ಬಹಳಷ್ಟು ರಾಷ್ಟ್ರಗಳು ತಮ್ಮಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸುತ್ತಿರುವ ಈ ಕಾಲಘಟ್ಟದಲ್ಲಿ, ಪಾಕಿಸ್ತಾನ ಮಾತ್ರ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದೆ. ಸ್ವತಃ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವಾಗಲೂ ಪಾಕಿಸ್ತಾನದ ಈ ನಡೆ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದು, ವಿವಿಧ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ. ಶೀತಲ ಸಮರ ಕೊನೆಯಾದ ಬಳಿಕ, ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಹಲವು ಪ್ರಯತ್ನಗಳನ್ನು ನಡೆಸಲಾಯಿತಾದರೂ, ಜಗತ್ತು ಇಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. 2023ರ ವೇಳೆಗೆ, ಜಗತ್ತಿನ ಒಂಬತ್ತು ದೇಶಗಳು 12,500 ಅಣ್ವಸ್ತ್ರ ಸಿಡಿತಲೆಗಳನ್ನು ಹೊಂದಿವೆ.
ಜಗತ್ತಿನಲ್ಲಿರುವ ಒಟ್ಟು ಅಣ್ವಸ್ತ್ರ ಸಿಡಿತಲೆಗಳ ಪೈಕಿ, 89% ದಷ್ಟು ಭಾರೀ ಸಂಗ್ರಹವನ್ನು ಅಮೆರಿಕಾ ಮತ್ತು ರಷ್ಯಾ ಎರಡೇ ರಾಷ್ಟ್ರಗಳು ಹೊಂದಿವೆ. ಇತರ ರಾಷ್ಟ್ರಗಳ ಬಳಿ ಕೆಲವು ನೂರು ಅಣ್ವಸ್ತ್ರ ಸಿಡಿತಲೆಗಳಿದ್ದು, ಅವುಗಳನ್ನು ತಮ್ಮ ಸ್ವಯಂ ರಕ್ಷಣೆಗಾಗಿ ಹೊಂದಿವೆ. ಇವುಗಳಲ್ಲಿ ಹಲವು ರಾಷ್ಟ್ರಗಳು ತಮ್ಮ ಅಣ್ವಸ್ತ್ರ ಸಂಗ್ರಹವನ್ನು ಹೆಚ್ವಿಸಲು ಪ್ರಯತ್ನ ನಡೆಸುತ್ತಿವೆ.
ಕಳೆದ ವಾರ ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ ನೀಡಿರುವ ವರದಿ, ಪಾಕಿಸ್ತಾನ ನಿರಂತರವಾಗಿ ತನ್ನ ಪರಮಾಣು ಶಸ್ತ್ರಾಸ್ತ್ರ ಸಂಗ್ರಹವನ್ನು ಹೆಚ್ಚಿಸುತ್ತಿದೆ, ಹೆಚ್ಚು ಹೆಚ್ಚು ಸಿಡಿತಲೆಗಳನ್ನು ಹೊಂದುತ್ತಿದೆ, ಪೂರೈಕೆ ವ್ಯವಸ್ಥೆಯನ್ನು ಉತ್ತಮಪಡಿಸುತ್ತಿದೆ, ಮತ್ತು ಪರಮಾಣು ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸಿದೆ ಎಂದು ಮಾಹಿತಿ ನೀಡಿದೆ.
