India-China: ಮಿಲಿಟರಿ ವಲಯಕ್ಕೆ ತಲುಪಿದ ಬಾಹ್ಯಾಕಾಶ ಸ್ಪರ್ಧೆ: ಮುಖಾಮುಖಿಯಾದ ಭಾರತ – ಚೀನಾ

|

Updated on: Jul 08, 2023 | 5:12 PM

ಭಾರತ ಬಾಹ್ಯಾಕಾಶ ವಲಯದಲ್ಲಿ ರಕ್ಷಣಾ ಮತ್ತು ದಾಳಿಯ ಸಾಮರ್ಥ್ಯ ಗಳಿಸಿಕೊಳ್ಳಬೇಕು ಎಂದು ಇಂಡಿಯನ್ ಸ್ಪೇಸ್ ಅಸೋಸಿಯೇಷನ್ ನವದೆಹಲಿಯಲ್ಲಿ ಎಪ್ರಿಲ್ ತಿಂಗಳಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಕರೆ ನೀಡಿದ್ದರು.

India-China: ಮಿಲಿಟರಿ ವಲಯಕ್ಕೆ ತಲುಪಿದ ಬಾಹ್ಯಾಕಾಶ ಸ್ಪರ್ಧೆ: ಮುಖಾಮುಖಿಯಾದ ಭಾರತ - ಚೀನಾ
ಸಾಂದರ್ಭಿಕ ಚಿತ್ರ
Follow us on

ಭಾರತದ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರು ಭಾರತ ಬಾಹ್ಯಾಕಾಶ ವಲಯದಲ್ಲಿ ರಕ್ಷಣಾ ಮತ್ತು ದಾಳಿಯ ಸಾಮರ್ಥ್ಯ ಗಳಿಸಿಕೊಳ್ಳಬೇಕು ಎಂದು ಇಂಡಿಯನ್ ಸ್ಪೇಸ್ ಅಸೋಸಿಯೇಷನ್ ನವದೆಹಲಿಯಲ್ಲಿ ಎಪ್ರಿಲ್ ತಿಂಗಳಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಕರೆ ನೀಡಿದ್ದರು. ಚೌಹಾಣ್ ಅವರು ಬಾಹ್ಯಾಕಾಶದಲ್ಲಿ ಆಯುಧ ಅಳವಡಿಸುವ ಪ್ರಕ್ರಿಯೆ ಸತತವಾಗಿ ಮುಂದುವರಿದಿದ್ದು, ಇದರಿಂದಾಗಿ ಬಾಹ್ಯಾಕಾಶದಲ್ಲೂ ಯುದ್ಧ ನಡೆಯುವ ಸಾಧ್ಯತೆಗಳಿವೆ ಎಂದಿದ್ದಾರೆ. ಅವರು ಬಾಹ್ಯಾಕಾಶ ಅಭಿವೃದ್ಧಿ ಭೂಮಿ, ಸಮುದ್ರ ಮತ್ತು ಗಾಳಿಯಲ್ಲಿ ನಡೆಯುವ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಬಲ್ಲದು ಎಂದಿದ್ದಾರೆ.

ಅವರು ಭಾರತ ತನ್ನ ಬಾಹ್ಯಾಕಾಶ ವಲಯದ ವೆಚ್ಚವನ್ನು ಕಡಿಮೆಗೊಳಿಸಲು ಮತ್ತು ಬಾಹ್ಯಾಕಾಶ ಸಾಮರ್ಥ್ಯ ವೃದ್ಧಿಸಲು ಉಪಗ್ರಹಗಳ ಗಾತ್ರವನ್ನು ಕಿರಿದಾಗಿಸುವ ನಿಟ್ಟಿನಲ್ಲಿ ಮತ್ತು ಮರುಬಳಕೆ ಮಾಡಬಲ್ಲ ಉಡಾವಣಾ ವೇದಿಕೆಗಳ ನಿರ್ಮಾಣದಲ್ಲಿ ಕಾರ್ಯಾಚರಿಸಬೇಕು ಎಂದಿದ್ದಾರೆ. ಬಾಹ್ಯಾಕಾಶ ಆಯುಧಗಳ ಅಭಿವೃದ್ಧಿ ನಡೆಸುವ ಈ ಓಟದಲ್ಲಿ ಭಾರತ ಯಾವ ಕಾರಣಕ್ಕೂ ಹಿಂದುಳಿಯಬಾರದು ಎಂದವರು ಕರೆ ನೀಡಿದ್ದಾರೆ. ಭಾರತದ ವಾಯುಸೇನಾ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರು ಭಾರತ ಪೂರ್ಣ ಪ್ರಮಾಣದ ಬಾಹ್ಯಾಕಾಶ ಮಿಲಿಟರಿ ಸಿದ್ಧಾಂತವನ್ನು ಅಭಿವೃದ್ಧಿ ಪಡಿಸಬೇಕು ಎಂದಿದ್ದಾರೆ. ಅವರು ಹೆಚ್ಚುತ್ತಿರುವ ಬಾಹ್ಯಾಕಾಶ ಆಯುಧೀಕರಣ ಮತ್ತು ಬಾಹ್ಯಾಕಾಶ ಸ್ಪರ್ಧೆಯ ಕುರಿತು ಪ್ರತಿಕ್ರಿಯಿಸುತ್ತಿದ್ದರು.

