ಒಂದು ರಾಷ್ಟ್ರ, ಒಂದು ಚುನಾವಣೆ: ಪ್ರಜಾಪ್ರಭುತ್ವವನ್ನು ಬಲಪಡಿಸುವ ದಾರಿ

| Updated By: Ganapathi Sharma

Updated on: Dec 18, 2024 | 1:58 PM

ಆಗಾಗ ನಡೆಯುವ ಚುನಾವಣೆಗಳು ಭಾರತದ ಆರ್ಥಿಕತೆ ಮತ್ತು ಆಡಳಿತದ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಚುನಾವಣಾ ಪ್ರಚಾರದಲ್ಲಿ ತೊಡಗಿರುವ ನಾಯಕರಿಗೆ ಅಭಿವೃದ್ಧಿ ಕಾರ್ಯಗಳಿಗೆ ಸಮಯ ಸಿಗುವುದಿಲ್ಲ. ಇದರಿಂದ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಮತ್ತು ಜನರಲ್ಲಿ ರಾಜಕಾರಣಿಗಳ ಮೇಲಿನ ವಿಶ್ವಾಸ ಕುಗ್ಗುತ್ತದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಯೋಜನೆ ಇದಕ್ಕೆ ಪರಿಹಾರವಾಗಬಹುದು ಎಂದು ಗುರುದೇವ್ ಶ್ರೀ ಶ್ರೀ ರವಿಶಂಕರ್ ವಿಶ್ಲೇಷಿಸಿದ್ದಾರೆ.

ಒಂದು ರಾಷ್ಟ್ರ, ಒಂದು ಚುನಾವಣೆ: ಪ್ರಜಾಪ್ರಭುತ್ವವನ್ನು ಬಲಪಡಿಸುವ ದಾರಿ
ಒಂದು ರಾಷ್ಟ್ರ, ಒಂದು ಚುನಾವಣೆ: ಪ್ರಜಾಪ್ರಭುತ್ವವನ್ನು ಬಲಪಡಿಸುವ ದಾರಿ: ಗುರುದೇವ್ ಶ್ರೀ ಶ್ರೀ ರವಿಶಂಕರ್
Follow us on

ಚುನಾವಣೆಯು ಯಾವುದೇ ಪ್ರಜಾಪ್ರಭುತ್ವದ ಜೀವಾಳ. ನಿಂದಿಸುವ ಸ್ವಾತಂತ್ರ್ಯ, ವಾಕ್ಚಾತುರ್ಯದಲ್ಲಿ ತೊಡಗುವುದು, ಮತ್ತೊಬ್ಬರ ಮೇಲೆ ಕೆಸರನ್ನು ಎರಚುವುದೂ ಸಹ ಚುನಾವಣಾ ಪ್ರಕ್ರಿಯೆಯ ಒಂದು ಅಂಗ. ಈ ರೀತಿಯ ಅಭ್ಯಾಸಗಳು ವಿವಾದಾತ್ಮಕವಾಗಿದ್ದರೂ ಸಹ, ಅದು ಆರೋಗ್ಯಕರವಾದ, ತಿಳಿವಳಿಕೆಯುಳ್ಳ ಪ್ರಜಾಪ್ರಭುತ್ವಕ್ಕೆ ಕಾರಣವಾಗಬಲ್ಲದು. ಆದರೆ ಆಡಳಿತದ ಸುಗಮವಾದ ನಿರ್ವಹಣೆಗಾಗಿ ಚುನಾವಣಾ ಪ್ರಚಾರಗಳು ಒಂದು ನಿರ್ದಿಷ್ಟವಾದ ಸಮಯಕ್ಕೆ ಮಾತ್ರ ಸೀಮಿತವಾಗಿರಬೇಕು.