ಪಾಕಿಸ್ತಾನದ ಸೇನಾ ನೆಲೆಗಳು ಮತ್ತು ವಾಯುಪಡೆಯ ನೆಲೆಗಳ ಇತ್ತೀಚಿನ ವಾಣಿಜ್ಯಿಕ ಉಪಗ್ರಹ ಚಿತ್ರಗಳು, ಪರಮಾಣು ಸಾಮರ್ಥ್ಯ ಹೊಂದಿರುವ ನೂತನ ಲಾಂಚರ್ ವ್ಯವಸ್ಥೆಗಳ ಅಳವಡಿಕೆಯಾಗಿರುವುದನ್ನು ತೋರಿಸಿವೆ. ಈಗ ಪಾಕಿಸ್ತಾನದ ಬಳಿ 170 ಅಣ್ವಸ್ತ್ರ ಸಿಡಿತಲೆಗಳಿದ್ದು, ಒಂದು ಅಂದಾಜಿನ ಪ್ರಕಾರ, 2025ರ ವೇಳೆಗೆ ಅವುಗಳ ಸಂಖ್ಯೆ 200ಕ್ಕೆ ತಲುಪುವ ನಿರೀಕ್ಷೆಗಳಿವೆ.
1999ರಲ್ಲಿ ಅಮೆರಿಕಾದ ಡಿಫೆನ್ಸ್ ಇಂಟಲಿಜೆನ್ಸ್ ಏಜೆನ್ಸಿ 2020ರ ವೇಳೆಗೆ ಪಾಕಿಸ್ತಾನದ ಬಳಿ 60ರಿಂದ 80 ಅಣ್ವಸ್ತ್ರ ಸಿಡಿತಲೆಗಳ ಸಂಗ್ರಹ ಇರಬಹುದು ಎಂದು ಅಂದಾಜಿಸಿತ್ತು. ಆದರೆ, ವಿವಿಧ ಹೊಸ ಆಯುಧ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ನಿಯೋಜನೆಯ ಕಾರಣದಿಂದ ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹ ಈ ನಿರೀಕ್ಷೆಯನ್ನೂ ಮೀರಿ ಹೆಚ್ಚಾಗಿತ್ತು.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ ತಲೆದೋರುತ್ತಿವೆ. ಇದೇ ಅವಧಿಯಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಸಂಬಂಧಿತ ಚಟುವಟಿಕೆಗಳೂ ಹೆಚ್ಚಾಗುತ್ತಿವೆ. ಇದರಿಂದಾಗಿ, ಪಾಕಿಸ್ತಾನ ಯಾಕೆ ಇಂತಹ ಕಠಿಣ ಸಂದರ್ಭದಲ್ಲಿ ತನ್ನ ಅಣ್ವಸ್ತ್ರ ಸಂಗ್ರಹವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಿದೆ ಎಂಬ ಪ್ರಶ್ನೆಗಳು ತಲೆದೋರಿವೆ.
ಒಂದು ಮಾಧ್ಯಮ ಸಂಸ್ಥೆ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಪಾಕಿಸ್ತಾನಿ ಸೇನಾಪಡೆಯ ಮಾಜಿ ಅಧಿಕಾರಿ ಒಬ್ಬರ ಬಳಿ ಮಾತುಕತೆ ನಡೆಸಿತು. ಆ ಅಧಿಕಾರಿ ತನ್ನ ವೈಯಕ್ತಿಕ ವಿವರಗಳನ್ನು ಗುಪ್ತವಾಗಿಡಲು ಕೋರಿದ್ದರು.
ಆ ಅಧಿಕಾರಿಯ ಪ್ರಕಾರ, ಪಾಕಿಸ್ತಾನ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸುವುದರ ಹಿಂದಿರುವ ಪ್ರಮುಖ ಅಂಶವೆಂದರೆ ಅದರ ಕಾರ್ಯತಂತ್ರದ ಲೆಕ್ಕಾಚಾರಗಳು. ಪಾಕಿಸ್ತಾನ ದೀರ್ಘ ಕಾಲದಿಂದಲೂ ಭಾರತದೊಡನೆ ಉದ್ವಿಗ್ನ ಸಂಬಂಧ ಹೊಂದಿರುವುದರಿಂದ, ಅದು ಮೊದಲಿನಿಂದಲೂ ಸಾಕಷ್ಟು ಜಾಗತಿಕ ರಾಜಕಾರಣದ ಸವಾಲುಗಳನ್ನು ಎದುರಿಸಿದೆ. ಆದ್ದರಿಂದ, ಯಾವುದೇ ಸಂಭಾವ್ಯ ಅಪಾಯ, ತೊಂದರೆಯನ್ನು ಎದುರಿಸಲು ಅಣ್ವಸ್ತ್ರ ಕಾರ್ಯಕ್ರಮ ತನಗೆ ಸಹಾಯವಾಗಲಿದೆ ಎಂದು ಪಾಕಿಸ್ತಾನ ಭಾವಿಸಿದೆ.
