಿ 3 ರನೌಟ್: ಪಂದ್ಯದ ಫಲಿತಾಂಶವನ್ನೇ ಬದಲಿಸಿದ ರನ್ನೋಟ
IPL 2025 DC vs MI: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹಾರ್ದಿಕ್ ಪಾಂಡ್ಯ ಮುಂದಾಳತ್ವದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 205 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 19 ಓವರ್ಗಳಲ್ಲಿ 193 ರನ್ಗಳಿಸಿ ಆಲೌಟ್ ಆಗಿದೆ.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 29ನೇ ಪಂದ್ಯದಲ್ಲಿ ರಣರೋಚಕ ಪೈಪೋಟಿ ಕಂಡು ಬಂದಿದೆ. ಈ ಪೈಪೋಟಿ ಅಂತ್ಯವಾಗಿದ್ದು ಮೂರು ರನೌಟ್ಗಳೊಂದಿಗೆ ಎಂಬುದೇ ಅಚ್ಚರಿ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18 ಓವರ್ಗಳ ಮುಕ್ತಾಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು.
ಕೊನೆಯ 12 ಎಸೆತಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 23 ರನ್ಗಳು ಬೇಕಿತ್ತು. ಜಸ್ಪ್ರೀತ್ ಬುಮ್ರಾ ಎಸೆದ 19ನೇ ಓವರ್ನ ಮೊದಲ ಮೂರು ಎಸೆತಗಳಲ್ಲಿ 2 ಫೋರ್ಗಳು ಮೂಡಿಬಂದಿದವು. ಪರಿಣಾಮ ಡೆಲ್ಲಿ ತಂಡದ ಟಾರ್ಗೆಟ್ 9 ಎಸೆತಗಳಲ್ಲಿ 15 ಆಯಿತು. ಆದರೆ 4ನೇ ಎಸೆತದಲ್ಲಿ 2 ರನ್ ಕದಿಯುವ ಯತ್ನದಲ್ಲಿ ಅಶುತೋಷ್ ಶರ್ಮಾ ರನೌಟ್ ಆದರು.
ಇದರ ಬೆನ್ನಲ್ಲೇ ಕುಲ್ದೀಪ್ ಯಾದವ್ ಕೂಡ 2 ರನ್ ಓಡುವ ತವಕದಲ್ಲಿ ರನೌಟ್ಗೆ ಬಲಿಯಾದರು. ಇನ್ನು 19ನೇ ಓವರ್ನ ಕೊನೆಯ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್ ಮಾಡಿದ ಅದ್ಭುತ ಫೀಲ್ಡಿಂಗ್ನಿಂದಾಗಿ ಮೋಹಿತ್ ಶರ್ಮಾ ಕೂಡ ರನೌಟ್ ಆದರು.
ಹೀಗೆ ಹ್ಯಾಟ್ರಿಕ್ ರನೌಟ್ ಮಾಡುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 12 ರನ್ಗಳ ರೋಚಕ ಜಯ ಸಾಧಿಸಿತು. ಇತ್ತ ಗೆಲ್ಲಬಹುದಾಗಿದ್ದ ಪಂದ್ಯವನ್ನು ಬ್ಯಾಕ್ ಟು ಬ್ಯಾಕ್ ರನೌಟ್ ಆಗುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಕೈಚೆಲ್ಲಿಕೊಂಡಿತು. ಇದೀಗ 19ನೇ ಓವರ್ನಲ್ಲಿ ಕಂಡು ಬಂದ ರೋಚಕ ಹೋರಾಟದ ವಿಡಿಯೋ ವೈರಲ್ ಆಗಿದೆ.
– ಮುಂಬೈ ಇಂಡಿಯನ್ಸ್– 205/5 (20 ಓವರ್ಗಳು)
– ಡೆಲ್ಲಿ ಕ್ಯಾಪಿಟಲ್ಸ್– 193/10 (19 ಓವರ್ಗಳು)