Chandrayaan 3: ಚಂದ್ರಯಾನ-2 ವೈಫಲ್ಯದಿಂದ ಪಾಠ ಕಲಿತು, ಜುಲೈ 14 ರಂದು ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಜ್ಜು

ಚಂದ್ರಯಾನ -2 ಲ್ಯಾಂಡರ್‌ನ ವೈಫಲ್ಯದಿಂದ ನಾವು ಕಲಿತಿದ್ದು, ಅದನ್ನು ಸುಧಾರಿಸಿ ಚಂದ್ರಯಾನ -3 ಮಿಷನ್‌ನಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಲ್ಯಾಂಡಿಂಗ್ ಅನ್ನು ಒಳಗೊಂಡಂತೆ ಚಂದ್ರನ ಮೇಲೆ ಇಳಿಯಲು ಬಾಹ್ಯಾಕಾಶ ಸಂಸ್ಥೆಯ ಎರಡನೇ ಪ್ರಯತ್ನ ಇದಾಗಿದೆ. ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಸ್ಥಳವನ್ನು ಸಮೀಪಿಸುತ್ತಿದ್ದಂತೆ ವೇಗದ ಮಟ್ಟವನ್ನು ನಿರ್ಣಯಿಸಲು  ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ

Chandrayaan 3: ಚಂದ್ರಯಾನ-2 ವೈಫಲ್ಯದಿಂದ ಪಾಠ ಕಲಿತು, ಜುಲೈ 14 ರಂದು ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಜ್ಜು
ಚಂದ್ರಯಾನ-3
Follow us
|

Updated on: Jul 07, 2023 | 2:41 PM

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮಿಷನ್ (Chandrayaan 3) ಉಡಾವಣೆ ಮಾಡಲಿದೆ. ಚಂದ್ರಯಾನ-3 ಮಿಷನ್‌ಗೆ ಜುಲೈ 12 ಮತ್ತು 19 ರ ನಡುವೆ ಉಡಾವಣೆ ವಿಂಡೋ ಲಭ್ಯವಿದೆ ಎಂದು ಈ ಹಿಂದೆ ಹೇಳಿದ್ದ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ (S Somanath), ಜುಲೈ 14 ರಂದು ಮಧ್ಯಾಹ್ನ 2.35 ಕ್ಕೆ ಉಡಾವಣೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ. ಈ ಮಿಷನ್ ಆಗಸ್ಟ್ 23 ಅಥವಾ 24 ರಂದು ಇದು ಚಂದ್ರನ ಮೇಲ್ಮೈ ತಲುಪಲಿದೆ.

ಚಂದ್ರಯಾನ-3 ರ ಉಡಾವಣೆ ಜುಲೈ 14 ರಂದು ಮಧ್ಯಾಹ್ನ 2.30 ಕ್ಕೆ ನಡೆಯಲಿದೆ. ಅಂದು ಉಡಾವಣೆ ನಡೆದರೆ ಆಗಸ್ಟ್ ಕೊನೆಯ ವಾರದ ವೇಳೆಗೆ ಚಂದ್ರನ ಮೇಲೆ ಇಳಿಯಲು ಸಾಧ್ಯವಾಗಲಿದೆ. ದಿನಾಂಕವನ್ನು ಚಂದ್ರನ ಮೇಲೆ ಸೂರ್ಯೋದಯದಿಂದ ನಿರ್ಧರಿಸಲಾಗುತ್ತದೆ. ಲ್ಯಾಂಡಿಂಗ್ ನಡೆಯುವಾಗ, ಸೂರ್ಯನ ಬೆಳಕು ಅಲ್ಲಿರಬೇಕು. ಚಂದ್ರನ ಮೇಲೆ ಒಂದು ದಿನ ಅಂದರೆ 15 ಭೂಮಿಯ ದಿನಗಳು. ನೀವು 15 ದಿನಗಳವರೆಗೆ ಸೂರ್ಯನ ಬೆಳಕನ್ನು ಹೊಂದಿರುತ್ತೀರಿ ಮತ್ತು ಮುಂದಿನ 15 ದಿನಗಳಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಸೂರ್ಯನ ಬೆಳಕು ಇರುವುದಿಲ್ಲ ಎಂದು ಸೋಮನಾಥ್ ಅವರು ಬಾಹ್ಯಾಕಾಶ ಆರ್ಥಿಕತೆಯ ಕುರಿತು ಜಿ 20 ಸಭೆಗಿಂತ ಮುನ್ನ ಹೇಳಿದ್ದಾರೆ.

