ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಶ್ವ ಹವ್ಯಕ ಸಮ್ಮೇಳನದ ಕುರಿತು, ಸಾಮಾಜಿಕ ಜಾಲತಾಣವೂ ಸೇರಿ ಪತ್ರಿಕೆಗಳಲ್ಲಿ, ಟೀಕೆ, ಟಿಪ್ಪಣಿ, ಸಂಪಾದಕೀಯ, ವಾಚಕರವಾಣಿಗೆ ಪತ್ರ ಬಂದಿದ್ದು ನೋಡಿದರೆ, ಖುಷಿ ಆಗುತ್ತದೆ. ಯಾಕೆ ಗೊತ್ತಾ? ಬ್ರಾಹ್ಮಣರಲ್ಲಿನ ಒಂದು ಗುಂಪಿನ ಸಾರ್ವಜನಿಕ ಕಾರ್ಯಕ್ರಮವನ್ನು ಟೀಕಿಸಿದ ಯಾರಿಗೂ ಇದುವರೆಗೂ ಬೆದರಿಕೆ ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಟ್ರೋಲ್ ಆಗಿದ್ದು ಬಿಟ್ಟರೆ, ತರ್ಕವನ್ನೂ ಮೀರಿ ಟೀಕಿಸಿದವರಿಗೂ ಕೂಡ ಯಾವ ಬೆದರಿಕೆ ಬಂದಿಲ್ಲ. ಅಂದರೆ, ಪ್ರಜಾಪ್ರಭುತ್ವ ಮತ್ತು ವಾಕ್ ಸ್ವಾತಂತ್ರ್ಯ ನಮ್ಮಲ್ಲಿ ಸುಭದ್ರವಾಗಿದೆ ಎಂದು ನಿಟ್ಟುಸಿರು ಬಿಡಬಹುದು ಅಲ್ಲವೇ!
ಈ ಸಮ್ಮೇಳನದ ಕುರಿತು ಎದ್ದ ವಿವಾದಕ್ಕೆ ಸಂಬಂಧಿಸಿದಂತೆ, ನಾಲ್ಕು ವಿಚಾರಗಳನ್ನು ಗುರುತಿಸಬಹುದು. ಈ ರೀತಿಯ ಸಮ್ಮೇಳನಗಳು ಅನವಶ್ಯಕ, ಇಂತಹ ವಿಚಾರಧಾರೆಗಳೇ ಸಮಾಜವನ್ನು ಒಡೆಯಲು ಕಾರಣವಾಗುತ್ತವೆ. ಎರಡನೆಯದು-ಹವ್ಯಕ ಸಮುದಾಯದ ದಂಪತಿಗಳು ಎಷ್ಟು ಮಕ್ಕಳನ್ನು ಪಡೆಯಬೇಕು ಎಂಬ ವಿಚಾರಕ್ಕೆ ಸ್ವಾಮೀಜಿಗಳು ನೀಡಿದ ಹೇಳಿಕೆ. ಮೂರನೆಯದು, ಯಹೂದಿಗಳ ಜೊತೆ ಹವ್ಯಕರನ್ನು ಹೋಲಿಸಿದ ವಿಚಾರ. ಕೊನೆಯದಾಗಿ ಇಡೀ ಸಮಾಜದ ಮೇಲಿನ ಸ್ತರದಲ್ಲಿರುವವರು ಈ ತರಹದ ಸಮ್ಮೇಲನಗಳ ಮೂಲಕ ಒಂದಾಗಿ, ಸಮಾಜದ ಕೆಳ ಹಂತದಲ್ಲಿರುವವರ ಬದುಕನ್ನು ದುಸ್ತರ ಮಾಡುವ ಹುನ್ನಾರಕ್ಕೆ ತಿದಿ ಒತ್ತಿ ಬೆಂಕಿ ಇಡಲು, ಇಂತಹ ಸಮ್ಮೇಳನಗಳು ಕಾರಣವಾಗಬಹುದು ಎಂಬ ಭಯದಲ್ಲಿ ಹುಟ್ಟಿದ ಪ್ರತಿಕ್ರಿಯೆ. ಸಾಹಿತಿ ಎಸ್ ಜಿ ಸಿದ್ದರಾಮಯ್ಯ ಅವರು ಸಮ್ಮೇಳದ ಹೆಸರು ಹೇಳದೇ ಬರೆದ ಅಂಕಣ, ನಾಗೇಶ ಹೆಗಡೆಯವರ ಫೇಸ್ಬುಕ್ಕಿನಲ್ಲಿ ಬಂದ ಪ್ರತಿಕ್ರಿಯೆ ಮತ್ತುಇನ್ನು ಕೆಲವು ವೆಬ್ಸೈಟುಗಳಲ್ಲಿ ಬಂದ ಕಟುವಾದ ಪ್ರತಿಕ್ರಿಯಗಳು ಈ ನಾಲ್ಕು ವಿಚಾರಗಳ ಸುತ್ತಲೇ ಇವೆ.
ಕೊನೆಯ ವಿಚಾರವನ್ನೇ ಮೊದಲು ತೆಗೆದುಕೊಳ್ಳೋಣ: ಸಮಾಜದ ಕೆಳವರ್ಗದವರು ಸಭೆ ಮಾಡಲಿ, ಅವರು ಒಂದಾಗಲಿ., ಯಾಕೆಂದರೆ ಅವರಿಗೆ ಐತಿಹಾಸಿಕವಾಗಿ ಅನ್ಯಾಯ ಆಗಿದೆ. ಈ ರೀತಿಯ ಕುಲಾಂತರಿ ವಿಚಾರಧಾರೆಯನ್ನು (clanish tendency) ಮೇಲ್ವರ್ಗದವರು ತೋರಿಸಲು ಶುರು ಮಾಡಿದರೆ ಸಮಷ್ಠಿಗೆ ದೊಡ್ಡ ಹೊಡೆತ ಕೊಟ್ಟಂತಾಗುತ್ತದೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಅಪಚಾರ ಮಾಡಿದಂತಾಗುತ್ತದೆ. ಅವರ ಟೀಕೆಯನ್ನು ಪ್ರಾಂಜಲ ಮನಸ್ಸಿನಿಂದ ನೋಡಿದರೆ, ಆ ವಾದದಲ್ಲಿ ತಪ್ಪಿದೆ ಎಂದು ಮೇಲ್ನೋಟಕ್ಕೆ ಅನ್ನಿಸುವುದಿಲ್ಲ. ಆದರೆ, ಸ್ವಲ್ಪ ಆಳಕ್ಕೆ ಇಳಿದು ವಾಸ್ತವವನ್ನು ಪರಾಮರ್ಶಿಸಿದರೆ, ಈ ವಾದ ವಾಸ್ತವಕ್ಕೆ ಹತ್ತಿರ ಇದೆ ಎಂದು ಅನ್ನಿಸುವುದಿಲ್ಲ.
2023 ರ ವಿಧಾನಸಭಾ ಚುನಾವಣೆಗಿಂತ ಮೊದಲು ರಾಜಕೀಯ ಪಕ್ಷಗಳ ನೆರಳಿನಲ್ಲಿ ನಡೆದ ಜಾತಿ ಸಮಾವೇಶಗಳ ಬಗ್ಗೆ ನಮ್ಮ ಚಿಂತಕರು ಮರೆತಿರುವಂತಿದೆ. ಒಮ್ಮೆ ನೆನಪು ಮಾಡಿಕೊಳ್ಳಿ. ಆ ರೀತಿಯ ಸಂಪ್ರದಾಯ ಹಾಕಿದ ರಾಜಕೀಯ ಪಕ್ಷಗಳ ಪರವಾಗಿಯೇ ನಮ್ಮ ಹಲವಾರು ಚಿಂತಕರು, ಪತ್ರಕರ್ತರು ಪ್ರಚಾರ ಮಾಡಿದ್ದು ಈಗ ಇತಿಹಾಸ. ಆ ರೀತಿ ನಡೆದಿದ್ದು ಅದೆಷ್ಟು ಸರಿ? ಆ ರೀತಿಯ ಜಾತಿ ಸಮ್ಮೇಳಗಳು ತೆಗೆದುಕೊಂಡ ನಿರ್ಣಯಗಳನ್ನು ಒಮ್ಮೆ ಪುನರ್ವಿಮರ್ಶಿಸಿ. ಆಗ, ಒಂದು ಹೊಸ ಹೊಳಹು ಕಾಣಬಹುದು: ಜಾತಿ ರಾಜಕಾರಣಕ್ಕಳಿದವರು ಯಾರು? ಮತ್ತು ಅದರಿಂದ ಸಾಂವಿಧಾನಿಕ ಮೌಲ್ಯ ಕುಸಿಯಲು ಯಾರು ಕಾರಣಕರ್ತರಾಗಿದ್ದಾರೆ?
