
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಪ್ರಚಾರವನ್ನು ವಿಭಿನ್ನವಾಗಿ ಮತ್ತು ಪರಿಸರ ಪೂರಕವಾಗಿ ಮಾಡಿ ಗಮನ ಸೆಳೆಯುತ್ತಿದೆ.

ಅತಿ ದೊಡ್ಡ ಜಾತ್ರಾ ಕಾರ್ಯಕ್ರಮವನ್ನು ಬಹಳ ವಿಭಿನ್ನವಾಗಿ ಕಳೆದ ಆರೇಳು ವರ್ಷಗಳಿಂದ ಪ್ರಚಾರ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ಕೂಡ ಬಹಳ ವಿಭಿನ್ನ ರೀತಿಯ ಪ್ರಚಾರ ಮಾಡಲಾಗುತ್ತಿದೆ.

ದಪ್ಪ ರಟ್ಟಿನ ಬಾಕ್ಸ್ ಮೇಲೆ ನಂದಳಿಕೆ ಜಾತ್ರಾ ಮಹೋತ್ಸವದ ಮಾಹಿತಿ ನೀಡಲಾಗಿದ್ದು, ಜೊತೆಗೆ ಮೇಲೊಂದು ಮಣ್ಣಿನ ತಟ್ಟೆ ಇಟ್ಟು ನೀರು ತುಂಬಲಾಗಿದೆ. ಇದು ನಂದಳಿಕೆ ಜಾತ್ರಾ ಮಹೋತ್ಸವದ ಪ್ರಚಾರದ ಶೈಲಿ.

ಬಿರು ಬಿಸಿಲು ಹೆಚ್ಚಾಗಿದ್ದು ತಾಪಮಾನ ವಿಪರೀತವಾಗಿದೆ. ಪಕ್ಷಿಗಳ ರಕ್ಷಣೆಗೆ ನಾವು ನೀರುಣಿಸೋದು ಅತಿ ಅವಶ್ಯಕವಾಗಿದೆ. ಹಾಗಾಗಿ ಈ ರೀತಿಯ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ಹೇಳಿದ್ದಾರೆ.

ಈ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಇಕ್ಕೆಲಗಳಲ್ಲಿ ಹಕ್ಕಿಗಳಿಗಾಗಿ ನೀರು ಇಡುವ ಪರಿಕಲ್ಪನೆಯನ್ನು ಸ್ಥಳೀಯ ಅಂಗಡಿ ಮಾಲೀಕರಿಗೆ, ಮನೆಯವರಿಗೆ ಮನವರಿಕೆ ಮಾಡಲಾಗುತ್ತಿದೆ.
Published On - 6:17 pm, Mon, 27 March 23