ಆದ್ದರಿಂದ ನಾವು ಚಂದ್ರನ ಮೇಲೆ ಸೂರ್ಯನ ಮೊದಲ (ಭೂಮಿಯ) ದಿನದಂದು ಇಳಿಯಬೇಕಾದರೆ (ಅದು ಚಂದ್ರನ ಮೇಲೆ ಸೂರ್ಯನ 15 ಭೂಮಿಯ ದಿನಗಳಲ್ಲಿ ಮೊದಲನೆಯದು) ಆಗ ನಾವು ಕಾರ್ಯಾಚರಣೆಗೆ ಕನಿಷ್ಠ 15 ದಿನಗಳ ಕಾಲಾವಧಿ ಹೊಂದಿರುತ್ತೇವೆ. ಎಲ್ಲವೂ ಸರಿಯಾಗಿ ನಡೆದರೆ, ಆಗಸ್ಟ್ 23 ಅಥವಾ ಆಗಸ್ಟ್ 24ರಂದು ಅಲ್ಲಿ ಇಳಿಯಬಹು. ಇದು ಲೆಕ್ಕಾಚಾರಗಳನ್ನು ಅವಲಂಬಿಸಿರುತ್ತದೆ. ಕೆಲವೊಮ್ಮೆಅದು ಆಗಸ್ಟ್ 25 ಅಥವಾ 26 ಆಗಿರಬಹುದು. ನಂತರ ನಾವು ಇಳಿಯುವುದಿಲ್ಲ. ಮತ್ತೆ ಅದಕ್ಕಾಗಿ ನಾವು ಒಂದು ತಿಂಗಳು ಕಾಯುತ್ತೇವೆ, ಮತ್ತೆ 15 ದಿನಗಳು ಬಿಸಿಲು ಇರುತ್ತವೆ. ಹೀಗಾದರೆ ನಂತರ ದಿನಾಂಕವು ಸೆಪ್ಟೆಂಬರ್ 20 ಅಥವಾ ನಂತರ ಇರಬಹುದು ಎಂದು ಸೋಮನಾಥ್ ವಿವರಿಸಿದ್ದಾರೆ.

