Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ-3 ಮತ್ತು ಚೀನಾದ ಚಿಂತೆಗಳು: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವಿಕೆ ಮತ್ತು ಭವಿಷ್ಯದ ಯೋಜನೆಗಳು

ಚಂದ್ರಯಾನ-3 ಯೋಜನೆಯ ಸುರಕ್ಷಿತ ಲ್ಯಾಂಡಿಂಗ್ ಬಳಿಕ, ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ವಿಜ್ಞಾನಿಗಳ ಕಠಿಣ ಪರಿಶ್ರಮ ಮತ್ತು ಪ್ರಾವೀಣ್ಯತೆಯ ಕಾರಣದಿಂದ, ಭಾರತ ಇಲ್ಲಿಯ ತನಕ ಜಗತ್ತಿನ ಯಾವ ರಾಷ್ಟ್ರವೂ ಸಾಧಿಸದ, ಯಾರೂ ಅನ್ವೇಷಿಸಿರದ, ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಸಾಧನೆ ನಿರ್ಮಿಸಿದೆ ಎಂದಿದ್ದರು.

ಚಂದ್ರಯಾನ-3 ಮತ್ತು ಚೀನಾದ ಚಿಂತೆಗಳು: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವಿಕೆ ಮತ್ತು ಭವಿಷ್ಯದ ಯೋಜನೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 28, 2023 | 6:39 PM

ಚೀನಾದ ಚಂದ್ರ ಅನ್ವೇಷಣಾ ಯೋಜನೆಗಳ ಪಿತಾಮಹ ಎಂದೇ ಗುರುತಿಸಲಾಗಿರುವ ಒವ್‌ಯಾಂಗ್ ಜ಼ಿಯುವಾನ್ ಅವರು ಭಾರತದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ತನ್ನ ಐತಿಹಾಸಿಕ ಯೋಜನೆಯಲ್ಲಿ ಚಂದ್ರನ ದಕ್ಷಿಣ ಧ್ರುವದ ಬಳಿ ಸುರಕ್ಷಿತವಾಗಿ ಇಳಿದಿದೆ ಎನ್ನುವುದನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಚಂದ್ರಯಾನ-3 ಯೋಜನೆಯ ಸುರಕ್ಷಿತ ಲ್ಯಾಂಡಿಂಗ್ ಬಳಿಕ, ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ವಿಜ್ಞಾನಿಗಳ ಕಠಿಣ ಪರಿಶ್ರಮ ಮತ್ತು ಪ್ರಾವೀಣ್ಯತೆಯ ಕಾರಣದಿಂದ, ಭಾರತ ಇಲ್ಲಿಯ ತನಕ ಜಗತ್ತಿನ ಯಾವ ರಾಷ್ಟ್ರವೂ ಸಾಧಿಸದ, ಯಾರೂ ಅನ್ವೇಷಿಸಿರದ, ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಸಾಧನೆ ನಿರ್ಮಿಸಿದೆ ಎಂದಿದ್ದರು.

ಬುಧವಾರ, ಚೀನಾದ ಕಾಸ್ಮೋಕೆಮಿಸ್ಟ್, ಚೀನಾದ ಪ್ರಥಮ ಚಂದ್ರ ಅನ್ವೇಷಣಾ ಯೋಜನೆಯ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದ ಒವ್‌ಯಾಂಗ್ ಜ಼ಿಯುವಾನ್ ಅವರು ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದಿದೆ ಎಂಬ ಹೇಳಿಕೆಗೆ ತನ್ನ ಸಹಮತಿ ಇಲ್ಲ ಎಂದಿದ್ದು, ಈ ತಾಣ ಭಾರತ ಘೋಷಿಸಿದಷ್ಟು ನಿಖರವಾಗಿಲ್ಲ ಎಂದಿದ್ದರು. ಚೀನಾದ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯರಾಗಿರುವ ಒವ್‌ಯಾಂಗ್ ಜ಼ಿಯುವಾನ್ ಅವರು ಚಂದ್ರಯಾನ-3ರ ಕುರಿತು ಹೇಳಿಕೆ ನೀಡಿದ್ದು, ಚಂದ್ರಯಾನ-3 ಚಂದ್ರನ ಮೇಲಿಳಿದ ಪ್ರದೇಶ ಚಂದ್ರನ ದಕ್ಷಿಣ ಧ್ರುವದಲ್ಲೂ ಇಲ್ಲ, ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಒಳಗೂ ಇಲ್ಲ, ಹಾಗೂ ಅಂಟಾರ್ಕ್‍ಟಿಕ್ ಧ್ರುವ ಪ್ರದೇಶಕ್ಕೂ ಸನಿಹದಲ್ಲಿಲ್ಲ ಎಂದಿದ್ದಾರೆ.