ಅವರು ಭಾರತ ಅಮೆರಿಕಾ ಮತ್ತು ಫ್ರಾನ್ಸ್‌ಗಳ ರೀತಿಯಲ್ಲಿ ಏರ್ ಪವರ್ ಆಗಿರುವುದಕ್ಕಿಂತ ಹೆಚ್ಚು ಏರೋಸ್ಪೇಸ್ ಪವರ್ ಆಗುವ ಕಡೆ ಗಮನ ಹರಿಸಬೇಕು ಎಂದು ಕರೆ ನೀಡಿದ್ದಾರೆ. ಚೀನಾ ಈಗಾಗಲೇ ಬಾಹ್ಯಾಕಾಶ ವಲಯದಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದು, ಶತ್ರುಗಳ ಉಪಗ್ರಹಗಳನ್ನು ನಾಶ ಮಾಡುವ ಸಾಮರ್ಥ್ಯ ಗಳಿಸಿದೆ ಎಂದು ಅವರು ಹೇಳಿದ್ದಾರೆ. ಚೌಧರಿ ಅವರು ವಿಶೇಷವಾಗಿ ಚೀನಾ ಕಳೆದ ಮೂರು – ನಾಲ್ಕು ವರ್ಷಗಳ ಅವಧಿಯಲ್ಲಿ ತನ್ನ ಉಪಗ್ರಹಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದ್ದು, ಈಗ ಬಹುತೇಕ 700 ಉಪಗ್ರಹಗಳನ್ನು ಹೊಂದಿದೆ ಎಂದರು.

ವಾಯುಪಡೆಯ ಮುಖ್ಯಸ್ಥರ ಮಾತು ಆಧುನಿಕ ಯುದ್ಧದಲ್ಲಿ ಬಾಹ್ಯಾಕಾಶದ ಮಹತ್ವವನ್ನು ಪ್ರದರ್ಶಿಸುತ್ತದೆ. ಬಾಹ್ಯಾಕಾಶ ಸ್ಪರ್ಧೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಭಾರತ ಶತ್ರು ಉಪಗ್ರಹವನ್ನು ಹುಡುಕಿ ನಾಶಪಡಿಸುವುದು ಸೇರಿದಂತೆ ತನ್ನದೇ ಆದ ಬಾಹ್ಯಾಕಾಶ ಸಾಮರ್ಥ್ಯವನ್ನು ಗಳಿಸುವುದು ಅನಿವಾರ್ಯವಾಗಿದೆ. ಚೀನಾದ ಬಾಹ್ಯಾಕಾಶ ಯೋಜನೆಗಳು 1950ರ ದಶಕದಲ್ಲಿ ಆರಂಭಗೊಂಡವು. ಚೀನಾ ಡಾಂಗ್ ಫೆಂಗ್ 3 ಇಂಟರ್‌ಮೀಡಿಯೆಟ್ ರೇಂಜ್ ಮತ್ತು ಡಿಎಫ್-5 ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣಾ ವಾಹನಗಳಾಗಿ ಬಳಸಿಕೊಂಡಿತು.