ಈಗ ಎರಡನೇ ವಿಚಾರಕ್ಕೆ ಬರೋಣ. ‘ಮೂರು ಮಕ್ಕಳನ್ನು ಮಾಡಿಕೊಳ್ಳಿ’ ಎನ್ನುವ ಸ್ವಾಮೀಜಿಗಳ ಮಾತನ್ನು ಇಟ್ಟಕೊಂಡು ಇಡೀ ಸಮುದಾಯದ ಬಗ್ಗೆ ತೀರಾ ಕೆಟ್ಟದಾಗಿ ಬಂದಿರುವ ವಿಚಾರ ಆರೋಗ್ಯಕರ ಎನ್ನಿಸುವದಿಲ್ಲ. ಮದುವೆಯಾದ ದಂಪತಿಗಳು ಎಷ್ಟು ಮಕ್ಕಳನ್ನು ಪಡೆಯಬೇಕು ಎನ್ನುವುದು, ಗಂಡ ಹೆಂಡತಿಗೆ ಬಿಡಬೇಕಾದ ಖಾಸಗಿ ವಿಚಾರವೇ ಹೊರತು ಅದನ್ನು ಬೇರೆ ಯಾರು ನಿರ್ಧರಿಸಲಾಗದು. ದಂಪತಿಗಳ ಮೇಲೆ ವಿಚಾರ ಹೇರುವ ಪ್ರಮೇಯವಂತೂ ಉದ್ಭವಿಸಬಾರದು.
ಹೆಣ್ಣಿನ ಸ್ವಾತಂತ್ರ್ಯ, ಅವಳ ಆರೋಗ್ಯ, ಅವಳಿಗೆ ಇಡೀ ಕುಟುಂಬದಿಂದ ಸಿಗುತ್ತಿರುವ ಬೆಂಬಲ ಮತ್ತು ಹಡೆದ ನಂತರ ಮುಂದಿನ ಹತ್ತು ವರ್ಷ ಆ ಮಕ್ಕಳನ್ನು ನೋಡಿಕೊಂಡು ಅವರಿಗೆ ಪ್ರೀತಿ, ಕಕ್ಕುಲಾತಿ ನೀಡುವ ವ್ಯವಸ್ಥೆ ಬಗ್ಗೆ ಅವಳು ವಿಚಲಿತಲಾಗುತ್ತಾಳೆ. ಆದ್ದರಿಂದ ಆ ಕುರಿತು ಹೆಚ್ಚಿನ ಚರ್ಚೆ ಆಗಬೇಕಿದೆ. ಇದು ಬರೀ ಫೆಮಿನಿಸಂ ವಿಚಾರ ಅಂತ ಮೂಗು ಮುರಿಯಲು ಆಗದು. ಇದಕ್ಕೆ ಇನ್ನು ಹೆಚ್ಚಿನ ಆಯಾಮ ಇದೆ.
ನಮಗೆ ಸ್ವಾಭಾವಿಕವಾಗಿ ಉದ್ಭವಿಸುವ ಕುತೂಹಲ ಯಾವುದು ಗೊತ್ತಾ? ಈ ಎಲ್ಲ ಚಿಂತಕರು, ಪಕ್ಕದ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಮುಖ್ಯ ಮಂತ್ರಿಗಳಾದ ಎಮ್.ಕೆ. ಸ್ಟಾಲಿನ್ ಮತ್ತು ಚಂದ್ರಬಾಬು ನಾಯ್ಡು ಅವರ —ದಕ್ಷಿಣ ಭಾರತೀಯರು ಹೆಚ್ಚು ಮಕ್ಕಳನ್ನು ಪಡೆಯಿರಿ—ಎನ್ನುವ ವಿಚಾರಕ್ಕೆ ಏಕೆ ಪ್ರತಿಕ್ರಿಯೆ ನೀಡಲಿಲ್ಲ? ಸ್ವಾಮೀಜಿಗಳ ಹೇಳಿಕೆ ತಪ್ಪಾದರೆ, ಸಾಂವಿಧಾನಿಕ ಕುರ್ಚಿಯಲ್ಲಿ ಕುಳಿತು ನಮಗೆ ಫರ್ಮಾನು ನೀಡುತ್ತಿರುವ ಈ ಮುಖ್ಯಮಂತ್ರಿಗಳ ಹೇಳಿಕೆ ಸರಿಯೇ? ಹಾಗೆ ನೋಡಿದರೆ, ಸಾಂವಿಧಾನಿಕ ಪೀಠದಲ್ಲಿರುವವರ ಮಾತಿಗೆ ನಮ್ಮ ಹಿರಿಯರು ಮೊದಲು ಪ್ರತಿಕ್ರಿಯಿಸಬೇಕಾಗಿತ್ತು.
ಯಾಕೆಂದರೆ ಆ ರೀತಿಯ ಹೇಳಿಕೆ, ಮೊಂದೊಂದು ದಿನ ಒಂದು policy decision ಆಗಿಬಿಟ್ಟರೆ? ಫ್ರೀಬಿ (freebies) ಅಥವಾ ‘ರೆವಡಿಗಳ ಹವಾದಲ್ಲಿ ರಾಜಕೀಯ ನಾಯಕರು ಹೊಸ ವರಸೆ ತಂದರೂ ಆಶ್ಚರ್ಯ ಇಲ್ಲ: ಸರಕಾರದ ಸವಲತ್ತು ಬೇಕು ಎಂದರೆ ಮೂರು ಮಕ್ಕಳಿರಬೇಕು, ನಾಲ್ಕು ಇರಬೇಕು ಎನ್ನುವ ಫರ್ಮಾನು ಹೊರಡಿಸಿದರೆ ಏನು ಗತಿ? ಈ ಹಿನ್ನೆಲೆಯಲ್ಲಿ ನಮ್ಮ ಪ್ರಗತಿಪರ ಚಿಂತಕರು, ಆ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ವ್ಯವಧಾನಿಸಬೇಕಿತ್ತು.
ಈ ಕುರಿತು ಇನ್ನೂ ಒಂದು ವಿಚಾರವನ್ನು ನಾವು ಪರಿಗಣಿಸಬೇಕು. ಸ್ವಾಮೀಜಿಗಳು ಹೇಳಿದ ವಿಚಾರ ಹೊಸದಲ್ಲ. ಇದನ್ನು ಪ್ರಪಂಚದ ಅನೇಕ ಭಾಗಗಳಲ್ಲಿನ ಜನ ಗಂಭೀರವಾಗಿ ಚರ್ಚಿಸುತ್ತಿದ್ದಾರೆ ಎಂದರೆ ಆಶ್ಚರ್ಯ ಆಗಬಹುದು. ದಕ್ಷಿಣ ಕೊರಿಯಾದಲ್ಲಿ ಇದು ಬಹಳ ಚರ್ಚೆಗೆ ಒಳಪಟ್ಟಿರುವ ವಿಚಾರ ಗೊತ್ತಾ? ಕುಸಿದ ಮಕ್ಕಳ ಸಂಖ್ಯೆ ಏರಿಸಲು ಅಮೇರಿಕದ ಕೆಲವು ಸಮುದಾಯಗಳು ಮೂರು ಮಕ್ಕಳನ್ನು ಪಡೆದರೆ ಸಾಮುದಾಯಿಕ ಮಟ್ಟದಲ್ಲಿ ಸಹಾಯ ನೀಡುವ ವ್ಯವಸ್ಥೆಗೆ ಮುಂದಾಗಿವೆ. ಭಾರತೀಯ ಮೂಲದ ಮಕ್ಕಳ ವೈದ್ಯೆಯೊಬ್ಬರು ಅಮೇರಿಕದ ಒಂದು ಜನಾಂಗದಿಂದ ಬಂದಿರುವ ಓರ್ವರನ್ನು ಮದುವೆಯಾಗಿ ಅಲ್ಲಿಯೇ ನೆಲೆಸಿದ್ದಾರೆ. ಹೆಂಡತಿಯಂತೆ ಗಂಡ ಕೂಡ ವೈದ್ಯ/ವಿಜ್ಞಾನಿ ಕೂಡ. ಅವರು ಮೂರು ಮಕ್ಕಳನ್ನು ಪಡೆಯುವ ನಿರ್ಧಾರ ಮಾಡಿದ್ದಾರೆ. ಇಂತಹ ಅನೇಕ ವಿಚಾರಗಳು ಜಗತ್ತಿನ ಹಲವಾರು ದೇಶಗಳಲ್ಲಿ ಸಿಗತೊಡಗಿವೆ.