ಇದನ್ನೂ ಓದಿ; ಚಂದ್ರಯಾನ-3 ಮತ್ತು ಚೀನಾದ ಚಿಂತೆಗಳು: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವಿಕೆ ಮತ್ತು ಭವಿಷ್ಯದ ಯೋಜನೆಗಳು
ಪಾಕಿಸ್ತಾನ ತನ್ನ ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಒಂದು ರಾಷ್ಟ್ರವಾಗಿ ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಅಣ್ವಸ್ತ್ರ ಸಾಮರ್ಥ್ಯ ಅತ್ಯಂತ ಮುಖ್ಯವಾದುದು ಎಂದು ಪರಿಗಣಿಸುತ್ತದೆ. ಪಾಕಿಸ್ತಾನದ ಅಧಿಕಾರಿಯ ಪ್ರಕಾರ, ಈಗ ನಡೆಯುತ್ತಿರುವ ಗಡಿ ವಿವಾದಗಳಿಂದ, ಐತಿಹಾಸಿಕ ಹಗೆತನಗಳಿಂದ, ಹಾಗೂ ಭಾರತದ ಜೊತೆಗಿನ ಅಂತಾರಾಷ್ಟ್ರೀಯ ಗಡಿ ಚಕಮಕಿಯ ಕಾರಣದಿಂದ ಪಾಕಿಸ್ತಾನದ ಕಳವಳಗಳು ಹಲವು ಪಟ್ಟು ಹೆಚ್ಚಾಗಿವೆ.
ಪಾಕಿಸ್ತಾನದ ಮಾಜಿ ರಕ್ಷಣಾ ಅಧಿಕಾರಿ ಈ ಕುರಿತು ಸ್ಪಷ್ಟನೆ ನೀಡಿದ್ದು, ಪಾಕಿಸ್ತಾನದ ದೃಷ್ಟಿಕೋನದಿಂದ ನೋಡುವುದಾದರೆ, ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿ ಮತ್ತು ಅಳವಡಿಕೆ ಭಾರತದ ಮಹತ್ತರ ಮಿಲಿಟರಿ ಸಾಮರ್ಥ್ಯದ ಎದುರು ಒಂದಷ್ಟು ಸುರಕ್ಷಿತ ಭಾವನೆ ಮೂಡಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ:
ಪಾಕಿಸ್ತಾನ ಹೊಂದಬಹುದಾದ ಬಾಹ್ಯ ಅಪಾಯಗಳ ಜೊತೆಗೆ, ದೇಶೀಯ ರಾಜಕೀಯ ಅಂಶಗಳೂ ಪಾಕಿಸ್ತಾನಕ್ಕೆ ಅಣ್ವಸ್ತ್ರಗಳ ಸಂಖ್ಯೆ ಹೆಚ್ಚಿಸಲು ಪ್ರಭಾವಿಸಿವೆ.
ಪಾಕಿಸ್ತಾನದಲ್ಲಿ ಪ್ರಸ್ತುತ ಅಪಾರ ಪ್ರಮಾಣದಲ್ಲಿ ರಾಜಕೀಯ ಅಸ್ಥಿರತೆ ಎದುರಾಗಿದ್ದು, ಇಸ್ಲಾಮಾಬಾದಿನ ಆಳುವ ನಾಯಕರು ತಮ್ಮನ್ನು ತಾವು ಪಾಕಿಸ್ತಾನದ ರಕ್ಷಕರು ಎಂದು ಬಿಂಬಿಸಿ, ಆ ಮೂಲಕ ತಮ್ಮ ರಾಜಕೀಯ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.