1992ರಲ್ಲಿ, ಚೀನಾ ಮೂರು ಹಂತಗಳ ಬಾಹ್ಯಾಕಾಶ ಕಾರ್ಯತಂತ್ರವನ್ನು ಜಾರಿಗೆ ತಂದಿತು. ಮೊದಲನೆಯ ಹಂತದಲ್ಲಿ ಮಾನವಸಹಿತ ಗಗನಯಾನ ನಡೆಸಿ, ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವುದಾಗಿತ್ತು. ಚೀನಾ ಇದನ್ನು 2003ರಲ್ಲಿ ಸಾಧಿಸಿತು. ಎರಡನೇ ಹಂತದಲ್ಲಿ, ಎಕ್ಸ್‌ಟ್ರಾ ವೆಹಿಕ್ಯುಲಾರ್ ಚಟುವಟಿಕೆಗಳು, ಸಂಧಿಸುವ ಮತ್ತು ಡಾಕಿಂಗ್ ಕಾರ್ಯಾಚರಣೆಗಳು, ಹಾಗೂ ಮಂಗಳ ಗ್ರಹದ ಮೇಲೆ ರೋವರ್ ಇಳಿಸುವುದು ಸೇರಿದ್ದವು.

ಮೂರನೇ ಹಂತದಲ್ಲಿ ಟಿಯಾಂಗಾಂಗ್ ಬಾಹ್ಯಾಕಾಶ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಇದಕ್ಕೆ 2021ರಲ್ಲಿ ಚಾಲನೆ ನೀಡಲಾಯಿತು. ಚೀನಾ ತನ್ನ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಭಾರೀ ಅಭಿವೃದ್ಧಿ ಸಾಧಿಸಿದೆ. ಚೀನಾ ಈಗ ಬಾಹ್ಯಾಕಾಶ ಪಾರಮ್ಯ ಸಾಧಿಸಿರುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣವನ್ನು ಎಪ್ರಿಲ್ 29, 2021ರಂದು ಉಡಾವಣೆಗೊಳಿಸಲಾಯಿತು. ಈ ಕೇಂದ್ರ ಬಾಹ್ಯಾಕಾಶ ವೈದ್ಯಕೀಯ, ಜೀವ ವಿಜ್ಞಾನ, ಸೂಕ್ಷ್ಮ ಗುರುತ್ವ, ದಹನ, ಖಗೋಳಶಾಸ್ತ್ರ, ಹಾಗೂ ನೂತನ ತಂತ್ರಜ್ಞಾನಗಳ ಕುರಿತು ಪ್ರಯೋಗಗಳನ್ನು ನಡೆಸಿದೆ.

2007ರಲ್ಲಿ ಚೀನಾ ತನ್ನ ಮೊದಲ ಆ್ಯಂಟಿ ಸ್ಯಾಟಲೈಟ್ ಆಯುಧವಾದ ಡಾಂಗ್ ನೆಂಗ್ 1ನ್ನು ಪರೀಕ್ಷಿಸಿತು. ಇದು ಎಸ್‌ಸಿ-19 ಬ್ಯಾಲಿಸ್ಟಿಕ್ ಕ್ಷಿಪಣಿಯ ಪರಿಷ್ಕೃತ ಆವೃತ್ತಿಯಾಗಿದ್ದು, ಚೀನಾದ ಕಾರ್ಯ ಸ್ಥಗಿತಗೊಳಿಸಿದ್ದ ಹವಾಮಾನ ಉಪಗ್ರಹವನ್ನು ನಾಶಪಡಿಸಿತು. 2013ರಲ್ಲಿ ಚೀನಾ ಡಾಂಗ್ ನೆಂಗ್ 1ರ ಪರಿಷ್ಕೃತ ಆವೃತ್ತಿಯಾದ ಡಾಂಗ್ ನೆಂಗ್ 2ವನ್ನು ಪರೀಕ್ಷಿಸಿತು. ಈ ಪರೀಕ್ಷೆಯಲ್ಲಿ ಜಿಯೋಸ್ಟೇಷನರಿ ಉಪಗ್ರಹದ ವಿರುದ್ಧ ಆಯುಧದ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು. ಈ ಪರೀಕ್ಷೆಗಳು ಹೆಚ್ಚುತ್ತಿರುವ ಚೀನಾದ ಬಾಹ್ಯಾಕಾಶ ಸಮರ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಅದರೊಡನೆ, ಬಾಹ್ಯಾಕಾಶದ ಆಯುಧ ಸ್ಪರ್ಧೆಯ ಅಪಾಯಕ್ಕೂ ಕನ್ನಡಿ ಹಿಡಿದಿವೆ.