ಚಂದ್ರಯಾನ -2 ಲ್ಯಾಂಡರ್‌ನ ವೈಫಲ್ಯದಿಂದ ನಾವು ಕಲಿತಿದ್ದು, ಅದನ್ನು ಸುಧಾರಿಸಿ ಚಂದ್ರಯಾನ -3 ಮಿಷನ್‌ನಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಲ್ಯಾಂಡಿಂಗ್ ಅನ್ನು ಒಳಗೊಂಡಂತೆ ಚಂದ್ರನ ಮೇಲೆ ಇಳಿಯಲು ಬಾಹ್ಯಾಕಾಶ ಸಂಸ್ಥೆಯ ಎರಡನೇ ಪ್ರಯತ್ನ ಇದಾಗಿದೆ. ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಸ್ಥಳವನ್ನು ಸಮೀಪಿಸುತ್ತಿದ್ದಂತೆ ವೇಗದ ಮಟ್ಟವನ್ನು ನಿರ್ಣಯಿಸಲು  ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಚಂದ್ರಯಾನ-2 ಲ್ಯಾಂಡಿಂಗ್ ಹಂತದಲ್ಲಿ ಯಶಸ್ವಿಯಾಗಲಿಲ್ಲ. ಆದ್ದರಿಂದ ನಾವು ಲ್ಯಾಂಡಿಂಗ್ ನ ಪ್ರಾಥಮಿಕ ಡೇಟಾವನ್ನು ಸಂಗ್ರಹಿಸಿದ್ದೇವೆ. ವಿಶ್ಲೇಷಣೆ, ಸಿಮ್ಯುಲೇಶನ್ ಮತ್ತು ಲ್ಯಾಂಡಿಂಗ್ ಹಂತದಲ್ಲಿ ಸಮಸ್ಯೆಗಳನ್ನು ಅಧ್ಯಯನ ಮಾಡಿದ್ದೇವೆ. ಚಂದ್ರಯಾನ-2 ಲ್ಯಾಂಡರ್ ಚಂದ್ರನ ಮೇಲೆ ದೊಪ್ಪನೆ ಲ್ಯಾಂಡ್ ಆಗಿತ್ತು. ನಾವು ಯಾವುದೇ ಅವಶೇಷಗಳನ್ನು ಸ್ವೀಕರಿಸಿಲ್ಲ. ಆದ್ದರಿಂದ ಅಪ್ಪಳಿಸಿದ ಸಮಯದಲ್ಲಿ ದಾಖಲಾದ ಡೇಟಾವನ್ನು ನಾವು ಹೊಂದಿದ್ದೇವೆ. ಘಟನೆಯ ಬಗ್ಗೆ ಅರಿಯಲು ನಾವು ಡೇಟಾವನ್ನು ಬಳಸಿದ್ದೇವೆ. ಲ್ಯಾಂಡಿಂಗ್ ವಿಫಲವಾಗಿರಲು ಮೂರ್ನಾಲ್ಕು ಕಾರಣಗಳಿವೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಸೋಮನಾಥ್ ಹೇಳಿದರು.

ಚಂದ್ರಯಾನ-2 ಮಿಷನ್ 2019 ಜುಲೈ 15 ರಂದು ಉಡಾವಣೆಯಾಗಿತ್ತು.ಲ್ಯಾಂಡಿಂಗ್‌ಗಾಗಿ ಪ್ರಕ್ರಿಯೆ ಸೆಪ್ಟೆಂಬರ್ 7, 2019 ರಂದು ಆರಂಭವಾಗಿತ್ತು. ಲ್ಯಾಂಡರ್ 410 ಡಿಗ್ರಿಗಳಷ್ಟು ಸುತ್ತುವ ಮೊದಲು ಲ್ಯಾಂಡಿಂಗ್ ಟ್ರ್ಯಾಕ್‌ನಲ್ಲಿತ್ತು, ಇದು 55 ಡಿಗ್ರಿ ಮಾಪನಾಂಕದ ಸ್ಪಿನ್‌ನಿಂದ ಪಥದಿಂದ ಹೊರ ಹೋಗಿ ಚಂದ್ರನ ಮೇಲೆ ದಿಢೀರ್ ಲ್ಯಾಂಡಿಂಗ್ ಮಾಡಿತ್ತು.