ಯಹೂದಿಗಳಂತೆ ಹವ್ಯಕರು ಎನ್ನುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇಲ್ಲ. ಹವ್ಯಕ ಸಮುದಾಯವನ್ನು ಹತ್ತಿರದಿಂದ ನೋಡಿದವರಿಗೆಲ್ಲರಿಗೂ ಅನ್ನಿಸುವುದೇನೆಂದರೆ, ಈ ಎರಡೂ ಸಮುದಾಯಗಳಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಹಾಗಾಗಿ ಆ ರೀತಿಯ ಹೋಲಿಕೆ ಅನವಶ್ಯಕ.
ಮೇಲುವರ್ಗ ಅದರಲ್ಲಿಯೂ ಬ್ರಾಹ್ಮಣರ ಸಮ್ಮೇಳನ, ಸಭೆಗಳು ಕೆಳವರ್ಗಗಳನ್ನು ತುಳಿಯಲು ಬೇಕಾಗುವ ಬೆಂಕಿಕಿಡಿಯಾಗಬಹುದು. ಅಸಲಿ ವಿಚಾರವೇನೆಂದರೆ, ಈ ವಾದ ಅವರ ಅಭಿಪ್ರಾಯವೇ ಹೊರತು ವಾಸ್ತವ ಅಲ್ಲ. ನಮ್ಮ ಸುತ್ತ ನಡೆಯುತ್ತಿರುವ ಆಗುಹೋಗುಗಳನ್ನು ಮತ್ತು ಐತಿಹಾಸಿಕ ವಿಚಾರಗಳನ್ನು ಗಮನಿಸಿದರೆ ಈ ವಿಚಾರದ ಸತ್ಯಾಸತ್ಯತೆ ಬಗ್ಗೆ, ಅದರ ಹಿಂದಿನ ಉದ್ದೇಶದ ಬಗ್ಗೆ ನಮಗೆ ಸ್ಪಷ್ಟತೆ ಸಿಗುತ್ತದೆ.
ದಲಿತರಲ್ಲಿನ ಒಳ ಮೀಸಲಾತಿ ಬಗ್ಗೆ ನಮ್ಮ ಪ್ರಗತಿಪರು ಬಹು ದೀರ್ಘ ಕಾಲ ಮೌನವಾಗಿದ್ದಿದ್ದನ್ನು ನೋಡಿದರೆ ಅವರ ಸಾರ್ವಜನಿಕ ನಿಲುವುಗಳ ಹಿಂದಿರುವ ಉದ್ದೇಶಗಳ ಬಗ್ಗೆ ಸಂಶಯ ಹುಟ್ಟುವುದು ಸಹಜ. ಎರಡು ಪ್ರಬಲ ಸಮುದಾಯಗಳ ರಾಜಕೀಯ ನಾಯಕರು ಜೈಲಿಗೆ ಹೋದಾಗ, ಆಮೇಲೆ ಅವರು ಜೈಲಿಂದ ಹೊರಬಂದಾಗ, ಆ ಸಮುದಾಯದ ಸ್ವಾಮೀಜಿಗಳು ಭಾಷಣ ಕೇಳಿಯೂ ಪ್ರತಿಕ್ರಿಯಿಸದೇ ಇದ್ದುದು ನಮ್ಮ ಚಿಂತಕರು ಮಾಡಿದ ದೊಡ್ಡ ತಪ್ಪಲ್ಲವೇ? ಅಲ್ಲಿ ಯಾವ ಐಬು ಕಾಣಿಸಲಿಲ್ಲ ಅಥವಾ ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆ ಆಗಿದ್ದು ಕಂಡಿಲ್ಲ ಎಂದರೆ, ಏನು ಹೇಳೋಣ? ಇನ್ನೊಂದು ಸಮುದಾಯ ಮೀಸಲಾತಿ ಕೇಳಿದಾಗಲೂ ನಮ್ಮ ಚಿಂತಕರು ದನಿ ಎತ್ತಲಿಲ್ಲ. ಇಂತಹ ವಿಚಾರ ಬಿಡಿ. ಮುಖ್ಯಮಂತ್ರಿಗಳ ಮೇಲಿನ ಮುಡಾ ಸೈಟು ವಿಚಾರಕ್ಕೆ ಸಂಬಂಧಿಸಿದಂತೆ, ಚಿಂತಕರು, ಪ್ರಗತಿಪರರು, ನ್ಯಾಯಾಲಯ ತೀರ್ಪು ಬರುವ ಮೊದಲೇ ಮೈಸೂರಿಗೆ ಹೋಗಿ ಪ್ರತಿಭಟನೆ ಮಾಡಿದ್ದನ್ನು ಯಾರೂ ಪ್ರಶ್ನಿಸಲಿಲ್ಲ. ಯಾಕೆ?
ನಾಲ್ಕೈದು ವರ್ಷಗಳ ಹಿಂದೆ, ನಾಡಿನ ಒಂದು ಪ್ರಬಲ ದಿನಪತ್ರಿಕೆಯಲ್ಲಿ ಡಂಕಿನ್ ಝಳಕಿ ಮತ್ತು ಅವರ ಸಂಶೋಧಕರ ತಂಡ ಬರೆದ ಸರಣಿ ಸಂಶೋಧನಾ ಬರಹಕ್ಕೆ ಪ್ರಗತಿಪರರು ಹೇಗೆ ಪ್ರತಿಕ್ರಿಯಿಸಿದರು? ತಿರುಗಿ ಆ ಸಂಶೋಧನಾ ತಂಡಕ್ಕೆ ಯಾವ ರೀತಿಯ ಅಪಮಾನ ಮಾಡಲಾಯಿತು ಎನ್ನುವುದನ್ನು ನೋಡಿದಾಗ ಇವರೆಲ್ಲರ ಸಹಿಷ್ಣುತೆ ಬಗ್ಗೆ ಪ್ರಶ್ನೆ ಮೂಡುತ್ತದೆ.