2016ರಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು 2045ರ ವೇಳೆಗೆ ಚೀನಾ ಜಾಗತಿಕವಾಗಿ ನಂಬರ್ ವನ್ ಬಾಹ್ಯಾಕಾಶ ಶಕ್ತಿಯಾಗಬೇಕು ಎಂಬ ಗುರಿಯನ್ನು ಘೋಷಿಸಿದರು. ಈ ಗುರಿ ಬಾಹ್ಯಾಕಾಶ ವಲಯದಲ್ಲಿ ಅಮೆರಿಕಾದ ತಾಂತ್ರಿಕ ಮೇಲುಗೈಯನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದೆ. ಯಾಕೆಂದರೆ, ಅಮೆರಿಕಾದ ಬಾಹ್ಯಾಕಾಶ ಸಾಮರ್ಥ್ಯವೇ ಅದಕ್ಕೆ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಮೇಲುಗೈ ಒದಗಿಸುತ್ತದೆ ಎಂದು ಚೀನಾ ಭಾವಿಸಿದೆ.

ಚೀನಾದ ಬಾಹ್ಯಾಕಾಶ ಕಾರ್ಯಕ್ರಮಗಳು ಪ್ರಾಥಮಿಕವಾಗಿ ಅಮೆರಿಕಾದ ಬಾಹ್ಯಾಕಾಶ ಸಾಮರ್ಥ್ಯಕ್ಕೆ ಸೆಡ್ಡು ಹೊಡೆಯುವುದಾಗಿತ್ತು. ಇದರಲ್ಲಿ ಆ್ಯಂಟಿ ಸ್ಯಾಟಲೈಟ್ ಆಯುಧಗಳ ಅಭಿವೃದ್ಧಿ, ಬಾಹ್ಯಾಕಾಶ ಆಧಾರಿತ ಸೆನ್ಸರ್‌ಗಳು, ಹಾಗೂ ಬಾಹ್ಯಾಕಾಶ ಆಧಾರಿತ ಸಂವಹನ ವ್ಯವಸ್ಥೆಗಳು ಸೇರಿದ್ದವು.

ಬಾಹ್ಯಾಕಾಶದ ಕುರಿತ ಚೀನಾದ ಮಹತ್ವಾಕಾಂಕ್ಷೆ ಅಮೆರಿಕಾ ಮತ್ತು ಇತರ ರಾಷ್ಟ್ರಗಳಲ್ಲಿ ಕಳವಳ ಮೂಡಿಸಿದೆ. ಹಲವು ತಜ್ಞರು ಚೀನಾದ ಬಾಹ್ಯಾಕಾಶ ಕಾರ್ಯಕ್ರಮಗಳು ಮಿಲಿಟರಿ ಉದ್ದೇಶ ಹೊಂದಿರಬಹುದು, ಚಕಮಕಿಯ ಸಂದರ್ಭದಲ್ಲಿ ಚೀನಾ ಅಮೆರಿಕಾದ ಉಪಗ್ರಹಗಳನ್ನು ಸ್ಥಗಿತಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಚೀನಾ ತನ್ನ ಬಾಹ್ಯಾಕಾಶ ಸಾಮರ್ಥ್ಯವನ್ನು ಬಳಸಿಕೊಂಡು, ಫಸ್ಟ್ ಐಲ್ಯಾಂಡ್ ಚೈನ್ (ತೈವಾನ್) ಪ್ರದೇಶಗಳನ್ನು ಮತ್ತು ಪೆಸಿಫಿಕ್ ಸಾಗರದಲ್ಲಿ ದೂರದಲ್ಲಿರುವ ಸೆಕೆಂಡ್ ಐಲ್ಯಾಂಡ್ ಚೈನ್ ಮೇಲೆ ಪ್ರಾಬಲ್ಯ ಸಾಧಿಸಬಹುದು ಎನ್ನುತ್ತಾರೆ.