ಈ ಕುರಿತು ವಿವರಣೆ ನೀಡಿರುವ ಒವ್‌ಯಾಂಗ್, ರೋವರ್ ಬಹುತೇಕ 69 ಡಿಗ್ರಿ ದಕ್ಷಿಣ ಅಕ್ಷಾಂಶದಲ್ಲಿ ಚಂದ್ರನ ಮೇಲೆ ಇಳಿದಿದ್ದು, ಅದು ಚಂದ್ರನ ದಕ್ಷಿಣ ಗೋಳಾರ್ಧದಲ್ಲಿದೆ. ಹಾಗೆಂದು ಅದನ್ನು ನಾವು ಚಂದ್ರನ ದಕ್ಷಿಣ ಧ್ರುವ ಪ್ರದೇಶ ಎಂದು ಕರೆಯಲು ಸಾಧ್ಯವಿಲ್ಲ. ಚಂದ್ರನ ದಕ್ಷಿಣ ಧ್ರುವ 88.5 ರಿಂದ 90 ಡಿಗ್ರಿ ಅಕ್ಷಾಂಶದಲ್ಲಿದೆ ಎಂದಿದ್ದಾರೆ. ಭೂಮಿಯ ತಿರುಗುವ ಅಕ್ಷ ಸೂರ್ಯನ ಕಡೆಗೆ 23.5 ಡಿಗ್ರಿ ಬಾಗಿರುವುದರಿಂದ, ದಕ್ಷಿಣ ಧ್ರುವ 66.5 ರಿಂದ 90 ಡಿಗ್ರಿ ದಕ್ಷಿಣದ ನಡುವೆ ಇರುತ್ತದೆ. ಆದರೆ, ಚಂದ್ರನ ವಾಲುವಿಕೆ ಇನ್ನಷ್ಟು ಕಡಿಮೆಯಾಗಿದ್ದು, ಕೇವಲ 1.5 ಡಿಗ್ರಿಗಳಷ್ಟೇ ಇರುವುದರಿಂದ, ಚಂದ್ರನ ಧ್ರುವ ಪ್ರದೇಶ ಅತ್ಯಂತ ಸಣ್ಣದಾಗಿದೆ ಎಂದು ಒವ್‌ಯಾಂಗ್ ಹೇಳಿದ್ದಾರೆ.

ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಪ್ರಕಾರ, ಚಂದ್ರಯಾನ-3 ಯೋಜನೆಯ ಲ್ಯಾಂಡಿಂಗ್ ಸ್ಥಳ ನಿಖರವಾಗಿ ದಕ್ಷಿಣ ಧ್ರುವ ಅಲ್ಲದಿದ್ದರೂ, ಚಂದ್ರನ ದಕ್ಷಿಣ ಧ್ರುವ ಶ್ಯಾಕಲ್‌ಟಾನ್ ಕ್ರೇಟರ್ ಎಂಬ ಕುಳಿಯ ಅಂಚಿನಲ್ಲಿ ಇರುವುದರಿಂದ, ಅಂತಹ ಪ್ರದೇಶದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸುವುದು ಒಂದು ಗುರುತರ ಸವಾಲಾಗಿದೆ. ಈ ಶ್ಯಾಕಲ್‌ಟನ್ ಕುಳಿ ಬಹುತೇಕ 4.2 ಕಿಲೋಮೀಟರ್ (2.6 ಮೈಲಿ) ಆಳವಾಗಿದ್ದು, ಒಟ್ಟಾರೆಯಾಗಿ 21 ಕಿಲೋಮೀಟರ್ (ಅಂದಾಜು 13 ಮೈಲಿ) ಅಗಲವಾಗಿದೆ. ಈ ಹೆಚ್ಚಿನ ಆಳ ಈ ಕುಳಿಯ ಒಳಗೆ ಶಾಶ್ವತವಾಗಿ ನೆರಳಿನಿಂದ ಆವೃತವಾಗಿರುವ ಪ್ರದೇಶವನ್ನು ಉಂಟುಮಾಡುತ್ತದೆ. ಆದ್ದರಿಂದ, ಈ ಪ್ರದೇಶದಲ್ಲಿ ಮಂಜುಗಡ್ಡೆಯ ರೂಪದಲ್ಲಿ ನೀರು ಇರುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಚೀನಾದ ಎವರ್​ಗ್ರಾಂಡೆ ದಯನೀಯ ಸ್ಥಿತಿ; ಛೇರ್ಮನ್ ಬಂಧನದ ಬೆನ್ನಲ್ಲೇ ಷೇರು ಸ್ಥಗಿತ; ಭಾರತದಿಂದ ಕಲಿಯಲಿ ಎಂದ ಉದಯ್ ಕೋಟಕ್