ಕೇರಳದ ಕಾಸರಗೋಡಿನಿಂದ ಶುರು ಮಾಡಿ, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಶಿವಮೊಗ್ಗದಲ್ಲಿ ಹರಡಿರುವ ನಾಲ್ಕೈದು ಲಕ್ಷ ಜನಸಂಖ್ಯೆ ಇರುವ ಈ ಹವ್ಯಕ ಸಮುದಾಯ ಪ್ರಾಥಮಿಕವಾಗಿ ಕೃಷಿಯಲ್ಲಿ ತೊಡಗಿರುವವರು. ಮಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡಿದ, ಡಾ. ಮಹಾಲಿಂಗ ಭಟ್ ಮತ್ತು ಡಾ. ಜಿ.ಎಸ್. ಹೆಗಡೆ, ಡಾ. ಶಾಲಿನಿ ರಘುನಾಥ್ ಮತ್ತು ಡಾ. ಜಿ. ಎಸ್ ಶಾಸ್ತ್ರಿ ಅವರು ಸಂಶೋಧನೆಯಲ್ಲಿ ಕಂಡುಕೊಂಡಿದ್ದನ್ನು ಅಭ್ಯಸಿಸಿದರೆ, ಈ ಸಮುದಾಯದ ಜನಜೀವನ ‘ಜನಪದ’ ಸ್ವರೂಪದ್ದಾಗಿದೆ ಎಂಬುದು ನಿರೂಪಿತವಾಗುತ್ತದೆ. ಹಳಗನ್ನಡವನ್ನು ಹೋಲುವ ಭಾಷೆ; ಸುತ್ತಮುತ್ತಲಿನ ಗಿಡ, ದಂಟು, ಗೆಡ್ಡೆ ಗೆಣಸನ್ನು ರುಚಿಕರವಾಗಿ ಮಾಡುವ ಆಹಾರ ಪದ್ಧತಿ- ಹೀಗೆ ಈ ಸಮುದಾಯದಲ್ಲಿ ಒಂದು ವಿಶಿಷ್ಟತೆ ಮತ್ತು ಅನನ್ಯತೆ ಇದೆ ಎಂಬುದನ್ನು ಅಮೇರಿಕ ಮತ್ತು ಯುರೋಪಿನ ಮಾನವಶಾಸ್ತ್ರಜ್ಞರು ಕೂಡ ಒಪ್ಪಿದ್ದಾರೆ.
ಈ ಹಿಂದೆಲ್ಲ ಹವ್ಯಕರು ಒಟ್ಟಾದಾಗ ಏನಾಗಿತ್ತು? ಅವರು ಯಾರನ್ನು ತುಳಿದರು? ಅಥವಾ ಒಟ್ಟಾಗಿದ್ದೇವೆ ಎಂಬ ಕಾಲ್ಪನಿಕ ಬಲದೊಂದಿಗೆ ಮುಂದೆ ಯಾರನ್ನಾದರೂ ತುಳಿಯಲು ಮನಸ್ಸು ಮಾಡಬಹುದೇ? ಇದಕ್ಕೆ ಯಾವ ಸಾಕ್ಷ್ಯಾಧಾರಗಳು ಇಲ್ಲ ಎನ್ನುವುದಕ್ಕೆ ಇತಿಹಾಸವೇ ಸಾಕ್ಷಿ. ಹಾಗೆ ನೋಡಿದರೆ, ಹವ್ಯಕರು ಒಟ್ಟಿಗೆ ಬಂದಾಗಲೆಲ್ಲ ಏನೇನಾಯ್ತು ಗೊತ್ತಾ? ಕರ್ನಾಟಕ ಗ್ಯಾಜೆಟಿಯರ್ ನೋಡಿ; 1925 ರ ಆಸುಪಾಸಿನಲ್ಲಿ ವಿಧವಾ ಪುನರ್ವಿವಾಹ ಮೊದಲು ಬಂದಿದ್ದು ಶಿರಸಿಯಲ್ಲಿ. ಅದನ್ನು ತಂದವರು ಅಕದಾಸ್ ಗಣಪತಿ ಭಟ್. ಅವರು ಸಾಹಿತಿ ಆಗಿರಲಿಲ್ಲ. ಇಂದಿನ ಪ್ರಗತಿಪರ ಚಿಂತಕರಲ್ಲಿ ಯಾರಾದರೂ ಅವರನ್ನು ನೆನಪು ಮಾಡಿಕೊಳ್ತಾರಾ? ಅವರ ಬಗ್ಗೆ ಕರ್ನಾಟಕದ ಇತಿಹಾಸದ ಪುಸ್ತಕಗಳಲ್ಲಿ ಏನಾದರೂ ಹೇಳಿದ್ದೇವಾ? ಏನೂ ಇಲ್ಲ. ಅನೇಕ ಸಮುದಾಯಗಳಲ್ಲಿ ಇರುವ ವರದಕ್ಷಿಣೆ ಪಿಡುಗು ಇಲ್ಲಿಇಲ್ಲ. ಕಾರಣವನ್ನು ಹೇಳಬೇಕಿಲ್ಲ. ಈ ರೀತಿಯ ಪ್ರಗತಿಪರ ಚಿಂತನೆ ಈ ಗುಂಪಿಗೆ ಹೊಸದಲ್ಲ. ಇದನ್ನು ಹೊರ ಜಗತ್ತು ದಾಖಲಿಸುವುದಿಲ್ಲ.
ಉತ್ತರ ಕನ್ನಡಕ್ಕಿಂತ ಮೊದಲು ಉನ್ನತ ಶಿಕ್ಷಣಕ್ಕೆ ತೆರೆದುಕೊಂಡ ದಕ್ಷಿಣ ಕನ್ನಡದಲ್ಲಿ ಈ ಸಮುದಾಯದಿಂದ ಬಂದ ಅನೇಕರು, ಜಾತಿ ಮತ ನೋಡದೇ ಇಡೀ ಸಮಾಜದ, ಜಿಲ್ಲೆಯ ಅಭಿವೃದ್ಧಿಗೆ ಕಾಣಿಕೆ ನೀಡಿದವರು ಅನೇಕರು ಇದ್ದಾರೆ. ಈ ಸಮ್ಮೇಳನ ಮುಗಿದ ನಂತರ, ಪತ್ರಕರ್ತ ನಾಗೇಶ ಹೆಗಡೆ ಮತ್ತು ಇನ್ನೂ ಅನೇಕರು ಇಂತಹ ಸಮ್ಮೇಳನಗಳು ತರುವ ಸಮೂಹ ಸನ್ನಿಯ ಬಗ್ಗೆ ಎಚ್ಚರಿಸಿದ್ದಾರೆ. ಪ್ರಾಯಶಃ ನಾಗೇಶ ಹೆಗಡೆಯವರಿಗೆ ನೆನಪಿರಬಹುದು: ಅವರ ತಂದೆಯವರನ್ನು ಸೇರಿಸಿಕೊಂಡು ಹವ್ಯಕರ ಮನೆಗಳಿಂದ ಬಹಳ ಜನ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ, ಜೈಲಿಗೆ ಹೋಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಇವೆ. ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಹೀಗೆ ಎಲ್ಲಾ ಜಿಲ್ಲೆಗಳಲ್ಲೂ ಈ ಕುರಿತು ಮಾಹಿತಿ ಹೇರಳವಾಗಿವೆ.
ಇದನ್ನು ರಾಜ್ಯದ ಇತಿಹಾಸಕಾರರು ದಾಖಲಿಸದೇ ಇರುವುದಕ್ಕೆ ಕಾರಣ ಸಿಗುವುದೇ ಇಲ್ಲ. ಕರ್ನಾಟಕದ ಇತಿಹಾಸದಲ್ಲಿ ಹವ್ಯಕರು ಒಂದಾದಾಗ ಏನಾಯ್ತು ಎನ್ನುವ ವಿಚಾರ ದಾಖಲಾಗುವುದೇ ಇಲ್ಲ. ಎರಡನೆಯದು, ಮೇಲ್ವರ್ಗದ ಅದರಲ್ಲಿಯೂ ಬ್ರಾಹ್ಮಣರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಾರೆ ಎಂಬುದನ್ನು ಒಪ್ಪಿಕೊಂಡರೆ, ಈಗಾಗಲೇ ಇರುವ ಪೂರ್ವ ನಿರ್ಧಾರಿತ ಕಲ್ಪನೆಗಳನ್ನು (pre-conceived notion) ತಿದ್ದಬೇಕಾದೀತು. ಅದಕ್ಕೆ ನಮ್ಮ ಚಿಂತಕರು ತಯಾರಿಲ್ಲದೇ ಇರಬಹುದು.
