AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಕ್ಯಾಚ್ ಬಿಟ್ಟ ಶುಭ್​ಮನ್ ಗಿಲ್ ಹಣೆಗೆ ಬಡಿದ ಚೆಂಡು; ತಪ್ಪಿದ ಅನಾಹುತ

Edgbaston Test: ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಭಾರಿ ಅನಾಹುತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ವಾಸ್ತವವಾಗಿ ಗಿಲ್ ಕ್ಯಾಚ್ ಹಿಡಿಯುವ ಯತ್ನದಲ್ಲಿ ರಬಸವಾಗಿ ಬಂದ ಚೆಂಡು ಅವರ ಹಣೆಗೆ ಬಡಿದಿದೆ. ಚೆಂಡು ಒಂದಿಂಚು ಕೆಳಗೆ ಬಿದ್ದಿದ್ದರೆ ಗಿಲ್ ಅವರ ಕಣ್ಣಿಗೆ ಗಂಭೀರ ಗಾಯವಾಗುವ ಸಾಧ್ಯತೆಗಳಿದ್ದವು.

IND vs ENG: ಕ್ಯಾಚ್ ಬಿಟ್ಟ ಶುಭ್​ಮನ್ ಗಿಲ್ ಹಣೆಗೆ ಬಡಿದ ಚೆಂಡು; ತಪ್ಪಿದ ಅನಾಹುತ
Shubman Gill
ಪೃಥ್ವಿಶಂಕರ
|

Updated on:Jul 04, 2025 | 6:10 PM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯ ರೋಚಕಘಟ್ಟದತ್ತ ಸಾಗುತ್ತಿದೆ. ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡಿರುವ ಇಂಗ್ಲೆಂಡ್‌, ಭಾರತದ ಮೇಲೆ ಹಿಡಿತ ಸಾಧಿಸಿದೆ. ಇಂಗ್ಲೆಂಡ್‌ ತಂಡ ಮೇಲುಗೈ ಸಾಧಿಸುವಲ್ಲಿ ತಂಡದ ಬ್ಯಾಟ್ಸ್‌ಮನ್​ಗಳಾದ ಹ್ಯಾರಿ ಬ್ರೂಕ್ (Harry Brook) ಹಾಗೂ ಜೇಮಿ ಸ್ಮಿತ್ ಪ್ರಮುಖ ಕಾರಣರಾಗಿದ್ದಾರೆ. ತಂಡ 84 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಈ ಜೋಡಿ 150 ಕ್ಕೂ ಹೆಚ್ಚು ರನ್​ಗಳ ಜೊತೆಯಾಟ ನಡೆಸಿದೆ. ಅದರಲ್ಲೂ ಆರಂಭದಿಂದ ಹೊಡಿಬಡಿ ಆಟಕ್ಕೆ ಮುಂದಾಗಿರುವ ಸ್ಮಿತ್ ಅಜೇಯ ಶತಕ ಕೂಡ ಸಿಡಿಸಿದ್ದಾರೆ. ಇತ್ತ ಶತಕದತ್ತ ಸಾಗುತ್ತಿರುವ ಬ್ರೂಕ್ ಕೂಡ ತಾಳ್ಮೆಯ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಆದರೆ ಬ್ರೂಕ್ ಇದುವರೆಗೆ ಕ್ರೀಸ್​ನಲ್ಲಿರುವುದಕ್ಕೆ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ (Shubman Gill) ಕಾರಣ ಎನ್ನಬಹುದು.

ಬ್ರೂಕ್- ಸ್ಮಿತ್ ಜೊತೆಯಾಟ

ವಾಸ್ತವವಾಗಿ ಎಡ್ಜ್‌ಬಾಸ್ಟನ್‌ ಟೆಸ್ಟ್ ಪಂದ್ಯದ ಮೂರನೇ ದಿನದಾಟವನ್ನು ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 77 ರನ್‌ಗಳಿಂದ ಮುಂದುವರೆಸಿತು. ದಿನದ ಎರಡನೇ ಓವರ್‌ನಲ್ಲಿ, ಮೊಹಮ್ಮದ್ ಸಿರಾಜ್ ಸತತ 2 ವಿಕೆಟ್‌ಗಳನ್ನು ಪಡೆಯುವ ಮೂಲಕ ಇಂಗ್ಲೆಂಡ್‌ಗೆ ಆಘಾತ ನೀಡಿದರು. ಇದರ ನಂತರ, ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಜೇಮೀ ಸ್ಮಿತ್ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಇಬ್ಬರೂ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಭಾರತೀಯ ಬೌಲರ್‌ಗಳನ್ನು ಒತ್ತಡಕ್ಕೆ ಒಳಪಡಿಸಿದರು. ಅಂತಹ ಸಮಯದಲ್ಲಿ, ನಾಯಕ ಗಿಲ್ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿದರು, ಇದರಿಂದ ವಿಕೆಟ್‌ಗಳು ಬೀಳಬಹುದು ಎಂಬ ನಿರೀಕ್ಷೆ ಅವರದ್ದಾಗಿತ್ತು. ಆದರೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳನ್ನು ಚೆನ್ನಾಗಿ ಬೆಂಡೆತ್ತಿದರು.