ಇನ್ನು ಅಮೆರಿಕಾದ ಲೆಕ್ಕಾಚಾರದಲ್ಲಿ, ನಾಸಾ ಸಂಪೂರ್ಣ ಚಂದ್ರನ ಧ್ರುವ ಪ್ರದೇಶ ಚಂದ್ರನ ದಕ್ಷಿಣದಲ್ಲಿ 80ರಿಂದ 90 ಡಿಗ್ರಿ ಅಕ್ಷಾಂಶದಲ್ಲಿದೆ. ಈ ಲೆಕ್ಕಾಚಾರದಲ್ಲಿ ಅವಲೋಕಿಸಿದರೆ, ಚಂದ್ರಯಾನ-3ರ ಲ್ಯಾಂಡಿಂಗ್ ಚಂದ್ರನ ದಕ್ಷಿಣ ಧ್ರುವದಿಂದ ಹೊರಗಡೆ ನಡೆದಿದ್ದರೂ, ಈ ಹಿಂದಿನ ಚಂದ್ರ ಅನ್ವೇಷಣಾ ಯೋಜನೆಗಳು ಸಾಗಿದ್ದರಿಂದ ಹೆಚ್ಚಿನ ಅಕ್ಷಾಂಶದಲ್ಲಿ ನಡೆದಿದೆ. ನಾಸಾ ಮುಖ್ಯಸ್ಥರಾದ ಬಿಲ್ ನೆಲ್ಸನ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ (ಮೊದಲು ಟ್ವಿಟರ್) ಸಂದೇಶವನ್ನು ಹಂಚಿಕೊಂಡಿದ್ದು, ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಬಾಹ್ಯಾಕಾಶ ನೌಕೆಯನ್ನು ಇಳಿಸಿರುವುದಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಅಭಿನಂದನೆ ಸಲ್ಲಿಸಿದ್ದಾರೆ.

ಸಿಡ್ನಿಯ ಮಾಕ್ವರೀ ಯುನಿವರ್ಸಿಟಿ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಆ್ಯಂಡ್ ಫಿಸಿಕಲ್ ಸೈನ್ಸಸ್‌ನಲ್ಲಿ ಉಪನ್ಯಾಸಕರಾಗಿರುವ ರಿಚರ್ಡ್ ಡಿ ಗ್ರಿಜ್ಸ್ ಅವರು ಸಹ ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವ ಎಂದು ಪರಿಗಣಿಸಬಹುದಾದ ಸ್ಥಳದಿಂದ ಹೊರಗಡೆ ಇಳಿದಿದೆ ಎಂದಿದ್ದಾರೆ. “ಮಾಧ್ಯಮಗಳಲ್ಲಿ, ವಿವಿಧ ಪ್ರಕಟಣೆಗಳಲ್ಲಿ ಚಂದ್ರಯಾನ-3ರ ಲ್ಯಾಂಡಿಂಗ್ ದಕ್ಷಿಣ ಧ್ರುವ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ, ನಾವು ಗಮನಿಸಬೇಕಾದ ಅಂಶವೆಂದರೆ, ಚಂದ್ರಯಾನ-3ರ ಲ್ಯಾಂಡಿಂಗ್ ಸ್ಥಳ ಲೂನಾರ್ ಅಂಟಾರ್ಕ್‌ಟಿಕ್ ವೃತ್ತದ ಹೊರಗಡೆ ಇದೆ. ಅಂದರೆ, ಚಂದ್ರನ 80 ಡಿಗ್ರಿ ದಕ್ಷಿಣ ಅಕ್ಷಾಂಶದ ಹೊರಗಿದೆ” ಎಂದು ಅವರು ವಿವರಿಸಿದ್ದಾರೆ.