ಆಡಳಿತದ ಮೇಲೆ ಪ್ರಭಾವ

ಚುನಾವಣೆಗಳು ಪದೇ ಪದೇ ನಡೆಯುತಲಿದ್ದಾಗ, ಚುನಾಯಿತರಾದ ಪ್ರತಿನಿಧಿಗಳು ಅವರ ಅವಧಿಯ ಮಹತ್ವವಾದ ಸಮಯವನ್ನೆಲ್ಲಾ ಅಭಿವೃದ್ಧಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಬದಲಿಗೆ, ಚುನಾವಣಾ ಪ್ರಚಾರದಲ್ಲೇ ನಿರತರಾಗಿರುತ್ತಾರೆ. ಸಂಸತ್ತಿನ ಸದಸ್ಯರು, ವಿಧಾನಸಭಾ ಸದಸ್ಯರು, ಕೌನ್ಸಿಲರ್ ಗಳು, ಮೂಲಭೂತ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳಲ್ಲಿ ಅಪಾರ ಜವಾಬ್ದಾರಿಗಳನ್ನು ಹೊತ್ತಿರುತ್ತಾರೆ. ಹಣಕಾಸಿನ ನಿರ್ವಹಣೆ, ಸಂಪನ್ಮೂಲಗಳನ್ನು ನಿಭಾಯಿಸುವುದು, ಯೋಜನೆಗಳನ್ನು ಒಂದು ಪೂರ್ವನಿರ್ಧರಿತವಾದ ಸಮಯದಲ್ಲಿ ಮಾಡಿ ಮುಗಿಸುವುದು ಅವರ ಜವಾಬ್ದಾರಿಗಳಲ್ಲಿ ಕೆಲವು. ಆದರೆ ಚುನಾವಣೆಗಳ ತಯಾರಿ ಮತ್ತು ಪ್ರಚಾರ ಅನೇಕ ತಿಂಗಳವರೆಗೆ ನಡೆಯುತ್ತದೆ. ತಮ್ಮನ್ನು ಅಥವಾ ತಮ್ಮ ಪಕ್ಷದವರನ್ನು ರಕ್ಷಿಸಿಕೊಳ್ಳುವ ಹೊರೆಯಿಂದಲೇ ಹೆಣಗುತ್ತಲಿರುವಾಗ, ಜನರಿಗೆ ಮತ್ತು ಸಮಾಜಕ್ಕೆ ಅರ್ಥಪೂರ್ಣವಾದಂತಹ ಯಾವ ಕೆಲಸವನ್ನು ಮಾಡಲೂ ಅವರಿಗೆ ಸಮಯ ಸಿಗುವುದಿಲ್ಲ. ಅದಲ್ಲದೆ ಇಡೀ ಚುನಾವಣಾ ಪ್ರಕ್ರಿಯೆಯು ಅಭ್ಯರ್ಥಿಗಳಿಗೆ ಮತ್ತು ಅವರ ತಂಡದವರಿಗೆ ದೈಹಿಕವಾಗಿ ಹಾಗೂ ಆರ್ಥಿಕವಾಗಿ ಬಹಳ ದಣಿವನ್ನು ತರಿಸುತ್ತದೆ. ಚುನಾವಣೆಗಳ ನಂತರ ಈ ಕಠಿಣವಾದ ಪ್ರಚಾರ ಪ್ರಕ್ರಿಯೆಯಿಂದ ಉಂಟಾಗುವ ದಣಿವನ್ನು ನಿವಾರಿಸಿಕೊಳ್ಳಲೂ ಸಮಯವನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಉಪಯುಕ್ತಕರವಾದ ಆಡಳಿತವು ಮತ್ತಷ್ಟು ವಿಳಂಬವಾಗುತ್ತದೆ.