ಚೀನಾ ಈಗಾಗಲೇ ಹಲವಾರು ಬಾಹ್ಯಾಕಾಶ ಆಯುಧಗಳನ್ನು ತಯಾರಿಸಿದ್ದು, ಡಿಸ್‌ರಪ್ಟಿವ್ ಆಯುಧಗಳು ಉಪಗ್ರಹಗಳ ಸೆನ್ಸರ್‌ಗಳನ್ನು ಅಥವಾ ಸಂವಹನ ವ್ಯವಸ್ಥೆಯನ್ನು ಸ್ಥಗಿತಗೊಳಿಸಬಹುದು. ಆದರೆ ಡಿಸ್ಟ್ರಕ್ಟಿವ್ ಆಯುಧಗಳು ನೇರವಾಗಿ ಉಪಗ್ರಹಗಳನ್ನು ನಾಶಪಡಿಸಬಲ್ಲವು. ಟೆರೆಸ್ಟ್ರಿಯಲ್ ಲೇಸರ್ ಚೀನಾ ಅಭಿವೃದ್ಧಿ ಪಡಿಸಿರುವ ಡಿಸ್‌ರಪ್ಟಿವ್ ಆಯುಧಕ್ಕೆ ಒಂದು ಉದಾಹರಣೆಯಾಗಿದೆ. ಈ ಮಾದರಿಯ ಲೇಸರ್ ಉಪಗ್ರಹದ ಸೆನ್ಸರ್‌ಗಳನ್ನು ಬಿಸಿಯಾಗಿಸಿ, ಅವುಗಳು ತಪ್ಪಾಗಿ ಕಾರ್ಯಾಚರಿಸುವಂತೆ ಮಾಡುತ್ತದೆ. ಚೀನಾ ಇದರೊಡನೆ ಇಲೆಕ್ಟ್ರಾನಿಕ್ ಜಾಮರ್‌ಗಳನ್ನು ಅಭಿವೃದ್ಧಿ ಪಡಿಸಿದ್ದು, ಅವುಗಳು ಉಪಗ್ರಹ ಸಂವಹನಕ್ಕೆ ಅಡ್ಡಿಪಡಿಸಬಲ್ಲವು.

ಚೀನಾದ ಡಿಸ್ಟ್ರಕ್ಟಿವ್ ಆಯುಧಗಳಲ್ಲಿ ಕೈನೆಟಿಕ್ ಕಿಲ್ ಆಯುಧಗಳೂ ಸೇರಿದ್ದು, ಇವುಗಳು ಉಪಗ್ರಹಗಳಿಗೆ ಡಿಕ್ಕಿ ಹೊಡೆದು, ಅವುಗಳನ್ನು ನಾಶಪಡಿಸಬಲ್ಲವು. ಚೀನಾ ನೆಲದಿಂದಲೇ ಉಪಗ್ರಹಗಳನ್ನು ನಾಶಪಡಿಸಬಲ್ಲ ಆ್ಯಂಟಿ ಸ್ಯಾಟಲೈಟ್ ಲೇಸರ್‌ಗಳನ್ನು ಅಭಿವೃದ್ಧಿ ಪಡಿಸಿದೆ. ಇದು ಬಾಹ್ಯಾಕಾಶ ಆಯುಧ ಸ್ಪರ್ಧೆಗೆ ಹಾದಿ ಮಾಡಿಕೊಡಬಹುದು ಎಂದು ವಿವಿಧ ರಾಷ್ಟ್ರಗಳು ಚಿಂತೆಗೊಳಗಾಗಿವೆ.

ಚೀನಾ ಶತ್ರುಗಳ ಉಪಗ್ರಹಗಳನ್ನು ಸ್ಥಗಿತಗೊಳಿಸುವ, ನಾಶಪಡಿಸುವ ಹಲವು ವಿಧಾನಗಳನ್ನು ಕಂಡುಹಿಡಿದಿದೆ. ಇದರಲ್ಲಿ ಉಪಗ್ರಹಗಳನ್ನು ಹ್ಯಾಕ್ ಮಾಡುವುದು, ಅವುಗಳ ಮಾಹಿತಿಗಳನ್ನು ಬದಲಾಯಿಸುವುದು, ಶತ್ರುಗಳ ಉಪಗ್ರಹಗಳಿಗೆ ಡಿಕ್ಕಿ ಹೊಡೆಯಬಲ್ಲ ಮೈಕ್ರೋ ಸ್ಯಾಟಲೈಟ್‌ಗಳನ್ನು ಬಳಸುವುದು ಸೇರಿವೆ.