ಡಿ ಗ್ರಿಜ್ಸ್ ಅವರು ಭಾರತ ಸರ್ಕಾರದ ಬಾಹ್ಯಾಕಾಶ ವಿಭಾಗದ ಅಂಗ ಸಂಸ್ಥೆಯಾಗಿರುವ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯ ಸಂಶೋಧಕರು ಪ್ರಕಟಿಸಿರುವ ಲೇಖನವೊಂದನ್ನು ಉಲ್ಲೇಖಿಸಿದ್ದಾರೆ. ಈ ಲೇಖನ, ಮಂತ್ಲಿ ನೋಟಿಸಸ್ ಆಫ್ ದ ರಾಯಲ್ ಆ್ಯಸ್ಟ್ರಾನಮಿಕಲ್ ಸೊಸೈಟಿಯ ಆಗಸ್ಟ್ ಆವೃತ್ತಿಯಲ್ಲಿ ಪ್ರಕಟವಾಗಿದೆ. ಈ ಲೇಖನದಲ್ಲಿ, ಸಂಶೋಧನಾ ತಂಡ, ಲ್ಯಾಂಡಿಂಗ್ ಪ್ರದೇಶದ ಆಯ್ಕೆಯ ಪ್ರಯತ್ನಗಳನ್ನು ವಿವರಿಸಿ, ಆ ಪ್ರದೇಶವನ್ನು ಚಂದ್ರನ ಮೇಲಿನ ಹೆಚ್ಚಿನ ಅಕ್ಷಾಂಶದ ಸ್ಥಳವಾಗಿದೆ ಎಂದಿದೆ.

ಇದೇ ವಿಭಾಗದ ವಿಜ್ಞಾನಿಗಳ ತಂಡದ ಇನ್ನೊಂದು ಪ್ರತ್ಯೇಕ ಅಧ್ಯಯನ ಸೆಪ್ಟೆಂಬರ್ 15ರಂದು ಸೌರಮಂಡಲದ ಕುರಿತ ಪತ್ರಿಕೆಯಾದ ಇಕಾರಸ್‌ನಲ್ಲಿ ಪ್ರಕಟವಾಗಿದ್ದು, ಅದರಲ್ಲಿ ಲ್ಯಾಂಡಿಂಗ್ ತಾಣವನ್ನು ದಕ್ಷಿಣದ, ಹೆಚ್ಚಿನ ಅಕ್ಷಾಂಶದ ಪ್ರದೇಶ ಎಂದು ವಿವರಿಸಲಾಗಿದೆ. ಡಿ ಗ್ರಿಜ್ಸ್ ಅವರು ವಿವಿಧ ಮಾಧ್ಯಮ ಸಂಸ್ಥೆಗಳೂ ಈ ಲ್ಯಾಂಡಿಂಗ್ ಪ್ರದೇಶ ಚಂದ್ರನ ದಕ್ಷಿಣ ಧ್ರುವಕ್ಕೆ ಸನಿಹದಲ್ಲಿದೆ ಎಂದು ಕರೆಯುವಲ್ಲಿ ಪಾತ್ರ ವಹಿಸಿರಬಹುದು ಎಂದಿದ್ದಾರೆ. ಕೆಲ ವರ್ಷಗಳ ಹಿಂದೆ, ಚಂದ್ರನ ದಕ್ಷಿಣ ಧ್ರುವದ ಬಳಿ ಮಂಜುಗಡ್ಡೆಯ ರೂಪದಲ್ಲಿ ನೀರು ಇರುವ ಕುರಿತು ಸಾಕ್ಷಿಗಳು ಲಭಿಸಿದ್ದು, ಇದು ಚಂದ್ರಯಾನ-3 ಇಳಿದ ಪ್ರದೇಶಕ್ಕಿಂತಲೂ ಚಂದ್ರನ ದಕ್ಷಿಣ ಧ್ರುವಕ್ಕೆ ಹೆಚ್ಚು ಹತ್ತಿರವಾಗಿದೆ ಎಂದಿದ್ದಾರೆ.