ಆರ್ಥಿಕ ಹೊರೆ

ಪದೇ ಪದೇ ಚುನಾವಣೆಗಳು ನಡೆಯುತ್ತಲಿರುವಾಗ ಅದರಿಂದ ರಾಷ್ಟ್ರದ ಮೇಲೆ ಮತ್ತು ತೆರಿಗೆಯನ್ನು ಕಟ್ಟುವವರ ಮೇಲೆ ಅಪಾರವಾದ ಆರ್ಥಿಕ ಹೊರೆಯುಂಟಾಗುತ್ತದೆ. ಚುನಾವಣೆಗಳನ್ನು ಪದೇ ಪದೇ ಆಯೋಜಿಸುವ ವೆಚ್ಚ ಮತ್ತು ಅಭ್ಯರ್ಥಿಗಳು ಹಾಗೂ ಅವರ ತಂಡದವರು ಹೊರಬೇಕಾದ ವೆಚ್ಚವು ಅಪಾರ. ಇದರಿಂದಾಗಿ ಸಂಪನ್ಮೂಲಗಳ ಮತ್ತು ಶಕ್ತಿಯ, ರಾಷ್ಟ್ರೀಯ ಮಟ್ಟದ ನಷ್ಟವುಂಟಾಗುತ್ತದೆ. ಅಭ್ಯರ್ಥಿಗಳು ಮತ್ತು ಸರ್ಕಾರಗಳು ಪದೇ ಪದೇ ಚುನಾವಣಾ ಪ್ರಚಾರದ ಹೊರೆಯನ್ನು ಹೊರುವುದರ ಬದಲಿಗೆ, ಅಭಿವೃದ್ಧಿ ಹಾಗೂ ಸಾಮಾಜಿಕ ಕಲ್ಯಾಣ ಕಾರ್ಯಗಳ ಮೇಲೆ ಗಮನವನ್ನು ನೀಡಬಲ್ಲರಾದರೆ, ಅದರಿಂದ ಹೆಚ್ಚು ಪರಿಣಾಮಕಾರಿಯಾದ ಆಡಳಿತ ಹಾಗೂ ಆರ್ಥಿಕ ಸ್ಥಿರತೆಯು ಉಂಟಾಗಲು ಸಾಧ್ಯ.

ಸಾರ್ವಜನಿಕ ವಿಶ್ವಾಸದ ಕುಂಠಿತತೆ

ಪದೇ ಪದೇ ಚುನಾವಣೆಗಳು ನಡೆಯುವುದರಿಂದ ಅಭ್ಯರ್ಥಿಗಳು ಹೊಸ ಹೊಸತಾದ ಮತ್ತು ಅಪ್ರಾಯೋಗಿಕವಾದ ಭರವಸೆಗಳನ್ನು ಮಾಡುತ್ತಿರುತ್ತಾರೆ, ಉಚಿತವಾದ ಕೊಡುಗೆಗಳನ್ನು ನೀಡಲು ಮುಂದಾಗುತ್ತಾರೆ ಮತ್ತು ಕೇವಲ ಮತಗಳನ್ನು ಆಕರ್ಷಿಸುವ ಸಲುವಾಗಿ ಪ್ರಸಿದ್ಧಿಯನ್ನು ಪಡೆಯುವಂತಹ ನಿಯಮಗಳನ್ನೇ ಮಾಡುತ್ತಾರೆ. ಇದರಿಂದಾಗಿ ರಾಜಕಾರಣಿಗಳ ಮೇಲೆ ಜನರಿಗೆ ಇರುವ ವಿಶ್ವಾಸವು ಕುಗ್ಗಲು ಆರಂಭಿಸುತ್ತದೆ, ಹಿಂದೆ ಅವರು ಪಡೆಯುತ್ತಿದ್ದ ಗೌರವ, ಘನತೆಯೂ ಕಡಿಮೆಯಾಗುತ್ತದೆ. ರಾಜಕಾರಣಿಗಳು ಕೇವಲ ಚುನಾವಣಾ ಸಮಯದಲ್ಲಿ ಮಾತ್ರ ಬರುತ್ತಾರೆ ಎಂಬಂತೆ ಕಾಣುತ್ತಾರೆ. ಇದರಿಂದ ಅವರ ಮೇಲಿರುವ ವಿಶ್ವಾಸವು ಮತ್ತಷ್ಟು ಕೆಳಗುಂದುತ್ತದೆ. ಇಂತಹ ಅಲ್ಪಾವಧಿಯ ರಾಜಿಗಳು ದೀರ್ಘಕಾಲದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತವೆ ಮತ್ತು ಹಣಕಾಸಿನ ಅಸ್ಥಿರತೆಯನ್ನೂ ಉಂಟುಮಾಡುತ್ತದೆ. ಈ ವೈಖರಿಯು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ರಾಷ್ಟ್ರಕ್ಕೆ ಅಸ್ಥಿರತೆಯನ್ನೂ ಮತ್ತು ಹಿನ್ನಡೆಯನ್ನೂ ಉಂಟುಮಾಡುತ್ತದೆ.