ಚೀನಾದ ಉಪಗ್ರಹಗಳು ಇತರ ದೇಶಗಳ ಮೇಲೆ ಕಣ್ಣಿಟ್ಟಿರುವ ಆರೋಪಗಳೂ ಇವೆ. ಇದು ಬಾಹ್ಯಾಕಾಶದಲ್ಲಿ ಚೀನಾದ ಉದ್ದೇಶಗಳ ಕುರಿತು ಪ್ರಶ್ನೆಗಳನ್ನು ಮೂಡಿಸಿದೆ. ಹಲವು ತಜ್ಞರ ಪ್ರಕಾರ, ಬಾಹ್ಯಾಕಾಶ ತಂತ್ರಜ್ಞಾನದ ಹಲವು ಕ್ಷೇತ್ರಗಳಲ್ಲಿ ಭಾರತ ಚೀನಾದಿಂದ ಹದಿನೈದು ವರ್ಷಗಳಷ್ಟು ಹಿಂದಿದೆ. ಚೀನಾದ ಬೈದು ಉಪಗ್ರಹ ಸಂಚರಣಾ ವ್ಯವಸ್ಥೆ ಕಕ್ಷೆಯಲ್ಲಿ 35 ಉಪಗ್ರಹಗಳನ್ನು ಹೊಂದಿದ್ದು, ಎಂಟು ಉಪಗ್ರಹಗಳ ಆಧಾರಿತವಾದ ಭಾರತದ ನಾವಿಕ್ ವ್ಯವಸ್ಥೆಗಿಂತಲೂ ಹೆಚ್ಚಿನ ವ್ಯಾಪ್ತಿ ಹೊಂದಿದೆ.

ಚೀನಾ 2023ರಲ್ಲಿ 12.77 ಬಿಲಿಯನ್ ಡಾಲರ್ ಬಾಹ್ಯಾಕಾಶ ಬಜೆಟ್ ಹೊಂದಿದೆ. ಭಾರತದ ಬಜೆಟ್ 1.529 ಬಿಲಿಯನ್ ಡಾಲರ್ ಆಗಿದೆ. ಚೀನಾದ ಉಡಾವಣಾ ವಾಹನವಾದ ಲಾಂಗ್ ಮಾರ್ಚ್ 5 ರಾಕೆಟ್ ಭಾರತದ ಪ್ರಮುಖ ರಾಕೆಟ್ ಜಿಎಸ್ಎಲ್‌ವಿ-ಎಂಕೆ3ಗಿಂತ ಐದು ಪಟ್ಟು ಹೆಚ್ಚಿನ ಪೇಲೋಡ್ ಒಯ್ಯಬಲ್ಲದು.