ಭವಿಷ್ಯದ ಚಂದ್ರನ ಮೇಲಿನ ನೆಲೆಗಳನ್ನು ನಿರ್ಮಿಸುವ ಸಲುವಾಗಿ, ಅಲ್ಲಿರುವ ಮಂಜುಗಡ್ಡೆಯ ರೂಪದ ನೀರನ್ನು ಬಳಸುವ ಸಾಧ್ಯಾಸಾಧ್ಯತೆಗಳ ಕುರಿತು ಸಂಶೋಧನೆ ನಡೆಸಬೇಕು ಎಂದು ಡಿ ಗ್ರಿಜ್ಸ್ ಅಭಿಪ್ರಾಯ ಪಟ್ಟಿದ್ದಾರೆ. ಯುನಿವರ್ಸಿಟಿ ಆಫ್ ಹಾಂಕಾಂಗ್‌ನ ಪ್ಲಾನೆಟರಿ ಡೈನಾಮಿಸಿಸ್ಟ್ ಲೀ ಮಾನ್ ಹೊಯ್ ಅವರು ಯಾವುದೇ ಮೂನ್ ಲ್ಯಾಂಡರ್ ಸಾಗದಷ್ಟು ದಕ್ಷಿಣ ಭಾಗಕ್ಕೆ ಚಂದ್ರಯಾನ-3 ಸಾಗಿದೆ ಎಂದಿದ್ದಾರೆ. ಅವರು ಭಾರತೀಯ ವಿಜ್ಞಾನಿಗಳು ಈ ಬಿಂದುವನ್ನು ‘ಹೆಚ್ಚಿನ ಅಕ್ಷಾಂಶದ ತಾಣ’ ಎಂದೇ ಗುರುತಿಸಿರುವುದರೆಡೆಗೆ ಬೆರಳು ಮಾಡಿದ್ದಾರೆ.

ಇದಕ್ಕೆ ವಿರುದ್ಧವಾಗಿ, ಚೀನಾದ ಚಾಂಗ್ಇ 4 ಯೋಜನೆ 2019ರಲ್ಲಿ ಚಂದ್ರನ ದಕ್ಷಿಣ ಧ್ರುವ – ಆಯ್ಟ್‌ಕೆನ್ ಬೇಸಿನ್ ಪ್ರದೇಶದಲ್ಲಿ ಇಳಿದಿದೆ ಎಂದಿದ್ದಾರೆ. “ಚಾಂಗ್ಇ ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದ ಹೆಸರು ಕೇಳಿದಾಗ ಅದು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿದಿರಬಹುದು ಎಂದು ನೀವು ಭಾವಿಸಬಹುದು. ಆದರೆ, ಅದು ದಕ್ಷಿಣದಲ್ಲಿ 45.44 ಅಕ್ಷಾಂಶದಲ್ಲಿ ಇಳಿದಿದೆ” ಎಂದು ಲೀ ಮಾನ್ ಹೊಯ್ ವಿವರಿಸುತ್ತಾರೆ.