ಅಣು ವಿದ್ಯುತ್, ಕಲ್ಲಿದ್ದಲು ಮತ್ತು ಇತರೇ ಅಸಂಪ್ರದಾಯಿಕ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆ ಪ್ರಾರಂಭ ಆಗುವವರೆಗೂ, ಪಶ್ಚಿಮ ಘಟ್ಟಗಳ ಜಲ ವಿದ್ಯುತ್ ಯೋಜನೆಗಳೇ ರಾಜ್ಯದ ಅನೇಕ ಭಾಗಗಳನ್ನು ಬಹುಕಾಲ ಬೆಳಗಿದ್ದವು. ಈ ರೀತಿಯ ಜಲ ವಿದ್ಯುತ್ ಯೋಜನೆಗಳಿಗೆ ತಮ್ಮ ಜಮೀನು ಮನೆ ಕಳೆದುಕೊಂಡ ಸಾವಿರಾರು ಕುಟುಂಬಗಳು ಹೇಗಿವೆ? ಅವರ ಸ್ಥಿತಿ ಗತಿ ಏನು? ಶಿವಮೊಗ್ಗ ಜಿಲ್ಲೆಯಿಂದ ಇವರನ್ನು ಒಕ್ಕಲೆಬ್ಬಿಸಿ ಎಲ್ಲೆಲ್ಲೋ ಕಳಿಸಲಾಯಿತು. ಅವರ ಬದುಕು ನೂರು ವರ್ಷವೇ ಹಿಂದಕ್ಕೆ ಹೋಗಿರಬಹುದು. ಇದನ್ನು ಯಾರಾದರೂ ಗಮನಿಸಿದ್ದಾರಾ? ಅವರಲ್ಲಿ ಹೆಚ್ಚಿನ ಕುಟುಂಬಗಳು ಹವ್ಯಕರದ್ದೆ. ಅವರು ಎಂದಾದರೂ ಗಲಾಟೆ ಮಾಡಿದ್ರಾ?
ಆಮೇಲೆ ಕೈಗಾ, ಬೇಡ್ತಿ ಜಲ ವಿದ್ಯುತ್ ಚಳುವಳಿ ವಿಚಾರಕ್ಕೆ ಬರೋಣ? ಅದಕ್ಕೆ ಯಾರ mass support ಸಿಕ್ಕಿತ್ತು ಗೊತ್ತಾ? ಇಡೀ ವಿಶ್ವ ಈಗ ಹವಾಮಾನ ಬದಲಾವಣೆ (climate change) ಬಗ್ಗೆ ಮಾತಾಡ್ತಾ ಇದೆ. 1980 ಮತ್ತು 1990 ರಲ್ಲಿ ಬರಹಗಾರ ನಾಗೇಶ ಹೆಗಡೆಯವರನ್ನೂ ಸೇರಿಸಿ ಬಹಳ ಜನ, ಈ ರೀತಿಯ ಯೋಜನೆಗಳು ಹೇಗೆ ಮಾನವನಿಗೆ ಮಾರಕ? ಎಂದು ಎಚ್ಚರಿಸಿದ್ದನ್ನು ನೋಡಿದರೆ ಆಶ್ಚರ್ಯ ಆಗಬಹುದು. ಹವ್ಯಕರನ್ನು ಸೇರಿಸಿಕೊಂಡು ಇಡೀ ಉತ್ತರ ಕನ್ನಡ, ದಕ್ಷಿಣ ಕನ್ನಡದ ಜನ ಈ ವಿಚಾರದಲ್ಲಿ ಅದೆಷ್ಟು ಮುಂದಿದ್ದಾರೆ ಎಂಬುದು ಗೊತ್ತಾಗುತ್ತೆ. ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಪರಿಸರಕ್ಕೆ ಮಾಡಿದ ಸೇವೆಯನ್ನು ನಾಗೇಶ ಹೆಗಡೆಯವರು ಪ್ರಾಯಶಃ ಖಾಸಗಿಯಾಗಿ ಒಪ್ಪಿಕೊಳ್ತಾರೆ ಎಂಬುದು ನನ್ನ ಅನಿಸಿಕೆ.
ತೀರಾ ಇತ್ತೀಚೆಗೆ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ಆದ ಅರಣ್ಯ ಒತ್ತುವರಿ ಪ್ರಕರಣಗಳನ್ನೇ ತೆಗೆದುಕೊಳ್ಳಿ. ಹವ್ಯಕರನ್ನು ಸೇರಿಸಿ ಮೇಲು ವರ್ಗದ ಎಷ್ಟು ಜನ ಬ್ರಾಹ್ಮಣರು ಅರಣ್ಯ ಒತ್ತುವರಿ ಮಾಡಿದ್ದಾರೆ ಎನ್ನುವ ಮಾಹಿತಿ ನೋಡಿ. ಮೇಲುವರ್ಗ ಸಾಂವಿಧಾನಿಕ ಮೌಲ್ಯ ಎತ್ತಿಹಿಡಿಯುವ ಕುರಿತಾಗಿ ಬರುವ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗಬಹುದು.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗಿನಲ್ಲಿನ ಹವ್ಯಕರೇನು ಇದಕ್ಕೆ ಹೊರತಲ್ಲ. ಕ್ಯಾಂಪ್ಕೋ ದಂತಹ ಸಂಸ್ಥೆಯನ್ನು ಹುಟ್ಟು ಹಾಕಿ ಮೂರು ನಾಲ್ಲು ದಶಕಗಳ ಕಾಲ, ಯಾವ ಕಪ್ಪು ಚುಕ್ಕೆ ಇಲ್ಲದೇ ನಡೆಸಿದ ಕೀರ್ತಿ ಈ ಜಿಲ್ಲೆಗಳ ಹವ್ಯಕರೂ ಸೇರಿದ, ಕೃಷಿರದ್ದು. ಹಾಗಾಗಿ, ಹವ್ಯಕರು ಒಟ್ಟಿಗೆ ಬಂದಾಗ ಮತ್ತೊಬ್ಬರನ್ನು ತುಳಿಯಲು ಬಂದಿದ್ದಾರೆ ಎನ್ನುವುದಕ್ಕೆ ಯಾವ ಪುರಾವೆ ಸಿಗುತ್ತಿಲ್ಲ.
1999 ರ ಲೋಕಸಭೆ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವ ಎಂಬ ಕ್ರಿಶ್ಚಿಯನ್ ನಾಯಕಿಯನ್ನು ಲೋಕ ಸಭೆ ಚುನಾವಣೆಯಲ್ಲಿ ಗೆಲ್ಲಿಸಲು ತುಂಬಾ ಜನ ಹವ್ಯಕರು ಒಟ್ಟಾಗಿ ಕೆಲಸ ಮಾಡಿದ್ದನ್ನು ಮರೆಯಬೇಡಿ. ಇದರ ವಿರುಧ್ಧವಾಗಿ ಒಂದು ವಾದ ಮಾಡಬಹುದು: ಈ ಲೋಕಸಭೆ ಕ್ಷೇತ್ರದ ಒಟ್ಟೂ ಮತದಾರರ ಸಂಖ್ಯೆಯಲ್ಲಿ ಹವ್ಯಕರ ಸಂಖ್ಯೆ ಕಡಿಮೆ, ಹಾಗಾಗಿ ಈ ವಾದದಲ್ಲಿ ಹುರುಳಿಲ್ಲ, ಆಳ್ವಾ ಅವರ ಗೆಲುವಿಗೆ ಹವ್ಯಕರ ಕಾಣಿಕೆ ಇಲ್ಲ ಎಂದು ವಾದ ಮಾಡಬಹುದು. ಹಾಗಾದರೆ, 2023 ರ ವಿಧಾನ ಸಭೆ ಚುನಾವಣೆಯಲ್ಲಿ ಹವ್ಯಕರ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ಕ್ಷೇತ್ರದಲ್ಲಿ ಸೋತರು.