ಈಗ ಪಾಕಿಸ್ತಾನ ಎದುರಿಸುತ್ತಿರುವ ಭಾರೀ ಆರ್ಥಿಕ ಹಿನ್ನಡೆಯ ನಡುವೆಯೂ, ಅಣ್ವಸ್ತ್ರ ಸಂಗ್ರಹ ಹೆಚ್ಚಿಸುವುದರಿಂದ ಪಾಕಿಸ್ತಾನದಲ್ಲಿರುವ ರಾಷ್ಟ್ರೀಯವಾದಿ ಧೋರಣೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂಬುದು ಅಲ್ಲಿನ ನಾಯಕರ ನಂಬಿಕೆಯಾಗಿದೆ.
ಆದರೂ, ಸದ್ಯದ ಪಾಕಿಸ್ತಾನದ ಹಣಕಾಸು ಪರಿಸ್ಥಿತಿಯಲ್ಲಿ, ಒಂದಷ್ಟು ಪಾಕಿಸ್ತಾನಿ ಟೀಕಾಕಾರರು ಅವಶ್ಯಕ ಸಂಪನ್ಮೂಲವನ್ನು ಅಣ್ವಸ್ತ್ರ ಕಾರ್ಯಕ್ರಮಕ್ಕೆ ಸುರಿಯುವುದರಿಂದ, ಆಡಳಿತದ ಗಮನ ಮತ್ತು ಸಂಪನ್ಮೂಲಗಳು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಂದ ದೂರಾಗುತ್ತವೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ಅಧಿಕಾರಿಯ ಪ್ರಕಾರ, ಪಾಕಿಸ್ತಾನ ಈಗಾಗಲೇ ಭಾರೀ ಪ್ರಮಾಣದ ಸಾಲ, ಬೆಲೆ ಏರಿಕೆ, ನಿರುದ್ಯೋಗ, ಹಾಗೂ ಆರ್ಥಿಕ ಕುಸಿತದಂತಹ ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ಆದರೂ ಪಾಕಿಸ್ತಾನಿ ಮಿಲಿಟರಿ ನಾಯಕರು ಪಾಕಿಸ್ತಾನದ ಭದ್ರತೆಗೆ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮ ಅತ್ಯವಶ್ಯಕ ಎಂದು ಬಿಂಬಿಸುತ್ತದ್ದು, ಆರ್ಥಿಕ ಸವಾಲುಗಳ ಹೊರತಾಗಿಯೂ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಿಯಾಗಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ಅಣ್ವಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸುವ ಪಾಕಿಸ್ತಾನದ ಪ್ರಯತ್ನಗಳು ಜಾಗತಿಕವಾಗಿ ಪರಿಣಾಮ ಬೀರಲಿದ್ದು, ದಕ್ಷಿಣ ಏಷ್ಯಾದಲ್ಲಿ ಆಯುಧ ಸ್ಪರ್ಧೆ ನಡೆಯುವ ಮತ್ತು ಪರಮಾಣು ಶಸ್ತ್ರಾಸ್ತ್ರಗಳು ಅನಧಿಕೃತ ಶಕ್ತಿಗಳ ಕೈವಶವಾಗುವ ಅಪಾಯಗಳನ್ನು ತಂದೊಡ್ಡುವ ಸಾಧ್ಯತೆಗಳಿವೆ.