ಇದನ್ನೂ ಓದಿ:Taara: ಭಾರತದಲ್ಲಿ ಬೆಳಕಿನ ಕಿರಣ ಬಳಸಿ ಅತ್ಯಂತ ವೇಗದ, ಅಗ್ಗದ ಇಂಟರ್ನೆಟ್ ಸೌಲಭ್ಯ

ಕೋವಿಡ್ ಸಾಂಕ್ರಾಮಿಕದ ಕಾರಣದಿಂದ, ಭಾರತ 2021-22ರಲ್ಲಿ ಉಡಾವಣೆಗಳಲ್ಲಿ ಚೀನಾಗಿಂತ ಹಿಂದಿತ್ತು. 2021ರಲ್ಲಿ ಭಾರತ ಒಂದೇ ಉಡಾವಣೆ ನಡೆಸಿದರೆ, ಚೀನಾ 55 ಉಪಗ್ರಹಗಳನ್ನು ಉಡಾವಣೆಗೊಳಿಸಿತು. 2019ರಲ್ಲಿ ಭಾರತ ಡಿಫೆನ್ಸ್ ಸ್ಪೇಸ್ ಏಜೆನ್ಸಿಯನ್ನು (ಡಿಎಸ್ಎ) ಬೆಂಗಳೂರಿನಲ್ಲಿ ಸ್ಥಾಪಿಸಿತು. ಇದನ್ನು ನವದೆಹಲಿಯ ಡಿಫೆನ್ಸ್ ಇಮೇಜರಿ ಪ್ರೊಸೆಸಿಂಗ್ ಆ್ಯಂಡ್ ಅನಾಲಿಸಿಸ್ ಸೆಂಟರ್ ಮತ್ತು ಡಿಫೆನ್ಸ್ ಸ್ಯಾಟಲೈಟ್ ಕಂಟ್ರೋಲ್ ಸೆಂಟರ್ ಭೋಪಾಲ್‌ಗಳ ಸಂಯೋಜನೆಯಿಂದ ಸ್ಥಾಪಿಸಲಾಗಿದೆ. ಡಿಎಸ್ಎಗೆ ಬೆಂಬಲ ನೀಡಲು ಡಿಫೆನ್ಸ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ (ಡಿಎಸ್ಆರ್‌ಒ) ಸ್ಥಾಪಿಸಲಾಗಿದೆ. ಸೆಪ್ಟೆಂಬರ್ 2019ರಲ್ಲಿ ಭಾರತ ನೆಟ್‌ವರ್ಕ್ ಫಾರ್ ಸ್ಪೇಸ್ ಆಬ್ಜೆಕ್ಟ್ ಟ್ರ್ಯಾಕಿಂಗ್ ಆ್ಯಂಡ್ ಅನಾಲಿಸಿಸ್ (ನೇತ್ರ) ಯೋಜನೆ ಆರಂಭಿಸಿತು.

ಅಗ್ನಿಕುಲ್ ಕಾಸ್ಮೋಸ್ ಎಂಬ ಬಾಹ್ಯಾಕಾಶ ಸ್ಟಾರ್ಟಪ್ ಸಂಸ್ಥೆ ಭಾರತದ ಮೊದಲ ಖಾಸಗಿ ಉಡಾವಣಾ ವೇದಿಕೆಯನ್ನು ನವೆಂಬರ್ 2022ರಲ್ಲಿ ಅಭಿವೃದ್ಧಿ ಪಡಿಸಿತು. ಇದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿದೆ. ಇದರ ಮೊದಲ ಖಾಸಗಿ ಉಡಾವಣೆ ನವೆಂಬರ್ 18, 2022ರಲ್ಲಿ ನೆರವೇರಿತು.

ಮಾರ್ಚ್ 2019ರಲ್ಲಿ ಭಾರತ ಯಶಸ್ವಿಯಾಗಿ ಆ್ಯಂಟಿ ಸ್ಯಾಟಲೈಟ್ ಆಯುಧವನ್ನು ಪ್ರಯೋಗಿಸಿ, ಲೋ ಅರ್ತ್ ಆರ್ಬಿಟ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದ ಗುರಿಯನ್ನು ಅತ್ಯಂತ ನಿಖರವಾಗಿ ನಾಶಪಡಿಸಿತು. ಭಾರತದ ಬಳಿ 2 ಮಿಲಿಟರಿ ಉಪಗ್ರಹಗಳಿದ್ದರೆ, ಚೀನಾದ ಬಳಿ 68 ಮತ್ತು ಅಮೆರಿಕಾದ ಬಳಿ 123 ಉಪಗ್ರಹಗಳಿವೆ.‌ ಭಾರತ ತನ್ನ ಉಪಗ್ರಹಗಳನ್ನು ರಕ್ಷಿಸಲು ಜಾಮ್ ಪ್ರೂಫ್ ಇಂಟಲಿಜೆನ್ಸ್, ಐಎಸ್ಆರ್, ಇಲೆಕ್ಟ್ರಾನಿಕ್ ಇಂಟಲಿಜೆನ್ಸ್ ಮತ್ತು ಇಲೆಕ್ಟ್ರಾನಿಕ್ ವಾರ್‌ಫೇರ್ ಸ್ಯಾಟಲೈಟ್, ಉತ್ತಮ ಜಾಮರ್‌ಗಳನ್ನು ಅಳವಡಿಸಬೇಕಿದೆ.

Girish Linganna

ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಈ ವಿಭಾಗದಲ್ಲಿ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