ಲ್ಯಾಂಡಿಂಗ್ ಪ್ರಕ್ರಿಯೆಯ ನಾಲ್ಕು ಹಂತಗಳಲ್ಲಿ ಎರಡನೇ ಹಂತದಲ್ಲಿ ಸಂಭವಿಸಿದ ಸಮಸ್ಯೆ ಮಿಷನ್ ಕಂಟ್ರೋಲ್ ರೂಮ್‌ನಲ್ಲಿನ ಕಂಪ್ಯೂಟರ್ ಸಿಸ್ಟಮ್‌ಗಳಲ್ಲಿ ಪ್ರತಿಫಲಿಸುತ್ತದೆ, ಆದರೆ ಲ್ಯಾಂಡರ್ ಆಟೋನೋಮಸ್  ಮೋಡ್‌ನಲ್ಲಿರುವ ಕಾರಣ ಅದನ್ನು ಸರಿಪಡಿಸಲು ಇಸ್ರೋ ವಿಜ್ಞಾನಿಗಳು ಮಧ್ಯಪ್ರವೇಶಿಸಲು ಸಾಧ್ಯವಾಗಲಿಲ್ಲಎಂದು ಮಿಷನ್ ನಂತರ ಇಸ್ರೋ ವಿಜ್ಞಾನಿಗಳು ಹೇಳಿದ್ದರು. ವಿಫಲವಾದ ಲ್ಯಾಂಡರ್‌ನಲ್ಲಿರುವ ಸಂವಹನ ವ್ಯವಸ್ಥೆಯು ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸುವ ಮೊದಲು 400 ಮೀಟರ್‌ಗಳವರೆಗೆ ಅದರ ಕಾರ್ಯಕ್ಷಮತೆಯ ಡೇಟಾವನ್ನು ಪೂರೈಸಿದ್ದು ಚಂದ್ರಯಾನ-3ನಲ್ಲಿ ದೋಷಗಳು ಸಂಭವಿಸದಂತೆ ಸರಿಪಡಿಸಲಾಗಿದೆ ಎಂದು ಇಸ್ರೋ ಈಗ ವಿಶ್ವಾಸ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಜುಲೈ 14 ರಂದು ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಡಾವಣೆ: ಇಸ್ರೋ ಘೋಷಣೆ

“ಮೊದಲನೆಯದು ಸಮಸ್ಯೆಗಳಿಂದ ಮುಕ್ತಿ ಹೊಂದುವುದು. ನಾವು ಅದನ್ನು ಪರಿಶೀಲಿಸಿದ್ದೇವೆ ಮತ್ತು ವಿವಿಧ ಅಂಶಗಳನ್ನು ಮತ್ತಷ್ಟು ಬಲಪಡಿಸಿದ್ದೇವೆ. ಚಂದ್ರಯಾನ-2 ರ ವಿನ್ಯಾಸವು 2 ಮೀ/ಸೆಕೆಂಡ್ (7.2 ಕಿಮೀ/ಗಂ) ವೇಗದಲ್ಲಿ ಲ್ಯಾಂಡಿಂಗ್‌ ಮಾಡುವುದಕ್ಕಾಗಿತ್ತು. ನಾವು ಈಗ ಲ್ಯಾಂಡಿಂಗ್‌ಗಾಗಿ ವೇಗದ ಮಿತಿಯನ್ನು ಹೆಚ್ಚಿಸಿದ್ದೇವೆ. ನಾವು ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ರಚಿಸಿದ್ದೇವೆ ಎಂದು ಇಸ್ರೋ ಅಧ್ಯಕ್ಷರು ಗುರುವಾರ ಹೇಳಿದರು.

ಎರಡನೆಯ ವಿಷಯವೆಂದರೆ ಚಂದ್ರಯಾನ-3 ಹೆಚ್ಚು ಪ್ರೊಪೆಲ್ಲಂಟ್ ಪ್ರಮಾಣವನ್ನು ಹೊಂದಿರುತ್ತದೆ. ನಾವು ಟ್ಯಾಂಕ್‌ನ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ಒಂದು ಲ್ಯಾಂಡಿಂಗ್ ಸೈಟ್‌ನಲ್ಲಿ ಸಮಸ್ಯೆಗಳಿದ್ದರೆ ಲ್ಯಾಂಡರ್ ಲ್ಯಾಂಡಿಂಗ್ ಸೈಟ್ ಅನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೆಚ್ಚುವರಿ ಪ್ರೊಪೆಲ್ಲೆಂಟ್ ಸ್ಥಳವನ್ನು ಬದಲಾಯಿಸುವುದಕ್ಕೂ ಅನುಕೂಲವಾಗಲಿದೆ.