ಕ್ಯಾಚ್ ಕೈಚೆಲ್ಲಿದ ಗಿಲ್

ಆದಾಗ್ಯೂ ಜಡೇಜಾ ಸೃಷ್ಟಿಸಿದ ವಿಕೆಟ್ ಪಡೆಯುವ ಅವಕಾಶವನ್ನು ಗಿಲ್ ಕೈಚೆಲ್ಲಿದರು. ರವೀಂದ್ರ ಜಡೇಜಾ ಇನ್ನಿಂಗ್ಸ್‌ನ 37 ನೇ ಓವರ್ ಬೌಲ್ ಮಾಡಿದರು. ಈ ಓವರ್‌ನ ಎರಡನೇ ಎಸೆತದಲ್ಲಿ ಬ್ರೂಕ್ ಕಟ್ ಶಾಟ್ ಆಡಿದರು. ಆದರೆ ಚೆಂಡು ಬ್ಯಾಟ್‌ನ ಅಂಚಿಗೆ ಬಡಿದು ಸ್ಲಿಪ್‌ನಲ್ಲಿ ನಿಂತಿದ್ದ ಗಿಲ್ ಕಡೆಗೆ ಹೋಯಿತು. ಆದರೆ ಚೆಂಡು ಗಿಲ್ ಕಡೆಗೆ ಅತಿ ವೇಗದಲ್ಲಿ ಬಂದ ಕಾರಣ ಅದನ್ನು ಜಡ್ಜ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಗಿಲ್ ತಮ್ಮ ತಲೆಯ ಕಡೆಗೆ ಬರುತ್ತಿದ್ದ ಚೆಂಡನ್ನು ಹಿಡಿಯಲು ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಗಿಲ್ ಕೈಯಿಂದ ತಪ್ಪಿಸಿಕೊಂಡ ಚೆಂಡು ನೇರವಾಗಿ ಅವರ ತಲೆಯ ಎಡಭಾಗಕ್ಕೆ ಬಡಿಯಿತು.

ಗಿಲ್ ತಲೆಗೆ ಬಡಿದ ಚೆಂಡು

ರಬಸವಾಗಿ ಬಂದ ಚೆಂಡು ತಲೆಗೆ ಬಲವಾಗಿ ಬಡಿದ ಕಾರಣ ಗಿಲ್​ ನೋವಿನಿಂದ ಬಳಲಲಾರಂಭಿಸಿದರು. ಅದೃಷ್ಟವಶಾತ್ ಚೆಂಡು ಗಿಲ್ ಅವರ ಎಡಗಣ್ಣಿನಿಂದ ಕೇವಲ ಒಂದು ಅಥವಾ ಒಂದೂವರೆ ಇಂಚು ಮೇಲೆ ಬಿದ್ದಿತು. ಒಂದು ವೇಳೆ ಈ ಚೆಂಡು ಗಿಲ್ ಅವರ ಕಣ್ಣಿಗೆ ತಗುಲಿದ್ದರೆ, ಪರಿಸ್ಥಿತಿ ಬೇರೆಯದ್ದೇ ಆಗುತ್ತಿತ್ತು. ಗಿಲ್ ಅವರ ವೃತ್ತಿಜೀವನಕ್ಕೂ ಗಂಡಾಂತರ ಎದುರಾಗುತ್ತಿತ್ತು. ಗಿಲ್ ಗಾಯಗೊಂಡ ತಕ್ಷಣ, ತಂಡದ ಫಿಸಿಯೋ ತಕ್ಷಣ ಮೈದಾನಕ್ಕೆ ಬಂದು ಗಿಲ್ ಅವರನ್ನು ಪರೀಕ್ಷಿಸಿದರು. ಸ್ವಲ್ಪ ಸಮಯದ ನಂತರ ಗಿಲ್ ತಮ್ಮ ಆಟವನ್ನು ಮುಂದುವರೆಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Fri, 4 July 25