ಖಗೋಳ ಭೌತಶಾಸ್ತ್ರಜ್ಞ, ಎಚ್‌ಕೆಯುನ ಲ್ಯಾಬೋರೇಟರಿ ಫಾರ್ ಸ್ಪೇಸ್ ರಿಸರ್ಚ್ ಸಂಸ್ಥೆಯ ನಿರ್ದೇಶಕರಾಗಿರುವ ಕ್ವೆಂಟಿನ್ ಪಾರ್ಕರ್ ಅವರು, ಚಂದ್ರಯಾನ-3 ನಿಖರವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯದಿದ್ದರೂ, ಈ ರೀತಿಯ ಚರ್ಚೆಗಳು ಕೇವಲ ಶಬ್ದಾರ್ಥದ ವಿಚಾರವಾಗುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. “ಚಂದ್ರನ ದಕ್ಷಿಣ ಧ್ರುವಕ್ಕೆ ಹತ್ತಿರದಲ್ಲಿ ರೋವರ್ ಇಳಿಸುವುದು ಯಾವುದೇ ಅನುಮಾನಗಳಿಲ್ಲದೆ ಒಂದು ಮಹತ್ವದ ಸಾಧನೆಯಾಗಿದೆ. ಈ ಸಾಧನೆಗಾಗಿ ಭಾರತಕ್ಕೆ ಸಂಪೂರ್ಣ ಶ್ರೇಯಸ್ಸು ಸಲ್ಲಿಸಬೇಕು. ಇದು ವಿಜ್ಞಾನ ಮತ್ತು ಮಾನವಕುಲ ಕೈಗೊಂಡ ಸಾಧನೆಯನ್ನು ಸಂಭ್ರಮಿಸುವ ಅವಕಾಶವಾಗಿದೆ” ಎಂದು ಪಾರ್ಕರ್ ಹೇಳಿದ್ದಾರೆ.

ಯಾವ ದೇಶವಾದರೂ ಹೆಚ್ಚಿನ ತಾಂತ್ರಿಕ ಸಾಮರ್ಥ್ಯವಿದ್ದರೆ ಚಂದ್ರನ ದಕ್ಷಿಣ ಧ್ರುವಕ್ಕೆ ಇನ್ನಷ್ಟು ಹತ್ತಿರದಲ್ಲಿ ಇಳಿಯುವ ಪ್ರಯತ್ನ ನಡೆಸಬಹುದು. ಆದರೆ, ಭಾರತ ಈ ಹಿಂದೆ ಪ್ರಯತ್ನ ನಡೆಸಿರುವ ಎಲ್ಲರಿಗಿಂತಲೂ ದಕ್ಷಿಣ ಧ್ರುವಕ್ಕೆ ಹೆಚ್ಚು ಹತ್ತಿರ ಸಾಗಿದೆ. ಆದರೆ, ಮುಂದಿನ ಬಾರಿ ಚೀನಾ ಏನಾದರೂ ದಕ್ಷಿಣ ಧ್ರುವಕ್ಕೆ ಇನ್ನಷ್ಟು ಸನಿಹ ಸಾಗಲು ಸಾಧ್ಯವಾದರೆ, ಅದೂ ಒಂದು ಮಹತ್ತರ ಸಾಧನೆಯಾಗಲಿದೆ. ಚೀನಾ 2026ರಲ್ಲಿ ತನ್ನ ಮುಂದಿನ ಚಂದ್ರಾನ್ವೇಷಣಾ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದ್ದು, ಚಾಂಗ್ಇ 7 ರೋವರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಶ್ಯಾಕಲ್‌ಟನ್ ಕುಳಿಯ ಬಳಿ ಇಳಿಸುವ ಉದ್ದೇಶ ಹೊಂದಿದೆ. ಚೀನಾದ ಡೀಪ್ ಸ್ಪೇಸ್ ಎಕ್ಸ್‌ಪ್ಲೊರೇಶನ್ ಲ್ಯಾಬೋರೇಟರಿ ನೀಡಿರುವ ಮಾಹಿತಿಯ ಪ್ರಕಾರ, ಚಾಂಗ್ಇ 7 ಚಂದ್ರನ ಮೇಲೆ 88.8 ಡಿಗ್ರಿ ದಕ್ಷಿಣದಲ್ಲಿ, ಒವ್‌ಯಾಂಗ್ ಅವರು ವಿವರಿಸಿರುವ ಗಡಿಯ ಒಳಗಡೆಯೇ ಇಳಿಯುವ ಗುರಿ ಹೊಂದಿದೆ.

ಗಿರೀಶ್ ಲಿಂಗಣ್ಣ

ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮತ್ತಷ್ಟು ವಿಶ್ಲೇಷಣೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Thu, 28 September 23