ಇಸ್ರೋ ಲ್ಯಾಂಡರ್‌ನಲ್ಲಿ ಸೌರ ಫಲಕಗಳನ್ನು ಕೆಳಮುಖವಾಗಿ ಇಳಿಸಿದರೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಲ್ಯಾಂಡರ್‌ನಲ್ಲಿ ಬಹು-ದಿಕ್ಕಿನ ಸೌರ ಫಲಕಗಳನ್ನು ಅಳವಡಿಸಲಾಗಿದೆ. ನಾವು ನಾಲ್ಕು ದಿಕ್ಕುಗಳಲ್ಲಿ ಸೌರ ಫಲಕಗಳನ್ನು ಸ್ಥಾಪಿಸಿದ್ದೇವೆ. ಇದರಿಂದ ಫಲಕದ ಒಂದು ಅಥವಾ ಎರಡು ಮುಖಗಳು ಸೌರ ಶಕ್ತಿಯನ್ನು ಹೀರಿಕೊಳ್ಳುತ್ತವೆ, ಅದು ತಪ್ಪು ದಿಕ್ಕಿನಲ್ಲಿ ಇಳಿದರೂ ಅದು ವಿದ್ಯುತ್ ಪ್ರಸರಣ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಸೋಮನಾಥ್ ಹೇಳಿದರು.

ಚಂದ್ರಯಾನ-2 ಮಿಷನ್‌ನಲ್ಲಿ ಲ್ಯಾಂಡರ್‌ಗಿಂತ ಹೆಚ್ಚು ತೂಕವಿರುವ ಲ್ಯಾಂಡರ್, ಲ್ಯಾಂಡಿಂಗ್ ವೇಗವನ್ನು ನಿರ್ಣಯಿಸಲು ಮತ್ತು ತಿದ್ದುಪಡಿಗಳನ್ನು ಮಾಡಲು ಹೆಚ್ಚುವರಿ ಸಾಧನಗಳನ್ನು ಹೊಂದಿರುತ್ತದೆ.

ಲೇಸರ್ ಡಾಪ್ಲರ್ ವೆಲೋಸಿಮೀಟರ್ ಎಂಬ ಹೊಸ ಉಪಕರಣವಿದೆ, ಅದು ಮೂರು ಲೇಸರ್ ಕಿರಣಗಳನ್ನು ಹೊಂದಿರುತ್ತದೆ. ಅದು ಚಂದ್ರನ ಮೇಲ್ಮೈಯಿಂದ ಪ್ರತಿಫಲಿಸಿದಾಗ ನಾವು ಲ್ಯಾಂಡರ್‌ನಲ್ಲಿನ ಹೆಚ್ಚಿನ ವೇಗವನ್ನು ನಿರ್ಣಯಿಸಬಹುದು. ಕಿರಣ ಪುಂಜಗಳು ಫಾರ್ವರ್ಡ್ ವೇಗ, ಲಿಫ್ಟ್ ವೇಗ ಮತ್ತು ಮೇಲಕ್ಕೆ ಮತ್ತು ಕೆಳಕ್ಕೆ ವೇಗವನ್ನು ಅಳೆಯುತ್ತವೆ. ಲ್ಯಾಂಡರ್ ಅನ್ನು ನಿಯಂತ್ರಿಸಲು ನಿಯಂತ್ರಣ ಪ್ರತಿಕ್ರಿಯೆಗೆ ವೇಗವನ್ನು ನೀಡಲಾಗುತ್ತದೆ.