ಆಗ ಹವ್ಯಕರು ಒಟ್ಟಾಗಿದ್ದು ಸುಳ್ಳೇ? ರಾಜ್ಯದ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರವನ್ನು ವಿವಿಧ ಜಾತಿಗಳು ತಮ್ಮ ಜಹಗೀರನ್ನಾಗಿ ಮಾಡಿಕೊಂಡಿರುವ ಸಂದರ್ಭದಲ್ಲಿ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿನ ಮತದಾರರು, ತಮ್ಮ ತಮ್ಮ ಕ್ಷೇತ್ರ, ತಮ್ಮ ಜಾತಿಯವರಲ್ಲೇ ಇರಬೇಕು ಎಂಬ ವಿಚಾರಧಾರೆಯ ನಡುವೆ ಇರುವಾಗ, ಶಿರಸಿ ಕ್ಷೇತ್ರದ ಫಲಿತಾಂಶ ನೋಡಿ. ಹವ್ಯಕರು ಒಟ್ಟಾದಾಗ ಏನಾಗುತ್ತೆ? ಇದು ವಿಶೇಷ ಅಂತ ಅನ್ನಿಸುವುದಿಲ್ಲವೇ? ಶಿವಮೊಗ್ಗದ ಒಂದೆರಡು ಕ್ಷೇತ್ರಗಳ ಫಲಿತಾಂಶದಲ್ಲಿ ಸಹ ಬದಲಾದ ಹವ್ಯಕರ ರಾಜಕೀಯ ನಿಲುವು ಹೇಗೆಲ್ಲ ಕೆಲಸ ಮಾಡಿದೆ ಎಂಬುದರ ಕುರಿತು ಮಾಹಿತಿ ಸಿಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಮತ ಹಾಕುವಾಗ ಅಂದರೆ ಸಾಂವಿಧಾನಿಕ ಕರ್ತವ್ಯ ಮಾಡುವಾಗ ಜಾತಿ ಮೀರಿ ಕೆಲಸ ಮಾಡಿದ್ದಾರೆ ಎಂದು ಅನ್ನಿಸುವುದಿಲ್ಲವೇ? ಈ ಹಿನ್ನಲೆಯಲ್ಲಿ ನೋಡಿದಾಗ ಹವ್ಯಕರು ಯಾರನ್ನೋ ತುಳಿಯಲು ಒಟ್ಟಾಗುತ್ತಾರೆ ಎನ್ನುವ ವಾದದಲ್ಲಿ ಹುರುಳಿಲ್ಲ ಎನ್ನುವುದು ಗೋಚರವಾಗುತ್ತದೆ.
ತೆಂಕು ಮತ್ತು ಬಡಗು–ಹೀಗೆ ಎರಡು ಪ್ರಾಕಾರದ ಯಕ್ಷಗಾನಕ್ಕೆ ಹವ್ಯಕರು ಕೊಟ್ಟ ಕೊಡುಗೆಯನ್ನು ಯಾರು ಅಲ್ಲಗಳೆಯಲಾರರು. ಇನ್ನು syncretic culture ಕುರಿತು ಒಂದೆರೆಡು ಮಾತು. ನೀವು ಸೂಕ್ಷ್ಮವಾಗಿ ಗಮನಿಸಿ. ಹವ್ಯಕರು ಸಾಹಿತ್ಯವನ್ನು ಜಾತಿ ಆಧಾರದ ಮೇಲೆ ನೋಡಿದವರಲ್ಲ. ಪಕ್ಕದ ಧಾರವಾಡದಲ್ಲಿ ಹರಿದ ಹಿಂದೂಸ್ತಾನಿ ಸಂಗೀತದ ಸುಧೆಯನ್ನು ತಮ್ಮದೇ ಎಂದು ಹಾಡಿದವರು. ಇವತ್ತಿಗೂ ಅನೇಕ ಬಂದಿಶ್ಗಳಲ್ಲಿ ಬರುವ ‘ಅಲ್ಲಾ’ ಶಬ್ದವನ್ನು ಬದಲಾಯಿಸದೇ ಹಾಡುವವರು ಹವ್ಯಕರಲ್ಲೂ ಸಿಗುತ್ತಾರೆ. ನಿಮಗೆ ನೆನಪಿದೆಯಲ್ಲ, 2016 ರಲ್ಲಿ, ಪುಣ್ಯಕೋಟಿ ಹಾಡಿಗೆ ಸಂಬಂಧಿಸಿದಂತೆ ಏನೆಲ್ಲ ಚರ್ಚೆ ಆಯ್ತು ಅಂತ? ಆ ಹಾಡನ್ನು ಬದಲಾಯಿಸಬೇಕು. ಯಾಕೆಂದರೆ ಮೇಲ್ವರ್ಗದವರ ಮಸಲತ್ತಿಂದಲೇ, ಆ ಹಾಡನಲ್ಲಿ ಹುಲಿ ಮೇಲಿಂದ ಹಾರಿ ಪ್ರಾಣ ಬಿಡುವಂತೆ ಮಾಡಿದ್ದಾರೆ ಎಂಬ ವಿಚಾರ ನೆನಪಿರಬೇಕಲ್ಲ.
ಆ ಹಿನ್ನೆಲೆಯಲ್ಲಿ ಈ ಮೇಲೆ ಹೇಳಿದ ವಿಚಾರವನ್ನು ವಿಮರ್ಶಿಸಿ. ‘ಅಲ್ಲಾ’ ಎಂಬ ಶಬ್ದವನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಡುವಾಗ ಮುಜುಗರವಿಲ್ಲದೇ ಹಾಡುತ್ತಾರೆ. ಅಷ್ಟೇ ಏಕೆ, ಸಾಯಿಬಾಬಾ ಎಂದರೆ ಶಿರಡಿಯ ಸಾಯಿಬಾಬಾಗೆ ನಡೆದುಕೊಳ್ಳುವ ಸಾವಿರಾರು ಜನ ಹವ್ಯಕರನ್ನು ನಾನು ತೋರಿಸಬಲ್ಲೆ. ಹಾಗೆ ನೋಡಿದರೆ, ಮುಸ್ಲಿಂರಲ್ಲಿ ಎಷ್ಟು ಜನ ಶಿರಡಿ ಸಾಯಬಾಬಾಗೆ ಗೌರವ ಕೊಡುತ್ತಾರೋ, ಇಲ್ಲವೋ, ಗೊತ್ತಿಲ್ಲ?
ದೇವರಾಜ್ ಅರಸು ಅವರು ಉಳುವವನೇ ಒಡೆಯ ಎಂಬ ಕಾಯ್ದೆ ಜಾರಿಗೆ ತಂದರು. ಆಗ ಏನಾಯ್ತು ಗೊತ್ತಾ? ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿನ ಸಾವಿರಾರು ಕುಟುಂಬಗಳು ತಮ್ಮ ಜಮೀನಿನ ಅರ್ಧ ಭಾಗ ನೀಡಿದವರು, ಕಾಲು ಭಾಗ ಕಳೆದುಕೊಂಡರ ಬಗ್ಗೆ ಉದಾಹರಣೆಗಳು ಸಿಗುತ್ತವೆ. ಕಾನೂನು ಬಂತು, ಜಮೀನು ಕೊಟ್ರು. ಇದರಲ್ಲೇನು ವಿಶೇಷ ಅಂತೀರಾ? ತೆಗೆದುಕೊಂಡವ ಮತ್ತು ಪಡೆದವನು ಒಂದೇ ಊರಲ್ಲಿ ಖುಷಿಯಿಂದ ಬದುಕುತ್ತಿರುವ ಲಕ್ಷಾಂತರ ಉದಾಹರಣೆ ಕೊಡಬಹುದು. ಇದು ಯಾಕೆ ವಿಶೇಷ ಎಂದರೆ, ಬ್ರಾಹ್ಮಣರಾಗಿ ಕೆಳ ವರ್ಗದವರನ್ನು ಮೆಟ್ಟಿ ಅವರ ಬೆನ್ನು ಮುರಿಯುವ ಕೆಲಸ ಮಾಡುತ್ತಾರೆ ಎನ್ನುವ ವಾದಕ್ಕೆ ಇದು ಉತ್ತರ ನೀಡಬಹುದು.