ಆದರೆ ಪಾಕಿಸ್ತಾನ ಸೇನೆಯ ಮಾಜಿ ಅಧಿಕಾರಿ ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮಗಳು ಅತ್ಯಂತ ಭದ್ರತೆಯಿಂದ ಕೂಡಿವೆ ಎಂದಿದ್ದು, ಅಣ್ವಸ್ತ್ರಗಳ ರಕ್ಷಣೆಗೆ ಸುಭದ್ರ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಪಾಕಿಸ್ತಾನದ ನೆರೆಯ ರಾಷ್ಟ್ರವಾದ ಭಾರತವೂ ಸೇರಿದಂತೆ, ಹಲವು ವಿದೇಶೀ ಶಕ್ತಿಗಳು ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹದ ಸುರಕ್ಷತೆಯ ಕುರಿತು ಕಳವಳ ವ್ಯಕ್ತಪಡಿಸಿವೆ. ಪಾಕಿಸ್ತಾನದಲ್ಲಿ ಮೂಲಭೂತವಾದಿಗಳು ಮತ್ತು ಉಗ್ರವಾದಿಗಳ ಉಪಸ್ಥಿತಿ ಇರುವುದರಿಂದ, ಈ ಆಯುಧಗಳ ಸುರಕ್ಷತೆ ಮತ್ತು ಅವುಗಳ ಭದ್ರತೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವು ಅಭಿಪ್ರಾಯ ಪಟ್ಟಿವೆ.
ಆದರೆ, ಆರ್ಥಿಕ ಸವಾಲುಗಳ ಹೊರತಾಗಿಯೂ ತನ್ನ ಅಣ್ವಸ್ತ್ರ ಬಲವನ್ನು ಹೆಚ್ಚಿಸುವ ಪಾಕಿಸ್ತಾನದ ಪ್ರಯತ್ನ ಹಲವು ಆಯಾಮಗಳ ವಿಚಾರವಾಗಿದೆ. ಇದಕ್ಕೆ ಕಾರ್ಯತಂತ್ರದ ವಿಚಾರಗಳು, ಪಾಕಿಸ್ತಾನ ಹೆದರಿರುವ ಬಾಹ್ಯ ಅಪಾಯಗಳು, ಹಾಗೂ ಆಂತರಿಕ ರಾಜಕಾರಣ ಮಹತ್ವದ ಕಾರಣಗಳಾಗಿವೆ.
ಯಾವುದೇ ರಾಷ್ಟ್ರವಾದರೂ ತನ್ನ ರಾಷ್ಟ್ರೀಯ ಸುರಕ್ಷತೆ ಮತ್ತು ಆರ್ಥಿಕ ಸ್ಥಿರತೆಯ ನಡುವೆ ತುಲನೆ ಮಾಡಿ, ಯಾವುದಕ್ಕೆ ಹೆಚ್ಚಿನ ಒತ್ತು ಕೊಡಬೇಕು ಎಂದು ತಿಳಿದು, ಅದಕ್ಕೆ ಸರಿಯಾಗಿ ಸಮತೋಲನ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಪಾಕಿಸ್ತಾನಿ ಅಧಿಕಾರಿ ಅಭಿಪ್ರಾಯ ಪಡುತ್ತಾರೆ.
ಇನ್ನು ಮುಂದಿನ ದಿನಗಳಲ್ಲಿ, ಪ್ರಾದೇಶಿಕ ಸಮಸ್ಯೆಗಳು, ಅಸ್ಥಿರತೆಗಳನ್ನು ಎದುರಿಸುವಲ್ಲಿ ಭಾರತ ಮತ್ತು ಪಾಕಿಸ್ತಾನಗಳ ರಾಜತಾಂತ್ರಿಕ ಪ್ರಯತ್ನಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಅವರು ಭಾವಿಸುತ್ತಾರೆ. ಅವರು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳದಂತೆ ತಡೆಯಲು, to ದಕ್ಷಿಣ ಏಷ್ಯಾದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮಾತುಕತೆ ಮತ್ತು ಶಾಂತಿಯುತ ಪ್ರಯತ್ನಗಳೇ ಪರಿಹಾರ ಎಂದಿದ್ದಾರೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಮತ್ತಷ್ಟು ವಿಶ್ಲೇಷಣೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