ಇನ್ಫ್ರಾಸ್ಟ್ರಕ್ಚರ್ ಯೋಜನೆಗಳಲ್ಲಿ ಸರ್ಕಾರದಿಂದ ಬಂಡವಾಳ ವೆಚ್ಚ ಹೀಗೇ ಮುಂದುವರಿದರೆ ವಾಹನ ಕ್ಷೇತ್ರಕ್ಕೆ ಉತ್ತಮವಾಗುತ್ತದೆ. ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಪುಷ್ಟಿ ನೀಡುವಂತೆ ಬಜೆಟ್ನಲ್ಲಿ (Interim Budget 2024) ಗಮನ ಕೊಡಬೇಕು ಎಂದು ಮರ್ಸಿಡೆಸ್ ಬೆಂಜ್ ಇಂಡಿಯಾ ಸಂಸ್ಥೆಯ ಎಂಡಿ ಮತ್ತು ಸಿಇಒ ಸಂತೋಷ್ ಅಯ್ಯರ್ ಹೇಳುತ್ತಾರೆ.
ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ದಿಗೆ ಹೆಚ್ಚು ಒತ್ತು ಒಟ್ಟರೆ ದೇಶದ ಜಾಗತಿಕ ಸ್ಪರ್ಧಾತ್ಮಕತೆ ಇನ್ನಷ್ಟು ಹೆಚ್ಚುತ್ತದೆ. ಉತ್ಪಾದನೆ ಮತ್ತು ಸೇವಾ ವಲಯದ ಬೆಳವಣಿಗೆಗೆ ಪೂರಕ ಶಕ್ತಿಯಾಗುತ್ತದೆ ಎಂದು ಹೇಳಿದ್ದಾರೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಸ್ವಪ್ನೇಶ್ ಆರ್ ಮಾರು.
ಲಕ್ಷುರಿ ಕಾರಿನ ಉದ್ಯಮದಿಂದ ಜಿಡಿಪಿಗೆ ಗಣನೀಯ ಕೊಡುಗೆ ಇದೆ. ಈ ಕಾರುಗಳಿಗೆ ವಿಧಿಸಲಾಗುವ ಸುಂಕ ಮತ್ತು ಜಿಎಸ್ಟಿ ದರಗಳನ್ನು ಪರಿಷ್ಕರಿಸುವುದು ಉತ್ತಮವಾಗಬಹುದು ಎಂಬ ಅಭಿಪ್ರಾಯ ಇದೆ.
ಐಷಾರಾಮಿ ವಾಹನಗಳಿಗೆ ಸದ್ಯ ಶೇ. 28ರಷ್ಟು ಜಿಎಸ್ಟಿ ಇದೆ. ಸೆಡನ್ ಕಾರುಗಳಿಗೆ ಶೇ. 20ರಷ್ಟು ಹೆಚ್ಚುವರಿ ಸೆಸ್ ವಿಧಿಸಲಾಗುತ್ತದೆ. ಎಸ್ಯುವಿ ಕಾರುಗಳಿಗೆ ಶೇ. 22ರಷ್ಟು ಹೆಚ್ಚುವರಿ ಸೆಸ್ ಇದೆ. ಇವೆಲ್ಲವೂ ಸೇರಿ ಒಂದು ಲಕ್ಷುರಿ ವಾಹನಕ್ಕೆ ಶೇ. 50ರವರೆಗೆ ತೆರಿಗೆ ಇದೆ. ಅಂದರೆ, ಒಂದು ವಾಹನದ ಮೂಲ ಬೆಲೆ 50 ಲಕ್ಷ ರೂ ಇದ್ದರೆ ಅದಕ್ಕೆ 25,000 ರೂನಷ್ಟು ತೆರಿಗೆಯೇ ಇದೆ. ಅದರ ಜೊತೆಗೆ ಇನ್ಷೂರೆನ್ಸ್, ರೋಡ್ ಟ್ಯಾಕ್ಸ್ ಇತ್ಯಾದಿ ಎಲ್ಲವೂ ಸೇರಿದರೆ ಆನ್ರೋಡ್ ಪ್ರೈಸ್ ಬಹಳ ಹೆಚ್ಚಾಗಿ ಹೋಗುತ್ತದೆ.
ಫೆಬ್ರುವರಿ 1ರ ಬಜೆಟ್ನಲ್ಲಿ ತಾವು ಯಾವುದೇ ಅಚ್ಚರಿಗಳನ್ನು ನಿರೀಕ್ಷಿಸುತ್ತಿಲ್ಲ. ಆದರೆ, ವಿವಿಧ ನೀತಿಗಳ ಸ್ಥಿರತೆ ಉಳಿಯಲಿ ಎಂದು ಅಪೇಕ್ಷಿಸುತ್ತೇವೆ ಎಂದು ಆಟೊಮೋಟಿವ್ ಉದ್ಯಮದವರು ತಿಳಿಸುತ್ತಾರೆ.
ಸರ್ವರನ್ನೂ ಒಳಗೊಳ್ಳುವ ಆದಾಯ ಉತ್ಪಾದನೆಗೆ ಹಾಗ, ಎಲೆಕ್ಟ್ರಿಕ್ ತ್ರಿಚಕ್ರ ವಾಹನ, ಕಮರ್ಷಿಯಲ್ ವಾಹನಗಳಿಗೆ ಪುಷ್ಟಿ ಕೊಡುವುದರಿಂದ ಬಹಳ ಮಂದಿಗೆ ಹಣಕಾಸು ಬಲ ಸಿಕ್ಕಂತಾಗುತ್ತದೆ ಎಂದು ಮಹೀಂದ್ರ ಲಾಸ್ಟ್ ಮೈಲ್ ಮೊಬಿಲಿಟಿ ಸಂಸ್ಥೆಯ ಎಂಡಿ ಮತ್ತು ಸಿಇಒ ಅಗಿರುವ ಸುಮನ್ ಮಿಶ್ರಾ ಹೇಳುತ್ತಾರೆ.
ಸರ್ಕಾರ ಫೇಮ್ (FAME) ಸ್ಕೀಮ್ ಮೂಲಕ ಎಲೆಕ್ಟ್ರಿಕ್ ವಾಹನಗಳಿಗೆ ನೆರವು ನೀಡುವುದನ್ನು ಮುಂದುವರಿಸುತ್ತದೆ ಎಂದು ಕೈನೆಟಿಕ್ ಗ್ರೀನ್ ಸಂಸ್ಥೆಯ ಸಂಸ್ಥಾಪಕರಾದ ಫಿರೋದಿಯಾ ಮೋಟ್ವಾನಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಚುನಾವಣೆ ಇರುವುದರಿಂದ ಇದರಲ್ಲಿ ಹೊಸ ನೀತಿಗಳ ಜಾರಿಯಾಗುವ ಸಾಧ್ಯತೆ ಕಡಿಮೆ.