ತಮ್ಮ ಜಮೀನು ತೆಗೆದುಕೊಂಡರು ಎಂದು ಸೇಡು ತೀರಿಸಿಕೊಳ್ಳುವ ಅಥವಾ ಹಗೆ ಸಾಧಿಸುವ ಉದಾಹರಣೆ ಇಲ್ಲ ಇಲ್ಲಿ ಇಲ್ಲ. ಬೀದರ್ನಿಂದ ಚಾಮರಾಜನಗರದ ತನಕ ಹೋಗಿ ನೋಡಿ- ಹಲವಾರು ಹಳ್ಳಿಗಳಲ್ಲಿ ಆ ಕಾಯ್ದೆ ತಂದ ಬಿರುಕು ದೊಡ್ಡ ಕಂದಕವಾಗಿ ತೆರೆದುಕೊಂಡಿರುವುದು, ಮತ್ತು ಅದನ್ನು ಮುಚ್ಚುವ ಕೆಲಸ ಮಾಡುವಲ್ಲಿ ರಾಜಕೀಯ ನಾಯಕರು ವಿಫಲವಾಗಿರುವುದರ ಹಿಂದಿನ ಕಾರಣಗಳು ಸಿಗುತ್ತವೆ. ಈಗಲೂ ಆಗೊಮ್ಮೆ ಈಗೊಮ್ಮೆ ವಿವಿಧ ಜಾತಿ ಸಂರ್ಘದ ವರದಿಗಳು ಈ ಜಿಲ್ಲೆಗಳಿಂದ ಬರುತ್ತಲೇ ಇರುತ್ತವೇ. ಹವ್ಯಕರನ್ನು ಸೂಕ್ಷ್ಮವಾಗಿ ಗಮನಿಸಿ. ಈ ರೀತಿಯ ಸಂಘರ್ಷ ಇಲ್ಲ ಎಂದೇ ಹೇಳಬಹುದು.
ಹಾಗಂತ ಹವ್ಯಕರು ಹಾದಿ ತಪ್ಪಿಲ್ಲ ಎಂದರೆ ಅದು gross mistake ಆಗುತ್ತೆ. ಈಗ ಹವ್ಯಕರ ಒಳಗೆ ಏನು ಚರ್ಚೆ ನಡೀತಾ ಇದೆ ಗೊತ್ತೆ? ಹಲವಾರು ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳನ್ನು ಮುಳುಗಿಸಿದ್ದಾರೆ. ಇಂತಹ ಭಂಡತನ ಹವ್ಯಕರಲ್ಲಿ ಹೇಗೆ ಬಂತು? ಈ churning ನಡೀತಾ ಇದೆ. ಬಹಳ ಜೋರಾಗಿಯೇ ನಡೀತಾ ಇದೆ. ಮುಖಾಮೂತಿ ಇಲ್ಲದೇ ಭ್ರಷ್ಟರನ್ನು ಹಿಡಿದು ಹೊರಗೆ ದಬ್ಬಬೇಕು ಎನ್ನುವ ಚರ್ಚೆ ನಡೀತಾ ಇದೆ. ಕೆಲವು ಕಡೆ ಇದು ಪ್ರಾರಂಭ ಆಗಿದೆ. ದುರಂತವೆಂದರೆ, ನೈತಿಕ ಅಧಃಪತನ ಅಲೆ ಇವರನ್ನೂ ಬಿಟ್ಟಿಲ್ಲ.
ಮೊದಲನೆಯದಾಗಿ, ಕೃಷಿರಂಗದಲ್ಲಿ ಆಗುತ್ತಿರುವ ಏರುಪೇರಿನ ಬಗ್ಗೆ ಚರ್ಚೆ ಆಗಬೇಕಿತ್ತು. ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿಯನ್ನು ಹೇಗೆ ಮಾಡಬೇಕು? ಕ್ಯಾಂಪ್ಕೋ, ಶಿರಸಿಯ ಟಿ ಎಸ್ ಎಸ್ ನಂತಹ ಸಂಸ್ಥೆಯ ಪ್ರತಿನಿಧಿಗಳನ್ನು ಕರೆಸಿ, ಅವರ ಮೂಲಕ ರೈತರಿಗೆ ಕಷ್ಟಕಾಲದಲ್ಲಿ ಎಂತಹ ಕೃಷಿ ಮಾಡಬೇಕು? ರೈತೆರ ಜೊತೆಗೆ ಈ ಸಂಸ್ಥೆಗಳು ಹೇಗೆ ನಿಲ್ಲುವುದಕ್ಕೆ ಸಾಧ್ಯ ಎನ್ನುವ ಸಂದೇಶ ಹೋಗಬೇಕಾಗಿತ್ತು.
ಎರಡನೆಯದು, ನಗರಕ್ಕೆ ಬಂದ ಹವ್ಯಕರ ಮತ್ತು ಗ್ರಾಮೀಣ ಭಾಗದಲ್ಲಿನ ಹವ್ಯಕರ ನಡುವೆ ಆಗಿರುವ ಕಂದಕದ ಬಗ್ಗೆ ಬಿಚ್ಚು ಮನಸ್ಸಿನ ಚರ್ಚೆ ಆಗಬೇಕಿತ್ತು. ಇದು ಹೊಸ ಜಗತ್ತಿನ ತಲ್ಲಣ. ಮಹಿಳೆಯರ ಸಮಸ್ಯೆ ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳುವ ರೀತಿ ಬಗ್ಗೆ ಕೂಡ ಮಂಥನ ಆಗಬೇಕಾಗಿತ್ತು.
ಎಲ್ಲದಕ್ಕಿಂತ ಮಿಗಿಲಾಗಿ, ಈ ಸಮುದಾಯದ ಯುವಕರ ಒಂದು ವರ್ಗದಲ್ಲಿ ಹರ್ಷದ್ ಮೆಹ್ತಾನ ಲಕ್ಷಣ ಕಾಣುತ್ತಿದೆ. ಅವರೇ ಮೇಲುಗೈ ಸಾಧಿಸುವ ಲಕ್ಷಣ ಕಾಣುವಾಗ, ಈ ರೀತಿಯ ಬದಲಾವಣೆಗೆ ಮೂಲ ಕಾರಣ ಏನು? ಮತ್ತು ಅದಕ್ಕೆ ಪರಿಹಾರದ ಬಗ್ಗೆ ಚಿಂತನೆ ಆಗಲೇ ಬೇಕಾಗಿತ್ತು. ಈ ವಿಷಯಗಳನ್ನು ಚರ್ಚೆಗೆ ಪರಿಗಣಿಸಿದ್ದರೆ, ಸಾರ್ಥಕತೆ ಹೆಚ್ಚುತ್ತಿತ್ತು.
ಹೌದಲ್ಲ. ಇವತ್ತು ಹವ್ಯಕರು, ನಾಳೆ ಮತ್ತೊಂದು ಬ್ರಾಹ್ಮಣ ವರ್ಗ. ಆಮೇಲೆ ಬೇರೆ ಸಮುದಾಯಗಳು. ಇವಕ್ಕೆ ಕೊನೆ ಎಲ್ಲಿ? ಮುಸ್ಲಿಂರಲ್ಲಿ ಬ್ಯಾರಿ ಎನ್ನುವ ಸಮುದಾಯ ಇದೆ. ಅವರಿಗೆ ಒಂದು ಭಾಷೆ, ಸಂಸ್ಕೃತಿ ಇದೆ ಎಂದು ಬ್ಯಾರಿ ಸಮುದಾಯಕ್ಕೆ ಒಂದು ಅಕಾಡೆಮಿ ಕೂಡ ಮಾಡಿದೆ ಸರಕಾರ. ಅವರು ಮುಸ್ಲಿಂ ಸಮುದಾಯದೊಳಗೆ ಬರುವ ಒಂದು ಜನಾಂಗ. ಅವರ ಅಧ್ಯಯನಕ್ಕೆ ಸರಕಾರ ಬದ್ದವಾಗಿದೆ. ಅದು ತಪ್ಪು ಎಂದು ಹೇಳಲಾಗದು. ಅವರು ಸಭೆ ಮಾಡುತ್ತಾರೆ ಎಂದರೆ ಅವರು ಯಾರದ್ದೋ ವಿರುದ್ಧ ಕತ್ತಿ ಮಸೆಯಲು ಸಭೆ ಮಾಡುತ್ತಾರೆ ಎಂದರೆ ತಪ್ಪಾದೀತು. ಜನಪದೀಯ ಸಂಸ್ಕೃತಿಯನ್ನು ಒಳಗೊಳ್ಳುವ ಹವ್ಯಕರು ಅಕಾಡೆಮಿ ಬೇಕು ಎಂಬ ಗೋಜಿಗೆ ಹೋಗಿಲ್ಲ ನೋಡಿ.