ಸಮಾಜದಲ್ಲಿ ಒಡಕನ್ನು ಉಂಟು ಮಾಡುತ್ತದೆ

ಪದೇ ಪದೇ ಚುನಾವಣೆಗಳು ನಡೆಯುವುದರಿಂದ ಮೂಲಭೂತ ಹಂತದಲ್ಲಿ ಅದು ವಿಭಜನೆಯನ್ನು ಉಂಟು ಮಾಡುತ್ತದೆ. ಚುನಾವಣಾ ಮಾತುಗಳು, ಕೆಸರೆರಚುವುದು, ನಕಾರಾತ್ಮಕವಾದ ಪ್ರಚಾರ, ಇವೆಲ್ಲವೂ ಸಮುದಾಯಗಳ ನಡುವೆ ದ್ವೇಷವನ್ನು ಬಿತ್ತುತ್ತದೆ. ಈ ವಿಭಜನೆಯು ಸಾಮಾಜಿಕ ಸಾಮರಸ್ಯವನ್ನು ಕದಡುತ್ತದೆ, ಮುಂದುವರಿದ ಸಮುದಾಯಗಳನ್ನು ಎತ್ತಿಕಟ್ಟಲು ಬೇಕಾದ ಐಕ್ಯತೆಯನ್ನು ಕೃಶವಾಗಿ ಮಾಡುತ್ತದೆ.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಏಕೆ?

ಈ ಸವಾಲುಗಳನ್ನೆಲ್ಲಾ ಪರಿಗಣಿಸಿದಾಗ, ‘ಒಂದು ರಾಷ್ಟ್ರ, ಒಂದು ಚುಣಾವಣೆ’ ಯನ್ನು ಅಳವಡಿಸಿಕೊಳ್ಳುವುದೇ ಭಾರತಕ್ಕೆ ಅತ್ಯಂತ ತಾರ್ಕಿಕವಾದ, ಲಾಭದಾಯಕವಾದ ಪರಿಹಾರ ಎನ್ನುವುದು ಸ್ಪಷ್ಟವಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವುದಿಲ್ಲ; ಬದಲಿಗೆ ಪ್ರಜಾಪ್ರಭುತ್ವವನ್ನು ಸುದೃಢಗೊಳಿಸುತ್ತದೆ. ಒಂದೇ ಚುಣಾವಣೆಯಿಂದ, ಏಕಕಾಲದ ಚುನಾವಣೆಯಿಂದ ನಾಯಕರಿಗೆ ಅಭಿವೃದ್ಧಿ ಕಾರ್ಯಗಳ ಮೇಲೆ ಗಮನವನ್ನಿಡಲು, ತಮ್ಮ ಭರವಸೆಗಳನ್ನು ಈಡೇರಿಸಲು ಸಾಕಷ್ಟು ಸಮಯ ಸಿಗುತ್ತದೆ, ಸದಾ ಚುನಾವಣಾ ಚಟುವಟಿಕೆಗಳಲ್ಲೇ ನಿರತರಾಗಿರುವ ಬದಲಿಗೆ; ಅದೇ ಸಮಯದಲ್ಲಿ ಮತದಾರರಿಗೂ ಸಹ ಸರಿಯಾದ ತಿಳುವಳಿಕೆಯಿಂದ ಆಯ್ಕೆ ಮಾಡಲು ಪ್ರೋತ್ಸಾಹ ದೊರೆತಂತಾಗುತ್ತದೆ. ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದರಿಂದ, ಸಂಪನ್ಮೂಲಗಳ ವ್ಯಯವನ್ನು ಕಡಿಮೆ ಮಾಡುವುದರಿಂದ, ನಾಯಕತ್ವದಲ್ಲಿ ವಿಶ್ವಾಸವನ್ನು ಪೋಷಿಸುವುದರಿಂದ, ಈ ಮಾರ್ಗವು ಭಾರತದ ಸಾಮರ್ಥ್ಯ ಹಾಗೂ ಅಭಿವೃದ್ಧಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ.

ವಿಶ್ಲೇಷಣೆ: ಗುರುದೇವ್ ಶ್ರೀ ಶ್ರೀ ರವಿಶಂಕರ್