ಲ್ಯಾಂಡರ್ ಅನ್ನು ಹೆಲಿಕಾಪ್ಟರ್‌ಗಳಿಂದ ಬೀಳಿಸುವುದು ಸೇರಿದಂತೆ ಅನೇಕ ಒತ್ತಡ ಪರೀಕ್ಷೆಗಳು ಮತ್ತು ಪ್ರಯೋಗಗಳಿಗೆ ಒಳಪಡಿಸಲಾಗಿದೆ.ನಾವು ಲ್ಯಾಂಡಿಂಗ್ ಅನ್ನು ಪ್ರದರ್ಶಿಸಲು ಉಪಗ್ರಹ ಕೇಂದ್ರದಲ್ಲಿ ವಿವಿಧ ಪರೀಕ್ಷಾ ವಲಯಗಳನ್ನು ರಚಿಸಿದ್ದೇವೆ. ಇಲ್ಲಿ ಒತ್ತಡ ಪರೀಕ್ಷೆಗಳು ಮತ್ತು ವೈಫಲ್ಯದ ಸಿಮ್ಯುಲೇಶನ್‌ಗಳನ್ನು ನಡೆಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸಂಭವನೀಯತೆಗಳ ವಿಷಯದಲ್ಲಿ ನಾವು ಯೋಚಿಸುವ ಎಲ್ಲವನ್ನೂ ನಾವು ಮಾಡಿದ್ದೇವೆ.ಈ ವಿಶ್ವಾಸದಿಂದ ನಾವು ಚಂದ್ರಯಾನ -3 ಅನ್ನು ಉಡಾವಣೆ ಮಾಡಲು ಮುಂದಾಗಿದ್ದೇವೆ ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ:ಚಂದ್ರನ ಒಂದು ಭಾಗದಲ್ಲಿ ನೀರಿನ ಅಂಶವಿರುವುದನ್ನು ಪತ್ತೆ ಮಾಡಿರುವ ಚಂದ್ರಯಾನ-2 ಮಿಶನ್ ನ ಆರ್ಬಿಟರ್

ನಯವಾಗಿ ಮತ್ತು ಸುರಕ್ಷಿತ ಲ್ಯಾಂಡಿಂಗ್ ಹೊಂದುವುದು ನಮ್ಮ ಗುರಿಯಾಗಿದೆ. ಕ್ರ್ಯಾಶ್ ಆಗಿದ್ದರೆ ಯಾವುದೇ ಉಪಕರಣಗಳು ಕಾರ್ಯನಿರ್ವಹಿಸುವುದಿಲ್ಲ. ಮಿಷನ್‌ನಲ್ಲಿ ಐದು ಪ್ರಯೋಗಗಳಿವೆ. ಇದರಲ್ಲಿ ಮೂರು ಲ್ಯಾಂಡರ್‌ನಲ್ಲಿ ಮತ್ತು ಎರಡು ರೋವರ್‌ನಲ್ಲಿವೆ. ಈ ಪ್ರಯೋಗಗಳು ಸುರಕ್ಷಿತ ಮತ್ತು ನಯವಾದ ಲ್ಯಾಂಡಿಂಗ್ ನೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಉಪಕರಣಗಳು ಆರ್ಬಿಟರ್‌ನೊಂದಿಗೆ ಸಂವಹನ ಸಂಪರ್ಕವನ್ನು ಹೊಂದಿರಬೇಕು ಮತ್ತು ಭೂಮಿ ಮತ್ತು ಕಕ್ಷೆಯ ನಡುವಿನ ಸಂವಹನ ಸಂಕೇತಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸಿದರೂ ನಮ್ಮ ಸಂವಹನ ಲಿಂಕ್ ವಿಫಲವಾದರೆ ಮಿಷನ್‌ನಿಂದ ಯಾವುದೇ ಪ್ರಯೋಜನವಿಲ್ಲ. ಎಲ್ಲಾ ಅಂಶಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಲ್ಯಾಂಡಿಂಗ್ ಉತ್ತಮವಾಗಿ ನಡೆಯಬೇಕು, ಉಪಕರಣಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಮತ್ತು ಸಂವಹನವು ಉತ್ತಮವಾಗಿರಬೇಕು ಎಂದು ಅವರು ಹೇಳಿದರು.

ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ನೆಲೆಗೊಂಡ ನಂತರ, ಅದು ಚಂದ್ರನ ಮೇಲ್ಮೈಯ ಚಿತ್ರಗಳನ್ನು ತೆಗೆದುಕೊಳ್ಳಲು ಮತ್ತು ಎರಡು ಆನ್‌ಬೋರ್ಡ್ ಉಪಕರಣಗಳೊಂದಿಗೆ ಪ್ರಯೋಗಗಳನ್ನು ನಡೆಸಲು ರೋವರ್ ಅನ್ನು ಬಿಡುಗಡೆ ಮಾಡುತ್ತದೆ.

ಸೂರ್ಯನ ಬೆಳಕು ಇದ್ದಾಗ ರೋವರ್ 14 ದಿನಗಳ ಕಾಲಾವಧಿ ಹೊಂದಿರುತ್ತದೆ. 14 ದಿನಗಳವರೆಗೆ ಸೂರ್ಯನಿಲ್ಲದಿದ್ದಾಗ 150 ಡಿಗ್ರಿಗಿಂತ ಕಡಿಮೆ ತಾಪಮಾನವಿರುತ್ತದೆ ಮತ್ತು ಬ್ಯಾಟರಿಯು ರೀಚಾರ್ಜ್ ಮಾಡುವ ಯಾವುದೇ ವಿಧಾನವಿಲ್ಲದ ಅವಧಿಯಲ್ಲಿ ರೋವರ್ ಹಾಗೆ ಉಳಿಯುತ್ತದೆ ಎಂದು ನಾವು ಭಾವಿಸುತ್ತೇವೆ. ಒಂದು ದಿನ ಬ್ಯಾಟರಿ ಖಾಲಿಯಾಗುತ್ತದೆ. ಆ ದಿನ ನಾವು ರೋವರ್‌ಗೆ ಬೈ ಹೇಳಬೇಕಾಗುತ್ತದೆ. ಲ್ಯಾಂಡರ್ ಮತ್ತು ರೋವರ್‌ನ ಜೀವಿತಾವಧಿ 15 ದಿನಗಳು ಎಂದು ಅಂದಾಜಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ.

ಚಂದ್ರಯಾನ-2 ಮಿಷನ್ ಅನ್ನು ಜುಲೈ 22, 2019 ರಂದು ಪ್ರಾರಂಭಿಸಲಾಯಿತು. ಆಗಸ್ಟ್ 20, 2019 ರಂದು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸಲಾಯಿತು. ಲ್ಯಾಂಡರ್ ‘ವಿಕ್ರಮ್’ ಸೆಪ್ಟೆಂಬರ್ 2, 2019 ರಂದು ಆರ್ಬಿಟರ್‌ನಿಂದ ಬೇರ್ಪಟ್ಟಿತು. ಲ್ಯಾಂಡರ್‌ನ ಚಾಲಿತ ಇಳಿಯುವಿಕೆಯನ್ನು ಸೆಪ್ಟೆಂಬರ್ 7 ರಂದು ಸಾಫ್ಟ್ ಲ್ಯಾಂಡಿಂಗ್‌ಗಾಗಿ ಪ್ರಾರಂಭಿಸಲಾಗಿದ್ದರೂ ಅದು ಕ್ರ್ಯಾಶ್ ಆಗಿ ಬಿಟ್ಟಿತು. 2008 ರಲ್ಲಿ ಚಂದ್ರನಿಗೆ ಚಂದ್ರಯಾನ-1 ಮಿಷನ್ ಫ್ಲೈ-ಬೈ ವೈಜ್ಞಾನಿಕ ಮಿಷನ್ ಆಗಿದ್ದು ಅದು ಚಂದ್ರನ ಮೇಲೆ ನೀರಿನ ಕುರುಹುಗಳನ್ನು ಕಂಡುಹಿಡಿಯುವಲ್ಲಿ ಸ್ವಲ್ಪ ಯಶಸ್ವಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