ಒಂದು ಗುಟ್ಟು ಇದೆ. ಉಳಿದ ಕೆಲವು ಸಮುದಾಯದಂತೆ, ಹವ್ಯಕ ಸಮುದಾಯ ಒಟ್ಟಾದರೆ? ಏನು ಆಗದು. ಸಣ್ಣ ಮಕ್ಕಳಿಂದ ಎಲ್ಲರಲ್ಲೂ ಒಂದೇ ಗುಂಗು ಸದಾ ಇವರಲ್ಲಿ ಕಾಣ ಸಿಗುತ್ತದೆ—ತಾವು ಆಯ್ದುಕೊಂಡ ವೃತ್ತಿ ಮತ್ತು ಹವ್ಯಾಸ ಎರಡರಲ್ಲಿಯೂ ಯಶಸ್ಸು ಮತ್ತು ಶ್ರೇಷ್ಠತೆ (excellence) ಯನ್ನು ಗಳಿಸೋದು ಹೇಗೆ ಎಂಬುದರ ಕುರಿತು ಇವರ ವಿಚಾರ ಗಿರಕಿ ಹೊಡೆಯುತ್ತದೆ. ಇಷ್ಟಾದರೂ ಈ ಸಮುದಾಯದಲ್ಲಿ ಎಲ್ಲರೂ ಯಶಸ್ಸು ಗಳಿಸಿಲ್ಲ. ಜೀವನದಲ್ಲಿ ಸೋತು ಸುಣ್ಣಾದವರು ತುಂಬಾ ಜನ ಸಿಗುತ್ತಾರೆ. ದುರಂತ ಎಂದರೆ ಅವರೆಲ್ಲ, ತಮ್ಮ ಸೋಲಿಗೆ ತಮ್ಮನ್ನೇ ದೂರಬೇಕು, ಬೇರೆ ಯಾರನ್ನೂ ದೂರುವ ಹಾಗಿಲ್ಲ. ಇದು ಭಾರತದ ಸಮತ್ವದ ಹಿನ್ನೆಲೆಯಲ್ಲಿ ಬಹಳ ಮುಖ್ಯವಾಗಿ ಗಮನಿಸಲೇಬೇಕಾದ ಅಂಶ. ಹವ್ಯಕರು ಇರುವ ಪ್ರದೇಶದಲ್ಲಿ ಇವರದ್ದೇ ಪೊಲೀಸ್ ಅಧಿಕಾರಿಗಳು ಬೇಕು ಎಂದು ಕೇಳಲ್ಲ ಇವರು. ಯಾವುದೇ ಜಾತಿ ಮತದ ಅಧಿಕಾರಿಗಳು ತಾವಿರುವ ಪ್ರದೇಶಕ್ಕೆ ಬಂದರೆ ಅವರ ಜೊತೆ ಹೊಂದಿಕೊಳ್ಳುತ್ತಾರೆ.
ಕೊನೆಯದಾಗಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯನ್ನು ಸೇರಿಸಿ ತುಂಬಾ ಜನ, ನಮಗಿಂತ ಕೆಳಗಿರುವವರನ್ನು ನಮ್ಮ ಜೊತೆ ಕರೆದುಕೊಂಡು ಹೊಗೋದು ಹೇಗೆ ಎನ್ನುವ ವಿಷಯದ ಕುರಿತಾಗಿ ಆ ಸಮ್ಮೇಳನದಲ್ಲಿ ಹೇಳಿದ್ದಿದೆ. ಅಷ್ಟೇ ಅಲ್ಲ, ಒಂದೊಮ್ಮೆ, ನಮಗಿಂತ ಕೆಳಗಿರುವ ಬಡವರಿಗೆ ಅನ್ನ ಕೊಡೋಕೆ ಆಗಲ್ಲ ಎಂದರೆ ನಾವು ಉಪವಾಸ ಮಾಡಬೇಕು ಎಂದು ಓರ್ವ ಹಿರಿಯರು ಅದೇ ಸಮ್ಮೇಳನದಲ್ಲಿ ಹೇಳಿದ ಮಾತು ದಾಖಲೆಯಲ್ಲಿದೆ.
ಇದಕ್ಕೆ ಒಂದು ಕಾರಣ ಇದೆ. ಮುಖ್ಯವಾಹಿನಿಯ ಚಿಂತಕರು ಮೇಲುವರ್ಗದ ಜನರಿಂದ ‘ವೋಕಿಸಂ’ ಅಂದರೆ ಅತಿಯಾದ ಸಾಮಾಜಿಕ ನ್ಯಾಯಪರತೆಯನ್ನು ಬಯಸುತ್ತಾರೆ. ಭಾರತೀಯ ಸಮಾಜದಲ್ಲಿ ಇರುವ ಏರು ಪೇರಿನ ಇತಿಹಾಸದಲ್ಲಿ ಇದನ್ನು ಸಂಪೂರ್ಣ ತಪ್ಪು ಎನ್ನಲಾಗದು. ಆದರೆ ಒಂದು ಸಮುದಾಯದ ಇತಿಹಾಸದಲ್ಲಿ ಆ ರೀತಿಯ ವ್ಯತಿರಕ್ತ ಅಂಶಗಳು ಸಿಗದಿದ್ದಾಗ ಏನು ಮಾಡೋದು? ಸಮುದಾಯಗಳ ಬಗ್ಗೆ, ಆ ಜನರ ಬಗ್ಗೆ ಪರಸ್ಪರ ಅಪನಂಬುಗೆ ಹುಟ್ಟುವಂತಹ ಪ್ರತಿಕ್ರಿಯೆ ನೀಡುವುದು.
ನಮ್ಮಲ್ಲಿ ಸಮುದಾಯಗಳ ಬಗ್ಗೆ ಅಧ್ಯಯನ ಎಂದರೆ, ರಾಜಕೀಯ ಪಕ್ಷದ ಅಜೆಂಡಾದ ವಿಸ್ತರಣೆ ಎಂಬ ಗುಮಾನಿ. ಕೊನೆಯದಾಗಿ, anthropology ಮತ್ತು sociology ವಿಷಯಕ್ಕೆ ಸಂಬಂಧಿಸಿದ ಅಧ್ಯಯನಕ್ಕೆ ನಾವು ಆಯ್ಕೆ ಮಾಡಿಕೊಳ್ಳುವ ಕನ್ನಡಕ ನಮ್ಮದಲ್ಲ. ಅದು ಪಾಶ್ಚಾತ್ಯರು ಕೊಟ್ಟಿದ್ದು. ವಿಷಯ ಅಧ್ಯಯನ ಪದ್ದತಿಯಲ್ಲಿ ತುಂಬಾ ನ್ಯೂನತೆಗಳಿವೆ. ಈ ಕಾರಣಗಳಿಗಾಗಿಯೇ, ಈ ರೀತಿಯ ಅಧ್ಯಯನಗಳು ತುಂಬಾ ಸಲ ವಾಸ್ತವಕ್ಕೆ ದೂರವಿರುವ ಫಲಿತಾಂಶ ನೀಡುವುದನ್ನು ನೋಡಿದ್ದೇವೆ. ಹವ್ಯಕರನ್ನು ಅಧ್ಯಯನ ಮಾಡುವಲ್ಲಿ ಈ ರೀತಿಯ ತಪ್ಪುಗ್ರಹಿಕೆ ಕೆಲಸ ಮಾಡಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು.
ಕರ್ನಾಟಕದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:57 am, Wed, 15 January 25